ಶುಕ್ರವಾರ, ಆಗಸ್ಟ್ 19, 2022
22 °C
ಕೈ ಹಿಡಿದಳು ಗಾಯತ್ರಿ –17

PV Web Exclusive: ಕ್ಯಾನ್ಸರ್‌ ಜೊತೆ ಪಯಣ; ಈ ಸಮಯ ಶಾಶ್ವತವಲ್ಲ....

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಇಲ್ಲಿಯವರೆಗೆ...

ರೆಡಿಯೋಥೆರಪಿ ಆರಂಭವಾಗಿ ಎರಡನೇ ದಿನ ರೆಡಿಯೇಷನ್‌ ಮಾಡಿದ ಜಾಗದ ಅಲ್ಲಲ್ಲಿ ಸಣ್ಣ ಸಣ್ಣ ಬೊಕ್ಕೆಗಳು ಎದ್ದಿದ್ದವು. ಬಿಸಿನೀರು ಸುರಿದುಕೊಳ್ಳುತ್ತಲೇ ಉರಿಯಲು ಶುರುವಾಯಿತು. ಇದೇ ರೆಡಿಯೇಷನ್‌ನ ನಿಜವಾದ ರೂಪ ಅನ್ನೋದು ಆಗ ಗಮನಕ್ಕೆ ಬಂದಿತು. ಅದು ರೆಡಿಯೇಷನ್‌ನಿಂದಾದ ಅಡ್ಡಪರಿಣಾಮವಾಗಿತ್ತು. ಮುಂದೆ ಓದಿ.

****

ನನಗೆ ಕ್ಯಾನ್ಸರ್‌ ಮತ್ತೆ ಬರದಂತೆ ಮುನ್ನೆಚ್ಚರಿಕೆ ವಹಿಸಲು 18 ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳೊದು ನನ್ನ ಟ್ರೀಟ್‌ಮೆಂಟ್‌ ಪ್ಲಾನ್‌ನಲ್ಲಿತ್ತಲ್ಲ. ಆದರೆ ನಾನೀಗ ಆ ಇಂಜೆಕ್ಷನ್‌ ಬೇಡ ಎಂದು ನನ್ನ ಡಾಕ್ಟರ್‌ ಹತ್ತಿರ ಖಡಾಖಂಡಿತವಾಗಿ ಹೇಳಿಬಿಟ್ಟೆ. ಆ ಇಂಜೆಕ್ಷನ್‌ಗೆ ಎಂದೇ ಎಡಭಾಗದ ಎದೆ ಮೇಲೆ ಅಳವಡಿಸಲಾಗಿದ್ದ ಪೋರ್ಟ್‌ ರಿಮೂವ್‌ ಮಾಡಲು ಮತ್ತೆ ಸಣ್ಣ ಸರ್ಜರಿ ಮಾಡಬೇಕು. ಅದನ್ನು ಹಾಗೇ ಬಿಡುವಂತಿಲ್ಲ ಎಂದು ಡಾಕ್ಟರ್‌ ಕೂಡ ಅಷ್ಟೇ ನೇರವಾಗಿ ಹೇಳಿದಾಗ ಮನಸ್ಸು ಒಂದು ಕ್ಷಣ ವಿಲವಿಲ ಅಂದಿತು. ಅದನ್ನು ಸುಮ್ಮನೆ ಹಾಕಿಸಿಕೊಂಡಂಗಾಯ್ತಲ್ಲ. ಇರೋ ನೋವಿನ ಜೊತೆ ಸುಮ್ಮನೆ ಮತ್ತೊಂದು ಕಡೆ ಕತ್ತರಿ ಹಾಕಿಸಿಕೊಂಡಂತೆ ಆಯ್ತಲ್ಲ. ಅದಕ್ಕಾಗಿ ಖರ್ಚಾಗಿದ್ದು 40ಸಾವಿರ ರೂಪಾಯಿ ಬೇರೆ. ಖರ್ಚಿಗಿಂತ ಅನುಭವಿಸಿದ ನೋವೇ ಜಾಸ್ತಿಯಾಗಿತ್ತು. ಆದರೂ ಹೋಗ್ಲಿ ಎಂದಿತು ಮನಸ್ಸು.

ಈಗ್ಲೇ ಅದನ್ನು (ಪೋರ್ಟ್‌) ಸಣ್ಣ ಸರ್ಜರಿ ಮಾಡಿ ತೆಗೆಯೋಣ ಎಂದು ಡಾ. ಕೋರಿ ಅವರು ಹೇಳಿದರು. ಈಗ್ಲೇನಾ... ಅಂದೆ. ‘ಹೌದು, ಲೋಕಲ್‌ ಅನಸ್ತೇಷಿಯಾ ಕೊಟ್ಟು ರಿಮೂವ್‌ ಮಾಡ್ತೇವೆ. ಡೋಂಟ್‌ ವರಿ’ ಎಂದರು. ನಾನೂ ಸರಿ ಎಂದೆ. ಗಿರೀಶ ಅವರು ಕೆಲಸ ಮಾಡುವ ಶಾಲೆಗೆ ಕಾಲ್‌ ಮಾಡಿ, ‘ಇವತ್ತು ಮಧ್ಯಾಹ್ನ ಬರೋಕಾಗಲ್ಲ. ಫುಲ್‌ ಡೇ ರಜೆ ಹಾಕ್ತಿನಿ’ ಎಂದು ರಜೆ ಪಡೆದುಕೊಂಡರು. ಡಾಕ್ಟರ್‌ ಹೇಳಿದಂತೆ ಪೋರ್ಟ್‌ ತೆಗೆಸಲೆಂದೇ ಮತ್ತೆ ಅಡ್ಮಿಟ್‌ ಆದೆ.

ಇದನ್ನೂ ಓದಿ: 

ವಾರ್ಡ್‌ ಪಕ್ಕದ ಖುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಿ ಹೋದ ಸಿಸ್ಟರ್‌, ಗೌನ್‌ ತಂದು ಕೊಟ್ಟು, ಇದನ್ನ ಹಾಕಿಕೊಂಡು ಕುತ್ಕೊಂಡಿರಿ. ಈಗ ಬರ್ತೆನೆ ಎಂದರು. ನಾನು ಹಾಗೇ ಮಾಡಿದೆ. ಸುಮಾರು ಹೊತ್ತಾದರೂ ಆ ಸಿಸ್ಟರ್‌ ಬರಲೇ ಇಲ್ಲ. ನೋಡಿದರೆ ಏಳೆಂಟು ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕನಿಗೆ ಕ್ಯಾನುಲಾ ಹಾಕಲು ಅವರು ಶ್ರಮಪಡುತ್ತಿದ್ದರು. ಆ ಬಾಲಕನನ್ನು ನೋಡಿ, ಅವನು ಅಳೋದು ನೋಡಿ ಒಮ್ಮೆ ಕರುಳು ಕಿವುಚಿಬಿಟ್ಟಿತು. ಸ್ವಲ್ಪ ಹೊತ್ತಿಗೆ ಆ ಸಿಸ್ಟರ್‌ ವೀಲ್‌ ಚೇರ್‌ ತಂದು ನನ್ನ ಅದರ ಮೇಲೆ ಕೂರಿಸಿಕೊಂಡು ಎರಡನೇ ಮಹಡಿ ಮೇಲಿರುವ ಆಪರೇಷನ್‌ ಥಿಯೇಟರ್‌ಗೆ ಹೋಗಲು ಲಿಫ್ಟ್‌ ಕಡೆ ಬಂದರು. ನಾನು ನಡೆದೆ ಬರುತ್ತೇನೆ ಎಂದರೂ ಕೇಳದೆ, ‘ಇದು ಹಾಸ್ಪಿಟಲ್‌ ರೂಲ್‌’ ಎಂದು ಲಿಫ್ಟ್‌ನ ಬಟನ್‌ ಒತ್ತಿದರು. ಸರಿ ಎಂದು ನಾನು ಕುಳಿತುಕೊಂಡೆ. ಆಪರೇಷನ್‌ ಥಿಯೇಟರ್‌ ಏನು ನನಗೆ ಹೊಸದಲ್ಲ.

ಆಪರೇಷನ್‌ ಥಿಯೇಟರ್‌ ಒಳಗೆ ಹೋದೆ. ಮಲಗಿದ ಮೇಲೆ ಮುಖವನ್ನು ಮುಚ್ಚಿದರು. ಲೋಕಲ್‌ ಅನಸ್ತೇಷಿಯಾ ಕೊಟ್ಟು ರಿಮೂವ್‌ ಮಾಡ್ತೇವೆ ಅಂದ್ರು ಕೋರಿ ಡಾಕ್ಟರ್‌. ಸರಿ ಅಂದೆ. ಜಾಸ್ತಿ ನೋವಾದ್ರೆ ಹೇಳಿ ಅಂದವರೆ ಇಂಜೆಕ್ಷನ್‌ ಕೊಟ್ರು. ಎದೆ ಭಾಗ ಮರಗಟ್ಟಿದ್ದು ಗೊತ್ತಾಯ್ತು. ಕರಕರ ಕೊಯ್ದ ಸದ್ದು ಮಾತ್ರ ಕೇಳ್ತಿತ್ತು. ಪೋರ್ಟ್‌ ತೆಗೆಯುವಾಗ ಮಾತ್ರ ನೋವಾಯ್ತು. ನೋಯ್ತಿದೆ ಎಂದು ಜೋರಾಗಿಯೇ ಹೇಳಿದೆ. ಆಯ್ತು ಆಯ್ತು ಎಂದವರೆ ಹೊಲಿಗೆ ಹಾಕಲು ಶುರು ಮಾಡಿದರು. ಡ್ರೆಸ್ಸಿಂಗ್ ಮಾಡಿ ಬಿಟ್ರು. ಸಂಜೆ ತನಕ ಇದ್ದು ನಂತರ ಮನೆಗೆ ಹೋಗಿ ಅಂದ್ರು.  ಆಪರೇಷನ್‌ ಥಿಯೇಟರ್‌ನಿಂದ ನನ್ನನ್ನು ವಾರ್ಡ್‌ಗೆ ಶಿಫ್ಟ್‌ ಮಾಡಿದರು. ಅಲ್ಲಿ ಸುತ್ತಮುತ್ತ, ಅಕ್ಕ–ಪಕ್ಕದ ಬೆಡ್‌ನಲ್ಲಿ ಇದ್ದವರೆಲ್ಲ ಬೇರೆ ಬೇರೆ ಕ್ಯಾನ್ಸರ್‌ಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವರು. ಹೆಚ್ಚಿನವರು ಗಂಟಲು, ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದವರು. ಮೂಗಿನ ಮೂಲಕ ನಳಿಕೆ ಇಳಿಸಿ ಅದರ ಮೂಲಕವೇ ದ್ರವ ಆಹಾರವನ್ನು ಇಳಿಸುತ್ತಿದ್ದರು. ಅವರಿಗೆ ಹೋಲಿಸಿದರೆ ನನ್ನದೇ ಬೆಟರ್‌ ಎಂದಿತು. ತಿನ್ನಲು, ಉಣ್ಣಲು ತೊಂದರೆ ಇಲ್ಲವಲ್ಲ. ಅದಕ್ಕೆ ಹೀಗೆಂದೆ. ಅವರ ನರಳಾಟ, ವೇದನೆ ಎಲ್ಲ ನನ್ನ ಕಣ್ಣಮುಂದೆ ಇದ್ದವು. ಮಧ್ಯಾಹ್ನದಿಂದ ಸಂಜೆಯವರೆಗೂ ಇದೇ ಸ್ಥಿತಿಗತಿಗಳನ್ನು ದೃಷ್ಟಿಸುತ್ತಿದ್ದವು ನನ್ನ ಕಣ್ಣುಗಳು. ಅದನ್ನೆಲ್ಲ ನೋಡುತ್ತ ಮನಸ್ಸು ತುಸು ವಿಷಣ್ಣವೆನಿಸಿತು. ಇತ್ತ ನನಗೆ ನೀಡಿದ್ದ ಅರಿವಳಿಕೆ ಮದ್ದಿನ ಶಕ್ತಿ ಕುಂದುತ್ತಿರುವುದು ನನ್ನ ಗಮನಕ್ಕೆ ಬಂದಿತು. ಅನಸ್ತೇಷಿಯಾ ಪವರ್‌ ಇರುವವರೆಗೂ ನೋವು ಅಷ್ಟು ಗೊತ್ತಾಗಲಿಲ್ಲ. ನಂತರ ನೋವಿನ ಆರ್ಭಟ ಜೋರಾಯಿತು. ಸಂಜೆ 6ಕ್ಕೆ ಮತ್ತೆ ಡಿಸ್‌ಚಾರ್ಜ್‌ ಪ್ರಕ್ರಿಯೆ ಮುಗಿಸಿಕೊಂಡು ಗಿರೀಶ ಬಂದರು. ಹೊರಡೋಣ ಎಂದೆ. ನನಗೆ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿದ್ದರೆ ಸಾಕಿತ್ತು. ಆಸ್ಪತ್ರೆಯ ಗೌನ್‌ ಕಳಚಿಟ್ಟು ನನ್ನ ಬಟ್ಟೆಯನ್ನು ತೊಟ್ಟು ಹೊರಡಲು ಅನುವಾದೆ. ಎದೆ ಮೇಲಿನ ನೋವು ಒಂದೇ ಸಮನೆ ಕಾಡುತ್ತಿತ್ತು. ಅದೇ ನೋವ ಹೊತ್ತು ನನ್ನ ಸ್ಕೂಟರ್‌ ಏರಿದೆ. ಮತ್ತದೇ ರಸ್ತೆ ಹೊಂಡಗಳು ನನ್ನ ಕಾಲೆಳೆಯಲು ಶುರುಮಾಡಿದವು. ರಸ್ತೆ ಪೂರ್ತಿ ಹೊಂಡಗಳೇ ತುಂಬಿರುವಾಗ ಗಿರೀಶ ತಾನೇ ಏನು ಮಾಡಬಲ್ಲರು. ಸರ್ಜರಿ ಜಾಗದಲ್ಲಿ ನೋವು ದ್ವಿಗುಣಗೊಂಡಿತು. ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಕುಳಿತೆ. ಅಂತೂ ಮನೆಗೆ ಬಂದಾಗ ಸಂಜೆ 6.30. ಲಿಫ್ಟ್‌ ಇಲ್ಲದ ಫ್ಲ್ಯಾಟ್‌ಗೆ 60 ಮೆಟ್ಟಿಲುಗಳ ಹತ್ತಿ ಹೋಗುವುದು ನನಗೆ ಒಂದು ಸವಾಲೇ ಎನಿಸಿತು. ಕಷ್ಟಪಟ್ಟು ಏರಿದೆ. ಮೆಟ್ಟಿಲು ಹತ್ತಿ ಬರುವುದು ಕಷ್ಟವಾಯಿತೆಂದು ನಾನು ಅಮ್ಮನೆದುರಾಗಲಿ, ಗಿರೀಶನೆದುರಾಗಲಿ ತೋರಿಸಿಕೊಳ್ಳಲಿಲ್ಲ. ಕಾರಣ ಏನೆಂದರೆ ಮಾರನೇ ದಿನ ನನಗೆ ಆಫೀಸ್‌ಗೆ ಹೋಗಲು ಬಿಡಲ್ವೆನೋ ಎಂಬ ಆತಂಕ.

ನಿಜ ಹೇಳ್ಬೇಕಂದ್ರೆ ನನಗೆ ಪೋರ್ಟ್‌ ರಿಮೂವ್‌ ಮಾಡುವ ಸರ್ಜರಿಯ ನಿರೀಕ್ಷೆ ಇರಲಿಲ್ಲ. ಅದೆಲ್ಲ ಫಟಾಫಟ್‌ ಅಂತ ಮುಗಿಯಿತು. ಸುಮ್ಮನೆ 40ಸಾವಿರ ಕೊಟ್ಟು ಪೋರ್ಟ್‌ ಹಾಕಿಸಿದ್ದಾಯ್ತು. ಮೊದಲೇ ನಿರ್ಧರಿಸಿದ್ದರೆ ಅದಕ್ಕಾಗಿ ಎದೆ ಮೇಲೆ ಎರಡೆರಡು ಬಾರಿ ಕೊಯ್ಸಿಕೊಳ್ಳೋದು ಇರ್ತಿರ್ಲಿಲ್ವಲ್ಲ ಅಂತ ಮನಸ್ಸು ಹೇಳಿತು. ಆದರೆ ಅವೆಲ್ಲ ಮುಗಿದ ಕಥೆ. ಯೋಚಿಸಿ ಫಲವಿರಲಿಲ್ಲ. ನೋವು ಉಣ್ಣೋದು ಹಣೆಬರಹದಲ್ಲಿ ಇದ್ದಾಗ ತಪ್ಪಿಸಲು ಹೇಗೆ ತಾನೆ ಸಾಧ್ಯ. ಮತ್ತೆ ಸರ್ಜರಿ ನೋವು ಜೊತೆಯಾಯಿತು. ಅದೇ ನೋವಿಟ್ಟುಕೊಂಡು ಇನ್ನೆರಡು ದಿನದಲ್ಲಿ ಆಫೀಸ್‌ಗೆ ಹೋಗಬೇಕಿತ್ತು. ನಮ್ಮ ಮನೆ ಪಕ್ಕದ ಡಾ.ಆರ್‌.ಬಿ.ಪಾಟೀಲ್‌ ಆಸ್ಪತ್ರೆಯಲ್ಲಿ ಡ್ರೆಸ್ಸಿಂಗ್‌ ಮಾಡಿಸಿಕೊಂಡು ಆಫೀಸ್‌ಗೆ ಹೋದರಾಯಿತು ಎಂದು ಆಸ್ಪತ್ರೆಗೆ ಹೋದೆ. ಅಲ್ಲಿ ನೋಡಿದರೆ ಕಾಯೋದೆ ಆಯಿತು. ಎಂಟು ತಿಂಗಳ ಮೇಲೆ ಕಚೇರಿ ಕಾಯಕ. ಸ್ವಲ್ಪಬೇಗ ಹೋಗಿರೋಣ ಅಂದುಕೊಂಡು ಬಂದರೆ ಅಲ್ಲಿ ಸ್ವಲ್ಪ ಕಾಯಿರಿ ಅನ್ನೋರೆ ಹೆಚ್ಚು. ಅಂತೂ ಡ್ರೆಸ್ಸಿಂಗ್‌ ಮುಗಿಸಿಕೊಂಡು ಮನೆಗೆ ಬಂದೆ.

ಜುಲೈ 1; ಕಚೇರಿಗೆ ಹೋಗುವ ಹುಮ್ಮಸ್ಸು ಮನವನ್ನೆಲ್ಲ ಆವರಿಸಿತ್ತು. ತಲೆಯಲ್ಲಿ, ಕಣ್ಣು ರೆಪ್ಪೆ, ಹುಬ್ಬಗಳಲ್ಲಿ ಕೂದಲುಗಳು ಸರಿಯಾಗಿ ಬಂದಿರಲಿಲ್ಲ. ಅದಕ್ಕೆ ಶಾಲ್‌ಅನ್ನು ತಲೆ ಹಾಗೂ ಕುತ್ತಿಗೆ ಸುತ್ತ ಸುತ್ತಿಕೊಂಡೆ. ಕಚೇರಿಯತ್ತ ಹೆಜ್ಜೆ ಹಾಕಿದೆ. ಈ ದಿನ ನನ್ನ ಪಾಲಿಗೆ ಮಹತ್ವದ ದಿನವೂ ಹೌದು. ಎಂಟು ತಿಂಗಳ ಸುದೀರ್ಘ ರಜೆಯ ನಂತರ ನನ್ನ ಕಚೇರಿಗೆ ತೆರಳಿದ್ದೆ. ದಿಗಂತ ಹುಟ್ಟಿದಾಗ ಐದೂವರೆ ತಿಂಗಳು ರಜೆ ಹಾಕಿದ್ದು ಬಿಟ್ಟರೆ ದೀರ್ಘಾವಧಿ ರಜೆ ಇದೇ ಆಗಿತ್ತು. ಎರಡೂವರೆ ತಿಂಗಳು ಸಂಬಳ ರಹಿತ ರಜೆ. ಬ್ಯಾಂಕ್‌ ಬ್ಯಾಲೆನ್ಸ್‌ ನಿಲ್‌. ಮನೆ ಸಾಲದ ಕಂತು ಬಿಡೋ ಹಾಗಿರಲಿಲ್ಲ. ಟ್ರೀಟ್‌ಮೆಂಟ್‌ಗಾಗಿ ಅಲ್ಲಿ ಇಲ್ಲಿ ಮಾಡ್ಕೊಂಡ ಸಾಲದ ಪಟ್ಟಿ ಉದ್ದವಾಗೇ ಇತ್ತು. ನನ್ನ ಮಾವಂದಿರು, ಚಿಕ್ಕಮ್ಮ, ಅಜ್ಜಿ, ಅಜ್ಜ ಎಲ್ರೂ ಅವರವರ ಕೈಲಾದಷ್ಟು ಹಣ ಸಹಾಯ ಮಾಡಿದ್ರು. ಹೇಗೋ ಕಷ್ಟದ ದಿನಗಳು ಕಳೆದು ಹೋದವು.

ಮಹಾಭಾರತದಲ್ಲಿ ಅರ್ಜುನ ಕೃಷ್ಣನಿಗೆ ಹೇಳಿದ ಮಾತು ನೆನಪಾಯಿತು. ‘ಕೃಷ್ಣ, ನೀನೊಂದು ಸಾಲು ಬರೆ. ಅದು ಹೇಗಿರಬೇಕೆಂದರೆ ಸಂತೋಷದಲ್ಲಿದ್ದವರಿಗೆ ದುಃಖವಾಗಬೇಕು ನೋವಿನಲ್ಲಿದ್ದವರಿಗೆ ಸಂತೋಷವಾಗಬೇಕು’. ಕೃಷ್ಣ ಬರೆದ; ‘ಈ ಸಮಯ ಶಾಶ್ವತವಲ್ಲ’. ಎಷ್ಟು ಅರ್ಥವತ್ತಾಗಿದೆಯಲ್ಲವೆ? ಅದನ್ನೇ ನಾನು ನನ್ನ ಬದುಕಿನಲ್ಲೂ ಅಳವಡಿಸಿಕೊಂಡೆ. ಎಷ್ಟೇ ಕಷ್ಟಗಳು ಬಂದರೂ ಅವು ಗ್ರಹಣದಂತೆ. ಹೀಗೆ ಬಂದು ಹಾಗೆ ಹೋಗುತ್ತದೆ. ಕ್ಯಾನ್ಸರ್‌ ರೋಗಿಯಾಗಿ ನಾನು ಅನುಭವಿಸಿದ ದಿನಗಳು ಕೂಡ ಶಾಶ್ವತವಲ್ಲ. ಅದು ಕಳೆದು ಹೋಗಲಿದೆ. ನನಗೆ ಕಷ್ಟವನ್ನೇ ಕೊಡಬೇಡ ದೇವ್ರೆ ಎಂದು ನಾನು ಯಾವತ್ತು ಕೇಳಿಕೊಂಡವಳಲ್ಲ. ಆದರೆ ಆ ಸಂಕಷ್ಟವನ್ನು ಧೈರ್ಯವಾಗಿ, ಎದುರಿಸಿ ಗೆಲ್ಲುವ ಆತ್ಮವಿಶ್ವಾಸ ಕೊಡು ಎಂದು ಬೇಡಿಕೊಳ್ಳೋದು ನನ್ನ ಜಾಯಮಾನ. ಹಾಗೇ ಆಯಿತು. ನನ್ನ ಬತ್ತಳಿಕೆಯಲ್ಲಿದ್ದದ್ದು ಹಣವಲ್ಲ. ಅದು ಕೇವಲ ನನ್ನಲ್ಲಿನ ವಿಶ್ವಾಸ ಮತ್ತ ಅಚಲ ನಂಬಿಕೆ. ಇಷ್ಟು ದೀರ್ಘಾವಧಿಯ ಅನಾರೋಗ್ಯವನ್ನು ಭೇದಿಸಲು ಅಷ್ಟೇ ತಾಳ್ಮೆ, ಸಂಯಮ ಬೇಕು. ಅದೊಂದು ತಪಸ್ಸು. ಮನಸ್ಸಿನ ಸಮಸ್ಥಿತಿ ಕಾಯ್ದುಕೊಂಡು ಮುನ್ನುಗ್ಗಿದಲ್ಲಿ ಗೆಲುವು ನಮ್ಮದೇ. ಮನದಲ್ಲಿ ಅಂಥ ಅಚಲ ಭರವಸೆಯಿಟ್ಟು ಹೆಜ್ಜೆ ಇಟ್ಟಲ್ಲಿ ಗೆಲುವು ನಮ್ಮ ಪಾಲಾಗುತ್ತದೆ.

ಇಷ್ಟೆಲ್ಲ ಯಾಕೆ ಹೇಳಿದ್ದು ಅಂದರೆ, ನನ್ನವರಲ್ಲೇ ಕೆಲವರು ನಾನು ಸತ್ತೇ ಹೋಗ್ತೇನೆ ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದರು. ಆದರೆ ಅವರ ನಿರೀಕ್ಷೆಯನ್ನೆಲ್ಲ ಹುಸಿ ಮಾಡಿ ಫಿನಿಕ್ಸ್‌ ಪಕ್ಷಿಯಂತೆ ಎದ್ದು ಬಂದೆ. ಮತ್ತೆ ಎಂದಿನಂತೆ ಕೆಲಸಕ್ಕೆ ಹಾಜರಿ ನೀಡಿದೆ. ಆದರೆ ನನಗೆ ಪತ್ರಿಕೆಯ ಮೆಟ್ರೊ ವಿಭಾಗದಲ್ಲಿ ಅವಕಾಶ ಮಾಡಿಕೊಡಿ. ಮಧ್ಯಾಹ್ನದ ಶಿಫ್ಟ್‌ ಆದರೆ ತಡರಾತ್ರಿಯಾಗುತ್ತದೆ, ಈಗಷ್ಟೇ ಚೇತರಿಸಿಕೊಂಡಿರುವುದರಿಂದ ಬೆಳಿಗ್ಗೆಯೇ ಬರುವೆ ಎಂದು ನಮ್ಮ ಬ್ಯೂರೋ ಮುಖ್ಯಸ್ಥರಾದ ಬಿ.ಎನ್‌.ಶ್ರೀಧರ ಅವರಲ್ಲಿ ಕೇಳಿಕೊಂಡೆ. ಅವರು ಓಕೆ ಎಂದರು.  ಮೆಟ್ರೊ ವಿಭಾಗದವರು ಬೆಳಿಗ್ಗೆ 12ರಿಂದ ಸಂಜೆ 7ರವರೆಗೆ ಕೆಲಸ ಮಾಡಬೇಕಿತ್ತು. ಆದರೆ ನನಗೆ ಬೆಳಿಗ್ಗೆ 11ರಿಂದ ರಾತ್ರಿ 8.30 ಒಮ್ಮೊಮ್ಮೆ 9ರವರೆಗೂ ಕೆಲಸ ಮುಂದುವರೆಯಿತು. ಕಷ್ಟವಾದರೂ ಅಡ್ಡಿಯಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ಕೆಲಸ ಮಾಡಿದೆ.

ಕಚೇರಿ ಕೆಲಸ ಆರಂಭವಾದ ಮೇಲೂ 23 ರೆಡಿಯೇಷನ್‌ ಬಾಕಿಯಿತ್ತು. ನಿತ್ಯವೂ ಬೆಳಿಗ್ಗೆ 6.30ಕ್ಕೆ ರೆಡಿಯೇಷನ್‌ ಪಾಳಿಯಲ್ಲಿ ಕೂರುತ್ತಿದ್ದೆ. ಜುಲೈ 7ರಂದು ಪೋರ್ಟ್‌ ರಿಮೂವ್‌ ಮಾಡಿದಾಗ ಹಾಕಿದ ಹೊಲಿಗೆಯನ್ನು ಬಿಚ್ಚಿದರು.

ರೆಡಿಯೇಷನ್‌ ಸೈಡ್‌ ಇಫೆಕ್ಟ್‌ ಆಗದಿರಲು ಟ್ಯಾಬ್ಲೆಟ್‌ ತಿನ್ನಲೇ ಬೇಕಿತ್ತು. ಆದರೆ ಅದು ನನಗೆ ಮೂಲವ್ಯಾಧಿಯನ್ನುಂಟು ಮಾಡಿತು. ಎಷ್ಟೆಂದರೆ ಆಫೀಸ್‌ನಲ್ಲಿ ಖುರ್ಚಿ ಮೇಲೆ ಕುಳಿತುಕೊಳ್ಳಲಾರದಷ್ಟು ಹಿಂಸೆ ಎನಿಸಿತು. ಗುಳಿಗೆ ನುಂಗಿ ನುಂಗಿ ಉಷ್ಣ ಹೆಚ್ಚಿ, ಅದು ಮೂಲವ್ಯಾಧಿ ರೂಪದಲ್ಲಿ ನನ್ನ ಹಿಂಡಿಹಿಪ್ಪೆ ಮಾಡಲು ಶುರುಮಾಡಿತು. ಏನೇ ಆಗಲಿ ಅಂತ ಗುಳಿಗೆಗಳನ್ನು ತಿನ್ನೋದನ್ನೇ ನಿಲ್ಲಿಸಿದೆ. ಮೂಲವ್ಯಾಧಿ ಕೂಡ ನಿಂತಿತು. ಆದರೆ ರೆಡಿಯೇಷನ್‌ ಹಾಯಿಸಿದ ಜಾಗದ ಚರ್ಮವೆಲ್ಲ ಕಪ್ಪಾಗಿ ಸುಕ್ಕುಗಟ್ಟಿದವು. ಎದೆ ಭಾಗ ದಾಟಿ ಕುತ್ತಿಗೆ ಸುತ್ತಲೂ ಕಪ್ಪಾದವು. ನೋಡಲು ಅಸಹ್ಯವೆನಿಸತೊಡಗಿತು. ಕೊನೆಕೊನೆಯಲ್ಲಿ ರೆಡಿಯೇಷನ್‌ ಹಾಯಿಸಿದ ಜಾಗದಲ್ಲೆಲ್ಲ ದೊಡ್ಡ ದೊಡ್ಡ ಗುಳ್ಳೆಗಳೆದ್ದವು. ನಿಗದಿತಕ್ಕಿಂತ ಹೆಚ್ಚು ವಿಕಿರಣ ಹಾಯ್ದರೆ ಗುಳ್ಳೆಗಳು ಏಳುತ್ತವೆ ಎಂದು ರೆಡಿಯೇಷನ್‌ ನಿರ್ವಹಿಸುತ್ತಿದ್ದವರೇ ಹೇಳಿದರು. ಸುಟ್ಟು ಏಳುವ ಗುಳ್ಳೆಗಳಂತೆ. ಅವು ಒಡೆದು ಹೋಗಲು ಶುರುವಾಯಿತು. ಆಗ ಅಸಾಧ್ಯ ನೋವೆನಿಸಿತು. ಈಗಲೂ ಶ್ರೀಕೃಷ್ಣನ ಮಾತನ್ನೇ ನೆನಪಿಸಿಕೊಂಡೆ–‘ಈ ಸಮಯ ಶಾಶ್ವತವಲ್ಲ’. ಅಂತೂ–ಇಂತೂ ಜುಲೈ 22ರಂದು ರೆಡಿಯೇಷನ್‌ ಯಶಸ್ವಿಯಾಗಿ ಮುಗಿಸಿದೆ.

ಜುಲೈ 24ರಂದು ರೆಡಿಯಾಲಜಿಸ್ಟ್‌ ಡಾ.ಸಂಜಯ ಮಿಶ್ರಾ ಅವರನ್ನು ಭೇಟಿ ಮಾಡಿದೆ. ಮತ್ತೆ ಒಂದು ತಿಂಗಳಿಗಾಗುವಷ್ಟು ಗುಳಿಗೆಗಳನ್ನು ಬರೆದುಕೊಟ್ಟರು. ರೆಡಿಯೇಷನ್‌ ಮುಗಿತಲ್ಲ; ಮತ್ಯಾಕೆ ಡಾಕ್ಟರ್‌ ಎಂದೆ. ಈ ಗುಳಿಗೆಗಳನ್ನು ತಿಂದರೆ ಮೂಲವ್ಯಾಧಿ ಶುರುವಾಗುತ್ತೆ ಅಂದೆ. ಅದಕ್ಕವರು, ಮೂಲವ್ಯಾಧಿಗೆ ಮತ್ತೆರಡು ಗುಳಿಗೆ ಬರೆದುಕೊಟ್ಟರು. ಅಯ್ಯೋ ದೇವ್ರೆ ಅಂದಿತು ಮನಸ್ಸು. ತಿನ್ನದೆ ಗತ್ಯಂತರವಿಲ್ಲ. ಗುಳಿಗೆಗಳನ್ನು ತಿಂದ ಪರಿಣಾಮ ದೇಹದಲ್ಲಿ ಉಷ್ಣತೆ ಏರಿ ಮೂಲವ್ಯಾಧಿಗೆ ದಾರಿ ಮಾಡಿಕೊಟ್ಟಿತ್ತು. ಎಷ್ಟೆಂದರೆ ನನಗೆ ಕೂರಲು ಬಿಡದಷ್ಟು ಕಾಡಿತು. ಆದರೂ ಒಂದಷ್ಟು ಗುಳಿಗೆಗಳನ್ನು ತಿಂದೆ. ಒಮ್ಮೆಮ್ಮೆ ಮೂಲವ್ಯಾಧಿ ನೋವು ಕಿಮೊ ಯಾತನೆಯನ್ನೂ ಮೀರಿಸುವಷ್ಟಿತ್ತು. ರೆಡಿಯೇಷನ್‌ ಮುಗಿದ ಮೇಲೆ ತಿಂಗಳಿಗೊಮ್ಮೆ ನಿಯಮಿತ ಚೆಕ್‌ಅಪ್‌ ಮಾಡಿಸಿಕೊಳ್ಳಬೇಕು ಎಂದು ಡಾ. ಮಿಶ್ರಾ ಸಲಹೆ ನೀಡಿದರು.

(ಮುಂದಿನ ವಾರ: ಕ್ಯಾನ್ಸರ್‌ ನನ್ನ ಬಿಟ್ಟೋಡಿತ್ತು....)

PV Web Exclusive| ಕೈ ಹಿಡಿದಳು ಗಾಯತ್ರಿ 1| ಮಡುಗಟ್ಟಿದ ದುಗುಡಭಾವ

PV Web Exclusive| ಕೈ ಹಿಡಿದಳು ಗಾಯತ್ರಿ 2| ಮೆಮೊಗ್ರಾಂ, ಸ್ಕ್ಯಾನಿಂಗ್‌ ಪುರಾಣ ಏನ್‌ ಕೇಳ್ತಿರಿ...

PV Web Exclusive| ಕೈ ಹಿಡಿದಳು ಗಾಯತ್ರಿ 3| ಯಾರ‍್ರೀ ‍ಪೇಷಂಟ್‌; ಎಲದಾರ್‍ರೀ...

PV Web Exclusive| ಕೈ ಹಿಡಿದಳು ಗಾಯತ್ರಿ 4|  ಕೈ ಹಿಡಿದಳು ಗಾಯತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ 5| ಪೆಟ್ (PET) ಸ್ಕ್ಯಾನ್‌ನ ವಿಭಿನ್ನ ಅನುಭವ

PV Web Exclusive| ಕೈ ಹಿಡಿದಳು ಗಾಯತ್ರಿ 7| ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

PV Web Exclusive| ಕೈ ಹಿಡಿದಳು ಗಾಯತ್ರಿ 8| ಕೇಶ ರಾಶಿಯ ನಾಮಾವಶೇಷ

PV Web Exclusiveಕೈ ಹಿಡಿದಳು ಗಾಯತ್ರಿ 9 | ಕ್ಯಾನ್ಸರ್ ಜೊತೆಗೊಂದು ಪಯಣ 9: ಸಾಥ್‌ ನೀಡಿದ ಸೋಷಿಯಲ್‌ ಮೀಡಿಯಾ

PV Web Exclusive| ಕೈ ಹಿಡಿದಳು ಗಾಯತ್ರಿ 10| ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ 

PV Web Exclusive| ಕೈ ಹಿಡಿದಳು ಗಾಯತ್ರಿ 11| ನರಗಳ ಹಾದಿಯಲ್ಲಿ ಸುಡುವ ಕಿಮೊ

PV Web Exclusive| ಕೈ ಹಿಡಿದಳು ಗಾಯತ್ರಿ 12| ಕಿಮೊ ಕಾಂಡದ ಅಂತಿಮ ಅಧ್ಯಾಯ

PV Web Exclusive| ಕೈ ಹಿಡಿದಳು ಗಾಯತ್ರಿ 13| ಐಸಿಯುನಲ್ಲಿ ಕಳೆದ ಘೋರ ರಾತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ 14| ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್‌ಗಳು!

PV Web Exclusive| ಕೈ ಹಿಡಿದಳು ಗಾಯತ್ರಿ 15| ಕ್ಯಾನ್ಸರ್‌ ಜೊತೆಗೆ ಆತ್ಮವಿಶ್ವಾಸದ ನಡೆ

PV Web Exclusive| ಕೈ ಹಿಡಿದಳು ಗಾಯತ್ರಿ 16| ರೆಡಿಯೇಷನ್‌ ರೂಮೊಳಗೆ ಪುಂಗಿನಾದ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು