ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪಾಸಿಟಿವ್ ಮನಸ್ಸೇ, ಉಘೇ.. ಉಘೇ‌

ಮನಸ್ಸಿನ ಆರೋಗ್ಯ
Last Updated 3 ಸೆಪ್ಟೆಂಬರ್ 2020, 7:07 IST
ಅಕ್ಷರ ಗಾತ್ರ

ಇದು ಕೊರೊನಾ ಕಾಲ. ಯಾರಾದರೂ ನಾಲ್ಕು ಜನ ನಿಂತು ’ಪಾಸಿಟಿವ್‌‘ ಕುರಿತು ಮಾತನಾಡುತ್ತಿದ್ದರೆ ಆತಂಕಪಡುವಂತಾಗಿದೆ. ಇದಕ್ಕೂ ಮೊದಲು ‘ಪಾಸಿಟಿವ್‌’‍ಪದ ಮನಸ್ಸಿನಲ್ಲಿ ಒಳ್ಳೆಯ ಭಾವನೆಯನ್ನೇ ಉಂಟು ಮಾಡುತ್ತಿತ್ತು. ಒಂದು ಸಾಂಕ್ರಾಮಿಕ ರೋಗ ’ಪಾಸಿಟಿವ್‌‘ ಪದವನ್ನು ’ನೆಗೆಟಿವ್‌‘ ಆಗಿ ನೋಡುವಂತೆ ಮಾಡಿಬಿಟ್ಟಿದೆ!

ಹೀಗೆ ನೋಡುವುದಾದರೆ, ಕೊರೊನಾದಿಂದಾಗಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ಖಂಡಿತ ಸುಳ್ಳಲ್ಲ. ಇದರ ಹೊಡೆತದಿಂದ ಚೇತರಿಸಿಕೊಳ್ಳಲು ಕನಿಷ್ಠ ಇನ್ನೂ ಕೆಲವು ವರ್ಷಗಳಾದರೂ ಬೇಕಾಗುತ್ತವೆ.

ಕೊರೊನಾ ಕೂಲಿಕಾರ, ರೈತನಿಂದ ಹಿಡಿದು ಉದ್ಯಮಿಯವರೆಗೂ ದೊಡ್ಡಪೆಟ್ಟನ್ನು ಕೊಟ್ಟಿದೆ. ಆದ್ದರಿಂದಲೇ ರೈತರು, ಆಟೊ, ಕಾರು ಚಾಲಕರು, ಸಿನಿಮಾ ನಟರು, ಸಣ್ಣ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವಕರು ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದಾರೆ. ಆರ್ಥಿಕ ನಷ್ಟ ಬಹುತೇಕರ ಬದುಕನ್ನು ಬರ್ಬರ ಮಾಡಿಬಿಟ್ಟಿದೆ.

ಕಷ್ಟ ಮತ್ತು ನಷ್ಟ ಬದುಕನ್ನು ಹೀನಾಯ ಮಾಡುತ್ತದೆ. ಹತಾಶೆಗೆ ನೂಕುತ್ತದೆ. ಹತಾಶೆ ಕೆಟ್ಟ ಯೋಚನೆ, ನಿರ್ಧಾರಗಳಿಗೆ ದಾರಿ ಮಾಡಿಕೊಡುತ್ತದೆ. ಮನಸ್ಸು ‘ಪಾಸಿಟಿವ್‌’ ಯೋಚನೆಗಿಂತ ‘ನೆಗೆಟಿವ್‌’ ಯೋಚನೆಯನ್ನೇ ಬೇಗ ಅಪ್ಪಿಕೊಳ್ಳುತ್ತದೆ. ಮನಸ್ಸು ಅತ್ಯಂತ ಪವರ್‌ಫುಲ್‌. ಇದಕ್ಕೆ ದಿನನಿತ್ಯ ‘ನೆಗೆಟಿವ್‌’ ಯೋಚನೆಗಳನ್ನೇ ಉಣಬಡಿಸಿದರೆ, ಪರಿಣಾಮ ಕೂಡ ಅದೇ ಆಗಿರುತ್ತದೆ. ಆದ್ದರಿಂದ ಇಂತಹ ಕಷ್ಟಕಾಲದಲ್ಲಿ ಮನಸ್ಸಿಗೆ ‘ಪಾಸಿಟಿವ್’‌ ಯೋಚನೆ ಮಾಡುವುದನ್ನು ಕಲಿಸಿಕೊಡಬೇಕು.

ಮುಂಜಾನೆ ಎದ್ದಕೂಡಲೇ ‘ಪಾಸಿಟಿವ್’‌ ಆದ ಯೋಚನೆಗಳನ್ನೇ ಮಾಡಬೇಕು.ಮುಂಜಾನೆಯ ಒಂದೇ ಒಂದು ಪಾಸಿಟಿವ್‌ ಚಿಂತನೆ, ಇಡೀ ದಿವವನ್ನು ಬದಲು ಮಾಡಬಲ್ಲದು. ಒಳ್ಳೆಯ ದಿನ ಮತ್ತು ಕೆಟ್ಟ ದಿನದ ನಡುವೆ ಇರುವುದು ಒಂದೇ ವ್ಯತ್ಯಾಸ, ಅದು ನಮ್ಮ ಮನೋಭಾವನೆ. ನಾವು ಯಾವಾಗ ಮನಸ್ಸನ್ನು ಪಾಸಿಟಿವ್‌ ಭಾವನೆಗಳಿಂದ ತುಂಬುತ್ತೇವೋ, ಆಗ ಜೀವನ ಕೂಡ ಬದಲಾಗುತ್ತದೆ.

ಪ್ರತಿಯೊಂದರಲ್ಲೂ ಪಾಸಿಟಿವ್‌ ಆದುದನ್ನೇ ಕಂಡರೆ, ಇತರರಿಂತಲೂ ಸಮೃದ್ಧವಾಗಿ ಬದುಕುತ್ತೀರಿ. ಪಾಸಿಟಿವ್‌ ಮನೋಭಾವ, ಪಾಸಿಟಿವ್‌ ಆದುದನ್ನೇ ಕೊಡುತ್ತದೆ. ಪಾಸಿಟಿವ್‌ ಮನೋಭಾವನೆ ಒತ್ತಡ ನಿರ್ವಹಣೆ ಹಾಗೂ ಆರೋಗ್ಯ ಕುರಿತು ಗಮನ ಕೇಂದ್ರೀಕರಿಸುವಂತೆ ಮಾಡುತ್ತದೆ. ಪಾಸಿಟಿವ್‌ ಮನೋಭಾವನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹಾಗೆಯೇ ಆತ್ಮಗೌರವವೂ ಹೆಚ್ಚಾಗುತ್ತದೆ. ಇಂತಹ ಮನೋಭಾವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಪಾಸಿಟಿವ್‌ ಚಿಂತನೆ ಭಾವನಾತ್ಮಕ ಮತ್ತು ಮಾನಸಿಕವಾದದು. ಇದು ಸಂತೋಷ, ಯಶಸ್ಸು, ಆರೋಗ್ಯ, ಒಳ್ಳೆಯ ಫಲಿತಾಂಶವನ್ನು ಕೊಡುವಂತೆ ಮಾಡುತ್ತದೆ.

ಬದುಕಿನ ಒಳ್ಳೆಯ ಸಂಗತಿಗಳ ಬಗ್ಗೆ ಜಾಗೃತರಾಗಿರಿ. ಪ್ರತಿದಿನವೂ ಹೆಚ್ಚು ಕೆಲಸ ಮಾಡಲು ಸಜ್ಜುಗೊಳಿಸಿಕೊಳ್ಳಿ. ನಿಮ್ಮನ್ನು ಹಾಗೂ ನಿಮ್ಮ ಬದುಕನ್ನು ಪಾಸಿಟಿವ್‌ ಪದಗಳಿಂದ ವರ್ಣಿಸಿಕೊಳ್ಳಿ. ಪ್ರತಿದಿನವೂ ಧ್ಯಾನ ಮಾಡಿ. ಇತರರು ಖುಷಿಯಿಂದ ಇರುವಂತೆ ಮಾಡಲು ಪ್ರಯತ್ನಿಸಿ. ಸಮಸ್ಯೆಯನ್ನು ಸವಾಲಾಗಿ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬದುಕನ್ನು ಆನಂದಿಸಿ.

ಮೊದಲೇ ಹೇಳಿದಂತೆ ಮನಸ್ಸು ಪವರ್‌ಫುಲ್‌. ಆದ್ದರಿಂದ ಅದು ಆಗುವುದಿಲ್ಲ, ಇದು ಆಗುವುದಿಲ್ಲ. ನನ್ನಿಂದ ಅದು ಅಸಾಧ್ಯ. ಬದುಕು ಇನ್ನು ಸುಧಾರಿಸುವುದೇ ಇಲ್ಲ–ಹೀಗೆ ಮನಸ್ಸಿಗೆ ನೆಗೆಟಿವ್‌ ಯೋಚನೆಗಳನ್ನು ಕೊಡಬಾರದು. ಇದು ಬದುಕನ್ನು ಇನ್ನಷ್ಟು ಶೋಚನೀಯ ಮಾಡುತ್ತಿದೆ. ಆದ್ದರಿಂದ ಭರವಸೆ ಹುಟ್ಟಿಸುವಂತಹ ಮಾತುಗಳನ್ನೇ ಆಡಬೇಕು. ’ಕಷ್ಟ ಮನುಷ್ಯರಿಗಲ್ಲದೇ ಮರಕ್ಕೆ ಬರುತ್ತದೆಯೇ’ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕು. ಒಳ್ಳೆಯ ಹವ್ಯಾಸ, ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ನೆಗೆಟಿವ್‌ ಯೋಚನೆಯಿಂದ ಹೊರಬಂದು ಪಾಸಿಟಿವ್‌ ಯೋಚನೆಗಳನ್ನು ಒಳಕ್ಕೆ ಬಿಟ್ಟುಕೊಳ್ಳಬೇಕು.

ಎಲ್ಲರ ಬದುಕಿನಲ್ಲೂ ಕಷ್ಟ–ಸುಖ, ನೋವು–ನಲಿವು, ಸೋಲು–ಗೆಲುವು, ಲಾಭ–ನಷ್ಟ, ಕತ್ತಲು–ಬೆಳಕು, ಅಮಾವಾಸ್ಯೆ–ಹುಣ್ಣಿಮೆ, ಹಗಲು–ರಾತ್ರಿ ಇದ್ದೇ ಇರುತ್ತವೆ. ಇವುಗಳಲ್ಲಿ ಯಾವುವೂ ಶಾಶ್ವತ ಅಲ್ಲ. ಏಕೆಂದರೆ, ಸುರಂಗದ ಕೊನೆಯಲ್ಲಿ ಬೆಳಕು ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT