ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿನ್‌ಸನ್ ಪೀಡಿತರು ಎಚ್ಚರವಹಿಸಿ: ಡಾ.ಕ್ರಾಂತಿಕಿರಣ್

Last Updated 6 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರ ಚಟುವಟಿಕೆ, ಉಸಿರಾಟ ನಿಧಾನ ಗತಿಯಲ್ಲಿರುವುದರಿಂದ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದರೆ, ಈ ಪ್ರಮಾಣ ಕಡಿಮೆ’ ಎನ್ನುತ್ತಾರೆ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ನರರೋಗ ತಜ್ಞ ಡಾ. ಕ್ರಾಂತಿಕಿರಣ್.

ಪಾರ್ಕಿನ್‌ಸನ್‌ ಬಾಧಿತರ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ನ್ಯುಮೋನಿಯಾದಂಥ ಸಮಸ್ಯೆಯಿಂದಲೂ ಬಳಲುತ್ತಿರುತ್ತಾರೆ. ಉಸಿರಾಟದ ಸಮಸ್ಯೆ ಇದ್ದರಂತೂ ಸೋಂಕು ತಗುಲದಂತೆ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ.

‘ಪಾರ್ಕಿನ್‌ಸನ್‌ನಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ತಗುಲಿದ ವರದಿ ಈವರೆಗೆ ಆಗಿಲ್ಲ. ಆದರೆ ಕೋವಿಡ್‌ ಪೀಡಿತರಾದ ಬಳಿಕ ಪಾರ್ಕಿನ್‌ಸನ್ ರೋಗಕ್ಕೆ ತುತ್ತಾದ ಕೆಲವು ವರದಿಗಳು ವಿದೇಶಗಳಲ್ಲಿ ಆಗಿವೆ. ಈ ಬಗ್ಗೆ ಅಧ್ಯಯನ ಸಹ ನಡೆಯುತ್ತಿದೆ’

‘ಈ ರೋಗದಿಂದ ಬಳಲುತ್ತಿರುವವರು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ, ಅಂತರ ಕಾಪಾಡಿಕೊಳ್ಳುವಂಥ ಮುಂಜಾಗ್ರತಾ ಕ್ರಮಗಳನ್ನೇ ಪಾಲಿಸಬೇಕು. ಒಂದು ವೇಳೆ ಕೋವಿಡ್‌ ದೃಢಪಟ್ಟರೆ ಹೆಚ್ಚು ಜಾಗರೂಕತೆ ವಹಿಸಬೇಕು. ನಿಧಾನಗತಿಯ ಉಸಿರಾಟದಿಂದ ಶ್ವಾಸಕೋಶಕ್ಕೆ ಹಾನಿಯಾಗಬಹುದು. ರೋಗದ ಲಕ್ಷಣಗಳು ತೀವ್ರ ಸ್ವರೂಪ ಪಡೆಯಬಹುದು. ಸೋಂಕಿನಿಂದ ಹೊರಬರಲು ಹೆಚ್ಚು ಸಮಯ ಹಿಡಿಯಬಹುದು. ಹಾಗಾಗಿ ಮುಂಜಾಗ್ರತೆ ಅವಶ್ಯ’ ಎನ್ನುತ್ತಾರೆ ಅವರು.

ಇಂಥವರಿಗೆ ಸಹಜವಾಗಿ ನೀಡುವ ಚಿಕಿತ್ಸೆಯನ್ನೇ ಮುಂದುವರಿಸಲಾಗುತ್ತದೆ. ಜೊತೆಗೆ ಕೋವಿಡ್‌ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ. ರೋಗಿಯು ಹೆಚ್ಚು ನಿಗಾ ಸಹ ವಹಿಸಬೇಕು. ವಾಕಿಂಗ್, ಉಸಿರಾಟದ ವ್ಯಾಯಾಮಗಳನ್ನು ನಿರಂತರವಾಗಿ ಮಾಡಬೇಕು. ಸದಾ ಬಿಸಿ ನೀರು ಕುಡಿಯುವ , ಆಗಾಗ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವ, ಆವಿ ತೆಗೆದುಕೊಳ್ಳುವ ಕ್ರಮಗಳನ್ನು ನಿರಂತರವಾಗಿ ಮಾಡುತ್ತಿರಬೇಕು ಎಂಬುದು ಡಾ. ಕ್ರಾಂತಿಕಿರಣ್ ಅವರ ಸಲಹೆ.

ಪ್ರಮುಖಾಂಶಗಳು

l ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುವವರು ಕೋವಿಡ್‌ ಬಾರದಂತೆ ಎಚ್ಚರ ವಹಿಸಬೇಕು

l ಉಸಿರಾಟದ ಸಮಸ್ಯೆ ಇದ್ದವರಿಗೆ ಸೋಂಕು ತಗುಲಿದರೆ ಅಪಾಯ

l ಕೋವಿಡ್‌ ದೃಢಪಟ್ಟ ನಂತರ ಪಾರ್ಕಿನ್‌ಸನ್‌ಗೆ ತುತ್ತಾಗುವ ಸಾಧ್ಯತೆ

l ನಿಧಾನಗತಿಯ ಉಸಿರಾಟದಿಂದ ಶ್ವಾಸಕೋಶಕ್ಕೆ ಸಮಸ್ಯೆ

l ವಾಕಿಂಗ್, ಉಸಿರಾಟದ ವ್ಯಾಯಾಮಗಳು ಅತ್ಯವಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT