ಮಂಗಳವಾರ, ಏಪ್ರಿಲ್ 13, 2021
23 °C
ಕೈ ಹಿಡಿದಳು ಗಾಯತ್ರಿ –19(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)

PV Web Exclusive: ಅತಿಯಾಸೆ ಗತಿಗೇಡು

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಇಲ್ಲಿವರೆಗೆ...

ಡಿಸೆಂಬರ್‌ನಲ್ಲಿ ಡಾ.ಚನ್ನಬಸಪ್ಪ ಕೋರಿ ಅವರ ಸಲಹೆ ಮೇರೆ ಪೆಟ್‌ ಸ್ಕ್ಯಾನ್‌ಗೆ ಒಳಪಟ್ಟೆ. ಪೆಟ್‌ ಸ್ಕ್ಯಾನ್‌ಗೆ ಎರಡನೇ ಬಾರಿ ಒಳಪಟ್ಟಿದ್ದರಿಂದ ಅದರ ಬಗ್ಗೆ ಅಷ್ಟೊಂದು ಕುತೂಹಲವಿರಲಿಲ್ಲ. ಬದಲಿಗೆ ಕೊಂಚ ಭಯವಿತ್ತು. ಮತ್ತೆ ಎಲ್ಲಿಯಾದರೂ ಕ್ಯಾನ್ಸರ್‌ ಕಣಗಳು ಉಳಿದುಬಿಟ್ಟಿದ್ದರೆ... ಎಂಬ ಆತಂಕವಿತ್ತು. ರಿಪೋರ್ಟ್‌ ಬಂದಾಗ ಅವೆಲ್ಲ ಮಾಯವಾಗಿ ಮನಸ್ಸು ನಿರಾಳವಾಯಿತು. ಎಲ್ಲ ನಾರ್ಮಲ್‌ ಎಂದು ರಿಪೋರ್ಟ್‌ ಹೇಳಿತ್ತು. ಕ್ಯಾನ್ಸರ್‌ ನನ್ನ ದೇಹವನ್ನು ಬಿಟ್ಟು ಓಡಿ ಹೋಗಿತ್ತು. ನಾನೀಗ ಸಂಪೂರ್ಣ ಕ್ಯಾನ್ಸರ್‌ ಮುಕ್ತಳಾಗಿದ್ದೆ. ಇದರಿಂದ ನನ್ನ ಮನಸ್ಸಿಗೆಷ್ಟು ಖುಷಿಯಾಯ್ತು ಎಂಬುದು ನನಗಷ್ಟೇ ಗೊತ್ತು. ಮುಂದೇನಾಯ್ತು....ಓದಿ

***

ರೆಡಿಯೊಥೆರಪಿ ಮುಗಿದ ನಂತರ ಡಾಕ್ಟರ್‌ ಪ್ಲಾನ್‌ ಪ್ರಕಾರ ತೆಗೆದುಕೊಳ್ಳಬೇಕಿದ್ದ 18 ಇಂಜೆಕ್ಷನ್‌ಗಳನ್ನು ನಾನು ಬೇಡವೆಂದಿದ್ದೆ. ಅಂದರೆ ನನ್ನ ಪ್ರಕಾರ ನನ್ನ ಟ್ರೀಟ್‌ಮೆಂಟ್‌ ಮುಗಿದಿತ್ತು. ಐದು ವರ್ಷದ ಹಾರ್ಮೊನ್‌ಥೆರಪಿ ಜಾರಿಯಲ್ಲುಳಿಯಿತು.ಜೊತೆಗೆ  ನಿಯಮಿತ ತಪಾಸಣೆ. ನಾನು ವಾಕ್‌, ಯೋಗ, ಗಾಯತ್ರಿ ಮುದ್ರೆಯನ್ನು ಜೀವನದ ಭಾಗವಾಗಿಸಿಕೊಂಡು, ಆಹಾರದಲ್ಲಿ ಕಟ್ಟುನಿಟ್ಟನ್ನು ಅನುಸರಿಸಲು ಶುರು ಮಾಡಿದೆ. ಬ್ಯಾಲೆನ್ಸಡ್‌ ಲೈಫ್‌ ಅಂತಾರಲ್ಲ; ಹಾಗೆ.

ಜೀವನದ ಚಕ್ರ ಹೀಗೆ ಸಾಗುತ್ತಿರುವಾಗ 2018ರ ಗಣೇಶ ಚೌತಿಗೆ ಊರಿಗೆ ಹೋಗುವ ಉಮೇದಿ ಬಂತು. ಗಂಡನ ಮನೆಗೆ ಹೋಗದೆ ಹತ್ತಿರ ಹತ್ತಿರ ಒಂದೂವರೆ ವರ್ಷವಾಗಿತ್ತು. ಚೌತಿ ಹಬ್ಬಕ್ಕೇ ಅಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಅದಕ್ಕೆ ಹೋಗಿ ಬರೋಣವೆಂದು ಮನಸ್ಸು ಮಾಡಿ ಹೊರಟೆ. ಹಬ್ಬಕ್ಕೆಂದು ಹೋದ ಮೇಲೆ ಸುಮ್ಮನೆ ಕೂಡಲಾದಿತೆ? ಹೇಳಿಕೇಳಿ ಕೂಡುಕುಟುಂಬ. ನಮ್ಮ ಕೈಲಾದದ್ದು ಮಾಡಲೇಬೇಕು. ಅಲ್ಲಿ ಚೌತಿಗೆ ದಳ್ಳೆಗಟ್ಟೆಲೆ ಪಂಚಕಜ್ಜಾಯ, ದಳ್ಳೆಗಟ್ಟೆಲೆ ಚಕ್ಲಿ, ವಡೆ, ಪೂರಿ, ಮೋದಕ, ಉಂಡೆ, ಶಂಕರಪೋಳಿ ಹೀಗೆ ಹತ್ತಾರು ಬಗೆಯ ತಿನಿಸುಗಳನ್ನು ಬೆಳಿಗ್ಗೆ ಆರಂಭಿಸಿದರೆ ಸಂಜೆವರೆಗೂ ಮಾಡಿ ಮಾಡಿ ಸುಸ್ತಾಗಿತ್ತು. ಎಲ್ಲ ಮುಗಿದ ಮೇಲೆ ಕ್ಲೀನಿಂಗು, ನೆಲ ವರೆಸೋದು ಮಾಡಿ ಮತ್ತಷ್ಟು ಸುಸ್ತು. ಒಟ್ನಲ್ಲಿ ಈ ಹಬ್ಬಗಳು ಯಾಕಾದ್ರೂ ಬರ್ತಾವ‍ಪ್ಪ ಅಂತನಿಸಿದ್ದು ಸುಳ್ಳಲ್ಲ. ಪೂಜೆಯೆಲ್ಲ ಮುಗಿಸಿ, ಗಣೇಶನ ವಿಸರ್ಜಿಸಿ, ಊಟ ಮಾಡಿ ರಾತ್ರಿ ದಿಂಬಿನ ಮೇಲೆ ತಲೆಯಿಟ್ಟಿದೊಂದೇ ನೆನಪು. ಎಚ್ಚರವಾದಾಗ ಬೆಳಕು ಹರಿದಿತ್ತು. 

ಹಬ್ಬದ ರಜೆ ಹೊರತಾಗಿ ಹೆಚ್ಚುವರಿ ರಜೆಯೂ ಒಂದೇ ದಿನ ಸಿಕ್ಕಿದ್ದರಿಂದ ಹಬ್ಬದ ಮಾರನೇ ದಿನವೇ ಹುಬ್ಬಳ್ಳಿಗೆ ಹೊರಡಬೇಕಿತ್ತು. ಊಟ ಮಾಡಿ ಹೊರಡೋದು ಎಂಬುದು ನಮ್ಮ ಯೋಜನಯಾಗಿತ್ತು. ನನಗೆ ಹೇಳಿಕೇಳಿ ಮೀನು ಅಂದ್ರೆ ಪಂಚಪ್ರಾಣ. ಊರಲ್ಲಿ ತಾಜಾ ಮೀನು ಸಿಗುವುದರಿಂದ ಮೀನಿನ ಫ್ರೈ, ಸಾರು ಮಾಡಿ ಊಟ ಮಾಡದಿದ್ದರೆ ಮನೆಗೆ ಹೋಗಿದ್ದು ಸಮಾಧಾನವೇ ಆಗ್ತಿರಲಿಲ್ಲ. ನನಗೆ ಮೀನು ಅಂದರೆ ಇಷ್ಟ ಅಂತಾನೇ ನನ್ನ ಮಾವ ಬೆಳಿಗ್ಗೆಯೇ ಹೋಗಿ ಆಗ ತಾನೇ ಹಿಡಿದು ತಂದಿದ್ದ 3 ಕೆಜಿ ಮೀನನ್ನು ತಂದಿದ್ದರು. ಅಷ್ಟು ತಾಜ ಮೀನನ್ನು ಫ್ರೈ ಮಾಡಿ ತಿನ್ನದಿದ್ದರೆ ಏನು ಪ್ರಯೋಜನ ಹೇಳಿ. ನಾನೇ ಒಲೆ ಮುಂದೆ ಕುಳಿತೆ. ಅಲ್ಲಿ ಗ್ಯಾಸ್‌ ಒಲೆ ಇದ್ದರೂ ಅದರ ಮೇಲೆ ನಾನ್‌ವೆಜ್‌ ಮಾಡದಂತ ಒಂದು ಕಟ್ಟುಪಾಡಿತ್ತು. ಅದಕ್ಕೆ ಅಡುಗೆ ಮನೆಯಿಂದ ಹೊರಗಿದ್ದ ಕಟ್ಟಿಗೆ ಒಲೆ ಮುಂದೆ ಮೀನು ಫ್ರೈ ಮಾಡಲು ಕುಳಿತೆ. ಮೂರು ಕೆ.ಜಿ ಮೀನೆಂದರೆ ಕಮ್ಮಿಯಾಯಿತೆ? ನನಗೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ರೂಢಿಯೇ ಇರಲಿಲ್ಲ. ಅಲ್ಲಿ ಫ್ಯಾನ್‌ ಕೆಳೆಗೆ ಕೂತರೂ ಬೆವರಿಳಿಯುವ ವಾತಾವರಣ. ಬೆಂಕಿಯ ಧಗೆ ಎದುರು ಕೇಳಬೇಕೆ? ಬೆವರು ಎಷ್ಟು ಇಳಿದಿತ್ತೆಂಬುದು ನನಗಷ್ಟೇ ಗೊತ್ತು. ಶಸ್ತ್ರಚಿಕಿತ್ಸೆ ಆದ ಕೈಯೇ ಬೆಂಕಿಯ ಧಗೆ ತಾಗುತ್ತಿದ್ದರೂ ನಾನದರ ಪರಿವೆ ಇಲ್ಲದೆ ಫ್ರೈ ಮಡುತ್ತಲೇ ಉಳಿದೆ. ಊಟ ಮುಗಿಸಿ ಹೊರಡಲುವಾದೆ. ಅಲ್ಲಿ ಅಡುಗೆಗೆ ಬಳಸೋದು ಗಾಣದ ತೆಂಗಿನೆಣ್ಣೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಮೇಲೆ ನಾನು ಆಹಾರದಲ್ಲಿ ಚೂಸಿಯಾಗಿದ್ದೆ. ಅಡುಗೆ ಎಣ್ಣೆಯಿಂದ ಹಿಡಿದು ಅಕ್ಕಿ–ಬೇಳೆವರೆಗೂ ಸಾವಯವದತ್ತ ಮುಖಮಾಡಿದ್ದೆ. ತಾಜಾ ಗಾಣದ ತೆಂಗಿನೆಣ್ಣೆ ಸಿಗುವಾಗ ಬಿಡುತ್ತಿನಾ?  ಐದು ಲೀಟರ್‌ ಎಣ್ಣೆ ಕಟ್ಟಿದೆ. ಸ್ಥಳೀಯವಾಗಿ ಸಿದ್ಧಪಡಿಸಿದ ಬೇಳೆಕಾಳನ್ನೂ ಕಟ್ಟಿಕೊಂಡೆ. ಇದನ್ನೆಲ್ಲ ನೋಡುತ್ತಿದ್ದ ಗಿರೀಶ, ’ನಾನೇನು ಹೊತ್ತುಕೊಂಡ ಹೋಗಲ್ಲ. ಮೊದಲೇ ಹೇಳಿದ್ದೀನಿ ನೋಡ್‌‘ ಎಂದರು. ‘ಸರಿ ಬಿಡಿ; ನಿಮ್ಗೆ ಆಗದಿದ್ದರೆ ಹೋಗ್ಲಿ. ನಂಗೆ ಬೇಕು. ನಾನೇ ಹೊತ್ತುಕೊಂಡು ಹೋಗ್ತೇನೆ’ ಎಂದು ಭಂಡ ಧೈರ್ಯ ತೋರಿ ಒಂದು ಕೈಯಲ್ಲಿ ಬಟ್ಟೆ ಲಗ್ಗೇಜ್‌, ಮತ್ತೊಂದು ಕೈಯಲ್ಲಿ ಎಣ್ಣೆ–ಬೇಳೆ ಚೀಲ ಹಿಡಿದು ಹೊರಟೆ.

ಮಾರನೇ ದಿನ ಬಲಗೈ ನೋಯಲು ಶುರುವಿಟ್ಟಿತು. ಕೊಂಕುಳಿಂದ ಬೆರಳ ತುದಿವರೆಗೂ ವಿಪರೀಪ ಸೆಳೆತ ಶುರುವಾಯಿತು. ಅದರ ಮಾರನೇ ದಿನ ಬೆರಳುಗಳು ಬಾತುಕೊಂಡವು. ಕೈಯನ್ನು ನೇರಮಾಡಲು ಆಗ್ತಿರಲಿಲ್ಲ. ಬಾವು ಅಂಗೈ, ಮೊಣಕೈ, ಮುಂಗೈ ದಾಟಿ ತೋಳನ್ನೂ ಆವರಿಸಿತು. ಎರಡೇ ದಿನದಲ್ಲಿ ಬಲಗೈ, ತೊಲೆಯಂತಾಯಿತು. ಒಂದೇ ಒಂದು ಡ್ರೆಸ್‌ನ ಸ್ಲೀವ್‌ ಕೈಗೆ ಏರುತ್ತಿರಲಿಲ್ಲ. ಒಂದು ವಾರದವರೆಗೂ ನೋವು ಕಮ್ಮಿಯಾಗಲಿಲ್ಲ. ಕೈ ಬಾವು ಹೆಚ್ಚುತ್ತಲೇ ಹೋಯಿತು ಇದೊಳ್ಳೆ ಕಥೆ ಆಯ್ತಲ್ಲ. ಅತಿಯಾಸೆ ಗತಿಗೇಡು ಎಂದ್ರೆ ಇದೇ ತಾನೆ ಎಂದಿತು ನನ್ನೊಳಗಿನ ಮನಸ್ಸು. ಜೊತೆಗೆ ಸ್ವಲ್ಪ ಭಯವು ಆಯಿತು. ನನ್ನ ಚಿಕಿತ್ಸೆ ಜಾರಿಯಿರುವಾಗ ಕೆಲವರ ಕೈ ದಪ್ಪವಾಗಿದ್ದು ನೆನಪಾದವು. ಒಬ್ಬರ ಕೈಯಂತೂ ತೊಡೆಯಷ್ಟು ದಪ್ಪವಾಗಿ, ಚಿಕಿತ್ಸೆಗೆಂದು ಅಡ್ಮಿಟ್‌ ಆಗಿದ್ದೆಲ್ಲ ಕಣ್ಮುಂದೆ ಬಂದು ನನ್ನ ಮೇಲೆ ನನಗೆ ಸಿಟ್ಟು ಬಂದಿತು. ಅತಿಯಾಸೆ ಪಟ್ಯಲ್ಲ; ಅನುಭವಿಸು ಎಂದಿತು ಮನಸ್ಸು. ವಾರದ ನಂತರ ನೋವು ಕಡಿಮೆಯಾಗುತ್ತ ಬಂದಿತು. ಆದರೆ ಬಾವು ಮಾತ್ರ ಇಳಿಯಲೇ ಇಲ್ಲ.

ನಿಯಮಿತ ಚೆಕ್‌ಅಪ್‌ಗೆ ಹೋದಾಗ ಡಾಕ್ಟರ್‌ ಹತ್ತಿರ ಹೇಳಿದೆ. ಭಾರ ಎತ್ತಿದ್ದಿರಾ ಎಂದು ಕೇಳಿದರು. ಹುಂ ಎಂದು ನಡೆದದ್ದನ್ನೆಲ್ಲ ಹೇಳಿದೆ. ಕೈಗೆ ಬಿಸಿ ತಾಗಬಾರದು,ಭಾರ ಎತ್ತಬಾರದು ಎಂದು ಹೇಳಿದ್ದರೂ ಅದನ್ನು ಮಾಡಿದ್ದಿರಲ್ಲ. ಹೀಗಾಗದೇ ಮತ್ತೆನಾಗುತ್ತೆ. ಇದು ಶಾಶ್ವತ. ಮೊದಲೇ ನೀವು ಎಚ್ಚರಿಕೆ ವಹಿಸಬೇಕಿತ್ತು’ ಅಂದರು. 

ಸ್ತನದಲ್ಲಿನ ಕ್ಯಾನ್ಸರ್‌ ಗಡ್ಡೆ ಕೀಳಲು ನಡೆಸುವ ಶಸ್ತ್ರಚಿಕಿತ್ಸೆ ವೇಳೆ ಕಂಕುಳಲ್ಲಿನ ನೋಡ್ಸ್‌ ತೆಗೆಯುತ್ತಾರೆ. ನನಗೆ ಬಲಭಾಗದಲ್ಲಿ  ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಬಲಗೈಯ ತೋಳು ನಿರ್ಜೀವವೆನಿಸಿತು. ಈಗಲೂ ಹಾಗೇ ಇದೆ. ಕೈಗೆ ಒಂದು ದಿನ ವ್ಯಾಯಾಮ ತಪ್ಪಿಸಿದರೂ ಹಿಡಿದು ಬಿಡಲಿದೆ. ಅದಕ್ಕೆ ನಮ್ಮ ವೈದ್ಯರು ಹೇಳಿದ್ದ ಒಂದಷ್ಟು ವ್ಯಾಯಾಮ ಮಾಡುತ್ತಲೇ ಇದ್ದೆ. ಕೈಯನ್ನು ತಲೆಸುತ್ತ ಸುತ್ತಿಸೋದು, ನೇರವಾಗಿ ಮೇಲಕ್ಕೆ ಎತ್ತುವುದು, ಸ್ಮೈಲಿ ಬಾಲ್‌ ಅಮುಕುವುದು, ಎರಡೂ ಕೈಗಳನ್ನು ಬೆನ್ನ ಮೇಲೆ ತಂದು ಕೈಮುಗಿಯುವುದು. ಇವನ್ನೆಲ್ಲ ಚಾಚೂ ತಪ್ಪದೆ ಮಾಡಿದ್ದೆ. ಆದರೆ ಭಾರ ಎತ್ತುವುದು, ಬಿಸಿ ತಾಕದಂತೆ ನಿಗಾ ವಹಿಸುವುದು ವೈದ್ಯರೇ ನನಗೆ ಹೇಳಲು ಮರೆತಿದ್ದರೋ, ಅಥವಾ ಅವರು ಹೇಳಿದ್ದರೂ ನಾನು ಮರೆತಿದ್ದೆನೋ ಗೊತ್ತಿಲ್ಲ. ಅದರ ಫಲಿತಾಂಶ ಇಂದಿಗೂ ಅನುಭವಿಸುತ್ತಿದ್ದೇನೆ. ಸ್ತನ ಕ್ಯಾನ್ಸರ್‌ಗೆ ಒಳಗಾದ ಯಾರೇ ಆದರೂ ಈ ವಿಚಾರದಲ್ಲಿ ಎಚ್ಚರ ವಹಿಸಬೇಕಿದೆ.

ಸ್ತನ ಕ್ಯಾನ್ಸರ್‌ಗೊಳಗಾದ ಭಾಗದ ಕೈಗಳಲ್ಲಿ ಜೀವನಪೂರ್ತಿ ಭಾರ ಎತ್ತುವಂತಿಲ್ಲ. ಅತೀ ಬಿಸಿ, ಅತೀ ತಣ್ಣನೆಯದ್ದನ್ನು ಅಲ್ಲಿ ತಾಗಿಸುವಂತಿಲ್ಲ. ಬಿಪಿ ಚೆಕ್‌ಅಪ್‌ ಮಾಡಲು ಆ ಕೈ ನಿಷಿದ್ಧ, ಇಂಜೆಕ್ಷನ್‌ ಅಂತೂ ಬಲಗೈಲಿ ತೆಗೆದುಕೊಳ್ಳುವಂತೆಯೇ ಇಲ್ಲ. ವ್ಯಾಯಾಮವನ್ನು ತಪ್ಪಿಸುವಂತೇ ಇಲ್ಲ... ಈ ಎಲ್ಲ ಮಹತ್ವದ ಸಂಗತಿಗಳು ನಮ್ಮ ತಲೆಯಲ್ಲಿರಬೇಕು. ಅಮ್ಮ ನನಗೆ ಒಂಚೂರು ಭಾರ ಎತ್ತದಂತೆ ನಿಗಾವಹಿಸುತ್ತಿದ್ದರು. ಆದರು ಅದೊಂದು ದಿನ ಆಸೆ ಎಂಬುದು ನನಗೆ ಕಂಟಕವಾಗಿಬಿಡಬೇಕೆ.

ಇದರ ಪರಿಣಾಮ ಇಷ್ಟಕ್ಕೆ ಉಳಿಯಲಿಲ್ಲ. ಸೀರೆ ಉಡಲು ಹೋದರೆ ಬ್ಲೌಸ್‌ನ ಬಲಗೈ ತೋಳಿಗೆ ಕೈ ಹೋಗಲ್ಲ ಅಂತಿತ್ತು. ಕೊನೆಯ ಹೊಲಿಗೆವರೆಗೂ ಬಿಚ್ಚಿದರು ಕೆಲವನ್ನು ಕೊನೆಗೂ ಹಾಕಲಾಗಲಿಲ್ಲ. ಹೊಸದಾಗಿ ಹೊಲಿಸುವ ಬ್ಲೌಸ್‌ನ ಬಲಗೈ ತೋಳು ದೊಡ್ಡದಿಡಿ ಎಂದು ಅಳತೆ ಬ್ಲೌಸ್‌ ನೀಡುವಾಗ ಟೈಲರ್‌ಗೆ ವಿಶೇಷವಾಗಿ ಹೇಳುವಂತಾಯಿತು. ಒಮ್ಮೆಯಂತು ಟೇಲರ್‌ ಎಡವಟ್ಟು ಮಾಡಿ ಹೊಲಿದಿದ್ದ. ಬಲಗೈ ಸಡಿಲವಿಡಿ ಎಂದರೆ ಎಡಗೈ ಸ್ಲೀವ್‌ ಸಡಿಲಿಟ್ಟು ನನ್ನ ಹತ್ತಿರ ಬೈಸಿಕೊಂಡಿದ್ದ. ಕುರ್ತಿ ಖರೀದಿಸುವಾಗಲೂ ಬಲಗೈಗೆ ಹೊಕ್ಕುವಂತ ಕುರ್ತಿಯನ್ನೇ ಆಯ್ದುಕೊಳ್ಳಬೇಕಾಯಿತು. ಪರಿಣಾಮ ದೇಹಕ್ಕೆ ಲೂಸ್‌ ಲೂಸ್‌ ಆಗ್ತಿತ್ತು. ಎಷ್ಟೋ ಡ್ರೆಸ್‌ಗಳು ಇದೇ ಸಮಸ್ಯೆಯಿಂದ ಮೂಲೆಸೇರಿದವು.

ಕೈ ಮತ್ತೆ ದಪ್ಪವಾಗದಿರಲೆಂದು ಪೂರ್ತಿ ಕೈಗೆ ಕ್ಯಾಪ್‌ ಧರಿಸಿದೆ. ನೋಡಿದವೆಲ್ಲರೂ ಕೈಗೆನಾತ್ರಿ ಅಂಥ ಕೇಳೋಕೆ ಶುರು ಮಾಡಿದ್ರು. ಅವರಿಗೆಲ್ಲ ಉತ್ತರ ಹೇಳಿ ಹೇಳಿ ಸಾಕಾಯ್ತು. ಸ್ಕೂಟರ್‌ ಓಡಿಸುವುದನ್ನು ಆದಷ್ಟು ಕಡಿಮೆ ಮಾಡಿದೆ. ಆದರೂ ಕೈ ತೆಳ್ಳಗಾಗಲು ಒಲ್ಲೆ ಎಂದಿತು. ಅದನ್ನೂ ಸಕಾರಾತ್ಮಕವಾಗಿಯೇ ಸ್ವೀಕರಿಸಿದೆ. ಬಲಗೈ ಈಗ ಅದರ ಪಾಡಿಗೆ ಅದಿದೆ.

ಅದಕ್ಕೆ ಕ್ಯಾನ್ಸರ್‌ ಎದುರಿಸಿದವರು ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಎಷ್ಟು ನಿಗಾ ವಹಿಸುತ್ತಿರೋ ಅದಕ್ಕಿಂತಲೂ ಹೆಚ್ಚು ನಿಗಾವನ್ನು ನಂತರವೂ ನೀಡಬೇಕು.

(ಮುಂದಿನ ವಾರ: ಕ್ಯಾನ್ಸರ್‌ ನನ್ನ ಕೌನ್ಸೆಲರ್‌ ಮಾಡಿತು)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು