ಶುಕ್ರವಾರ, ಜುಲೈ 23, 2021
20 °C

PV Web Exclusive | ಗರ್ಭಧಾರಣೆಯ ಸಮಸ್ಯೆಗಳು: ಇದಕ್ಕೂ ಇದೆ ಹೆಲ್ಪ್‌ಲೈನ್‌

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ತಮಗೆ ಗರ್ಭಪಾತವಾಗಿದೆ, ಈಗ ಏನು ಮಾಡಬೇಕು ಎಂದು ‘ಪ್ರೆಗ್ನೆನ್ಸಿ ಹೆಲ್ಪ್‌ಲೈನ್‌’ (04446314300)ಗೆ ಕರೆ ಮಾಡಿ ವಿಚಾರಿಸಿದರು. ಅವರು ಇರುವ ಪ್ರದೇಶದಲ್ಲಿ ವೈದ್ಯರೇ ಇರಲಿಲ್ಲ. ಆಗ ಹೆಲ್ಪ್‌ಲೈನ್‌ನಲ್ಲಿರುವ ವೈದ್ಯರ ತಂಡ ಅವರಿಗೆ ವೈದ್ಯಕೀಯ ಆರೈಕೆ ಒದಗಿಸಿತು. ಧೈರ್ಯ ತುಂಬಿತು. ಅಬಾರ್ಷನ್‌ ಆದ ನಂತರ ಎನಾಗುತ್ತದೆ? ಮತ್ತೆ ಗರ್ಭ ಧರಿಸಬಹುದೋ ಇಲ್ಲವೋ ಎಂಬ ಬಗ್ಗೆಯೂ ಅವರಿಗೆ ಮಾಹಿತಿ ನೀಡಿತು.

ಒಮ್ಮೆ 5 ತಿಂಗಳ ಗರ್ಭಿಣಿಯೊಬ್ಬರು ‘ಪ್ರೆಗ್ನೆನ್ಸಿ ಹೆಲ್ಪ್‌ಲೈನ್‌’ಗೆ ಕರೆ ಮಾಡಿದ್ದರು. ಕೌಟುಂಬಿಕ ಕಲಹಗಳಿಂದ ಬೇಸತ್ತು ತಾವು ಭ್ರೂಣವನ್ನು ತೆಗೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ಹೆಲ್ಪ್‌ಲೈನ್‌ ಅವರಿಗೆ ಕೌನ್ಸೆಲಿಂಗ್‌ ನಡೆಸಿತು. ಅಬಾರ್ಷನ್‌ ಹಾಗೂ ಅದರ ಪರಿಣಾಮಗಳ ಬಗ್ಗೆ ಹೆಲ್ಪ್‌ಲೈನ್‌ ಪೂರ್ಣ ಮಾಹಿತಿ ನೀಡಿದ ನಂತರ ಅವರಿಗೆ ತಾವು ಮಾಡುತ್ತಿರುವ ತಪ್ಪಿನ ಬಗ್ಗೆ ಅರಿವಾಯಿತು. ನಂತರ ಅವರು ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದರು.

ಹೀಗೆಯೇ ಜನರಲ್ಲಿ ಗರ್ಭ ಧಾರಣೆಯ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಇಂತಹ ಹಲವು ಕರೆಗಳು ‘ಪ್ರೆಗ್ನೆನ್ಸಿ ಹೆಲ್ಪ್‌ಲೈನ್‌’ಗೆ ದಿನವೂ ಬರುತ್ತಿರುತ್ತವೆ. ಈಗಾಗಲೇ ಹಲವು ತುರ್ತು ಸಂದರ್ಭಗಳಿಗೆ ಸ್ಪಂದಿಸಲು ಹೆಲ್ಪ್‌ಲೈನ್‌ಗಳು ಕೆಲಸ ಮಾಡುತ್ತಿವೆ. ತಾಯಿಯಾಗುವ ಮಹಿಳೆಗೆ ಎಲ್ಲ ಮಾಹಿತಿ, ಮಾರ್ಗದರ್ಶನ ನೀಡಲು ಹಾಗೂ ಗರ್ಭ ಧಾರಣೆಯ ಬಗ್ಗೆ ಇರುವ ಅಜ್ಞಾನ ನಿವಾರಿಸಲು ಇರುವ ಕೆಲವೇ ಹೆಲ್ಪ್‌ಲೈನ್‌ಗಳಲ್ಲಿ ಇದೂ ಒಂದಾಗಿದೆ ಎಂದು ಪ್ರೆಗ್ನೆನ್ಸಿ ಹೆಲ್ಪ್‌ಲೈನ್‌ನ ಸಂಯೋಜಕಿ ವಸಂತಾ ಪೀಟರ್‌ ತಿಳಿಸಿದರು.

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಗರ್ಭಧಾರಣೆಯ ಬಗ್ಗೆ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇನ್ನೂ ಮೂಡಿಲ್ಲ. ಹೆರಿಗೆಗೆ ಅಗತ್ಯ ಸೌಲಭ್ಯಗಳು, ಮಾರ್ಗದರ್ಶನಗಳಲ್ಲಿ ಇನ್ನೂ ಕೊರತೆ ಕಾಣುತ್ತದೆ. ತಾಯಿಯಾಗುವ ಎಲ್ಲ ಮಹಿಳೆಗೂ ಎಲ್ಲ ಸೌಲಭ್ಯ, ಸಂತೋಷ, ಮಾರ್ಗದರ್ಶನ ಲಭಿಸುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಾಗಲಿ ಅಥವಾ ಗರ್ಭ ಧಾರಣೆಯ ಬಗ್ಗೆ ಅಜ್ಞಾನವಿರುವ ಕಡೆ ಮಾರ್ಗದರ್ಶನ, ಮಾಹಿತಿ ನೀಡುವುದಕ್ಕಾಗಿ ‘ಲೈಫ್‌ ಫಾರ್‌ ಆಲ್‌’ ಸಂಸ್ಥೆಯು 2021 ಜನವರಿ 24ರಂದು ಕೊಯಮತ್ತೂರಿನಲ್ಲಿ ‘ಪ್ರೆಗ್ನೆನ್ಸಿ ಹೆಲ್ಪ್‌ಲೈನ್‌’ ಆರಂಭಿಸಿದೆ.

ಇದು ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 12ರವರೆಗೂ ಕೆಲಸ ಮಾಡುತ್ತದೆ. ಗರ್ಭಧಾರಣೆಯ ಬಗ್ಗೆ ಸಮಸ್ಯೆ ಎದುರಿಸುವ ಪ್ರತಿಯೊಬ್ಬರಿಗೂ ಇದು ಮಾಹಿತಿ ನೀಡುತ್ತದೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತದೆ. ಗಂಭೀರ ಪರಿಸ್ಥಿತಿಯಿದ್ದರೆ ಸ್ಥಳೀಯವಾಗಿ ದೊರೆಯುವ ವೈದ್ಯರ ಸಂಪರ್ಕ ಕಲ್ಪಿಸುತ್ತದೆ. ಮೊದಲೇ ಯೋಜನೆ ಮಾಡದ ಆಕಸ್ಮಿಕ ಗರ್ಭಧಾರಣೆ, ಗರ್ಭ ಧರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಅಬಾರ್ಷನ್‌, ಹೆರಿಗೆಯ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು, ಆರೈಕೆ ವಿಧಾನ... ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ.

‘ಯೋಜನಾಬದ್ಧವಲ್ಲದ ಗರ್ಭಧಾರಣೆಯಾದಾಗ ಮಹಿಳೆಗೆ ಹಾಗೂ ಅವರ ಕುಟುಂದವರಿಗೆ ಸಮಾಲೋಚನೆ ಏರ್ಪಡಿಸಲಾಗುತ್ತದೆ. ಗರ್ಭಧಾರಣೆಯ ಬಗ್ಗೆ ಇರುವ ಸಂಶಯಗಳು ಹಾಗೂ ಹೆದರಿಕೆಯನ್ನು ಹೋಗಲಾಡಿಸಿ ಧೈರ್ಯ ತುಂಬಲಾಗುತ್ತದೆ. ಯಾವ ರೀತಿಯ ಸವಾಲುಗಳು ಎದುರಾಗಬಹುದು? ಅವುಗಳನ್ನು ಹೇಗೆ ಎದುರಿಸುವುದು? ಅಬಾರ್ಷನ್‌ ಆದರೆ ಆಗುವ ಪರಿಣಾಮಗಳೇನು? –ಇವುಗಳ ಬಗ್ಗೆ ತಿಳಿಸಿಕೊಡುತ್ತಾರೆ. ಹೆಲ್ಪ್‌ಲೈನ್‌ಗೆ ಸಂಪರ್ಕಿಸಿದವರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿ ಉತ್ತರಿಸುವ ಕೌನ್ಸೆಲರ್‌ಗಳು ಇದ್ದಾರೆ. ನಿರ್ಧಾರಗಳನ್ನು ಹೇರುವುದಿಲ್ಲ’ ಎಂದು ವಸಂತಾ ಪೀಟರ್‌ ತಿಳಿಸಿದರು.

‘ಈ ಹೆಲ್ಪ್‌ಲೈನ್‌ ಆರಂಭವಾಗಿ 6 ತಿಂಗಳು ಕಳೆದಿವೆ. ಋತುಚಕ್ರ, ಗರ್ಭಧಾರಣೆ, ಗರ್ಭಪಾತ, ಅಬಾರ್ಷನ್‌, ಭ್ರೂಣದ ಬೆಳವಣಿಗೆ, ಪೋಷಕತ್ವ ಹಾಗೂ ದತ್ತು ಪ್ರಕ್ರಿಯೆ ಬಗ್ಗೆ ದೇಶದಾದ್ಯಂತದಿಂದ ಹಲವು ಪ್ರಶ್ನೆಗಳು ಬಂದಿವೆ. ಮಹಿಳೆಯರಷ್ಟೇ ಅಲ್ಲ ಪುರುಷರೂ ತಮ್ಮ ಪತ್ನಿಯ ಗರ್ಭ ಧಾರಣೆಯ ಬಗ್ಗೆ ದೂರವಾಣಿ ಮೂಲಕ ಪ್ರಶ್ನಿಸಿದ್ದಾರೆ. 2ನೇ ಗರ್ಭ ಧಾರಣೆ, ಮಕ್ಕಳಾಗದವರಿಗೆ ಚಿಕಿತ್ಸೆಯ ಬಗ್ಗೆ ಮಾಹಿತಿಗಳ ಬಗ್ಗೆಯೂ ಹೆಲ್ಪ್‌ಲೈನ್‌ ಮಾಹಿತಿ ನೀಡುತ್ತಿದೆ’ ಎಂದು ಅವರು ತಿಳಿಸಿದರು.

‘ಕಳೆದ ದಶಕದಲ್ಲಿ ಯೋಜಿತವಲ್ಲದ ಗರ್ಭಧಾರಣೆ ಹಾಗೂ ಗರ್ಭಪಾತಗಳ ಸಂಖ್ಯೆ ಹೆಚ್ಚಾಗಿದೆ. ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿ ನೋವು ಅನುಭವಿಸುವವರು ಮಹಿಳೆಯರು. ಯಾರದ್ದೋ ತಪ್ಪಿಗೆ ಬಲಿಪಶುವಾಗುವ ಇಂಥ ಮಹಿಳೆಯರ ಮಾನಸಿಕ ಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಆಗ ಅವರಿಗೆ ಕೌಟುಂಬಿಕ ಬೆಂಬಲವೂ ತೀರಾ ಅಗತ್ಯವಾಗಿರುತ್ತದೆ’ ಎಂದು ವಸಂತಾ ವಿವರಿಸಿದರು.

ಕೋವಿಡ್ ಬಗ್ಗೆಯೂ ಹಲವು ಪ್ರಶ್ನೆಗಳು ಹೆಲ್ಪ್‌ಲೈನ್‌ಗೆ ಬಂದಿದ್ದವು. ಲಸಿಕೆ ತೆಗೆದುಕೊಳ್ಳಬಹುದೇ, ಕೋವಿಡ್‌ ಇರುವಾಗ ಗರ್ಭಿಣಿಯರ ಆರೋಗ್ಯ ರಕ್ಷಣೆ ಹೇಗೆ, ಗರ್ಭ ಧಾರಣೆಯಾದಾಗ ಕೋವಿಡ್‌ ಬಂದರೆ ಏನು ಮಾಡುವುದು... ಇಂಥ ಪ್ರಶ್ನೆಗಳಿಗೆ ಉತ್ತರಿಸಿ ಹೆಲ್ಪ್‌ಲೈನ್‌ ಅವರಿಗೆ ನಿರಾತಂಕವಾಗಿರಲು ಸಹಾಯ ಮಾಡಿದೆ.

ಗರ್ಭವತಿಯಾದವರಿಗೆ ಮಾನಸಿಕವಾಗಿ ಹೆಚ್ಚಿನ ಬೆಂಬಲ ತುಂಬಾ ಅಗತ್ಯ. ಈಗ ಮಾಹಿತಿ ಎನ್ನುವುದು ಕಂಪ್ಯೂಟರ್‌ಗಳಲ್ಲಿ ಕೈಬೆರಳ ತುದಿಯಲ್ಲೇ ಇದೆ. ಆದರೆ ಇವೇ ಅಂತಿಮವಾಗಲಾರವು. ಮಾನವ ಹೃದಯ ಯಾವಾಗಲೂ ಇನ್ನೊಂದು ಜೀವ ತನಗೆ ಸ್ಪಂದಿಸುವುದನ್ನು, ಬೆಂಬಲ ನೀಡುವುದನ್ನು, ಅರ್ಥ ಮಾಡಿಕೊಳ್ಳುವುದನ್ನು ಇಚ್ಛಿಸುತ್ತದೆ. ತನ್ನ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗಲೇ ಅದಕ್ಕೆ ಸಮಾಧಾನ. ಹೀಗಾಗಿ ಹೆಲ್ಪ್‌ಲೈನ್‌ ಎನ್ನುವುದು ಹಲವರ ಪಾಲಿಗೆ ಲೈಫ್‌ಲೈನ್ ರೀತಿ ಆಗಬಹುದು. ಹೀಗಾಗಿ ಯಾರಾದರೂ ಸಂಬಂಧಿಕರಿರಾಗಲಿ, ಸ್ನೇಹಿತರಿಗಾಗಲಿ ಈ ಬಗ್ಗೆ ಮಾಹಿತಿಯ ಅವಶ್ಯಕತೆಯಿದ್ದರೆ 04446314300ಗೆ ಕರೆ ಮಾಡಿ ಮಾಹಿತಿ, ಮಾರ್ಗದರ್ಶನ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು