ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮಕ್ಕಳು ತರಕಾರಿ ತಿನ್ನೋದಿಲ್ಲ, ಏನ್‌ ಮಾಡೋದು?

Last Updated 27 ಅಕ್ಟೋಬರ್ 2020, 15:57 IST
ಅಕ್ಷರ ಗಾತ್ರ

ಟೇಬಲ್‌ ಸುತ್ತ ಕುಳಿತ ಎಲ್ಲರ ಊಟ ಸಾಗಿತ್ತು. ಮಧುರಾ ಅವರ 12 ವರ್ಷದ ಮಗ ಊಟ ಮುಗಿಸಿ ಕೈತೊಳೆಯಲು ಎದ್ದು ಹೋದ. ಅವನು ಆ ಕಡೆ ಹೋಗುತ್ತಲೇ, ಮಧುರಾ ಹೇಳಿದಳು, ‘ನನ್ನ ಮಗ ಇಷ್ಟು ದೊಡ್ಡವನಾದರೂ ಸಾಂಬಾರ್‌ಗೆ ಹಾಕಿದ ಯಾವ ತರಕಾರಿಯನ್ನೂ ತಿನ್ನುವುದಿಲ್ಲ. ನೋಡಿ ಹೇಗೆ ಬದಿಗೆ ತೆಗೆದಿಟ್ಟಿದ್ದಾನೆ’.

‘ಇವನಿಗೆ ಏನು ಮಾಡುವುದೋ ತಿಳಿಯುತ್ತಿಲ್ಲ. ನಾನೂ ಬಿಡುವುದಿಲ್ಲ. ಸಾಂಬಾರ್‌ಗೆ ಹಾಕಿದ ತರಕಾರಿಯನ್ನು ಒಂದಿಷ್ಟು ತೆಗೆದು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್‌ ಮಾಡಿ ಅವನ ಸಾಂಬಾರ್‌ಗೆ ಹಾಕಿ ಬಡಿಸುತ್ತೇನೆ. ಅಷ್ಟಾದರೂ ಹೊಟ್ಟೆಗೆ ಹೋಗುತ್ತದಲ್ಲ’. ಹೌದೆನಿಸಿತು ಊಟಕ್ಕೆ ಕುಳಿತಿದ್ದ ಎಲ್ಲರಿಗೂ.

ಜ್ಯೋತಿಯ 6 ವರ್ಷದ ಮಗಳು ಕೀರ್ತಿಯ ಕಥೆ ಇನ್ನೊಂದು ರೀತಿ. ಅವಳೂ ಯಾವ ತರಕಾರಿಯನ್ನೂ ತಿನ್ನುವುದಿಲ್ಲ. ಕಲೆಸಿದ ಅನ್ನದಲ್ಲಿ ಹೋಳು ನುರಿದರೆ ಅದನ್ನು ಬಾಯಿಗಿಟ್ಟ ಕೂಡಲೇ ವ್ಯಾಕ್‌ ಎನ್ನುತ್ತಾಳೆ. ಆದರೆ ಜ್ಯೋತಿಯೂ ಬಿಡುತ್ತಿಲ್ಲ. ತರಕಾರಿಗಳ ನಾನಾ ಪದಾರ್ಥ ಮಾಡಿ ನೋಡುತ್ತಲೇ ಇದ್ದಾಳೆ. ಒಂದು ದಿನ ಸವತೆಕಾಯಿಯನ್ನು ಗೋಲಾಕಾರದಲ್ಲಿ ಕತ್ತರಿಸಿ ಅದಕ್ಕೆ ನಿಂಬೆ ಹಣ್ಣಿನ ರಸ, ಉಪ್ಪು ಸವರಿ ಒಮ್ಮೆ ಟೇಸ್ಟ್‌ ನೋಡಮ್ಮ ಎಂದು ಹೇಳಿ ಮಗಳಿಗೆ ಕೊಟ್ಟಳು. ಕೀರ್ತಿ ಅದನ್ನು ನೆಕ್ಕಿ ಖುಷಿಯಿಂದ ಮತ್ತೊಂದೆರಡು ತುಂಡುಗಳನ್ನು ಬಟ್ಟಲಲ್ಲ ಹಾಕಿಕೊಂಡು ಕುಳಿತಳು. ಜ್ಯೋತಿಗೆ ಅಂತೂ ಉಪಾಯ ಫಲಿಸಿತಲ್ಲ ಎನಿಸಿತು. ಸ್ವಲ್ಪ ಸಮಯ ಬಿಟ್ಟು ನೋಡಿದರೆ, ಎಲ್ಲ ಸವತೆಕಾಯಿ ಹೋಳಿನ ಉಪ್ಪು–ನಿಂಬೆಹಣ್ಣಿನ ರಸವನ್ನು ಮಾತ್ರ ನೆಕ್ಕಿಟ್ಟಿದ್ದಾಳೆ ಮಗಳು!

ಹಲವು ಮಕ್ಕಳು ಹೀಗೆಯೇ. ತರಕಾರಿ ಎಂದರೆ ಮಾರು ದೂರ ಓಡುವವರೇ. ಆರೋಗ್ಯ ಚೆನ್ನಾಗಿರಲು ತರಕಾರಿ–ಹಣ್ಣು ತಿನ್ನುವುದು ಅವಶ್ಯ. ಆದರೆ, ಕೆಲಸದ ಒತ್ತಡದಲ್ಲೋ, ಅರಿವಿನ ಕೊರತೆಯಿಂದಲೋ ಕೆಲವು ಪೋಷಕರು ತರಕಾರಿ–ಹಣ್ಣು ತಿನ್ನಿಸುವ ಬಗ್ಗೆ ಅಷ್ಟಾಗಿ ಗಮನ ಹರಿಸಲು ಹೋಗುವುದಿಲ್ಲ. ಇನ್ನು ಕೆಲವರು ತರಕಾರಿ ತಿನ್ನುವುದನ್ನು ಕಡ್ಡಾಯ ಮಾಡಿ ದಂಡಿಸುವುದನ್ನೂ ಮಾಡುತ್ತಾರೆ. ಮತ್ತೊಂದಿಷ್ಟು ಮಂದಿ ಇವತ್ತು ನೀನು ಕ್ಯಾರಟ್‌, ಸವತೆಕಾಯಿ ತಿಂದರೆ ನಿನ್ನ ಇಷ್ಟದ ಚಾಕೊಲೆಟ್‌ ಕೊಡಿಸುವೆ ಎಂದು ಪ್ರಲೋಭನೆ ತೋರುತ್ತಾರೆ.

ಆದರೆ, ತಜ್ಞರು ಹೇಳುವ ಪ್ರಕಾರ ಒತ್ತಡದಿಂದ ತರಕಾರಿ ತಿನ್ನಿಸಿದರೆ, ಆ ಮಕ್ಕಳಿಗೆ ಮುಂದೆ ಆ ತರಕಾರಿ ಕಂಡರೆ ಆಗದ ಸ್ಥಿತಿಯೂ ಬರಬಹುದು. ಹೀಗಾಗಿ ವಿವಿಧ ಉಪಾಯಗಳ ಮೂಲಕ ಮಕ್ಕಳಿಗೆ ತರಕಾರಿ–ಸೊಪ್ಪು–ಹಣ್ಣುಗಳ ಬಗ್ಗೆ ಆಸಕ್ತಿ ಮೂಡಿಸುವುದೇ ಉತ್ತಮ ಉಪಾಯ.

ಕ್ಯಾರಟ್‌, ಬೀಟ್‌ರೂಟ್‌, ಪಾಲಕ್‌ ಸೊಪ್ಪು, ಮೆಂತೆ ಸೊಪ್ಪುಗಳನ್ನು ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಚಪಾತಿ ಮಾಡುವುದು ಬಹಳಷ್ಟು ತಾಯಂದಿರು ಕಂಡುಕೊಂಡಿರುವ ಸುಲಭ ಉಪಾಯ. ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಗ್ರೈಂಡ್‌ ಮಾಡಿ ಪೇಸ್ಟ್‌ ಮಾಡಿಕೊಂಡು ಗೋಧಿಹಿಟ್ಟಿಗೆ ಹಾಕಿ ಕಲಸಿದರೆ ಆ ತರಕಾರಿಯ ಬಣ್ಣದ್ದೇ ಚಪಾತಿ ಸಿದ್ಧವಾಗುತ್ತದೆ. ಗಾಢ ವರ್ಣಗಳನ್ನು ಇಷ್ಟ ಪಡುವ ಮಕ್ಕಳಿಗೆ ಈ ರೀತಿಯ ತಿನಿಸು ಇಷ್ಟವಾಗುವ ಸಾಧ್ಯತೆ ಹೆಚ್ಚು.

ಇನ್ನೊಂದು ರೀತಿಯೆಂದರೆ, ಮೂಲಂಗಿ, ಕ್ಯಾರಟ್‌, ಸವತೆಕಾಯಿ ಅಥವಾ ಸೊಪ್ಪುಗಳನ್ನು ಹೆಚ್ಚಿ ಅದಕ್ಕೆ ಉಪ್ಪು–ಹುಳಿ–ಸ್ವಲ್ಪ ಖಾರ ಹಾಕಿ ಗೋಧಿ ಹಿಟ್ಟಿನೊಂದಿಗೆ ಪರೋಟಾ ಮಾಡುವುದು. ಇಂಥ ತರಕಾರಿ ಪರೋಟಾ ಮಾಡಿದರೆ ಕೆಲವು ಮಕ್ಕಳಿಗೆ ಇಷ್ಟವಾಗುತ್ತದೆ. ಚಪಾತಿಯ ನಡುವೆ ಪಲ್ಯ ಇಟ್ಟು ರೋಲ್‌ ಮಾಡಿಯೂ ಕೊಡಬಹುದು. ಮಕ್ಕಳ ರುಚಿಯ ಆಸಕ್ತಿಯನ್ನು ಕಂಡುಕೊಳ್ಳುವುದಕ್ಕೆ ನಾನಾ ರೀತಿಯ ತಿನಿಸು ಮಾಡಿ ನೋಡುವುದು ತಂದೆ–ತಾಯಂದಿರಿಗೆ ಅನಿವಾರ್ಯ. ಒಮ್ಮೆ ಇಷ್ಟ ಪಟ್ಟು ತಿಂದರೆಂದರೆ ಮತ್ತೊಂದು ದಿನ ಅದನ್ನೇ ತಿನ್ನುತ್ತಾರೆ ಎಂಬ ಗ್ಯಾರಂಟಿಯೂ ಇರುವುದಿಲ್ಲ. ಹೀಗಾಗಿ ಪ್ರಯತ್ನ ನಿರಂತರ ಇರಲೇ ಬೇಕಾಗುತ್ತದೆ.

ಗೆಳತಿ ಮನೋರಮಾ ಒಮ್ಮೆ ಹೇಳಿದ್ದಳು. ‘ನನ್ನ ಮಗಳಿಗೆ ಸಾರಿನಲ್ಲಿ ಹಾಕಿದ ಆಲೂಗಡ್ಡೆ, ಬಾಳೆಕಾಯಿ, ಬದನೆಕಾಯಿ ಇಷ್ಟವಾಗಲ್ಲ. ಆದರೆ ಆ ತರಕಾರಿಗಳನ್ನು ಕಾವಲಿಯ ಮೇಲೆ ಎಣ್ಣೆ ಹಾಕಿ ಫ್ರೈ ಮಾಡಿ ಕೊಟ್ಟರೆ ತಿನ್ನುತ್ತಾಳೆ’ ಎಂದು. ಸರಿ ‘ನನಗೂ ಹೇಳೇ ರೆಸಿಪಿ’ ಎಂದೆ. ಅವಳು ಹೇಳಿದ್ದು ಹೀಗೆ: ಬಾಳೆಕಾಯಿಯನ್ನು ತೆಳ್ಳನೆಯ ಸ್ಲೈಸ್‌ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿಡಬೇಕು. ಕೆಲ ಹೊತ್ತಿನ ನಂತರ ಅದು ನೀರು ಬಿಡುತ್ತದೆ. ಆಗ ಅದಕ್ಕೆ ಹಿಂಗು ಹಾಗೂ ಖಾರ ಹಾಕಿ ಕಲೆಸಬೇಕು. ಒಂದು ಪ್ಲೇಟ್‌ನಲ್ಲಿ ಗೋದಿ ರವೆ, ಹಿಂಗು, ಖಾರ ಹಾಕಿ ಕಲೆಸಿ ಇಡಬೇಕು. ನಂತರ ಉಪ್ಪು–ಖಾರ ಹಾಕಿದ ಬಾಳೆಕಾಯಿ ಸ್ಲೈಸ್‌ಗಳನ್ನು ಈ ಕಲೆಸಿದ ರವೆಯಲ್ಲಿ ಹೊರಳಾಡಿಸಿ ಕಾವಲಿಯ ಮೇಲೆ ಫ್ರೈ ಮಾಡಬೇಕು. ಇದೇ ವಿಧಾನದಲ್ಲಿ ಆಲೂಗಡ್ಡೆ, ಬದನೆಕಾಯಿ, ಬೆಂಡೆಕಾಯಿಗಳನ್ನೂ ಮಾಡಬಹುದು. ರವೆ ಹಚ್ಚದೇ ಹಾಗೆಯೂ ಮಾಡಬಹುದು. ಇದು ಚಿಕ್ಕಮಕ್ಕಳಿಗಷ್ಟೆ ಅಲ್ಲ ದೊಡ್ಡವರಿಗೂ ಅನ್ನದೊಂದಿಗೆ ನೆಂಜಿಕೊಳ್ಳಲು ಉತ್ತಮ ಸುಲಭ ಅಡುಗೆ.

ಮಕ್ಕಳಿಗೆ ತರಕಾರಿ ತಿನ್ನಿಸುವ ಹಟವಿದ್ದರೆ ತರಕಾರಿ, ಕಾಳುಗಳನ್ನು ಹಾಕಿ ಮಾಡುವ ಸಲಾಡ್‌ ಹಾಗೂ ಇತರ ತಿನಿಸುಗಳನ್ನು ಮಾಡುವ ಯತ್ನವನ್ನು ಬಿಡದಿರುವುದೇ ಉತ್ತಮ. ಆರಂಭದಲ್ಲಿ ಹಸಿ ತರಕಾರಿಯ ಒಗರು ರುಚಿಯನ್ನು ಇಷ್ಟಪಡದ ಮಕ್ಕಳು ಕ್ರಮೇಣ ಅವುಗಳನ್ನು ತಿನ್ನಲು ಕಲಿಯುತ್ತಾರೆ.

ಹೀಗೆ ಮಾಡಿ...

* ಹಸಿ ತರಕಾರಿಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಆಕೃತಿಗಳನ್ನು ಕತ್ತರಿಸಿ ಕೊಡಬಹುದು. ಕ್ಯಾರಟ್‌, ಸವತೆಕಾಯಿ, ಹೂಕೋಸು ಬಳಸಿ ತಟ್ಟೆಯಲ್ಲಿ ವಿನ್ಯಾಸ ಮಾಡಿಕೊಡಬಹುದು.

* ದಿನವೂ ಊಟಕ್ಕೆ ಒಂದೊಂದು ರೀತಿಯ ಕೋಸಂಬರಿ, ಸಲಾಡ್‌ ಇಟ್ಟರೆ ದೊಡ್ಡವರೊಂದಿಗೆ ಮಕ್ಕಳೂ ತಿನ್ನಲು ಕಲಿಯುತ್ತಾರೆ.

* ಊಟಕ್ಕೆ ಸ್ವಲ್ಪ ಸಮಯವಿದೆ ಎಂದಾಗಲೇ ಹಸಿ ತರಕಾರಿ ಕತ್ತರಿಸಿ ಪ್ಲೆಟ್‌ಗಳಲ್ಲಿ ಹಾಕಿ ಊಟದ ಟೇಬಲ್‌ ಅಥವಾ ಊಟಕ್ಕೆ ಕುಳಿತುಕೊಳ್ಳುವ ಸ್ಥಳದಲ್ಲಿ ಇಟ್ಟುಬಿಟ್ಟರೆ ಹಸಿವಿನಿಂದ ಬಂದ ಮಕ್ಕಳು ತಮ್ಮಷ್ಟಕ್ಕೇ ತಿನ್ನುವ ಸಾಧ್ಯತೆ ಹೆಚ್ಚು.

* ತರಕಾರಿ–ಸೊಪ್ಪುಗಳನ್ನು ಬಳಸಿ ಮಾಡುವ ವಿವಿಧ ಬಗೆಯ ಅಡುಗೆ ಮಾಡಿ ನೋಡಬಹುದು. ಕೆಲವು ಟೇಸ್ಟ್‌ಗಳನ್ನು ಮಕ್ಕಳು ಇಷ್ಟ ಪಡುತ್ತವೆ. ಅದನ್ನು ಕಂಡುಕೊಳ್ಳಬೇಕು.

* ವಿವಿಧ ಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ ಒಟ್ಟಿಗೆ ಸೇರಿಸಿ ಕೊಡಬಹುದು. ಇದರ ಬಣ್ಣ ವೈವಿಧ್ಯಕ್ಕೆ ಮಕ್ಕಳು ಮರುಳಾಗುವ ಸಾಧ್ಯತೆ ಹೆಚ್ಚು.

* ಕೈತೋಟವಿದ್ದರೆ ವಿವಿಧ ತರಕಾರಿ–ಹಣ್ಣುಗಳನ್ನು ಬೆಳೆದು ಮಕ್ಕಳನ್ನು ಅಲ್ಲಿಗೆ ಕರೆದೊಯ್ದು ಅವರಿಗೇ ಯಾವುದು ಬೇಕು ಎಂದು ಕೇಳಿ ಆರಿಸಿಕೊಳ್ಳುವಂತೆ ಹೇಳಿ ಉತ್ಸಾಹ ಮೂಡಿಸಬಹುದು.

* ಮಾರುಕಟ್ಟೆಗೆ ಹೋಗುವಾಗ ಅವರನ್ನೂ ಕರೆದೊಯ್ದು ಯಾವ ತರಕಾರಿ–ಹಣ್ಣು ಬೇಕೋ ಆರಿಸಲು ಹೇಳಬಹುದು.

*ಮನೆಯಲ್ಲಿ ಟೆರೆಸ್‌ ಇದ್ದರೆ ಟೆರೆಸ್‌ ಗಾರ್ಡನ್‌ ಮಾಡಿ ತರಕಾರಿ– ಸೊಪ್ಪನ್ನು ಅಲ್ಪ ಪ್ರಮಾಣದಲ್ಲಾದರೂ ಬೆಳೆಯುವುದು, ಮಕ್ಕಳಿಗೆ ಅದರಲ್ಲಿ ಆಸಕ್ತಿ ಮುಡಿಸುವುದು ಒಳ್ಳೆಯ ಹವ್ಯಾಸವೂ ಆಗುತ್ತದೆ.

*ಸಲಾಡ್‌ ಮಾಡುವಾಗ ಅಥವಾ ತರಕಾರಿ ಹೆಚ್ಚುವಾಗ ಮಕ್ಕಳನ್ನು ಕರೆದು ಅವರಿಂದ ಸಹಾಯ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT