ಶನಿವಾರ, ಜನವರಿ 25, 2020
28 °C
2020

2020 ಹೊಸ ವರ್ಷಕ್ಕೆ ಹೊಸ ಸಂಕಲ್ಪ

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಜೀವನಶೈಲಿ ಬದಲಿಸಿಕೊಳ್ಳುವುದಕ್ಕೆ, ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದ ಪಣ ತೊಡುವುದಕ್ಕೆ ಹೊಸ ವರ್ಷ ಉತ್ತಮ ಸ್ಫೂರ್ತಿ ತುಂಬುತ್ತದೆ. ಏನೇ ಸಾಧನೆ ಮಾಡಬೇಕಿದ್ದರೂ ದೇಹದ ಆರೋಗ್ಯ ಮತ್ತು ಫಿಟ್‌ನೆಸ್‌ ಮುಖ್ಯ.

ಹೊಸ ಪ್ರಯೋಗಗಳಿಗೆ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಹೊಸ ವರ್ಷ ಸ್ಫೂರ್ತಿ ನೀಡುತ್ತದೆ. ಹೀಗಾಗಿಯೇ ಹಲವರು ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಹೊಸ ಸಂಕಲ್ಪಗಳನ್ನು ಮಾಡುತ್ತಾರೆ. ಬಹುತೇಕರು ಫಿಟ್‌ನೆಸ್‌ ಕಡೆಗೂ ಗಮನ ಹರಿಸುತ್ತಾರೆ. ಫಿಟ್‌ನೆಸ್‌ ಪ್ರಿಯರ ಸಂಕಲ್ಪ ಈಡೇರುವುದಕ್ಕೆ ಒಂದಿಷ್ಟು ಸಲಹೆಗಳು ಇಲ್ಲಿವೆ.

5ಕೆಗೆ ಸಿದ್ಧರಾಗಿ

ಫಿಟ್‌ನೆಸ್ ಹೆಚ್ಚಿಸುವುದಕ್ಕೆ ಓಡುವ ಅಭ್ಯಾಸ ಹೆಚ್ಚು ನೆರವಾಗುತ್ತದೆ. ನಿಧಾನ–ವೇಗ ಎಂಬುದರ ಬಗ್ಗೆ ಆಲೋಚಿಸದೇ ಓಡುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಉತ್ತಮವಾಗಿ ಓಡುವ ಅಭ್ಯಾಸವು  5ಕೆ, 10ಕೆ ಮ್ಯಾರಥಾನ್‌ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ಪ್ರೇರಣೆ ನೀಡಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧರಾಗುವಂತೆ ಓಡುವ ಅಭ್ಯಾಸ ಆರಂಭಿಸಿ.

ಹೆಚ್ಚು ನೀರು ಸೇವಿಸಿ

ವ್ಯಾಯಾಮ ಮಾಡುವವರು, ಫಿಟ್‌ನೆಸ್‌ ಬಯಸುವವರು ಹೆಚ್ಚು ನೀರು ಸೇವಿಸಬೇಕೆಂದು ಹಲವು ತರಬೇತುದಾರರು ಹೇಳುತ್ತಾರೆ. ದೇಹದಲ್ಲಿ ನೀರಿನ ಅಂಶ ಅಗತ್ಯ ಪ್ರಮಾಣದಲ್ಲಿ ಸದಾ ಇರುವಂತೆ ನೋಡಿಕೊಳ್ಳಬೇಕು. ನಿತ್ಯ ಕನಿಷ್ಠ 8 ಲೋಟ ನೀರು ಕುಡಿಯಬೇಕು. ಇದರಿಂದ ನಿರ್ಜಲೀಕರಣ ಸಮಸ್ಯೆಯಿಂದ ದೂರವಾಗುವುದಲ್ಲದೇ, ತ್ವಚೆ ಒಣಗದಂತೆ ಮತ್ತು ಕಾಂತಿಯುತವಾಗಿ ಇರುವುದಕ್ಕೆ ಸಹಕಾರಿಯಾಗುತ್ತದೆ. ತೂಕ ಇಳಿಸಿಕೊಳ್ಳುವುದಕ್ಕೂ ಸಹಕಾರಿ.

ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ

ಫಿಟ್‌ನೆಸ್‌ ಹೆಚ್ಚಿಸಲು ನೆರವಾಗುವ ಹಲವು ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಸಿಗುತ್ತವೆ. ನಿತ್ಯ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು, ಯಾವ ಆಹಾರ ಸೂಕ್ತ, ದೇಹದ ಸ್ಥಿತಿಗತಿ ಬಗ್ಗೆ ಇಂತಹ ಆ್ಯಪ್‌ಗಳಿಂದ ಮಾಹಿತಿ ಪಡೆಯಬಹುದು. ಸಾಧನಗಳೊಂದಿಗೆ ಜೋಡಿಸಿರುವ ಆ್ಯಪ್‌ಗಳ ಮೂಲಕ ನಾಡಿಮಿಡಿತ, ಹೃದಯ ಬಡಿತವನ್ನೂ ತಿಳಿಯಬಹುದು.

ಉತ್ತಮ ಆಹಾರಾಭ್ಯಾಸ

ಫಿಟ್‌ನೆಸ್‌ ಹೆಚ್ಚಿಸಿಕೊಳ್ಳುವುದಕ್ಕೆ ಆಹಾರ ಪಥ್ಯದ ಪಾತ್ರವೇ ಹೆಚ್ಚು. ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕೆ ಉತ್ತಮ ಆಹಾರಾಭ್ಯಾಸದ ಪಾತ್ರ ಶೇ 80ರಷ್ಟು ಇರುತ್ತದೆ ಎಂಬುದು ತಜ್ಞರು, ತರಬೇತುದಾರರ ಮಾತು. ತಜ್ಞರ ಸಲಹೆ ಪಡೆದು ಪೋಷಕಾಂಶಗಳಿರುವ ಆಹಾರ ಸೇವಿಸುವ ಸಂಕಲ್ಪ ಮಾಡಿ.

ತರಗತಿಗಳಿಗೆ ಹೋಗಿ

ಫಿಟ್‌ನೆಸ್‌ ಬೇಕೆಂದರೆ ಸೂಕ್ತ ರೀತಿಯಲ್ಲಿ ವ್ಯಾಯಾಮ ಮಾಡುವುದು ಕೂಡ ಮುಖ್ಯ. ಹೀಗಾಗಿ ಈ ವರ್ಷದಿಂದ ಯಾವುದಾರೂ ಒಂದು ವ್ಯಾಯಾಮ ಅಭ್ಯಾಸ ಮಾಡುವ ಸಂಕಲ್ಪ ಮಾಡಿ, ಹತ್ತಿರದಲ್ಲಿರುವ ಯೋಗ ತರಬೇತಿ, ಜಿಮ್‌ ಕೇಂದ್ರಗಳಿಗೆ ಸೇರಲು ಪ್ರಯತ್ನಿಸಿ.

ಹಾಯಾಗಿ ನಿದ್ರೆ ಮಾಡಿ

ಅಭ್ಯಸಿಸುತ್ತಿರುವ ವ್ಯಾಯಾಮಗಳು ಫಲಕಾರಿಯಾಗಿರಬೇಕೆಂದರೆ, ಸೂಕ್ತ ಸಮಯದಲ್ಲಿ ನಿದ್ರಿಸುವುದು ಕೂಡ ಮುಖ್ಯ. ಉತ್ತಮ ನಿದ್ರಾ ಹವ್ಯಾಸಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ಕೆಲವು ಅಧ್ಯಯನಗಳು ನಿರೂಪಿಸಿವೆ. ಇಂದಿನಿಂದ, ಬೇಗ ನಿದ್ರಿಸಿ, ಬೇಗ ಏಳುವ ಸಂಕಲ್ಪ ಮಾಡಿ.

ಸಕಾರಾತ್ಮಕ ಭಾವನೆ ಇರಲಿ

ಎಲ್ಲಕ್ಕಿಂತ ಮುಖ್ಯವಾಗಿ ಸಕಾರಾತ್ಮಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ. ಈ ಯೋಚನೆ ಜೀವನದ ಪ್ರತಿ ಹಂತದಲ್ಲೂ ಪ್ರಭಾವ ಬೀರುತ್ತದೆ. ಹೊಸ ವರ್ಷದ ಹೊಸ ಸಂಕಲ್ಪಗಳು ಸಾಕಾರವಾಗುವುದಕ್ಕೆ ಸಕಾರಾತ್ಮಕ ಆಲೋಚನೆಗಳೇ ಬಹುಮುಖ್ಯ ಪಾತ್ರ ವಹಿಸುತ್ತವೆ.

ಧ್ಯಾನ ಮಾಡುವ ಸಂಕಲ್ಪ

ಏಕಾಗ್ರತೆಗೆ ನೆರವಾಗುವ ಧ್ಯಾನ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನಿತ್ಯದ ಒತ್ತಡಗಳಿಗೆ ಧ್ಯಾನವೇ ಉತ್ತಮ ಉಪಶಮನ. ನಿತ್ಯ ಕನಿಷ್ಠ 10 ನಿಮಿಷ ಅವಧಿಯನ್ನು ಧ್ಯಾನ ಮಾಡುವುದಕ್ಕೆ ಮೀಸಲಿಡುವ ಸಂಕಲ್ಪ ಮಾಡಿ. ಉಸಿರಾಟದ ಸಮಸ್ಯೆಗಳ ನಿವಾರಣೆಗೂ ಧ್ಯಾನ ಸಹಕಾರಿ. ಕೆಲವೇ ನಿಮಿಷಗಳಲ್ಲಿ ಅಭ್ಯಾಸ ಮಾಡಬಹುದಾದಂತಹ ಇಂತಹ ವ್ಯಾಯಾಮಗಳು ಸ್ವಸ್ಥ ಮನಸ್ಸಿಗೆ ಮದ್ದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು