ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಂದಿಗೆ ನೀವಿರಿ

Published 27 ಜೂನ್ 2023, 1:14 IST
Last Updated 27 ಜೂನ್ 2023, 1:14 IST
ಅಕ್ಷರ ಗಾತ್ರ

ರೂಪ ಕೆ.ಎಂ

ನಕಾರಾತ್ಮಕತೆ, ಅನವಶ್ಯಕ ಅಭಿಪ್ರಾಯ, ಟೀಕೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲಿಯೂ ಹೆಣ್ಣುಮಕ್ಕಳು ತಮ್ಮ ಬದುಕಿನ ಪ್ರಮುಖ ಘಟ್ಟಗಳಲ್ಲಿ ಈ ನಕಾರಾತ್ಮಕತೆಯನ್ನು ಎದುರಿಸುವ ಬಹು ದೊಡ್ಡ ಸವಾಲನ್ನು ಅನುಭವಿಸುತ್ತಾರೆ. ಅಮ್ಮನಾಗುವ ಸಂಭ್ರಮದಲ್ಲಿರುವ ಗರ್ಭಿಣಿಯರು, ಮಗು ಹೆತ್ತು ಅದನ್ನು ಪೋಷಿಸುವ ಹೊಸ ಅಮ್ಮಂದಿರು ಈ ನಕಾರಾತ್ಮಕತೆಯಿಂದ ಉಂಟಾಗುವ ತೀವ್ರ ಒತ್ತಡ ಹಾಗೂ ಆತಂಕದಲ್ಲಿಯೇ ತಮ್ಮ ಬಹು ಸಮಯವನ್ನು ಕಳೆಯಬೇಕಾಗುತ್ತದೆ. 

ಗರ್ಭಿಣಿಯಾಗಿದ್ದಾಗ ಹೊಟ್ಟೆ ದೊಡ್ಡದಿದ್ದರೂ, ಚಿಕ್ಕದಿದ್ದರೂ; ಬಾಣಂತನದಲ್ಲಿ ತೂಕ ಗಳಿಸಿದರೂ, ಗಳಿಸದೇ ಕೃಶವಾಗಿದ್ದರೂ ಹೀಗೆ... ಎಲ್ಲವನ್ನು ನೆಪ ಮಾಡಿಕೊಂಡು ಗೊತ್ತಿದ್ದೊ ಗೊತ್ತಿಲ್ಲದೆಯೋ ಅನವಶ್ಯಕ ಅಭಿಪ್ರಾಯಗಳನ್ನು ನೀಡುತ್ತಲೇ  ಅಭದ್ರತೆ, ಆತಂಕ ಭಾವವನ್ನು ಹೆಣ್ಣುಮಕ್ಕಳಲ್ಲಿ  ಹುಟ್ಟುಹಾಕಲಾಗುತ್ತದೆ.  ಇನ್ನು ಮಗುವಿನ ಪೋಷಣೆ, ಆರೈಕೆಯಲ್ಲಿ ತುಸು ಹೆಚ್ಚು ಕಮ್ಮಿಯಾದರೂ  ಅದರ ಬೆಳವಣಿಗೆ ಸಹಜವಾಗಿದ್ದರೂ, ಸಹಜವಾಗಿದೆಯೇ ಇಲ್ಲವೇ ಎಂಬುದನ್ನು ಪದೇ ಪದೇ ಪರಿಶೀಲಿಸುವಂತೆ ಒಂದು ಅಮೂರ್ತವಾದ ಒತ್ತಡ ಹೆಣ್ಣುಮಕ್ಕಳ ಹೆಗಲೇರಿರುತ್ತದೆ. ಜತೆಗೆ ಬಾಣಂತನ  ಹಾಗೂ ಮಗುವಿನ ಆರೈಕೆಯ ಸಮಯದಲ್ಲಿ ವೈದ್ಯರ ಮಾತು ಸರಿಯೋ?, ಅಜ್ಜಿಯ ಮನೆಮದ್ದು ಸರಿಯೋ? ಎಂಬ ಗೊಂದಲವಂತೂ ಇದ್ದೇ ಇರುತ್ತದೆ.  

11 ತಿಂಗಳ ಮಗು ಇನ್ನು ಸ್ವತಂತ್ರವಾಗಿ ನಿಂತುಕೊಳ್ಳುತ್ತಿಲ್ಲ ಎಂದಾಕ್ಷಣ ಮನೆ ಮಂದಿ, ಕಂಡ ಕಂಡ ಸಂಬಂಧಿಕರೆಲ್ಲ ‘ಇನ್ನು ಸ್ವತಂತ್ರವಾಗಿ ನಿಲ್ಲುವುದಿಲ್ಲವೇ? ಏನಾಶ್ಚರ್ಯ’ ಎಂಬ ನೋಟ ಬೀರುತ್ತಾರೆ. ಈ ನೋಟವೇ ಸಾಕು ಸೂಕ್ಷ್ಮಮನಸ್ಸಿನವರಲ್ಲಿ ನಕಾರಾತ್ಮಕ ಆಲೋಚನೆಗಳು ತುಂಬುವುದಕ್ಕೆ. ಬೆಳೆಯುತ್ತಿರುವ ಮಗು ಸರಿಯಾದ ಪ್ರಮಾಣದಲ್ಲಿ ಊಟ ಮಾಡುತ್ತಿಲ್ಲವೆಂದೋ, ಮೊದಲಿಗಿಂತಲೂ ದಷ್ಟಪುಷ್ಟವಾಗಿಲ್ಲವೆಂದೋ ಏನಾದರೂ ಸಮಸ್ಯೆ  ಇದ್ದಿರಬಹುದು  ಸೂಕ್ತ ವೈದ್ಯರಲ್ಲಿ ತೋರಿಸಿ ಎಂಬ ಸಲಹೆಯೊಂದೇ ಸಾಕು ದಿನವಿಡೀ ಚಿಂತಿತರಾಗಲು. 

ಮಗುವಿನ ಪೋಷಣೆ ವಿಚಾರದಲ್ಲಿ ಕಚೇರಿಗೆ ಹೋಗುವ ಅಮ್ಮಂದಿರ ಗೊಂದಲ, ಆತಂಕ, ಅಭದ್ರತೆ ತುಸು ವಿವರಿಸುವುದು ಕಷ್ಟವೇ. ಹಾಗಾದರೆ ಈ ನಕರಾತ್ಮಕತೆಯಿಂದ ಉಂಟಾಗುವ ಈ ಅಡ್ಡ ಪರಿಣಾಮಗಳಿಗೆ ತೆರೆ ಎಳೆಯುವುದೇ ಹೇಗೆ ಎಂಬುದರತ್ತವೂ ಆಲೋಚಿಸೋಣ. 

ಹೆಣ್ಣುಮಕ್ಕಳು ಕೇವಲ ಭಾವನಾಜೀವಿಗಳಷ್ಟೆ  ಅಲ್ಲ ವಾಸ್ತವವಾದಿಗಳೂ ಹೌದು ಎಂಬುದನ್ನು ಮೊದಲಿಗೆ ನಮಗೆ ನಾವೇ ಅರ್ಥ ಮಾಡಿಕೊಳ್ಳಬೇಕಿದೆ. ಬದುಕನ್ನು ವಾಸ್ತವದ ಹಿನ್ನೆಲೆಯಲ್ಲಿ ನೋಡುವುದಕ್ಕೆ ಸದಾ ಪ್ರಯತ್ನಿಸೋಣ. ತಳಬುಡವಿಲ್ಲದ ಅಭಿಪ್ರಾಯ, ನಕಾರಾತ್ಮಕತ ಆಲೋಚನೆಗಳನ್ನು ಸ್ವೀಕರಿಸುವ  ಮೊದಲು ಆ ವಿಚಾರಗಳ ಬಗ್ಗೆ ಸ್ಪ‍ಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯ.

ಸರಿಯಾಗಿ ಅರ್ಥಮಾಡಿಕೊಂಡರೆ ಅಪಾರ್ಥಕ್ಕೆ ಎಡೆ ಇರುವುದಿಲ್ಲ. ಗರ್ಭಿಣಿಯರಾಗಲಿ, ಬಾಣಂತಿಯರಾಗಲಿ, ಮಗುವಿನ ಪೋಷಣೆಯಲ್ಲಿರುವ ಹೊಸ ತಾಯಂದಿರಾಗಲಿ ಯಾವುದೇ ವಿಷಯದ ಕುರಿತು ಸ್ಪಷ್ಟವಾದ ತಿಳಿವಳಿಕೆಯನ್ನು ತಜ್ಞರಿಂದ ಪಡೆದುಕೊಳ್ಳುವ ಮಾರ್ಗವನ್ನು ಅನುಸರಿಸಿ. 

ಯಾರೋ ಏನೋ ಅಂದರು ಎಂದು ತಲೆಕೆಡಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುವುದಕ್ಕಿಂತ ಇಂಥ ಸಂದರ್ಭದಲ್ಲಿ ತಾಳ್ಮೆ ವಹಿಸಿ, ಯಾವುದು ಸರಿ, ಅನವಶ್ಯಕವಾಗಿ ಮಂಡನೆಯಾಗುವ ಅಭಿಪ್ರಾಯಗಳು ಯಾವುವು? ಅವುಗಳಲ್ಲಿ ವ್ಯಕ್ತವಾಗುವ ನೈಜ ಕಾಳಜಿ ಎಷ್ಟು? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲು ಆರಂಭಿಸಿ. ಅನವಶ್ಯಕ ಅಭಿಪ್ರಾಯ, ದಿಕ್ಕೆಡಿಸುವ ಮಾತುಗಳು ಎನಿಸಿದರೆ ಸಾರಸಗಟಾಗಿ ಅದರತ್ತ ತಿರಸ್ಕಾರದ ನೋಟವನ್ನು ಬೀರಲು ಕಲಿಯಿರಿ.

ಎಂಥದ್ದೇ ಸಂದರ್ಭದಲ್ಲಿ ನಿಮ್ಮೊಂದಿಗೆ ನೀವಿರಲು ಪ್ರಯತ್ನಿಸಿ. ನಿಮ್ಮ ಮನವನ್ನು ನೀವೆ ಸಂತೈಸಿಕೊಳ್ಳಲು ಸಶಕ್ತರಾಗವಷ್ಟು ನಿಮ್ಮೊಳಗಿನ ಧೀಃಶಕ್ತಿಯನ್ನು ಪ್ರೇರೇಪಿಸಿ.  ಮನಸ್ಸಿನೊಂದಿಗೆ ಕನಿಷ್ಠ ಹತ್ತು ನಿಮಿಷವಾದರೂ ಮಾತಾಡುವ ಕೌಶಲ ರೂಪಿಸಿಕೊಳ್ಳಿ. ಬದುಕಿನ ಜಂಜಾಟದಲ್ಲಿ ಹೈರಾಣಾಗಿರುವ ಮನಸ್ಸಿಗೆ ‘ಯಾವುದಕ್ಕೂ ಹೆದರದಿರು‘ ಎಂಬ ಸಾಂತ್ವನದ ಮಾತುಗಳನ್ನಾಡಿ. ನಿಮಗೆ ನೀವೆ ಸಂಗಾತಿಯಾದರೆ, ಬೇರೆಯವರ ಅವಲಂಬನೆ ತಪ್ಪುತ್ತದೆ.  

ಹೀಗೆ ಮಾಡಿ: 

*  ಎಂಥಹುದೇ ವೃತ್ತಿ ನಿರ್ವಹಿಸುತ್ತಿರಲಿ. ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಿ.

* ಪೋಷಣೆ–ಪಾಲನೆ ವಿಚಾರಗಳಲ್ಲಿ ಹಿರಿಯರ ಮಾತು ಅಲ್ಲಗಳೆಯಲು ಸಾಧ್ಯವಿಲ್ಲವಾದರೂ ಅನವಶ್ಯಕವಾಗಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ತಲೆ ಕೆಡಿಸಿಕೊಳ್ಳದೆ ಮನಸ್ಸಿಗೆ ಸರಿ ಯಾವುದು ಎಂಬುದನ್ನು ಅವಲೋಕಿಸಿ.

* ಈ ಸಮಯದಲ್ಲಿ ಮನಸ್ಸು ಸೂಕ್ಷ್ಮವಾಗಿರುತ್ತದೆ ಎಂಬುದು ನಿಜವಾದರೂ ದೃಢಮನಸ್ಸು ಇದ್ದರೆ ಮಾತ್ರ ನಕರಾತ್ಮಕತೆಯನ್ನು ಹಿಮ್ಮೆಟಿಸಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ.

* ಆಯಾ ಕಾಲಕ್ಕೆ ಬೇಕಾದ ವ್ಯವಹಾರ ಜ್ಞಾನ,  ತಾಂತ್ರಿಕ ಜ್ಞಾನ  ಬೆಳೆಸಿಕೊಳ್ಳಿ. ನಿಮ್ಮೊಂದಿಗೆ ನೀವಿದ್ದರೆ,  ಆತ್ಮವಿಶ್ವಾಸವೊಂದು ನಿಮ್ಮ ಜತೆ ಇದ್ದರೆ  ಎಂಥ ಟೀಕೆ, ಅನವಶ್ಯಕ ಅಭಿಪ್ರಾಯಗಳನ್ನಾದರೂ ಮೆಟ್ಟಿ ಗುರಿಯತ್ತ ಆಲೋಚಿಸಬಹುದು. 

* ದೈಹಿಕ ಆರೋಗ್ಯಕ್ಕೆ ಯೋಗ, ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಜತೆಗೆ  ಉತ್ತಮ ಸ್ನೇಹಿತರು ಹಾಗೂ ಪುಸ್ತಕಗಳಿಂದ ಮಾತ್ರ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿಕೊಳ್ಳಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT