ಭಾನುವಾರ, ಆಗಸ್ಟ್ 14, 2022
21 °C

PV Web Exclusive: ಕಾರ್ಸಿನೋಮ: ಶೀಘ್ರ ಪತ್ತೆಯೇ ಪರಿಹಾರ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಚರ್ಮ ಅಥವಾ ಅಂಗಾಂಶದ ಒಳಪದರದ ಕೋಶಗಳಲ್ಲಿ ಬೆಳೆಯುವ ‘ಕಾರ್ಸಿನೋಮ’ ವಿರಳವಾದ ಕ್ಯಾನ್ಸರ್‌ ಪ್ರಕಾರ. ಈ ಕ್ಯಾನ್ಸರ್‌ನ ಅಪಾಯದಲ್ಲಿ ಇರುವವರು ಯಾರು? ಅಂಥವರು ವಹಿಸಬೇಕಿರುವ ಮುನ್ನೆಚ್ಚರಿಕೆಗಳೇನು? ಇದಕ್ಕೆ ಲಭ್ಯವಿರುವ ಚಿಕಿತ್ಸೆಯ ಆಯ್ಕೆಗಳು ಯಾವವು? ಈ ಕುರಿತು ಇಲ್ಲಿದೆ ಮಾಹಿತಿ...

***

‘ಕಾರ್ಸಿನೋಮ’ ಸಾಮಾನ್ಯ ಜನರ ಕಿವಿಗೆ ವಿರಳವಾಗಿ ಬೀಳುವ ಪದವಿದು. ಆದರೆ ಬಹಳಷ್ಟು ಜನರನ್ನು ಕಾಡುವ ಕ್ಯಾನ್ಸರ್‌ ಪ್ರಕಾರ. ಕಾರ್ಸಿನೋಮ ನಿಯಂತ್ರಣವಿಲ್ಲದೆ ಬೆಳೆಯುವ ಅಸಹಜ ಕೋಶ. ಇದು ಚರ್ಮ ಅಥವಾ ಅಂಗಾಂಶದ ಒಳಪದರದ ಕೋಶಗಳಲ್ಲಿ (ಎಪಿತೀಲಿಯಲ್ ಪದರದಲ್ಲಿ) ಹುಟ್ಟಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪ್ರಾರಂಭವಾದ ಕೋಶಗಳಲ್ಲಿಯೇ ಉಳಿಯುವ ಈ ಕ್ಯಾನ್ಸರ್‌, ಕೆಲವೊಮ್ಮೆ ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ.

ಕಾರ್ಸಿನೋಮದಲ್ಲಿ ಮೂರು ವಿಧ. ಕಾರ್ಸಿನೋಮ ಇನ್ ಸಿತು– ಸಿಐಎಸ್. ಇದು ಆರಂಭಿಕ ಹಂತದ ಪ್ರಕಾರ. ಈ ಹಂತವನ್ನು ‘0’ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ, ಏಕೆಂದರೆ ಇದು ಪ್ರಾರಂಭವಾದ ಕೋಶದಲ್ಲಿ (ಚರ್ಮದ ಪದರದಲ್ಲಿ) ಮಾತ್ರ ಕಂಡುಬರುತ್ತದೆ. ಅಂದರೆ, ಈ ಹಂತದಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ ಅಥವಾ ಸುತ್ತಮುತ್ತಲಿನ ಕೋಶಗಳಿಗೆ ಹರಡಿರುವುದಿಲ್ಲ. ಇದನ್ನು ಗುರುತಿಸುವುದೂ ಸುಲಭ, ಬೇಗ ಪತ್ತೆಯಾಗಿ, ಬೇಗ ಚಿಕಿತ್ಸೆ ಲಭಿಸಿದರೆ ಸಂಪೂರ್ಣ ಗುಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನೊಂದು, ಆಕ್ರಮಣಕಾರಿ ನಾಳದ ಕಾರ್ಸಿನೋಮ (invasive carcinoma). ಇದು ತುಸು ಗಂಭೀರ ಸ್ವರೂಪದ್ದಾಗಿದ್ದು, ನಾಳಗಳಲ್ಲಿ (ಉದಾ: ಸ್ತನದ ನಾಳ) ಪ್ರಾರಂಭವಾಗಿ, ಹತ್ತಿರದ ಇತರ ಅಂಗಾಂಶಗಳಿಗೆ (ಉದಾ: ಸ್ತನದ ಕೊಬ್ಬಿನ ಅಂಗಾಂಶ) ಹರಡುತ್ತದೆ. 

ಮೂರನೆಯದು, ಮೆಟಾಸ್ಟಾಟಿಕ್ ಕಾರ್ಸಿನೋಮ. ಇದು ಕ್ಯಾನ್ಸರ್ ಪೀಡಿತ ಜಾಗದಿಂದ ದೂರದೂರದ ಭಾಗಗಳಿಗೂ ಹರಿಡುತ್ತದೆ. ಇದನ್ನು ಹತೋಟಿಗೆ ತರುವುದು ಬಹಳೇ ಕಷ್ಟ. ಮ್ಯಾಮೋಗ್ರಾಮ್ ಪರೀಕ್ಷೆಯ ಮೂಲಕ ಮಾತ್ರ ಇದನ್ನು ಗುರುತಿಸಬಹುದು.  

ಗುರುತಿಸುವುದು ಹೇಗೆ?

ವೈದ್ಯಕೀಯ ಇತಿಹಾಸ, ಕುಟುಂಬ ಇತಿಹಾಸ ಹಾಗೂ ಕೆಲವು ಪರೀಕ್ಷೆಗಳ ಮೂಲಕ ಇದನ್ನು ಗುರುತಿಸಬಹುದು. ಕಾರ್ಸಿನೋಮ ಇತಿಹಾಸ ಹೊಂದಿರುವವರು ಆಗಾಗ್ಗೆ ಸೂಕ್ತ ತಪಾಸಣೆ, ಪರೀಕ್ಷೆಗಳಿಗೆ ಒಳಗಾಗುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಕಂಡುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

ಗಾತ್ರ, ಬಣ್ಣ, ಆಕಾರ ಹಾಗೂ ವಿನ್ಯಾಸದಲ್ಲಿ ವ್ಯತ್ಯಾಸಗಳು ಕಾಣುವುದು ಕಾರ್ಸಿನೋಮದ ದೈಹಿಕ ಲಕ್ಷಣಗಳ ಭಾಗವಾಗಿರಬಹುದು. ಇದರ ಜೊತೆಗೆ

*         ಚರ್ಮ ದಪ್ಪಗಾಗುವುದು

*         ಚರ್ಮದ ಮೇಲೆ ದದ್ದು, ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು

*        ಊದಿಕೊಳ್ಳುವುದು

*         ಸ್ತನದಲ್ಲಿ ನೋವು, ಮೊಲೆತೊಟ್ಟಿನಲ್ಲಿ ನೋವು

*         ಮೊಲೆತೊಟ್ಟು ಅಥವಾ ಸ್ತನ ಚರ್ಮದ ಮೇಲೆ ಗುಳಿ ಬೀಳುವುದು

*         ಮೊಲೆತೊಟ್ಟು ಒಳಮುಖವಾಗಿ ತಿರುಚಿಕೊಳ್ಳುವುದು

*         ಮೊಲೆತೊಟ್ಟುಗಳಲ್ಲಿ ದ್ರವ ಹೊರಸೂಸುವುದು

*         ಕಂಕುಳಲ್ಲಿ ಗಂಟುಗಳು ಕಂಡುಬರುವುದು

ಪರೀಕ್ಷೆ

ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ವೈದ್ಯರು ಎಕ್ಸರೆ, ಸಿಟಿ ಸ್ಕ್ಯಾನ್‌, ಎಮ್‌ಆರ್‌ಐ ಸ್ಕ್ಯಾನ್‌ ಮೂಲಕ ಕಾರ್ಸಿನೋಮದ ಬೆಳವಣಿಗೆ, ಹಂತ, ಗಾತ್ರ, ಪ್ರಕಾರವನ್ನು ಗುರುತಿಸುತ್ತಾರೆ. ಅದು ಕಂಡುಬಂದ ಜಾಗದಲ್ಲಿಯೇ ಇದೆಯೇ, ಹತ್ತಿರದ ಕೋಶಗಳಿಗೆ ಹರಡಿದೆಯೇ ಅಥವಾ ದೇಹದ ಇತರ ಭಾಗಗಳಿಗೂ ಹರಿಡಿದೆಯೇ ಎನ್ನುವುದನ್ನೂ ಸಹ ಈ ಪರೀಕ್ಷೆಗಳ ಮೂಲಕ ಕಂಡುಕೊಳ್ಳಲಾಗುತ್ತದೆ.

ಚಿಕಿತ್ಸೆ

ಕ್ಯಾನ್ಸರ್ ಪತ್ತೆಯಾದ ಮೇಲೆ, ಮೊದಲು ಬಯಾಪ್ಸಿ ನಡೆಸಲಾಗುತ್ತದೆ. ಲೆಸಿಯಾನ್‌ನ ಒಂದು ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿ, ಕ್ಯಾನ್ಸರ್‌ನ ಹಂತ, ಪ್ರಕಾರ ಮತ್ತು ಬೆಳವಣಿಗೆಯ ಗತಿಯನ್ನು ನಿರ್ಧರಿಸಲು ಸೂಕ್ಷ್ಮದರ್ಶಕದ ಸಹಾಯದಿಂದ ಪರೀಕ್ಷೆ ನಡೆಸಲಾಗುತ್ತದೆ. ಕಾರ್ಸಿನೋಮದ ಸ್ಥಳ, ಅದರ ಬೆಳವಣಿಗೆ, ಪ್ರಾರಂಭವಾದ ಕೋಶಗಳಲ್ಲಿಯೇ ಉಳಿದಿದೆಯೊ ಅಥವಾ ಇತರ ಭಾಗಗಳಿಗೂ ಹರಡಿದೆಯೊ ಅಥವಾ ದೇಹದ ದೂರದ ಭಾಗಗಳಿಗೂ ತಟ್ಟಿದೆಯೊ ಎನ್ನುವುದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಯನ್ನು ನಿರ್ಧರಿಸಲಾಗುತ್ತದೆ.

*        ಶಸ್ತ್ರಚಿಕಿತ್ಸೆ: ಕ್ಯಾನ್ಸರ್ ಮೊದಲ ಹಂತದಲ್ಲಿದ್ದರೆ ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ.

*        ವಿಕಿರಣ ಚಿಕಿತ್ಸೆ: ಸಮೀಪದ ಕೋಶಗಳಿಗೆ ಕ್ಯಾನ್ಸರ್ ಹರಡಿದ್ದರೆ ಆ ನಿರ್ದಿಷ್ಟ ಪ್ರದೇಶಕ್ಕೆ ಚಿಕಿತ್ಸೆ ನೀಡಲು ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ.

*        ಕೀಮೋಥೆರಪಿ: ಕ್ಯಾನ್ಸರ್‌ ದೇಹದ ಇತರ ಭಾಗಗಳಿಗೂ ಹರಿಡಿದೆ ಎನ್ನುವುದು ಖಚಿತವಾದಲ್ಲಿ ಕೀಮೋಥೆರಪಿ ಅನ್ವಯವಾತ್ತದೆ.

ಕಾರ್ಸಿನೋಮ ಮತ್ತು ಕೀಮೋಥೆರಪಿ

ಕಾರ್ಸಿನೋಮ ಚಿಕಿತ್ಸೆಯಲ್ಲಿನ ಒಂದು ಮಹತ್ವದ ಹಂತ ಕೀಮೋಥೆರಪಿ. ಯಾವಾಗ ಬೇಕು ಕೀಮೋಥೆರಪಿ. ಅದರಿಂದ ಎಷ್ಟು ಉಪಯೋಗ, ಏನು ತೊಂದರೆ ಎನ್ನುವ ಬಗ್ಗೆ ಆಂಕೊಸರ್ಜನ್ ಡಾ. ನಂದಾ ರಜನೀಶ್‌ ಹೇಳುವುದಿಷ್ಟು–


ಡಾ. ನಂದಾ ರಜನೀಶ್‌

‘ಕೀಮೋಥೆರಪಿ  ಔಷಧ ಚಿಕಿತ್ಸೆಯ ಒಂದು ರೂಪವಾಗಿದ್ದು, ದೇಹದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೋಶಗಳನ್ನು ಕೊಲ್ಲಲು ರಾಸಾಯನಿಕ ವಸ್ತುಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಕಾರ್ಸಿನೋಜೆನೆಸಿಸ್ ವೇಗವಾಗಿ ಬೆಳೆಯುತ್ತಿರುವ ಕೋಶಗಳನ್ನು ಒಳಗೊಂಡಿರುವುದರಿಂದ, ಚಿಕಿತ್ಸೆಯ ಭಾಗವಾಗಿ ಒಂದು ಅಥವಾ ಹೆಚ್ಚಿನ ಆಂಟಿಕ್ಯಾನ್ಸರ್ ಔಷಧಿಗಳ ಸಂಯೋಜನೆಯೊಂದಿಗೆ ಕೀಮೋಥೆರಪಿಯನ್ನು ಅನುಸರಿಸಲಾಗುತ್ತದೆ. ಆದರೆ ಕಾರ್ಸಿನೋಮ ಚಿಕಿತ್ಸೆಯ ಪ್ರಾಥಮಿಕ ವಿಧಾನವೆಂದರೆ ಶಸ್ತ್ರಚಿಕಿತ್ಸೆ. ಕೀಮೋಥೆರಪಿಯನ್ನು ಶಸ್ತ್ರಚಿಕಿತ್ಸೆಗೆ ಮುನ್ನ ಅಥವಾ ಶಸ್ತ್ರಚಿಕಿತ್ಸೆಯ ನಂತರ ಸಹಾಯಕ ವಿಧಾನವಾಗಿ ಬಳಸಲಾಗುತ್ತದೆ.

ಇದು ಕ್ಯಾನ್ಸರ್ ಕೋಶಗಳು ಮತ್ತು ಮೈಕ್ರೋ ಮೆಟಾಸ್ಟಾಸಿಸ್ ಅನ್ನು ವ್ಯವಸ್ಥಿತವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಗೆಡ್ಡೆಯ ಹೊರೆಯನ್ನು ಮತ್ತು ರೋಗದ ಬೆಳವಣಿಗೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಆದರೆ ಈ ಚಿಕಿತ್ಸೆಯಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಅದರದೇ ಆದ ಟಾಕ್ಸಿಕ್‌ ಪರಿಣಾಮಗಳು ಎದುರಾಗಬಹುದು. ವಾಕರಿಕೆ, ಭೇದಿ, ನಿರ್ಜಲೀಕರಣ, ಮಲಬದ್ಧತೆ. ಹಸಿವಿನಲ್ಲಿ ಬದಲಾವಣೆ, ಅಲೋಪೆಸಿಯಾ (ಕೂದಲು ಉದುರುವಿಕೆ), ಆಯಾಸ, ಸೋಂಕುಗಳು, ಚರ್ಮದ ದದ್ದುಗಳು, ಮೂಳೆ ಮಜ್ಜೆ ಸಮಸ್ಯೆ, ರಕ್ತಹೀನತೆ, ಬಾಯಿ ಹುಣ್ಣು, ನೆಫ್ರೈಟಿಸ್, ಸಿಸ್ಟೈಟಿಸ್, ಆತಂಕ, ಖಿನ್ನತೆ ಮುಂತಾದ ಮನೋದೈಹಿಕ ಪರಿಣಾಮಗಳು ಉಂಟಾಗಬಹುದು’ ಎನ್ನುತ್ತಾರೆ ಅವರು.

ಕೀಮೋಥೆರಪಿಯ ಅಡ್ಡಪರಿಣಾಮಗಳನ್ನು ಎದುರಿಸುವ ಮಾರ್ಗಗಳೂ ಉಂಟು ಎನ್ನುವುದು ಸಮಾಧಾನಕರ ಸಂಗತಿ ಎನ್ನುವ ಅವರು, ಅಂತಹ ಕೆಲವು ಪರಿಹಾರ ಮಾರ್ಗಗಳನ್ನು ಸೂಚಿಸುತ್ತಾರೆ:

ಆಹಾರ ನಿರ್ವಹಣೆ: ಸಾಕಷ್ಟು ನೀರು ಹಾಗೂ ದ್ರವಪದಾರ್ಥಗಳ ಸೇವನೆ ಬಹಳ ಮುಖ್ಯ. ಒಂದೇ ಸಮಯದಲ್ಲಿ ಹೆಚ್ಚು ಆಹಾರ ಸೇವಿಸುವ ಬದಲು, ಆಗಾಗ್ಗೆ ಕಡಿಮೆ ಪ್ರಮಾಣದ ಆಹಾರ ಸೇವನೆ ಉತ್ತಮ. ಚಹಾ, ಕಾಫಿ, ಕೊಬ್ಬಿನ ಆಹಾರ ಸೇವನೆ ಕಡಿಮೆ ಮಾಡಬೇಕು.

ವ್ಯಾಯಾಮ: ಕೀಮೋಥೆರಪಿ ಅಡ್ಡಪರಿಣಾಮಗಳನ್ನು ತಕ್ಕಮಟ್ಟಿಗೆ ಹತೋಟಿಯಲ್ಲಿಡಲು ದೈಹಿಕ ಚಟುವಟಿಕೆಗಳು, ವ್ಯಾಯಾಮ, ಧ್ಯಾನ, ಯೋಗ ಸಹಾಯಕವಾಗಬಲ್ಲವು.

ಮಾನಸಿಕ ಸಿದ್ಧತೆ: ಕೀಮೋಥೆರಪಿಯಿಂದ ಉಂಟಾಗುವ ಇನ್ನೊಂದು ಪ್ರಮುಖ ಅಡ್ಡಪರಿಣಾಮ ಎಂದರೆ ಕೂದಲು ಉದುರುವಿಕೆ. ರೋಗಿ ಮೊದಲು ಈ ಸತ್ಯವನ್ನು ಒಪ್ಪಿಕೊಳ್ಳಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಕೂದಲು ಉದುರುವಿಕೆ ಆರಂಭವಾಗುತ್ತಿದ್ದಂತೆ ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬಹುದು. ಸ್ಕಾರ್ಫ್‌, ಟೋಪಿಗಳನ್ನು ಬಳಸಬಹುದು. ಅಗತ್ಯವೆನಿಸಿದರೆ ತಮಗೊಪ್ಪುವ ವಿಗ್‌ಗಳನ್ನು ಸಹ ಬಳಸಬಹುದು.

ಆಪ್ತಸಮಾಲೋಚನೆ: ರೋಗಿಗೆ ವೈದ್ಯಕೀಯ ಪರಿಣತರಿಂದ ಆಪ್ತಸಮಾಲೋಚನೆ ಅಗತ್ಯವಿರುತ್ತದೆ. ಆದರೆ ಸಕಾರಾತ್ಮಕ ವಾತಾವರಣವನ್ನು ಕಾಪಾಡುವ ಜೊತೆಗೆ ರೋಗಿಯ ಮನೋಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದ, ಸ್ನೇಹಿತರ, ಬಂಧುಗಳ ಸಹಾಯ–ಸಹಕಾರ ಹಾಗೂ ಮಾನಸಿಕ ಬೆಂಬಲ ಬಹಳ ಮುಖ್ಯ.

ವೈದ್ಯಕೀಯ ನೆರವು: ಇದೆಲ್ಲದರ ಸಹಾಯದಿಂದ ರೋಗವನ್ನು ಹತೋಟಿಯಲ್ಲಿಡುವ ಜೊತೆಗೆ ಅದರ ಅಡ್ಡಪರಿಣಾಮಗಳನ್ನು ಮತ್ತು ರೋಗ ಮರುಕಳಿಸುವುದನ್ನು ತಡೆಗಟ್ಟಲು ನಿಯಮಿತ ತಪಾಸಣೆ, ವೈದ್ಯರ ಭೇಟಿಯನ್ನು ಖಚಿತಪಡಿಸುವುದೂ ಸಹ ಅಷ್ಟೇ ಮುಖ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು