ಮಂಗಳವಾರ, ಏಪ್ರಿಲ್ 13, 2021
23 °C

ಮಾನಸಿಕ ಒತ್ತಡ: ಉದ್ವೇಗ ಮತ್ತು ಆರೋಗ್ಯ

ಡಾ. ಕಿರಣ್ ವಿ. ಎಸ್‌. Updated:

ಅಕ್ಷರ ಗಾತ್ರ : | |

ಒತ್ತಡ–ಸಾಂದರ್ಭಿಕ ಚಿತ್ರ

ಒತ್ತಡ ಬಾಧಿಸುವ ಸಮಯದಲ್ಲಿ ಬಹುಮಟ್ಟಿಗೆ ನಮಗೆ ಅದು ತಿಳಿಯುವುದೇ ಇಲ್ಲ. ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಮತ್ತು ಮಾನಸಿಕತೆಯಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಂಡು ವೈಯಕ್ತಿಕವಾಗಿ ಒತ್ತಡವನ್ನು ನಿರ್ವಹಿಸಬಹುದು.

ಆಧುನಿಕ ಜೀವನಶೈಲಿ ಪ್ರಸಾದಿಸಿರುವ ಒಂದು ಪದ: ‘ಟೆನ್ಶನ್’!

ಕೆಲವು ವರ್ಷಗಳ ಹಿಂದೆ ಸಹಜವಾಗಿ ನಡೆಯುತ್ತಿದ್ದ ಎಷ್ಟೋ ಸರಳ ಕ್ರಿಯೆಗಳು ಇಂದು ಉದ್ವೇಗಕಾರಕಗಳಾಗಿವೆ. ಮಾನಸಿಕ ಒತ್ತಡ ಮತ್ತು ಉದ್ವೇಗಗಳು ಶರೀರದ ಕ್ರಿಯೆಗಳ ಮೇಲೆ, ಮನಸ್ಸಿನ ವ್ಯವಹಾರಗಳ ಮೇಲೆ ಮತ್ತು ದಿನನಿತ್ಯದ ವರ್ತನೆಗಳ ಮೇಲೆ ಮಹತ್ತರ ಪರಿಣಾಮಗಳನ್ನು ಬೀರುತ್ತವೆ. ಸಮಸ್ಯೆಯೆಂದರೆ, ಒತ್ತಡ ಬಾಧಿಸುವ ಸಮಯದಲ್ಲಿ ಬಹುಮಟ್ಟಿಗೆ ನಮಗೆ ಅದು ತಿಳಿಯುವುದೇ ಇಲ್ಲ. ಕೆಲಕಾಲದ ನಂತರ ‘ಆ ಸಮಯದಲ್ಲಿ ಒತ್ತಡ ಹೆಚ್ಚಾಗಿತ್ತು’ ಎನ್ನುವ ಅರಿವು ಮೂಡಬಹುದು. ಆದರೆ, ಆ ವೇಳೆಗೆ ಉದ್ವೇಗ ತನ್ನ ಪರಿಣಾಮವನ್ನು ತೋರಿಸಿರುತ್ತದೆ.

‘ಒತ್ತಡ ಇದ್ದಾಗ ಮಾತ್ರ ನಾನು ಕೆಲಸ ಮಾಡಬಲ್ಲೆ. ನನ್ನ ಅತ್ಯುತ್ತಮ ಕೆಲಸಗಳು ಒತ್ತಡದ ಸಮಯದಲ್ಲಿ ಬಂದವು’ ಎಂದು ಹೇಳುವವರಿದ್ದಾರೆ. ತಕ್ಕಮಟ್ಟಿಗೆ ಈ ಮಾತಿನಲ್ಲಿ ತಥ್ಯವಿದೆ. ಮಾನಸಿಕ ಒತ್ತಡವನ್ನು ನಮ್ಮ ಮಿದುಳು ‘ಅಸ್ತಿತ್ವಕ್ಕೆ ಒದಗಿದ ಸಂಕಟ’ ಎಂದೇ ಭಾವಿಸುತ್ತದೆ. ಅದಕ್ಕೆ ತಕ್ಕಂತೆ ಕೆಲವು ರಕ್ಷಕ ಚೋದಕಗಳನ್ನು ಸ್ರವಿಸುತ್ತದೆ. ಈ ಚೋದಕಗಳ ಪರಿಣಾಮದಿಂದ ಶರೀರದ ಕ್ರಿಯೆಗಳು ಚುರುಕಾಗುತ್ತವೆ. ಈ ಪರಿಣಾಮ ತಾತ್ಕಾಲಿಕವಾದರೂ, ಅದರ ಪ್ರಚೋದನೆಯ ಪ್ರಭಾವದಿಂದ ಕೆಲಸಗಳನ್ನು ಮಾಡಬಲ್ಲವರಿದ್ದಾರೆ. ಆದರೆ, ಇದು ಒಳ್ಳೆಯ ಅಭ್ಯಾಸವೂ ಅಲ್ಲ; ಅನುಕರಣೀಯವೂ ಅಲ್ಲ. ಈ ರೀತಿಯ ಚೋದಕಗಳನ್ನು ಆಪದ್ಧನದಂತೆ ಬಳಸಿಕೊಳ್ಳಬೇಕೇ ಹೊರತು, ದಿನನಿತ್ಯದ ಖರ್ಚುಗಳಿಗೆ ಅಲ್ಲ! ಜೊತೆಗೆ ಇಂತಹ ರಕ್ಷಕ ಚೋದಕಗಳ ನಿರಂತರ ಸ್ರವಿಕೆಯಿಂದ ಶರೀರದ ರಕ್ಷಣೆಯ ಸಾಮರ್ಥ್ಯ ಕುಂದುತ್ತದೆ; ರಕ್ತದೊತ್ತಡ ಏರುತ್ತದೆ; ಅಕಾರಣವಾಗಿ ತಲೆನೋವು ಕಾಡುತ್ತದೆ; ಸುಸ್ತಾಗುತ್ತದೆ; ಹಸಿವೆಯಲ್ಲಿ ಏರುಪೇರಾಗುತ್ತದೆ; ಖಿನ್ನತೆ ಉಂಟಾಗಬಹುದು; ಹೃದ್ರೋಗಕ್ಕೂ ಮೂಲವಾಗಬಹುದು. ಅತಿ ಒತ್ತಡದ ಕಾರ್ಯಗಳನ್ನು ನಿರ್ವಹಿಸುವ ಅನೇಕ ಮಂದಿ ಸಣ್ಣ ಪ್ರಾಯದಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಪ್ರಸಂಗಗಳನ್ನು ಕೇಳಿರುತ್ತೇವೆ.

ಹಾಗೆಂದ ಮಾತ್ರಕ್ಕೆ ಮಾನಸಿಕ ಒತ್ತಡ ಇರಲೇಬಾರದೇ? ಸಾಮಾನ್ಯ ಜೀವನ ನಡೆಸುವವರಿಗೆ ಒತ್ತಡರಹಿತವಾಗಿರಲು ಸಾಧ್ಯವೇ ಇಲ್ಲ! ನಮ್ಮ ದಿನನಿತ್ಯದ ಪ್ರಸಂಗಗಳು ಎಷ್ಟೊಂದು ಸಂಕೀರ್ಣ ಎಂದರೆ, ಊಹಿಸಲೂ ಆಗದ ದಿಕ್ಕುಗಳಿಂದಲೂ ಒತ್ತಡಗಳು ಚಿಮ್ಮಬಲ್ಲವು! ‘ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎರಡು ದಾರಿಗಳಿವೆ. ಒಂದು, ಇಡೀ ಜಗತ್ತಿಗೆ ಛಾವಣಿ ಹಾಕುವುದು. ಎರಡು, ನಮ್ಮ ಕಾಲಿಗೆ ಚಪ್ಪಲಿ ಮೆಟ್ಟಿಕೊಂಡು, ತಲೆಯ ಮೇಲೆ ಒಂದು ಕೊಡೆ ಹಿಡಿದು ನಡೆಯುವುದು’ ಎನ್ನುವ ಅನುಭವದ ಮಾತಿದೆ. ಮಾನಸಿಕ ಉದ್ವೇಗದ ವಿಷಯದಲ್ಲೂ ಇದು ಪ್ರಸ್ತುತ. ದಶದಿಕ್ಕುಗಳಿಂದ ನುಗ್ಗಿ ಬರುವ ಒತ್ತಡಗಳನ್ನು ಮೂಲದಲ್ಲೇ ನಿಗ್ರಹಿಸಲು ಸಾಧ್ಯವಿಲ್ಲ. ಆದರೆ, ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಮತ್ತು ಮಾನಸಿಕತೆಯಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಂಡು ವೈಯಕ್ತಿಕವಾಗಿ ಒತ್ತಡಗಳನ್ನು ನಿರ್ವಹಿಸಬಹುದು.

ಮೊದಲನೆಯದಾಗಿ, ಒತ್ತಡದ ಅಸ್ತಿತ್ವವನ್ನು ಗುರುತಿಸಬೇಕು. ದಿನವಹಿ ಮಾಡುವ ಕೆಲಸಗಳ ಲಯ ತಪ್ಪುವುದು, ಸಣ್ಣ ವಿಷಯಗಳನ್ನು ಮರೆಯುವುದು, ಮಾಡುವ ಕೆಲಸಗಳಲ್ಲಿ ಮಗ್ನತೆ ಇಲ್ಲದಿರುವುದು, ಸಿಡುಕು, ನಿದ್ರಾಹೀನತೆ – ಇವುಗಳು ಕಾಡುತ್ತಿದ್ದರೆ ಮಾನಸಿಕ ಉದ್ವೇಗವಿರಲು ಸಾಧ್ಯ. ನಮ್ಮ ಬಾಧೆಯ ಕಾರಣ ಅರಿಯಲು ಆತ್ಮಾವಲೋಕನ ಬೇಕಾಗುತ್ತದೆ. ಕೆಲವೊಮ್ಮೆ ತೀರಾ ನಗಣ್ಯ ಎನಿಸುವ ಸಂಗತಿಗಳು ಅಕಾರಣವಾಗಿ ಮಾನಸಿಕ ಒತ್ತಡಕ್ಕೆ ಕಾರಣವಾಗಿರುತ್ತವೆ. ಅವುಗಳನ್ನು ಗುರುತಿಸಿ, ನಿವಾರಿಸಿಕೊಳ್ಳುವುದು ಸೂಕ್ತವಾದ ಮಾರ್ಗ.

ಎರಡನೆಯದಾಗಿ, ಒತ್ತಡಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಬೇಕು. ಕೆಲವು ಕೆಲಸಗಳ ಬಗ್ಗೆ ಯೋಚಿಸಿದರೂ ಒತ್ತಡ ಆರಂಭವಾಗುತ್ತದೆ. ಇಂತಹ ಸಂದರ್ಭಗಳನ್ನು ಗುರುತಿಸಿ, ಪರಿಹಾರಗಳನ್ನು ಕಂಡುಕೊಳ್ಳಬೇಕು. ವಾಹನ ಚಾಲನೆ ಮಾಡುವುದು ಮಾನಸಿಕ ಉದ್ವೇಗಕ್ಕೆ ಕಾರಣ ಎನ್ನುವುದಾದರೆ, ಸಾಮಾನ್ಯಕ್ಕಿಂತ ಇಪ್ಪತ್ತು ನಿಮಿಷ ಮೊದಲೇ ಪ್ರಯಾಣವನ್ನು ಆರಂಭಿಸುವುದು; ಸಭೆಯಲ್ಲಿ ಮಾತನಾಡುವುದು ಉದ್ವೇಗ ನೀಡುವುದಾದರೆ, ಆ ಭಾಷಣವನ್ನು ಹಲವಾರು ಬಾರಿ ಅಭಿನಯಿಸಿ, ಅಭ್ಯಾಸ ಮಾಡುವುದು – ಈ ರೀತಿಯ ಪ್ರಯೋಗಗಳು ಸಾಕಷ್ಟು ಪ್ರಭಾವಶಾಲಿ.

ಮೂರನೆಯದು, ನಿರಂತರ ವ್ಯಾಯಾಮ ಮತ್ತು ಉಸಿರಾಟದ ಲಯದ ನಿರ್ವಹಣೆ. ಸ್ವಸ್ಥ ಶರೀರವೆಂಬುದು ಸ್ವಸ್ಥ ಮಿದುಳಿಗೆ ಬಹಳ ಮುಖ್ಯ. ವ್ಯಾಯಾಮ ನಮ್ಮ ಶರೀರದ ರಕ್ಷಕ ಚೋದಕಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಉಸಿರಿನ ಲಯ ಮಿದುಳಿನ ಚಿಂತನೆಯನ್ನು ಸ್ತಿಮಿತದಲ್ಲಿ ಇಡಬಲ್ಲದು. ಮಾನಸಿಕ ಒತ್ತಡದಲ್ಲಿ ನಮಗೆ ಅರಿವಿಲ್ಲದಂತೆ ಶರೀರದ ಸ್ನಾಯುಗಳು ಬಿಗಿದುಕೊಳ್ಳುತ್ತವೆ. ಆಗ ಮಿದುಳಿನ ಲಕ್ಷ್ಯ ಈ ಸ್ನಾಯುಗಳತ್ತ ಹರಿದು, ಒತ್ತಡದ ಸಮಸ್ಯೆಯನ್ನು ನಿರ್ವಹಿಸಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಉಸಿರಿನ ಲಯ ಸಮನಾಗಿದ್ದು, ಸ್ನಾಯುಗಳು ಸಡಿಲವಾಗಿದ್ದಾರೆ ಒತ್ತಡದ ನಿರ್ವಹಣೆ ಸುಲಭ.

ನಾಲ್ಕನೆಯದು, ವಾಸ್ತವವನ್ನು ಗ್ರಹಿಸುವುದು ಮತ್ತು ಅತಿ ನಿರೀಕ್ಷೆಯಿಂದ ದೂರವಿರುವುದು. ಒಳ್ಳೆಯ ಸ್ನೇಹಿತರು, ಉತ್ತಮವಾದ ಹವ್ಯಾಸ, ಕುಟುಂಬದ ಪ್ರೀತಿ – ಮಾನಸಿಕ ಒತ್ತಡದ ನಿರ್ವಹಣೆಯಲ್ಲಿ ಇವುಗಳ ಪಾತ್ರ ಬಹಳ ಹಿರಿದು. ನಮ್ಮ ಆಗತ್ಯಗಳ ಮಿತಿಯಲ್ಲಿ ಚಂದವಾಗಿ ಬದುಕುವುದರ ಮಹತ್ವವನ್ನು ಜೀವನದಲ್ಲಿ ಬೇಗನೆ ಗ್ರಹಿಸಿದಷ್ಟೂ ಮಾನಸಿಕ ಉದ್ವೇಗಗಳ ಪರಿಣಾಮ ಅಷ್ಟೇ ಕಡಿಮೆಯಾಗುತ್ತದೆ.    

(ಲೇಖಕರು ವೈದ್ಯರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು