ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಕರುಳ ಕೂಗು ಕೇಳದೇ ನಿಮಗೀಗ...

ಕರುಳಿನ ಆರೋಗ್ಯ...
Last Updated 10 ಫೆಬ್ರುವರಿ 2021, 7:26 IST
ಅಕ್ಷರ ಗಾತ್ರ

ಯಾವತ್ತಾದರೂ ನಿಮ್ಮ ಕರುಳ ಕೂಗು ಕೇಳಿಸಿಕೊಂಡಿದ್ದೀರಾ? ಅದು ಯಾವಾಗ, ಯಾವ ಕಾರಣಕ್ಕೆ ನಿತ್ರಾಣಗೊಳ್ಳುವುದೆಂದು ಗೊತ್ತಾ? ನಿಮ್ಮ ಯಾವ ಆಹಾರ, ಯಾವ ವರ್ತನೆಗೆ ಅದು ಬಳಲುವುದೆನ್ನುವ ಅರಿವಿದೆಯೇ? ನಮ್ಮ ಕರುಳ ಕೂಗು ಕೇಳಿಸಿಕೊಳ್ಳದೇ ಹಿಂದೆ ಹೇಗೊ ಇದ್ವಿ, ಇನ್ನು ಹಾಗೆಲ್ಲಾ ಇರಲಾಗದು ಎನ್ನುವುದನ್ನು ಕೊರೊನಾ ಸಾರಿ ಸಾರಿ ಹೇಳಿದೆ. ಈಗಿದು ಕರುಳ ಕೂಗಿಗೆ ಕಿವಿಗೊಡುವ ಸಮಯ...

ಕೊರೊನಾ ಕಲಿಸಿದ ಆರೋಗ್ಯ ಪಾಠಗಳಲ್ಲಿ ‘ಇಮ್ಯುನಿಟಿ’ಯನ್ನು ವೃದ್ಧಿಸಿಕೊಳ್ಳುವುದು ಸಹ ಒಂದು. ಆದರೆ ನಮಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ಕರುಳಿನ ಇಮ್ಯುನಿಟಿ. ಕರುಳಿನ ಇಮ್ಯುನಿಟಿಯೊಂದು ಬೇರೆ ಇರುತ್ತದೆಯೇ ಎನ್ನುವುದು ಅನೇಕರಿಗೆ ಅಚ್ಚರಿಯ ಸಂಗತಿಯಾಗಿರಬಹುದು. ಆದರೆ ನಮ್ಮ ಇಡೀ ದೇಹದ ಬ್ಯಾಟರಿ ಇರುವುದು ಅಲ್ಲಿಯೇ. ಅದರಿಂದಲೇ ನಮ್ಮ ಜೀವ–ಜೀವನದ ಗುಣಮಟ್ಟ ನಿರ್ಧಾರವಾಗುವುದು. ಏನದು ಕರುಳಿನ ಇಮ್ಯುನಿಟಿ? ಕರುಳಿನ ಆರೋಗ್ಯ ಕಾಪಾಡಿಕೊಳ್ಳುವ ದಾರಿ ಯಾವುದು ಎನ್ನುವ ಬಗ್ಗೆ ಮಾತನಾಡಿದ್ದಾರೆ ಆಂಕೊಸರ್ಜನ್ ಡಾ. ನಂದಾ ರಜನೀಶ್‌.

ದೇಹದ ಕಾರ್ಯವನ್ನು ಸುಗಮವಾಗಿ ಇರಿಸುವ ಕೆಲಸ ಕರುಳಿನದು. ಸೇವಿಸಿದ ಆಹಾರವನ್ನು ಒಡೆದು, ಪೋಷಕಾಂಶಗಳನ್ನು ಹೀರಿಕೊಳ್ಳಲು ಅದು ಸಹಾಯ ಮಾಡುತ್ತದೆ. ಶಕ್ತಿಯ ಉತ್ಪಾದನೆಯಿಂದ ಹಿಡಿದು, ಹಾರ್ಮೋನ್ ಸಮತೋಲನ, ಚರ್ಮದ ಆರೋಗ್ಯ, ಮಾನಸಿಕ ಆರೋಗ್ಯ, ಜೀವಾಣು ಮತ್ತು ತ್ಯಾಜ್ಯ ನಿರ್ಮೂಲನೆಯಂತಹ ಕೆಲಸಗಳನ್ನು ಕರುಳು ನಿರ್ವಹಿಸುತ್ತದೆ.

ಮನುಷ್ಯನ ದೇಹದ ಶೇ 70ರಷ್ಟು ರೋಗನಿರೋಧಕ ಕೋಶಗಳು ‌ಕರುಳಿನಲ್ಲಿ ವಾಸಿಸುತ್ತವೆ. ಆದ್ದರಿಂದ, ನಿಮ್ಮ ಒಟ್ಟಾರೆ ಆರೋಗ್ಯಕ್ಕಾಗಿ ಕರುಳಿನ ಸ್ವಾಸ್ಥ್ಯ ಕಾಪಾಡುವುದು ಬಹಳ ಮುಖ್ಯ. ಕರುಳು ಆರೋಗ್ಯವಾಗಿರಬೇಕೆಂದರೆ ಅದರ ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು.

ಪ್ರೋಬಯಾಟಿಕ್‌ಗಳು ಕರುಳಿನ ಮೈಕ್ರೋಬಯೋಟಾಗೆ ಹೆಚ್ಚು ಪ್ರಯೋಜನಕಾರಿ ಎನ್ನುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಈ ಪ್ರೋಬಯಾಟಿಕ್‌ಗಳನ್ನು ‘ಉತ್ತಮ ಬ್ಯಾಕ್ಟೀರಿಯಾ’ ಎಂದು ಕರೆಯಲಾಗುತ್ತದೆ. ಪ್ರೋಬಯಾಟಿಕ್‌ಗಳಲ್ಲಿ ಸಾಕಷ್ಟು ರೂಪಗಳಿವೆ. ಅನೇಕ ನಾರು ಪದಾರ್ಥಗಳ ರೂಪದಲ್ಲಿ ಅವು ನಮ್ಮ ದೇಹವನ್ನು ಸೇರುತ್ತವೆ. ಅಂದರೆ ಮೊಸರು, ಸೌರ್‌ಕ್ರಾಟ್‌, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಬಾಳೆಹಣ್ಣು, ಅಗಸೆ ಮತ್ತು ಚಿಯಾ ಬೀಜಗಳಲ್ಲಿಪ್ರೋಬಯಾಟಿಕ್‌ ಕಂಡುಬರುತ್ತವೆ. ಈ ಆಹಾರ ಪದಾರ್ಥಗಳು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮೂಲಕ ಕರುಳನ್ನು ಕಾಪಾಡುವ ಅಂಶಗಳೆಂದರೆ:

ಜೀವಸತ್ವಗಳು (ವಿಟಮಿನ್‌ಗಳು):

ವಿಟಮಿನ್ ಎ, ಸಿ, ಡಿ ಮತ್ತು ಸತುವುಗಳಂತಹ ಕೆಲವು ಜೀವಸತ್ವಗಳು ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಇವು ಕರುಳಿನ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಆದರೆ ಪೂರಕ ಮಾತ್ರೆಗಳಿಗಿಂತ ಆಹಾರದ ಮೂಲಕ ಈ ಜೀವಸತ್ವಗಳನ್ನು ಪಡೆಯುವುದಕ್ಕೆ ಆದ್ಯತೆ ನೀಡಬೇಕು.

ಗೆಣಸು, ಕ್ಯಾರೆಟ್, ಕೋಸುಗಡ್ಡೆ, ಪಾಲಕ ಮತ್ತು ಮೊಟ್ಟೆಗಳಿಂದ ವಿಟಮಿನ್‌ ಎ ಸಿಗುತ್ತದೆ.ವಿಟಮಿನ್ ಎ ಸೋಂಕುಗಳಿಂದ ರಕ್ಷಿಸುತ್ತದೆ.

ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು, ಟೊಮೆಟೊದಲ್ಲಿ ವಿಟಮಿನ್‌ ಸಿ ಸಿಗುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

ಬಲವರ್ಧಿತ ಆಹಾರಗಳು ಅಂದರೆ ಮೀನು, ಚೀಸ್, ಮೊಟ್ಟೆ ಮತ್ತು ಅಣಬೆಗಳಿಂದ ವಿಟಮಿನ್ ಡಿ ಸಿಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾದ ವಿಟಮಿನ್ ಡಿ ಮೂಲವೆಂದರೆ ಸೂರ್ಯನ ಬೆಳಕು.ವಿಟಮಿನ್ ಡಿ ಕೊರತೆಯು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಕೋಳಿ, ಸಮುದ್ರಜನ್ಯ ಆಹಾರ, ಹಾಲು, ಬೀನ್ಸ್, ಬೀಜಗಳು, ಕಾಳುಗಳು ಮತ್ತು ಧಾನ್ಯಗಳಲ್ಲಿ ಸತುವು ಕಂಡುಬರುತ್ತದೆ.ಇದು ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ನಿದ್ರೆ

ಅಂದಹಾಗೆ ಕರುಳಿನ ಆರೋಗ್ಯ ಕಾಪಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ನಿದ್ರೆ ಕೂಡ ಬಹಳ ಮುಖ್ಯ ಎನ್ನುವುದು ತಿಳಿದಿರಲಿ. ನಿದ್ರೆಯ ಸಮಯದಲ್ಲಿ, ದೇಹ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಸೋಂಕುಗಳು ಅಥವಾ ಉರಿಯೂತದ ವಿರುದ್ಧ ಹೋರಾಡಲು ಕೆಲವು ಸೈಟೊಕಿನ್‌ಗಳು ಬೇಕಾಗುತ್ತವೆ. ವಯಸ್ಕರಿಗೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ರೆ ಬೇಕಾದರೆ, ಹದಿಹರೆಯದವರಿಗೆ 9-10 ಗಂಟೆಗಳ ನಿದ್ರೆ ಬೇಕು. ಮಕ್ಕಳಿಗೆ 10 ಗಂಟೆಗಿಂತ ಹೆಚ್ಚು ಸಮಯದ ನಿದ್ರೆ ಅಗತ್ಯ.

ಕೆಲವು ಜನರ ಕರುಳಿಗೆ ಅಪ್ರಿಯವಾಗಬಲ್ಲ ಕೆಲವು ಆಹಾರಗಳು:

· ಕರಿದ ಪದಾರ್ಥ‌

· ಕೆಂಪು ಮಾಂಸ

· ಟೊಮ್ಯಾಟೊ

· ಗೆಣಸು

· ಹಸಿರು ಮೆಣಸು

· ಡೈರಿ ಉತ್ಪನ್ನಗಳು

· ಮೊಟ್ಟೆ

· ಕೆಫೀನ್

ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು:

· ಕರುಳನ್ನು ಕೆರಳಿಸುವ ಕೆಲವು ಆಹಾರ ಪದಾರ್ಥಗಳು, ಔಷಧಿಗಳು (ವಿಶೇಷವಾಗಿ ಆ್ಯಂಟಿಬಯಾಟಿಕ್ಸ್‌) ಮತ್ತು ರಾಸಾಯನಿಕಗಳಿಂದ ದೂರವಿರಿ.

· ಕರುಳಿಗೆ ಸಂಬಂಧಿಸಿದ ಯಾವುದೇ ಅನಾರೋಗ್ಯ, ಅಸಹನೆ, ನೋವು, ವ್ಯತ್ಯಾಸಗಳನ್ನು ಗುರುತಿಸಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಅಗತ್ಯ ಚಿಕಿತ್ಸೆ ಪಡೆಯಿರಿ.

· ವೈಯಕ್ತಿಕ, ಸಾಮಾಜಿಕ, ಔದ್ಯೋಗಿಕ ಯಾವುದೇ ಕ್ಷೇತ್ರದ ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ.

ಮಾನವನ ಕರುಳು ಬಹಳ ಸಂಕೀರ್ಣವಾಗಿದೆ ಮತ್ತು ಇಡೀ ದೇಹದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆರೋಗ್ಯಕರ ಕರುಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ, ಮನಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಆರೋಗ್ಯಕರ ನಿದ್ರೆ ಮತ್ತು ಪರಿಣಾಮಕಾರಿ ಜೀರ್ಣಕ್ರಿಯೆಗೆ ಕೊಡುಗೆ ನೀಡುತ್ತದೆ ಮತ್ತು ಇದು ಕೆಲವು ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ (ಆಟೋ ಇಮ್ಯೂನ್)ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಮತ್ತು ಆ ಮೂಲಕ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸೇವಿಸುವ ಆಹಾರ ಹಾಗೂ ನಿದ್ರೆ ಬಹಳ ಮುಖ್ಯ. ಜೀವನಶೈಲಿಯ ಬದಲಾವಣೆಗಳಿಂದ ಕರುಳಿನ ಸೌಖ್ಯ ಸಾಧ್ಯ. ಕರುಳು ಆರೋಗ್ಯವಾಗಿದ್ದರೆ ಮಾತ್ರ ಎಲ್ಲವೂ ಸುಸೂತ್ರ.

ಡಾ. ನಂದಾ
ಡಾ. ನಂದಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT