ಭಾನುವಾರ, ಅಕ್ಟೋಬರ್ 25, 2020
25 °C

PV Web Exclusive: ಬೆಳಗಾಗ ನಾನೆದ್ದು ಏನನ್ನು ಕುಡಿಯಲಿ?

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಡಯೆಟ್‌ ಮಾಡಿ ತೂಕ ಇಳಿಸಿ, ಆರೋಗ್ಯಕರ ಶರೀರ ಹೊಂದುವ ಆಸೆ ಬಹುತೇಕರಲ್ಲಿ ಮೊಳೆಕೆಯೊಡೆದಿದ್ದು ಬಹುಶಃ 80ರ ದಶಕದ ಕೊನೆಯಲ್ಲಿ. ಆಗ ಜನಪ್ರಿಯವಾಗಿದ್ದು ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪ, ಮತ್ತೆ ಅರ್ಧ ಹೋಳು ನಿಂಬೆರಸ ಸೇರಿಸಿ ಕುಡಿಯುವುದು. ಸಭೆ– ಸಮಾರಂಭಗಳಲ್ಲಿ, ನೆಂಟರು ಒಂದೆಡೆ ಸೇರಿದಾಗ ಇದೇ ಮಾತು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ– ಕಾಫಿ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಮಾತುಗಳೂ ಆಗಲೇ ಹರಿದಾಡತೊಡಗಿದ್ದು. ಎಷ್ಟು ಮಂದಿ ಈ ಹಾನಿಕರ ಎಂಬ ಅಭ್ಯಾಸ ಬಿಟ್ಟರೋ ಗೊತ್ತಿಲ್ಲ, ಆದರೆ ಜನರಲ್ಲಿ ಶುಭ ಮುಂಜಾವಿನಲ್ಲಿ ಏನು ಕುಡಿಯಬೇಕು ಎಂಬ ಜಿಜ್ಞಾಸೆ ಮಥಿಸಲಾರಂಭವಾಗಿದ್ದಂತೂ ನಿಜ.

ಸದ್ಯಕ್ಕಂತೂ ಕೊರೊನಾ ಕುರಿತ ಮಾತು ಎಲ್ಲರನ್ನು ಆವರಿಸಿರುವಂತೆಯೇ, ಅಮೃತಬಳ್ಳಿ, ನೆಲ ನೆಲ್ಲಿ ಪುಡಿ ನೀರಿಗೆ ಸೇರಿಸಿ ಕುದಿಸಿದ ಕಷಾಯ ಕುಡಿಯುವುದು ಕೂಡ ಮುಂಜಾವಿನ ಅಭ್ಯಾಸಕ್ಕೆ ಸೇರಿಕೊಂಡಿದೆ. ಬೆಳಿಗ್ಗೆ ನಿದ್ರೆ ತಿಳಿದೆದ್ದು ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಏನನ್ನಾದರೂ ಕುಡಿಯಬೇಕು. ಆದರೆ ಏನನ್ನು ಕುಡಿಯುವುದು ಒಳಿತು? ಉಗುರು ಬೆಚ್ಚಗಿನ ನೀರು ಅಥವಾ ಬಿಸಿ ಬಿಸಿ ಗಿಡಮೂಲಿಕೆ ಕಷಾಯ ಅಥವಾ ಬಿಸಿ ಗ್ರೀನ್‌ ಟೀ ಅಥವಾ ಹೊಗೆಯಾಡುವ ಸ್ವಾದಭರಿತ ಕಾಫಿ.. ಯಾವುದನ್ನು ಕುಡಿಯಬೇಕು ಎಂಬ ಗೊಂದಲ ಸಹಜವೇ.

ರಾತ್ರಿ 8–9 ತಾಸು ನಿದ್ರೆ ಮಾಡಿ ಎದ್ದ ನಂತರ ದೇಹಕ್ಕೆ ನೀರಿನ ಅವಶ್ಯಕತೆ ಇರಬಹುದು, ಹಾಗಾಗಿ ನೀರನ್ನು ಕುಡಿಯಬೇಕು ಎಂಬ ನಂಬಿಕೆ ಸಹಜ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಬಾಯಾರಿಕೆ ಎನ್ನುವವರು ಕಡಿಮೆ. ಆದರೂ ಕೂಡ ಒಂದು ಲೋಟ ನೀರು, ತಣ್ಣೀರಿರಲಿ ಅಥವಾ ಉಗುರು ಬೆಚ್ಚಗಿನ ನೀರಿರಲಿ, ಕುಡಿದರೆ ದೇಹಕ್ಕೆ ದ್ರವ ಸೇರಿದಂತಾಗುತ್ತದೆ. ಜೊತೆಗೆ ಆರೋಗ್ಯಕರ ಅಭ್ಯಾಸ ಕೂಡ.

‘ರಾತ್ರಿ ಊಟದ ನಂತರ 10–12 ತಾಸು ಖಾಲಿ ಹೊಟ್ಟೆಯಲ್ಲಿರುವಾಗ ದೇಹವನ್ನು ಶುದ್ಧೀಕರಿಸಲು ಅರ್ಧ ಲೀಟರ್‌ ನೀರೇ ಬೇಕು ಎನ್ನುವವರು ಕುಡಿಯಬಹುದು. ಆದರೆ ಯಾವುದೇ ಕಾರಣಕ್ಕೂ ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಮಾತ್ರ ಸೇರಿಸಬೇಡಿ, ಅಸಿಡಿಟಿ ಇಲ್ಲದವರು ನೀರಿಗೆ ಲಿಂಬೆ ರಸ ಮತ್ತು ಚಿಟಿಕೆ ಉಪ್ಪು ಬೆರೆಸಿ ಕುಡಿಯಬಹುದು’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ. ಸರಸ್ವತಿ ಭಟ್‌.

ಗ್ರೀನ್‌ ಟೀ

ಆದರೆ ಕೆಲವರು ಎದ್ದ ಕೂಡಲೇ ಗ್ರೀನ್‌ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ಗ್ರೀನ್‌ ಟೀಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಸಾಕಷ್ಟು ಮಾಹಿತಿಗಳೂ ಲಭ್ಯ. ಹಾಗೇ ವಿವಿಧ ಬ್ರ್ಯಾಂಡ್‌ಗಳ ಗ್ರೀನ್‌ ಟೀ ಕೂಡ ಮಾರುಕಟ್ಟೆಯಲ್ಲಿ ದಾಂಗುಡಿಯಿಟ್ಟಿದೆ. ನೀರು ಕುದಿಸಿ ಅದಕ್ಕೆ ಅಗತ್ಯವಿರುವಷ್ಟು, ಸಾಮಾನ್ಯವಾಗಿ ಒಂದು ಲೋಟ ನೀರಿಗೆ ಒಂದು ಚಮಚ ಹಸಿರು ಚಹದ ಪುಡಿ ಹಾಕಿ ಪಾತ್ರೆ ಮುಚ್ಚಿ ಗ್ಯಾಸ್‌ ಬಂದ್‌ ಮಾಡಿ. 10 ನಿಮಿಷ ಬಿಟ್ಟು ಅದನ್ನು ಸೋಸಿ ಸಕ್ಕರೆ ಹಾಕದೆ ಹೌದು, ಹಾಲಿಲ್ಲದೇ ಹಾಗೆಯೇ ಗುಟುಕರಿಸಿದರೆ ಕೆಲವರಿಗೆ ಮುಂಜಾವು ತಾಜಾತನದ ಉಲ್ಲಾಸವನ್ನು ಕೊಡುತ್ತದಂತೆ. ಆದರೆ ಹುಷಾರ್‌, ಅಸಿಡಿಟಿ ಇದ್ದವರು ಕೊಂಚ ನೋಡಿಕೊಂಡು ಕುಡಿಯುವುದು ಲೇಸು. ಈ ಗ್ರೀನ್‌ ಟೀ ಖಾಲಿ ಹೊಟ್ಟೆಯಲ್ಲಿ ಪಿತ್ತ ಕೆರಳಿಸಿ ವಾಕರಿಕೆಯನ್ನು ಉಂಟು ಮಾಡಬಹುದು.

ಕೆಲವರು ಕಾಫಿ ಅಥವಾ ಹಣ್ಣಿನ ರಸದ ಮೊರೆ ಹೋಗುವುದಿದೆ. ಕಾಫಿಯಲ್ಲಿರುವ ಕೆಫಿನ್‌ ದಿನದ ಆರಂಭಕ್ಕೇ ಹೊಟ್ಟೆ ಸೇರುವುದು ಅಷ್ಟು ಹಿತವಲ್ಲ ಎನ್ನುತ್ತಾರೆ ಪೋಷಕಾಂಶ ತಜ್ಞರು. ಹಾಗಾದರೆ ಹಣ್ಣಿನ ರಸ? ಕಳೆದ ಕೆಲವು ವರ್ಷಗಳಿಂದ ರಸದಲ್ಲಿ ನಾರಿನಾಂಶ ಇಲ್ಲದಿದ್ದರೆ ಅದು ಅಷ್ಟು ಆರೋಗ್ಯಕರವಲ್ಲ, ಫ್ರಕ್ಟೋಸ್‌ ಸಕ್ಕರೆ ಅಂಶ ಮಾತ್ರ ದೇಹಕ್ಕೆ ಸೇರಿಸುತ್ತದೆ ಎಂದು ತಜ್ಞರು ಹೇಳುತ್ತಲೇ ಬಂದಿದ್ದಾರೆ. ಆದರೆ ಎಲ್ಲೋ ಅಪರೂಪಕ್ಕೆ ಸಿ ವಿಟಮಿನ್‌ಭರಿತಒಂದು ಲೋಟ ಕಿತ್ತಳೆ ಅಥವಾ ಮೋಸಂಬಿ ಅಥವಾ ಸೇಬಿನ ರಸ ಹಿತಕರ ಎನಿಸದಿರದು.

ಯಾವುದನ್ನೇ ಕುಡಿಯಿರಿ, ಆದರೆ ಬೆಳಿಗ್ಗೆ ಎದ್ದ ಕೂಡಲೇ ನೀವು ಮೊದಲು ಏನನ್ನು ಕುಡಿಯುತ್ತೀರೋ ಅದು ನಿಮ್ಮ ಉತ್ಸಾಹವನ್ನು ದಿನವಿಡೀ ಹಿಡಿದಿಟ್ಟುಕೊಳ್ಳುವಂತಿರಬೇಕು. ಹಾಗಂತ ಎನರ್ಜಿ ಡ್ರಿಂಕ್‌ ಅಥವಾ ಸೋಡಾ ಅಥವಾ ಕೋಲ್ಡ್‌ ಡ್ರಿಂಕ್ಸ್‌ ಯಾವುದೇ ಕಾರಣಕ್ಕೂ ಹಿತಕರವಲ್ಲ ಎಂದು ಎಚ್ಚರಿಸುತ್ತಾರೆ ತಜ್ಞರು. ಇದರಲ್ಲಿರುವ ಅತಿಯಾದ ಸಕ್ಕರೆ ಸೇವನೆ ಕೆಲವು ಕ್ಷಣಗಳ ಕಾಲ ನಿಮಗೆ ಉಲ್ಲಾಸ ನೀಡಬಹುದು. ಆದರೆ ಅದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಅದರ ಬದಲು ನೀರು, ಕಂದು ಸಕ್ಕರೆ ಅಥವಾ ಬೆಲ್ಲ ಸೇರಿಸಿದ ಕಾಫಿ, ಕಷಾಯ ಸೇವಿಸಬಹುದು.

ಈಗಂತೂ ಮೆಂತ್ಯ– ಜೀರಿಗೆ– ಕೊತ್ತಂಬರಿ ಹಾಕಿ ಕುದಿಸಿದ ಕಷಾಯ ಅಥವಾ ಕೊರೊನಾ ಶತ್ರು ಅಮೃತಬಳ್ಳಿ– ನೆಲ ನೆಲ್ಲಿ ಕಷಾಯವೇ ಬಹುತೇಕರ ಮನೆಯಲ್ಲಿ ಸುವಾಸನೆ ಮುಂಜಾನೆಗೆ ಶುಭ ಕೋರಬಹುದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು