ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಾಸವೋ ಆಯಾಸ...; ಕಾರಣಗಳು ಹಲವು

Last Updated 2 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

‘ತುಂಬಾ ಸುಸ್ತು, ಏನು ಮಾಡಲೂ ಆಗುತ್ತಿಲ್ಲ’. ಇದು ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಂದ ಕೇಳಿ ಬರುವ ಅತಿ ಸಾಮಾನ್ಯ ತೊಂದರೆಗಳಲ್ಲಿ‌ ಒಂದು. ಆಯಾಸವು ಅನೇಕ ದೈಹಿಕ ಮಾತ್ತು ಮಾನಸಿಕ ಕಾಯಿಲೆಗಳ ಲಕ್ಷಣವಾಗಿರುವುದರಿಂದ ಅದರ ಅರಿವು ಅಗತ್ಯ. ಆಯಾಸಕ್ಕೆ ಕಾರಣಗಳು ಹಲವು:

1. ಸ್ವಾಭಾವಿಕ ಕಾರಣಗಳು
2. ದೈಹಿಕ ಕಾಯಿಲೆಗಳು
3. ಮಾನಸಿಕ ಕಾಯಿಲೆಗಳು

ಆಯಾಸದ ಸಂದರ್ಭದಲ್ಲಿ ಈ ಕೆಳಗಿನ ತೊಂದರೆಗಳು ಕಂಡುಬರುತ್ತವೆ:

1. ಕಡಿಮೆ‌ ಶಕ್ತಿ ಅಥವಾ ಶಕ್ತಿ‌ ಇಲ್ಲದೇ‌ ಇರುವುದು
2. ದೈಹಿಕ ಅಥವಾ ಮಾನಸಿಕ ಬಳಲಿಕೆ
3. ಪ್ರೇರಣೆ ಇಲ್ಲದಿರುವುದು; ಯಾವುದೇ ಚಟುವಟಿಕೆಯಲ್ಲೂ ಆಸಕ್ತಿ ಇಲ್ಲದಿರುವುದು.

ಸ್ವಾಭಾವಿಕ ಸುಸ್ತು
ಅಭ್ಯಾಸವಿಲ್ಲದೆ ಶಾರೀರಿಕ ಚಟುವಟಿಕೆಗಳನ್ನು ಮೊದಲ ಬಾರಿ ಮಾಡಿದಾಗ ಯಾರಿಗಾದರೂ ಆಯಾಸವಾಗುವುದು ಸಹಜವಾಗಿರುತ್ತದೆ. ಜಾಸ್ತಿ ದೈಹಿಕ ವ್ಯಾಯಾಮ ಹಾಗೂ ಕೆಲವು ಜೀವನ ಕ್ರಮಗಳಾದ ತಡವಾಗಿ ನಿದ್ರೆ ಮಾಡುವುದು, ಜಾಸ್ತಿ ಕೆಫೀನ್ ಇರುವ ಪದಾರ್ಥಗಳ ಸೇವನೆ, ವಿಪರೀತ ಮದ್ಯಸೇವನೆ, ಜಾಸ್ತಿ ಸಿಹಿ ಹಾಗೂ ಕೊಬ್ಬಿನಂಶವಿರುವ ಆಹಾರಸೇವನೆಗಳಿಂದ ಸುತ್ತು ಕಾಣಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಹಾಗೂ ಎದೆಹಾಲು ಉಣಿಸುವ ತಾಯಂದಿರಲ್ಲೂ ಆಯಾಸ ಕಂಡುಬರಬಹುದು. ಇವೆಲ್ಲ ಸಂದರ್ಭಗಳಲ್ಲಿ ಉಂಟಾಗುವ ಆಯಾಸವು ವಿಶ್ರಾಂತಿಯನ್ನು ಪಡೆದ ಬಳಿಕ ಅಥವಾ ನಿದ್ರೆಯ ಬಳಿಕ ಇಲ್ಲವಾಗುತ್ತದೆ.

ದೈಹಿಕ ಕಾಯಿಲೆಗಳು
* ಅನೇಕ ದೈಹಿಕ ಕಾಯಿಲೆಗಳ ಒಂದು ಲಕ್ಷಣವಾಗಿ ಆಯಾಸ ಇರುತ್ತದೆ.
* ಯಾವುದೇ ಸೋಂಕು ರೋಗದ ಪ್ರಮುಖ ಲಕ್ಷಣ ಸುಸ್ತು ಆಗಿರುತ್ತದೆ. ಫ್ಲ್ಯೂ ಜ್ವರ, ಹೆಪಟೈಟಿಸ್, ಟಿಬಿ ಕಾಯಿಲೆ, ಎಚ್‌ ಐ ವಿ ಮುಂತಾದವುಗಳು ಪ್ರಮುಖ ಸೋಂಕು ರೋಗಗಳು. ಈ ರೋಗಗಳ ಸೋಂಕಿದ್ದಲ್ಲಿ ಸುಸ್ತು ಕಾಣಿಸಿಕೊಳ್ಳಬಹುದು.
* ಹೃದಯ, ಕಿಡ್ನಿ, ಲಿವರ್ ಸಂಬಂಧಿ ಅನೇಕ ರೋಗಗಳು, ರಕ್ತಹೀನತೆ, ಕ್ಯಾನ್ಸರ್, ನರಸಂಬಂಧಿ ಕಾಯಿಲೆ, ಪೌಷ್ಟಿಕಾಂಶದ ಕೊರತೆಯಿಂದ ಬರುವ ಕಾಯಿಲೆಗಳಲ್ಲೂ ಆಯಾಸ ಸಾಮಾನ್ಯವಾಗಿ ಇರುತ್ತದೆ.
* ಥೈರಾಯಿಡ್ ಸಮಸ್ಯೆ, ಸಿಹಿಮೂತ್ರ ರೋಗ, ಬೊಜ್ಜುತನ, ಸ್ಲೀಪ್ ಅಪ್ನಿಯಾ ಸಮಸ್ಯೆ ಇರುವ ರೋಗಿಗಳಲ್ಲಿ ಸುಸ್ತು ಇರುತ್ತದೆ.
* ಕೆಲವು ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಗಳು ಕೂಡ ಆಯಾಸವನ್ನು ಉಂಟುಮಾಡಬಹುದು.
* ಶ್ವಾಸಕೋಶಸಂಬಂಧಿ ಕಾಯಿಲೆ ಹಾಗೂ ಕೆಲವು ಗಂಟುರೋಗಗಳಲ್ಲೂ ಸುಸ್ತು ಒಂದು ಸಾಮಾನ್ಯ ಲಕ್ಷಣ.

ಮಾನಸಿಕ ಕಾಯಿಲೆಗಳಲ್ಲಿ ಆಯಾಸ
ಖಿನ್ನತೆ, ಒತ್ತಡ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಲ್ಲಿ ಆಯಾಸವಾಗುವುದು ಸಹಜ. ಈ ಸಮಸ್ಯೆಗಳ ಇರುವಿಕೆಗೆ ಇದೊಂದು ಲಕ್ಷಣವೇ ಆಗಿರುತ್ತದೆ.

ಆಯಾಸದ ನಿರ್ವಹಣೆ
* ಹಲವು ರೋಗಗಳ ಲಕ್ಷಣವಾಗಿ ಆಯಾಸ ಇರುವುದರಿಂದ ಸೂಕ್ತ ಪರೀಕ್ಷೆಗಳ ಮೂಲಕ ಆಯಾಸದ ಕಾರಣವನ್ನು ಕಂಡುಹಿಡಿಯಬೇಕು.
* ದೈಹಿಕ ಪರೀಕ್ಷೆ, ರಕ್ತಪರೀಕ್ಷೆ ಮತ್ತು ಇತರ ಪರೀಕ್ಷೆಗಳ ಮೂಲಕ ಆಯಾಸದ ಮೂಲವನ್ನು ಪತ್ತೆ ಹಚ್ಚಬಹುದು.
* ಸೂಕ್ತ ದೈಹಿಕ ರೋಗದ ಪತ್ತೆಯಾದ ಮೇಲೆ ಚಿಕಿತ್ಸೆಯ ಮೂಲಕ ಆಯಾಸ ಕಡಿಮೆಯಾಗುತ್ತವೆ.
* ಮಾನಸಿಕ ಕಾಯಿಲೆಗಳ ಲಕ್ಷಣವಾಗಿ ಆಯಾಸವಿದ್ದರೆ ಸೂಕ್ತ ಔಷಧಿ, ಸಿಬಿಟಿ ಹಾಗೂ ಸೈಕೋಥೆರೆಪಿ ಮೂಲಕ ಆಯಾಸವನ್ನು ಶಮನಗೊಳಿಸಬಹುದು.

ಯಾವುದೇ ದೈಹಿಕ ಅಥವಾ ಮಾನಸಿಕ ಕಾಯಿಲೆಗಳು ಪತ್ತೆಯಾಗದೇ ದೀರ್ಘಕಾಲದವರೆಗೆ ಆಯಾಸ ಮುಂದುವರೆದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು:

* ನಿಯಮಿತ ಶಾರೀರಿಕ ವ್ಯಾಯಾಮ, ನಿಯಮಿತವಾದ ವಿರಾಮ.
* ನಿದ್ರೆಯ ಅಭ್ಯಾಸವನ್ನು ನಿಯಮಿತಗೊಳಿಸಿ. ಸರಿಯಾಗಿ ನಿದ್ರೆ ಬರುವಂತೆ ನೋಡಿಕೊಳ್ಳುವುದು.
* ಕೆಫೀನ್‌ಯುಕ್ತ ಆಹಾರದ ಸೇವನೆಯನ್ನು ಕಡಿಮೆಗೊಳಿಸುವುದು.
* ಸಮತೋಲಿತ ಆಹಾರಸೇವನೆಯನ್ನು ರೂಢಿಸಿಕೊಳ್ಳಬೇಕು. ಬೊಜ್ಜುತನಕ್ಕೆ ಆಸ್ಪದ ಕೊಡಬಾರದು; ಹೀಗೆಯೇ ಸಕಾರಣವಿಲ್ಲದೆ ದೇಹದ ತೂಕ ಕಡಿಮೆ ಆಗದಂತೆಯೂ ನೋಡಿಕೊಳ್ಳುವುದು.
* ವಾಸ್ತವಕ್ಕೆ ಹತ್ತಿರ ಇರುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು. ಮನಸ್ಸನ್ನು ಉಲ್ಲಾಸವಾಗಿಟ್ಟುಕೊಳ್ಳುವುದು.
* ಒತ್ತಡಗಳ ಸರಿಯಾದ ನಿರ್ವಹಣೆ ಹಾಗೂ ಸೂಕ್ತ ವಿಶ್ರಾಂತಿಯನ್ನು ಪಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT