ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರಿಯಾಸಿಸ್‌: ಒತ್ತಡ ಕಡಿಮೆ ಮಾಡಿಕೊಳ್ಳಿ

ವಿಶ್ವ ಸೋರಿಯಾಸಿಸ್ ದಿನ
Last Updated 29 ಅಕ್ಟೋಬರ್ 2020, 6:11 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್‌–19ನಿಂದಾಗಿ ಸೋರಿಯಾಸಿಸ್‌ ರೋಗಿಗಳು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವುದು ಸಹಜ. ಆದರೆ ಟೆಲಿ ಕನ್ಸಲ್ಟೇಶನ್‌ ಸೌಲಭ್ಯ ಹಾಗೂ ನ್ಯೂ ನಾರ್ಮಲ್‌ನಿಂದಾಗಿ ಚಿಕಿತ್ಸೆಗೆ ಯಾವುದೇ ತೊಂದರೆಯಿಲ್ಲ. ವಿಶ್ವ ಸೋರಿಯಾಸಿಸ್ ದಿನದಂದು (ಅಕ್ಟೋಬರ್ 29) ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ 30 ವರ್ಷ ವಯಸ್ಸಿನ ಬ್ಯಾಂಕ್ ಉದ್ಯೋಗಿ ನೇಹಾ ಶಿಂಧೆ, ಮೂರು ವರ್ಷಗಳ ಹಿಂದೆ ತಮಗೆ ಸೋರಿಯಾಸಿಸ್ ಇರುವುದು ತಿಳಿದಾಗಿನಿಂದ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಸರಿಯಾದ ಮಾಹಿತಿ ಮತ್ತು ಜಾಗೃತಿಯ ಕೊರತೆಯಿಂದಾಗಿ, ಸಹೋದ್ಯೋಗಿಗಳಿಂದ ಅವಮಾನಿತರಾಗಿದ್ದಾರೆ. ಇದೊಂದು ಸಾಂಕ್ರಾಮಿಕ ಚರ್ಮರೋಗವೆಂಬ ತಪ್ಪು ತಿಳಿವಳಿಕೆಯೇ ಇದಕ್ಕೆ ಕಾರಣ. ಜೊತೆಗೆ ಲಾಕ್‌ಡೌನ್‌ ಸಮಯದಲ್ಲಿ ಸಂಚಾರಕ್ಕೆ ನಿರ್ಬಂಧವಿದ್ದುದರಿಂದ ಅವರ ಚಿಕಿತ್ಸೆಯಲ್ಲೂ ತೊಡಕುಂಟಾಯಿತು. ಆರು ತಿಂಗಳಿಗಿಂತ ಹೆಚ್ಚು ಕಾಲ ಚಿಕಿತ್ಸೆ ಪಡೆಯಲು ಸಾಧ್ಯವಾಗದ್ದರಿಂದ ಅವರ ದೇಹದ ಅನೇಕ ಭಾಗಗಳಲ್ಲಿ ಗಾಯಗಳು ಹೆಚ್ಚಾದವು.

ಈಗ ನೇಹಾ ಟೆಲಿಕನ್ಸಲ್ಟೇಶನ್ ಮೂಲಕ ಸಲಹೆ ಪಡೆದು ಚಿಕಿತ್ಸೆ ಮುಂದುವರೆಸಿದ್ದು, ತಜ್ಞರ ಸೂಚನೆಯಂತೆ ಜೀವನಶೈಲಿಯಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ.

ಡಾ. ಚಂದ್ರಶೇಖರ್ ಬಿ.ಎಸ್.

ಕೋವಿಡ್ ಪಿಡುಗು ಆರಂಭವಾದಾಗಿನಿಂದ, ಅನೇಕ ರೋಗಿಗಳು ಅದರಲ್ಲೂ ಹಿರಿಯ ನಾಗರಿಕರು ತಮ್ಮ ಔಷಧಗಳನ್ನು ಪಡೆಯಲು ಸಾಧ್ಯವಾಗದ್ದರಿಂದ ತೊಂದರೆಗೀಡಾಗಿದ್ದಾರೆ. ಸದ್ಯ ಹೊಸ ಸಹಜ ಸ್ಥಿತಿಗೆ ಮರಳುತ್ತಿರುವಾಗ ರೋಗಿಗಳು ಈ ಚಿಕಿತ್ಸೆಯನ್ನು ಮುಂದುವರಿಸಬಹುದು. ಅಲ್ಲದೆ, ಒಂದಕ್ಕಿಂತ ಹೆಚ್ಚು ರೋಗಗಳಿಂದ ಬಳಲುವ ರೋಗಿಗಳು, ಅಂದರೆ ಹೃದ್ರೋಗಗಳು, ಮೆಟಾಬಾಲಿಕ್ ಸಿಂಡ್ರೋಮ್‌, ಮಧುಮೇಹ, ಹೈಪರ್ ಟೆನ್ಶನ್ ಇತ್ಯಾದಿ ಮತ್ತು ಸಂಬಂಧಿತ ಸೊರಿಯಾಸಿಸ್ ಅರ್ಥ್ರೈಟಿಸ್‌ ಇರುವಂಥವರು ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಮ್ಯುನೊ ಸಪ್ರೆಸಿವ್ ಔಷಧಗಳನ್ನು ಸೇವಿಸುವ ರೋಗಿಗಳು ತಮ್ಮ ಚಿಕಿತ್ಸೆಯನ್ನು ಮುಂದುವರೆಸುವ ಅಥವಾ ಸಂಪೂರ್ಣವಾಗಿ ನಿಲ್ಲಿಸುವ ಬಗ್ಗೆ ತಜ್ಞರ ಸಲಹೆ ಪಡೆಯಬೇಕಾಗುತ್ತದೆ.

ಕೋವಿಡ್ ಪಿಡುಗು ಸೊರಿಯಾಸಿಸ್‌ನಿಂದ ಬಳಲುವ ರೋಗಿಗಳಲ್ಲಿ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸಿದೆ. ಸೋರಿಯಾಸಿಸ್‌ ಒಂದು ಆಟೊಇಮ್ಯುನ್ ರೋಗವಾಗಿದ್ದು, ಇಲ್ಲಿ ಸಹಜಕ್ಕಿಂತ ವೇಗವಾಗಿ ಹೊಸ ತ್ವಚೆಯ ಕೋಶಗಳು ಬೆಳೆಯುತ್ತದೆ. ಸೋರಿಯಾಸಿಸ್‌ನಲ್ಲಿ, ಹೊಸ ತ್ವಚೆಯ ಕೋಶಗಳು ಪ್ರತಿ 3–4 ದಿನಗಳಿಗೊಮ್ಮೆ ಬೆಳೆಯುತ್ತವೆ, ಇದರಿಂದ ದೇಹಕ್ಕೆ ಹಳೆಯ ಕೋಶಗಳನ್ನು ಕಳಚಿ ಹಾಕಲು ಸಾಕಷ್ಟು ಸಮಯವಿರುವುದಿಲ್ಲ. ಇದರಿಂದ ಹೊಸ ತ್ವಚೆಯ ಪದರವು ರೂಪಗೊಂಡು ಇದು ಒಣಗಿದಂತೆ ಕಾಣುತ್ತದೆ, ತುರಿಕೆಯಾಗುತ್ತದೆ, ಒಣ ಚರ್ಮ ಪುಡಿಯಾಗಿ ಉದುರುತ್ತದೆ ಮತ್ತು ಕೆಂಪು ಅಥವಾ ಬಿಳಿಯ ಕಲೆಗಳುಂಟಾಗುತ್ತವೆ.

ಸೋರಿಯಾಸಿಸ್‌ಗೆ ನಿಖರವಾದ ಚಿಕಿತ್ಸೆಯಿಲ್ಲ ಮತ್ತು ಒಬ್ಬರಿಂದ ಒಬ್ಬರಿಗೆ ಸ್ಪರ್ಶದಿಂದ ಹರಡುವುದಿಲ್ಲ. ಕೋವಿಡ್ ಪಿಡುಗಿನ ನಡುವೆಯೂ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಇತರ ರೋಗಗಳಾದ ಸ್ಥೂಲಕಾಯ, ಹೃದ್ರೋಗಗಳೊಂದಿಗೆ ಸೋರಿಯಾಸಿಸ್‌ ಬಲವಾದ ಸಂಬಂಧ ಹೊಂದಿದ್ದು, ಇವು ಕೋವಿಡ್–19 ಅಪಾಯವನ್ನು ಹೆಚ್ಚಿಸುತ್ತವೆ. ಇದಲ್ಲದೆ, ಇದು ಅನೇಕ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತಂದು, ರೋಗಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಒತ್ತಡ ಕಡಿಮೆ ಮಾಡಿಕೊಳ್ಳಿ

ಸೋರಿಯಾಸಿಸ್ ಅನ್ನು ನಿರ್ವಹಿಸಲು ರೋಗಿಗಳು ಮಾನಸಿಕವಾಗಿ ಶಾಂತರಾಗಿರಬೇಕು. ಇದರಿಂದ ರೋಗವನ್ನು ದೀರ್ಘಕಾಲ ಕಡಿಮೆ ಮಾಡಬಹುದು. ಕೋವಿಡ್‌ಗಿಂತ ಮುಂಚೆ ಸೋರಿಯಾಸಿಸ್‌ನಿಂದ ಬಳಲುವ ರೋಗಿಗಳಲ್ಲಿ ಒತ್ತಡವನ್ನು ನಿರ್ವಹಿಸಲು ಸಾಮಾಜಿಕವಾಗಿ ಬೆರೆಯುವುದು ಮತ್ತು ಹೊರಾಂಗಣ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಸೋಂಕು ಹರಡುತ್ತಿರುವುದರಿಂದ ಈ ಬಗ್ಗೆ ಜನರು ಹುಷಾರಾಗಿರಬೇಕು. ಒತ್ತಡವನ್ನು ತಡೆಯಲು, ಜನರು ಕ್ರಿಯಾಶೀಲರಾಗಿರಬೇಕು, ಸ್ನೇಹಿತರ ಮತ್ತು ಕುಟುಂಬದವರ ಸಂಪರ್ಕದಲ್ಲಿರಬೇಕು. ಇದರಿಂದ ರೋಗಿಗಳು ಸೊರಿಯಾಸಿಸ್‌ನಿಂದ ಬೇಗನೆ ಚೇತರಿಸಿಕೊಳ್ಳಬಹುದು.

ರೋಗದ ತೀವ್ರತೆಯನ್ನು ನಿಯಂತ್ರಣದಲ್ಲಿಡಲು ಸೋರಿಯಾಸಿಸ್ ಲಕ್ಷಣಗಳನ್ನು ನಿಯಂತ್ರಿಸಬೇಕು. ಚಿಕಿತ್ಸೆ ನಿಲ್ಲಿಸುವುದರಿಂದ ಸ್ಥಿತಿಯು ಗಂಭೀರವಾಗಬಹುದು ಮತ್ತು ಅದು ಮುಂದುವರಿದರೆ ಲಕ್ಷಣಗಳನ್ನು ನಿರ್ವಹಿಸುವುದು ಕಷ್ಟವಾಗಬಹುದು. ಸೋರಿಯಾಸಿಸ್ ರೋಗಿಗಳಿಗೆ ಬಯಾಲಜಿಕ್ಸ್ ಚಿಕಿತ್ಸೆಯ ಬಗ್ಗೆ ಕೆಲವು ಗೊಂದಲಗಳು ಇರಬಹುದು. ಆದರೆ ರೋಗಿಗಳು ತಮ್ಮ ವೈದ್ಯರ ಸಲಹೆಯಂತೆ ತಮ್ಮ ಬಯಾಲಜಿಕಲ್ ಚಿಕಿತ್ಸೆ ಮುಂದುವರಿಸಬಹುದು.

(ಲೇಖಕ: ಮುಖ್ಯ ಡರ್ಮಾಟಾಲಜಿಸ್ಟ್‌, ಕ್ಯುಟಿಸ್‌ ಅಕಾಡೆಮಿ ಆಫ್ ಕ್ಯುಟೇನಿಯಸ್ ಸೈನ್ಸಸ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT