ಗುರುವಾರ , ಜನವರಿ 28, 2021
27 °C

ಆನ್‌ಲೈನ್‌ ಆಟವೆಂಬ ಹೊಸ ವ್ಯಸನ

ಎಂ.ವಿ .ಕೇಶವ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ನಿಮ್ಮ ಮಗ ಯಾವುದೋ ಸಾಮಾಜಿಕ ಜಾಲತಾಣದ ಸದಸ್ಯನಾಗಿದ್ದರೆ, ಇದ್ದಕ್ಕಿದ್ದಂತೆ ಒಂದು ದಿನ ಅಲ್ಲಿ ಲಿಂಕೊಂದು ಕಾಣಿಸಿಕೊಳ್ಳಬಹುದು‌. ಕುತೂಹಲದಿಂದ ಅದನ್ನು ಒತ್ತಿದರೆ ತಕ್ಷಣ ಅಪ್ಲಿಕೇಶನ್ ಒಂದು ತನ್ನಿಂದ ತಾನೇ ಡೌನ್‌ಲೋಡ್‌ ಆಗಿ ಇನ್‌ಸ್ಟಾಲ್ ಆಗುತ್ತದೆ. ಏನೆಂದು ನೋಡಲು ಮಗು ಅದರ ಒಳಹೋಗುತ್ತದೆ. ಮೊದಲಿಗೆ ‘ಕ್ಲಾಪ್ ಟ್ವೈಸ್ ಎಂಡ್ ಸೇ ಐ ಆಮ್ ವೆರಿ ಸ್ಟ್ರಾಂಗ್’ ಎಂಬ ಪ್ರಶ್ನೆ. ಓಹೋ ಇದೇನೋ ಮುಂದೆ ನೋಡೋಣ ಎಂದು ಮಗು ಮುಂದೆ ಹೋಗುತ್ತದೆ. ಹೀಗೆಯೇ ಒಂದೆರಡು ಔಪಚಾರಿಕ ಪ್ರಶ್ನೆಗಳ ನಂತರ ನಿನ್ನ ಕೈ ಮೇಲೆ ‘F15’ ಎಂದು ಚೂಪಾದ ವಸ್ತುವಿನಿಂದ ಕೊರೆದುಕೊಂಡು ಫೋಟೋ ಕಳಿಸು ಎನ್ನುತ್ತದೆ. ಆನಂತರ ಬಾಲ್ಕನಿಯ ಮೇಲೆ ಎರಡು ಗಂಟೆ ನಿಲ್ಲು. ಬ್ಲೂ ವೇಲಿನ ಚಿತ್ರ ಕೈಮೇಲೆ ಕೊರೆದು ತೋರಿಸು ಎನ್ನುತ್ತಾ ಕಡೆಯದಾಗಿ ನೀನು ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋವನ್ನೋ ಅಥವಾ ನೇಣುಬಿಗಿದುಕೊಳ್ಳುವ ವಿಡಿಯೋವನ್ನೋ ಮಾಡಿ ಕಳಿಸು ಎನ್ನುತ್ತದೆ. ಮುಂದೇನು ಮುಂದೇನು ಎಂಬ ಕುತೂಹಲದಿಂದ ಚಾಲೆಂಜ್‌ಗಳ ಹುಚ್ಚು ಹತ್ತಿಸಿ ಮಕ್ಕಳನ್ನು ಆತ್ಮಹತ್ಯೆಗೆ ತಳ್ಳುವ ಈ ಅಂತರ್ಜಾಲದ ಆಟ ವಿಶ್ವದೆಲ್ಲೆಡೆ ನಾಲ್ಕೈದು ವರ್ಷಗಳ ಹಿಂದೆ ಬಹಳ ಗಂಭೀರವಾದ ಸಮಸ್ಯೆಯಾಗಿ ತಲೆದೋರಿತು.

ರಷ್ಯಾದ ವಿಕೆ ಎಂಬ ಸಾಮಾಜಿಕ ಜಾಲತಾಣದಲ್ಲಿ ‘F57’ ಹೆಸರಿನ ಗುಂಪೊಂದರ ಸದಸ್ಯರಾಗಿದ್ದ ಹಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನವೋಯಾ ಗೆಜೆಟಾ ಎಂಬ ಪತ್ರಿಕೆ ಕೆಲವು ವರ್ಷಗಳ ಹಿಂದೆ ಸುದ್ದಿಯೊಂದನ್ನು ಪ್ರಕಟಿಸಿತು. ಮೊದಮೊದಲಿಗೆ ಇದು ಹೆಚ್ಚು ಚರ್ಚೆಗೆ ಒಳಗಾಗಲಿಲ್ಲವಾದರೂ ಅದು ಆ ಗುಂಪಿನ ನಡುವೆ ಚಲಾವಣೆಯಾಗುತ್ತಿದ್ದ, ಬ್ಲೂ ವೇಲ್ ಚಾಲೆಂಜ್ ಎಂಬ ಆಟವೊಂದರಿಂದ ಪ್ರಭಾವಿತವಾದದ್ದೆಂದು ತಿಳಿಯುತ್ತಿದ್ದಂತೆ ಇಡೀ ವಿಶ್ವವೇ ದಿಗ್ಬ್ರಮೆಗೊಳಗಾಯಿತು. ಐವತ್ತು ಟಾಸ್ಕ್ ಗಳನ್ನು ಹೊಂದಿರುವ ಈ ಆಟವು ಕಡೆಯ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿ ಅದನ್ನು ವಿಡಿಯೊ ರೆಕಾರ್ಡ್ ಮಾಡುವಂತೆ ಹೇಳುತ್ತದೆ. ಈಗಾಗಲೇ ಆಟದ ಚಟ ಹತ್ತಿ ಗೀಳಾಗಿ ಹೋಗಿರುವ ಮಗು ಅದು ಹೇಳಿದಂತೆ ವಿಡಿಯೋ ಮಾಡಿಕೊಳ್ಳುತ್ತಲೇ ಆತ್ಮಹತ್ಯೆಗೆ ಶರಣಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ಕಾಲೇಜಿನಿಂದ ಹೊರಹಾಕಲ್ಪಟ್ಟ ಫಿಲಿಪ್ ಬಡ್ಕೈನ್ ಎಂಬ ಮನಃಶಾಸ್ತ್ರದ ವಿದ್ಯಾರ್ಥಿ ಇದನ್ನು ನಿರ್ಮಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆಂಬುದು ಗೊತ್ತಾಯಿತು. ಈತ ಆಟದ ಹೆಸರಿನಲ್ಲಿ ಹಲವಾರು ಅಮಾಯಕ ಮಕ್ಕಳನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಬಂಧಿಸಿ ಮೂರು ವರ್ಷಗಳ ಕಾಲ ಶಿಕ್ಷೆ ನೀಡಲಾಯಿತು. ಆದರೆ ಅದಾಗಲೇ ಈ ಹುಚ್ಚು ಆಟ ಜಗತ್ತೆಲ್ಲಾ ವ್ಯಾಪಿಸಿ ಹಲವಾರು ಮಕ್ಕಳನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳಿಯಾಗಿತ್ತು.

ಕೇವಲ ಬ್ಲೂವೇಲ್ ಕಥೆ ಇದಾದರೆ ಇನ್ನೂ ಇಂತಹ ನೂರಾರು ಆನ್‌ಲೈನ್‌ ಆಟಗಳಿಂದ ಅದೆಷ್ಟು ಸಮಸ್ಯೆ ಉಂಟಾಗುತ್ತಿರಬಹುದೆಂದು ಊಹಿಸಿದರೆ ಆತಂಕವಾಗುತ್ತದೆ. ಇತ್ತೀಚೆಗೆ ಆನ್‌ಲೈನ್ ಆಟಗಳು ಇಂತಹ ಸಮಸ್ಯೆಗಳನ್ನಷ್ಟೇ ಅಲ್ಲದೇ ಹಣ ಮಾಡುವ ದಂಧೆಯಾಗಿಯೂ ಮಾರ್ಪಾಡಾಗಿವೆ. ನಟರು, ಆಟಗಾರರು ಇದನ್ನು ಪ್ರೋತ್ಸಾಹಿಸುತ್ತಾ, ಆನ್‌ಲೈನ್‌ ಆಟಗಳಿಂದ ಹಣ ಮಾಡಬಹುದೆಂಬ ಆಸೆ ತೋರಿಸಿ, ಜನರಲ್ಲಿ ಹುಚ್ಚು ಹತ್ತಿಸಿಬಿಟ್ಟಿದ್ದಾರೆ.

ವಿಶ್ವಮಾರುಕಟ್ಟೆ: ಸದ್ಯ ಇತರ ಮಾರುಕಟ್ಟೆಗಳ ಜೊತೆಗೆ ಆನ್‌ಲೈನ್‌ ಆಟಕ್ಕೆ ಬಹುದೊಡ್ಡ ಮಾರುಕಟ್ಟೆಯಿದೆ. ಇದರ ಅಂದಾಜು ಮೊತ್ತ 2013ರಲ್ಲಿ 6.1 ಬಿಲಿಯನ್ ಯೂರೋ ಗಳಷ್ಟು ಇತ್ತು (ಸುಮಾರು ₹ 5.39 ಲಕ್ಷ ಕೋಟಿ). 2020ರಲ್ಲಿ ಶೇಕಡಾ ಹತ್ತರಷ್ಟು ಜಾಸ್ತಿಯಾಗಿದೆ ಹಾಗೂ ಜಾಸ್ತಿಯಾಗುತ್ತಲೇ ಇದೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರ ಅಭಿಪ್ರಾಯ.

2000ನೇ ಇಸವಿಯಿಂದ ನಿಧಾನವಾಗಿ ತನ್ನ ಜಾಲವನ್ನು ಕುದುರಿಸುತ್ತಾ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಗೇಮಿಂಗ್ ಮಾರುಕಟ್ಟೆ ಇಂದು ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ.

‘ಮ್ಯಾಸೀವ್ಲೀ ಮಲ್ಟಿಪ್ಲೇಯರ್ ಆನ್‌ಲೈನ್ ರೋಲ್ ಪ್ಲೇಯಿಂಗ್ ಗೇಮ್ಸ್’ ಎಂದು ಕರೆಯಲಾಗುವ ಒಂದು ಆಟ ಆನ್‌ಲೈನ್ ಆಟಗಳಲ್ಲಿ ಅತ್ಯಂತ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಆಟದೊಂದು ಭಾಗವಾಗಿ ಆಟಗಾರನೇ ಇರುವುದರಿಂದ ನಿಧಾನವಾಗಿ ವ್ಯಸನ ಹತ್ತುತ್ತದೆ. ಆಟದ ಪಾತ್ರವೇ ತಾನಾಗಿರುವುದರಿಂದ ಅನ್ನಾಹಾರ ತ್ಯಜಿಸಿ ಆಡುವಷ್ಟರ ಮಟ್ಟಿಗೆ ಈ ಆಟಗಳು ಗೀಳಾಗಿಬಿಡುತ್ತವೆ. ಶೂಟಿಂಗ್ ಗೇಮ್‌ಗಳು, ರೇಸಿಂಗ್, ಯುದ್ದ, ಕುಸ್ತಿ, ವಿಮಾನ ಚಲಾವಣೆ, ಹಡಗು ಚಲಾವಣೆ ಮುಂತಾದ ಆಟಗಳನ್ನು ಇದಕ್ಕೆ ಉದಾಹರಿಸಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಪಬ್ಜಿ ಕೂಡ ಇಂತಹ ಒಂದು ಆಟಕ್ಕೆ ಉದಾಹರಣೆ. ವಿವಿಧ ರೀತಿಯ ಸವಾಲುಗಳನ್ನೆಸೆದು ಅದನ್ನು ಪೂರ್ತಿಗೊಳಿಸಲು ಉತ್ತೇಜಿಸುವ ಆಟಗಳೂ ಮಕ್ಕಳನ್ನು ವ್ಯಸನಿಗಳನ್ನಾಗಿಸುವಲ್ಲಿ ಮುಂಚೂಣಿಯಲ್ಲಿವೆ. ಬ್ಲೂವೇಲ್‌ ಚಾಲೆಂಜ್‌, ಘೋಸ್ಟ್‌‌ ಚಾಲೆಂಜ್‌, ಫೈವ್ ಫಿಂಗರ್‌ ಚಾಲೆಂಜ್‌, ಗ್ಯಾಲನ್‌ ಚಾಲೆಂಜ್‌, ಚಾರ್ಲಿ ಚಾರ್ಲಿ, ಸಾಲ್ಟ್‌&‌ ಐಸ್‌ ಮುಂತಾದವು. ಇವುಗಳ ವ್ಯಸನ ಹಲವಾರು ಬಾರಿ ಆತ್ಮಹತ್ಯೆ, ಅತಿಯಾದ ವ್ಯಸನ, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.  

ಆನ್‌ಲೈನ್ ಗೇಮುಗಳ ಆಳ ಅಗಲ ಎಣಿಕೆಗೆ ಸಿಗಲಾರದ್ದು. ಇದರಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಕಂಡುಹಿಡಿಯುವುದು ಬಹಳ ಕಷ್ಟ. ಬ್ಲೂವೇಲ್ ಆಟವೊಂದರಿಂದಲೇ  ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಸುಮಾರು ಐನೂರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ವರದಿಯಿದೆ. ಹಲವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪಬ್ಜಿ ಆಟವಾಡಲು ಡೇಟಾ ಹಾಕಿಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರೂ, ತಂದೆ ತಾಯಿಯನ್ನು ಕೊಲೆಮಾಡಿದವರೂ ಇದ್ದಾರೆ. ಹೀಗಾಗಿ ಆನ್‌ಲೈನ್‌ ಆಟದ ದುಷ್ಪರಿಣಾಮಗಳನ್ನು ಒಂದೇ ದೃಷ್ಟಿಕೋನದಿಂದ ಅಳೆಯಲಾಗದು. ಅದಕ್ಕೆ ನೂರಾರು ಆಯಾಮಗಳಿರುತ್ತವೆ. ಇದರ ಹಿಂದೆ ದೊಡ್ಡ ವಂಚನಾಜಾಲವೂ ಸಕ್ರಿಯವಾಗಿರುತ್ತವೆ.

ಭಾರತದ ಪರಿಸ್ಥಿತಿ: ಭಾರತದಲ್ಲಿ ಈ ಸಮಸ್ಯೆಯ ಅಧ್ಯಯನ ಇನ್ನೂ ಶೈಶವಾವಸ್ಥೆಯಲ್ಲಿದೆ. ಯುವಜನರಲ್ಲಿ ಇದೊಂದು ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದರೂ ನೀತಿನಿರೂಪಣೆಗಳಲ್ಲಿ ಬಹಳ ಗಂಭೀರವಾಗಿ ಇದನ್ನು ಪರಿಗಣಿಸಿಲ್ಲ. ತಮಿಳುನಾಡಿನಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಿದೆ. ಕರ್ನಾಟಕ ಸರ್ಕಾರ ಈ ಬಗ್ಗೆ ನೀತಿ ತರಲು ಆಲೋಚಿಸುತ್ತಿದೆ. ಆದರೆ ಇದರಿಂದಾಗಿಯೇ ಆಗುತ್ತಿರುವ ಸಮಸ್ಯೆಗಳನ್ನು ಇದಮಿತ್ತಂ ಎಂದು ನಿರ್ದಿಷ್ಟವಾಗಿ ಹೇಳಬಲ್ಲ ಅಧಿಕೃತ ಸರ್ಕಾರಿ ದಾಖಲೆಗಳ ಕೊರತೆಯಿದೆ. ಹೀಗಾಗಿ ಭಾರತದದಲ್ಲಿ ಇದರ ಪರಿಣಾಮವನ್ನು ಅಧಿಕೃತವಾಗಿ ಹೇಳುವುದು ಸದ್ಯದ ಮಟ್ಟಿಗೆ ಬಹಳ ಕಷ್ಟವಿದೆಯಾದರೂ, ಸಮಸ್ಯೆ ತುಂಬಾ ಗಂಭೀರವಾಗಿಯೇ ಇರುವುದು ಮಾತ್ರ ಮೇಲ್ನೋಟಕ್ಕೆ ಢಾಳಾಗಿ ಕಂಡುಬರುತ್ತದೆ. ಅಧ್ಯಯನವೊಂದರ ಪ್ರಕಾರ 45ರ ವಯೋಮಾನಕ್ಕಿಂತ ಕಡಿಮೆಯಿರುವವರ ಸಂಖ್ಯೆ ಭಾರತದ ಜನಸಂಖ್ಯೆಯ ಶೇಕಡ ಎಪ್ಪತ್ತೈದರಷ್ಟಿದೆ. ಆನ್‌ಲೈನ್ ವಿಚಾರದಲ್ಲಿ ಅತ್ಯಂತ ಸುಶಿಕ್ಷಿತ ಜನಾಂಗವಿದು. ಹೀಗಾಗಿ ಆನ್‌ಲೈನ್ ಗೇಮುಗಳಿಗೆ ಬಹಳ ದೊಡ್ಡ ಮಾರುಕಟ್ಟೆಯನ್ನು ಭಾರತ ಒದಗಿಸುತ್ತಿದೆ. ಯುಬಿಸಾಫ್ಟ್, ಬಾಝಿ ಗೇಮ್ ಪ್ಲಾನ್, ಅಲಿಬಾಬ, ಯಾಝು ಮುಂತಾದ ದಿಗ್ಗಜ ಕಂಪೆನಿಗಳು ಆನ್‌ಲೈನ್ ಆಟಗಳಿಗಾಗಿ ಮಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿವೆ. ಒಂದೂವರೆ ಕೋಟಿಗೂ ಹೆಚ್ಚು ಜನ ಇತ್ತೀಚೆಗೆ ಭಾರತ ಸರ್ಕಾರದಿಂದ ನೀಷೇಧಿಲ್ಪಟ್ಟಿದ್ದ ಪಬ್ಜಿ ಗೇಮನ್ನು ಆಡುವವರಾಗಿದ್ದರು ಎಂದರೆ ನಿಜಕ್ಕೂ ಗಾಬರಿಯಾಗುತ್ತದೆ. ಅರಲ್ಲಿಯೂ ಆನ್‌ಲೈನ್ ಆಟಗಳನ್ನು ಆಡುವವರಲ್ಲಿ ಶೇಕಡಾ ಅರವತ್ತಕ್ಕೂ ಹೆಚ್ಚು ಆಟಗಾರರು ಹದಿನಾಲ್ಕರಿಂದ ಇಪ್ಪತ್ತಾರರ ವಯಸ್ಸಿನ ಮಕ್ಕಳು ಎನ್ನುವುದು ಇನ್ನೂ ಆತಂಕದ ವಿಚಾರ.

ಸವಾಲುಗಳೇನು?
ಆನ್ಲೈನ್‌ ಆಟಗಳ ವ್ಯಸನವೇ ನಮ್ಮೆದುರಿಗೆ ಇರುವ ಬಹುದೊಡ್ಡ ಸಮಸ್ಯೆ. ಹದಿಹರೆಯದಲ್ಲಿ ವ್ಯಸನಿಗಳಾದರಂತೂ ಅವರನ್ನು ವ್ಯಸನಮುಕ್ತರನ್ನಾಗಿ ಮಾಡುವುದೇ ದೊಡ್ಡ ಸವಾಲು. ಸಾಧಾರಣವಾಗಿ ಇಂತಹ ಗೇಮುಗಳು ಹಲವಾರು ರೀತಿಯಲ್ಲಿ ಹಣವನ್ನು ಪೀಕುತ್ತವಾದ್ದರಿಂದ ಮಕ್ಕಳು ವಂಚನೆಗೊಳಗಾಗಬಹುದು. ಇದು ಮುಂದೆ ಮನೆಯಲ್ಲಿಯೋ ಹೊರಗಡೆಯೋ ಹಣ ಕದಿಯುವಿಕೆಗೆ ಕಾರಣವಾಗಬಹುದು. ಮಕ್ಕಳನ್ನು ಬೇರೆ ಬೇರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಲು ಪ್ರೇರೇಪಿಸಲೂಬಹುದು. ಅಥವಾ ಇನ್ನಾವುದೋ ನಮಗೆ ತಿಳಿಯದ ಸಮಸ್ಯೆಗೆ ಕಾರಣವಾಗಲೂಬಹುದು. ಆನ್‌ಲೈನ್‌ ಆಟವಾಡುವ ಶೇಕಡ ಇಪ್ಪತಾರರಷ್ಟು ಮಕ್ಕಳಲ್ಲಿ ಮಾನಸಿಕ ಸಮಸ್ಯೆ ತಲೆದೋರಿರುವುದನ್ನು ಸಂಶೋಧನೆಗಳು ಬಹಿರಂಗಪಡಿಸಿವೆ.

ಚಿಕಿತ್ಸೆ ಲಭ್ಯವಿದೆಯೇ?
ವಿಶ್ವದೆಲ್ಲೆಡೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆನ್‌ಲೈನ್‌ ಆಟದ ವ್ಯಸನಿಗಳನ್ನು ಗುರುತಿಸಿ ಅವರಿಗೆ ವಿಶೇಷ ಚಿಕಿತ್ಸೆ ನೀಡಲೆಂದು ಆಸ್ಪತ್ರೆಗಗಳನ್ನು ತೆರೆಯುವುದು, ಸರ್ಕಾರದ ಮೂಲಕ ಅರಿವು ಮೂಡಿಸುವ ಕಾರ್ಯದಲ್ಲಿ ವ್ಯಸನಮುಕ್ತ ಕಾರ್ಯಕ್ರಮವನ್ನು ವಿಶೇಷವಾಗಿ ಸೇರಿಸಿ ಆ ಮೂಲಕ ಯುವಜನರಲ್ಲಿ ಅರಿವು ಮೂಡಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಜಪಾನ್, ಕೊರಿಯಾ, ಅಮೆರಿಕಾ, ಇಂಗ್ಲೆಂಡ್‌ಗಳಲ್ಲಿ ಇಂತಹ ಆಸ್ಪತ್ರೆಗಳನ್ನೇ ತೆರೆಯಲಾಗಿದೆ. ಇಂಗ್ಲೆಂಡಿನ ಆಸ್ಪತ್ರೆಯೊಂದು ಇಂತಹ ವ್ಯಸನಿಗಳಿಗಾಗಿಯೇ ಹೊರರೋಗಿಗಳ ವಾರ್ಡೊಂದನ್ನು ಮೀಸಲಿಟ್ಟಿದೆ. ಭಾರತದಲ್ಲಿಯೂ ಹಲವಾರು ವಿಖ್ಯಾತ ಆಸ್ಪತ್ರೆಗಳಲ್ಲಿ ಆನ್‌ಲೈನ್‌ ವ್ಯಸನ ಬಿಡಿಸಲಿಕ್ಕಾಗಿಯೇ ವಿಭಾಗಗಳಿವೆ. ನಿಮ್ಹಾನ್ಸ್‌ನಲ್ಲಿ ‘SHUT clinic’ (Service for healthy use of technology) ಹೆಸರಿನ ವಿಭಾಗವನ್ನು ಈ ಕಾರಣಕ್ಕಾಗಿಯೇ ತೆರೆಯಲಾಗಿದೆ.

ಕರ್ನಾಟಕ ಸರ್ಕಾರ ಆನ್‌ಲೈನ್‌ ಆಟಗಳನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದೆ. ಪಕ್ಕದ ತಮಿಳುನಾಡು ಈಗಾಗಲೇ ನಿಷೇಧಿಸಿದೆ. ಭಾರತ ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದಂತೆ ಕಾಣುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಿಷೇಧದ ಹೊರತಾಗಿ ಪ್ರಸ್ತುತ ಯುವ ಜನಾಂಗವನ್ನು ವ್ಯಸನಕ್ಕೊಳಪಡಿಸುತ್ತಿರುವ ಡ್ರಗ್ಸ್‌ ಹಾಗೂ ಆನ್‌ಲೈನ್‌‌ ಆಟಗಳಿಗೆ ಪರ್ಯಾಯವಾಗಿ ಆರೋಗ್ಯಕರವಾದ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜ ಬಹಳ ತ್ವರಿತವಾಗಿಆಲೋಚನೆ ಮಾಡಲೇಬೇಕಿದೆ.

ಲೇಖಕರು ಸಹಾಯಕ ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ ವಿಭಾಗ

ಡಾ.ಜಿ ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗು ಸ್ನಾತಕೋತ್ತರ ಕೇಂದ್ರ, ಅಜ್ಜರಕಾಡು, ಉಡುಪಿ- 576101

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು