ಸೋಮವಾರ, ಆಗಸ್ಟ್ 15, 2022
24 °C

ನ್ಯೂ ನಾರ್ಮಲ್‌ನಲ್ಲಿ ಕಚೇರಿಯತ್ತ ಸುರಕ್ಷತೆಯತ್ತ ಇರಲಿ ಚಿತ್ತ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ – 19ನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡಿದ್ದವು. ಈಗ ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿವೆ. ಮೆಟ್ರೊ, ಬಸ್‌ಗಳು ತಿರುಗಾಡಲು ಆರಂಭಿಸಿವೆ. ಕಚೇರಿಗಳು ಆರಂಭವಾಗುತ್ತಿವೆ. ಆದರೆ ಕೊರೊನಾ ಸೋಂಕು ಇನ್ನೂ ಇರುವ ಕಾರಣಕ್ಕೆ ಕಚೇರಿಗಳಲ್ಲಿ ‘ನ್ಯೂ ನಾರ್ಮಲ್’‌ ಅಥವಾ ನೂತನ ಸಾಮಾನ್ಯ ಬದುಕಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಕಚೇರಿಗಳು ಎಲ್ಲಾ ರೀತಿ ಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುತ್ತಿವೆ.

ಮಾಸ್ಕ್ ಅಥವಾ ಮುಖಗವಸು ಧರಿಸುವುದು, ಸ್ಯಾನಿಟೈಸರ್ ಬಳಕೆ, ಕೈ ತೊಳೆಯುವುದು ಇವೆಲ್ಲ ಎಂದಿನಂತೆ ಮುಂದುವರಿಯಲಿದ್ದು ಮರೆಯುವ ಹಾಗಿಲ್ಲ. ಜೊತೆಗೆ ಇನ್ನಷ್ಟು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ಕಚೇರಿಯಲ್ಲಿ ಕೆಲವೊಂದು ಸ್ಥಳ ಹಾಗೂ ವಸ್ತುಗಳನ್ನು ಸ್ಪರ್ಶಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವುದು ಅಗತ್ಯ.

ಪಾರ್ಕಿಂಗ್‌ನಲ್ಲೂ ಇರಲಿ ಎಚ್ಚರ

ನಿಮ್ಮ ಸ್ವಂತ ವಾಹನದಲ್ಲಿ ಕಚೇರಿಗೆ ತೆರಳುವುದಾದರೂ ಎಚ್ಚರಿಕೆ ಇರಲೇಬೇಕು. ವಾಹನ ಚಲಾಯಿಸುವಾಗ ಕೈಗವಸು ಧರಿಸುವುದು ಉತ್ತಮ. ಕಾರಿನ ಬಾಗಿಲು ಮುಚ್ಚಿದ ಮೇಲೆ ಸ್ಯಾನಿಟೈಸರ್ ಬಳಕೆ ಮಾಡಿ. ಸ್ನೇಹಿತರು ಹಾಗೂ ಸಹೋದ್ಯೋಗಿಗಳನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದರೆ ಕಾರನ್ನೂ ಸಾನಿಟೈಸ್ ಮಾಡಿ. 

ಲಿಫ್ಟ್ ಬಳಸುವ ಮುನ್ನ..

ಬಹುಮಹಡಿ ಕಟ್ಟಡದಲ್ಲಿರುವ ಕಚೇರಿಗಳಲ್ಲಿ ಲಿಫ್ಟ್ ಬಳಕೆ ಸಾಮಾನ್ಯ. ಆದರೆ ಲಿಫ್ಟ್‌ನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಮೊದಲೆಲ್ಲಾ ಲಿಫ್ಟ್‌ನಲ್ಲಿ 4– 10 ವ್ಯಕ್ತಿಗಳವರೆಗೂ ಒಟ್ಟಾಗಿ ಹೋಗುವುದು ಅಭ್ಯಾಸ. ಆದರೆ ಈಗ ಈ ಅಭ್ಯಾಸಕ್ಕೆ ಕಡಿವಾಣಕ್ಕೆ ಹಾಕಿ. ಲಿಫ್ಟ್‌ 6 ಮಂದಿ ಸಾಮರ್ಥ್ಯದ್ದಾದರೆ ಒಮ್ಮೆ 2–3 ಮಂದಿ ಪಯಣಿಸುವುದು ಉತ್ತಮ. ಲಿಫ್ಟ್ ಗುಂಡಿ ಒತ್ತುವಾಗಲೂ ಟಿಶ್ಯೂ ಪೇಪರ್ ಬಳಸಿ. ಒಮ್ಮೆ ಬಳಸಿದ ಟಿಶ್ಯೂವನ್ನು ಮತ್ತೆ ಬಳಸಬೇಡಿ. ಟಿಶ್ಯೂ ಇಲ್ಲದಿದ್ದರೆ ಗುಂಡಿ ಒತ್ತಿದ ಬಳಿಕ ಹಾಗೂ ಲಿಫ್ಟ್‌ನಿಂದ ಕೆಳಗಿಳಿದ ಮೇಲೆ ಸ್ಯಾನಿಟೈಸರ್‌ ಅಥವಾ ತಕ್ಷಣಕ್ಕೆ ಸೋಪ್‌ ಬಳಸಿ ಕೈ ತೊಳೆದುಕೊಳ್ಳಿ. ಲಿಫ್ಟ್‌ಗಿಂತ ಮೆಟ್ಟಿಲು ಬಳಸುವುದು ಸೂಕ್ತ. ಆದರೆ ಮೆಟ್ಟಿಲಿನ ಬದಿಯ ರಾಡ್‌ ಅಥವಾ ರೇಲಿಂಗ್‌ ಅನ್ನು ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಿ.

ಬಾಗಿಲು ಹಿಡಿಕೆ

ಕಚೇರಿ ಅಥವಾ ರೆಸ್ಟ್ ರೂಮ್‌ನ ಬಾಗಿಲನ್ನು ಆದಷ್ಟು ಮುಟ್ಟದೇ ಇರುವುದು ಒಳ್ಳೆಯದು. ಕಚೇರಿಯ ಬಾಗಿಲನ್ನು ತೆಗೆದೇ ಇಡಬಹುದು. ಒಂದು ವೇಳೆ ತೆಗೆದಿಲ್ಲದಿದ್ದರೆ ಟಿಶ್ಯೂ ಬಳಸಿಯೇ ಬಾಗಿಲ ಹಿಡಿಕೆಯನ್ನು ಮುಟ್ಟಿ ಅಥವಾ ಮುಟ್ಟಿದ ಮೇಲೆ ಸ್ಯಾನಿಟೈಸರ್ ಹಚ್ಚಿಕೊಳ್ಳಿ. 

ಕಂಪ್ಯೂಟರ್ ಹಾಗೂ ಕೀ ಬೋರ್ಡ್‌

ಸಿಬ್ಬಂದಿ ಶಿಫ್ಟ್‌ಗಳಲ್ಲಿ ಕೆಲಸ ಮಾಡುವಾಗ ಒಬ್ಬರ ಕಂಪ್ಯೂಟರ್ ಇನ್ನೊಬ್ಬರು ಬಳಸುವುದು ಸಾಮಾನ್ಯ. ಆದರೆ ಕೊರೊನಾ ಸಮಯದಲ್ಲಿ ಒಬ್ಬರು ಬಳಸಿದ ಕಂಪ್ಯೂಟರ್, ಕೀ ಬೋರ್ಡ್ ಹಾಗೂ ಮೌಸ್ ಅನ್ನು ಇನ್ನೊಬ್ಬರು ನೇರವಾಗಿ ಬಳಸುವುದು ಸರಿಯಲ್ಲ. ಬಳಕೆಗೆ ಮುನ್ನ ಎಲ್ಲವನ್ನೂ ಟಿಶ್ಯೂವಿನ ಸಹಾಯದಿಂದ ನೀಟಾಗಿ ಒರೆಸಿಕೊಳ್ಳಿ. ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಿ. ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಕೆಲಸ ಆರಂಭಿಸಿ.  

ತಬ್ಬಿಕೊಳ್ಳುವುದು ಕೈ ಕುಲುಕುವುದು ಬೇಡ

ಬಹಳ ದಿನಗಳ ನಂತರ ಸಹೋದ್ಯೋಗಿಗಳನ್ನು ಕಂಡ ಖುಷಿಯಲ್ಲಿ ತಬ್ಬಿಕೊಳ್ಳುವುದು, ಕೈ ಕುಲುಕುವುದು ಮಾಡುವುದು ಬೇಡ. ಇದರಿಂದ ನಿಮ್ಮೊಂದಿಗೆ ಸಹೋದ್ಯೋಗಿಗಳ ಆರೋಗ್ಯಕ್ಕೂ ಕುತ್ತು ಬರಬಹುದು. ಸನ್ನೆ ಹಾಗೂ ಶಬ್ದಗಳ ಮೂಲಕವೇ ಸಹೋದ್ಯೋಗಿಗಳನ್ನು ಸ್ವಾಗತಿಸಿ.

ದೈಹಿಕ ಅಂತರವಿರಲಿ

ಅನೇಕ ದಿನಗಳ ನಂತರ ಎಲ್ಲರನ್ನೂ ಒಂದೇ ಸೂರಿನಡಿ ಕಂಡು ಆನಂದವಾಗುವುದು ಸಹಜ. ಆದರೆ ಹತ್ತಿರ ಕುಳಿತುಕೊಳ್ಳುವುದು, ಗುಂಪಾಗಿ ಚರ್ಚಿಸುವುದು ಮಾಡಬೇಡಿ. ಕೊರೊನಾದ ಅಪಾಯ ಇರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯ. ಕೆಲಸದ ಸಮಯದಲ್ಲೂ ದೂರ ದೂರ ಕುಳಿತು ಕೆಲಸ ಮಾಡುವುದು ಉತ್ತಮ.

ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ

ಮೊದಲೆಲ್ಲಾ ಕಚೇರಿಗೆ ಹೋಗುವಾಗ ಮೊಬೈಲ್‌ ಹಾಗೂ ಪರ್ಸ್ ನಿಮ್ಮ ಅಗತ್ಯ ವಸ್ತುಗಳಾಗಿದ್ದವು. ಆದರೆ ಈ ದಿನಗಳಲ್ಲಿ ಚಿಕ್ಕ ಗಾತ್ರದ ಸ್ಯಾನಿಟೈಸರ್, ನಿಮ್ಮದೇ ಕಾಫಿ ಮಗ್‌, ಚಮಚ, ಲೋಟ, ನೀರಿನ ಬಾಟಲ್‌, ಹೋಟೆಲ್‌ ಅಥವಾ ಕ್ಯಾಂಟೀನ್‌ಗೆ ಹೋಗುವುದನ್ನು ತಪ್ಪಿಸಲು ಊಟದ ಡಬ್ಬಿ ಒಯ್ಯುವುದು ಉತ್ತಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು