ಮಂಗಳವಾರ, ಜನವರಿ 26, 2021
16 °C
ಕೈ ಹಿಡಿದಳು ಗಾಯತ್ರಿ –10(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)

PV Web Exclusive| ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಮನದಲ್ಲಿ ಕ್ಯಾನ್ಸರ್‌ ಬಗ್ಗೆ ಯೋಚನೆ, ಚಿಂತೆಯನ್ನು ದೂರವಿಟ್ಟರೆ, ನನಗೆ ಕ್ಯಾನ್ಸರ್‌ ಇಲ್ಲ ಎಂಬ ಧೋರಣೆ ತಾಳಿದರೆ ಖಂಡಿತವಾಗಿ ಅರ್ಧವೇನು; ಮುಕ್ಕಾಲು ಭಾಗ ಕಾಯಿಲೆಯನ್ನು ಗೆದ್ದಂತೆ. ಆದರೆ, ಯೋಚನೆಯಿಂದ ಹೊರಗುಳಿಯುವುದು ಅಷ್ಟು ಸುಲಭವಲ್ಲ. ಹೆಚ್ಚು ಹೊತ್ತು ಪುಸ್ತಕ ಓದಿದರೂ ನಿದ್ದೆ ಆವರಿಸಿದಂತಾಗುತ್ತಿಲ್ಲ. ಅಂಥ ಸಮಯದಲ್ಲಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳು ಹೇಗೆ ನನ್ನ ನಿತ್ಯದ ಸಂಗಾತಿಗಳೆನಿಸಿದವು ಎಂಬುದನ್ನು ಹಿಂದಿನ ವಾರ ಓದಿದ್ದೀರಿ.

****

ಜನವರಿ 12ರ ರಾತ್ರಿ. ಬೆಳಿಗ್ಗೆ ಬೇಗ ಏಳಬೇಕೆಂಬ ಇರಾದೆಯಲ್ಲಿ ಬೇಗ ಮಲಗಲು ಹೋದರೂ ಸುಮಾರು ಹೊತ್ತು ನಿದ್ದೆ ಹತ್ತಿರ ಸುಳಿಯಲಿಲ್ಲ. ಕಾರಣ ಮಾರನೇ ದಿನ ಅಂದರೆ ಜನವರಿ 13ರಂದು ಮೂರನೇ ಕಿಮೊ ಇಂಜೆಕ್ಷನ್‌ ಇತ್ತು. ಕ್ಯಾನ್ಸರ್‌ ಅನ್ನೋ ಭಯಕ್ಕಿಂತ ಕಿಮೊ ಅನ್ನೋದು ಭಯಾನಕ. ನನ್ನ ಸೂಕ್ಷ್ಮ ನರಗಳು ಮಾತ್ರ ಇಂಜೆಕ್ಷನ್‌ ಕೊಡಲು ಹಾಕುವ ಕ್ಯಾನುಲಾ ಚುಚ್ಚಿಸಿಕೊಳ್ಳುವುದನ್ನು ಇನ್ನಷ್ಟು ಭಯಂಕರವೆಂಬಂತೆ ಮಾಡಿದ್ದವು. ಕ್ಯಾನುಲಾ ಅಳವಡಿಸಲು ನರ ಹುಡುಕಿ ಚುಚ್ಚಿ, ಅಲ್ಲಿ ಸರಿಯಾಗಿಲ್ಲ ಎಂದು ಮತ್ತೆ ಬೇರೆ ನರ ಹುಡುಕಿ ಚುಚ್ಚಿ ಅಲ್ಲೂ ಆಗಿಲ್ಲ ಅಂದರೆ ಮತ್ತೊಂದು ಕಡೆ... ಹೀಗೆ ಕನಿಷ್ಠ ನಾಲ್ಕೈದು ಕಡೆ ಸಿಸ್ಟರ್ ಚುಚ್ಚಿ ಚುಚ್ಚಿ, ಇಂಜೆಕ್ಷನ್‌ ಪದ ಕಿವಿ ಮೇಲೆ ಬಿದ್ದರೆನೇ ಮೈ–ಮನ ಜುಂ ಗುಡುವಂತೆ ಮಾಡಿದ್ದರು. ಒಮ್ಮೊಮ್ಮೆ ಕ್ಯಾನುಲಾ ಹಾಕುವಾಗ ನಾಲ್ಕೈದು ಕಡೆ ಚುಚ್ಚುವ ಸಿಸ್ಟರ್‌ಗೆ ಮನುಷ್ಯತ್ವವೇ ಸತ್ತು ಹೋಗಿದ್ಯಾ ಅನ್ನೋವಷ್ಟು ಶೀತಲಕೋಪ ಆವರಿಸೋದು. ನಾಳೆ ಬೆಳಿಗ್ಗೆ ಅಂಥ ಒಂದು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರುಗೊಳ್ಳಬೇಕಲ್ಲ ಎನ್ನೋದೆ ತಲೆಯಲ್ಲಿ ಗಿರಕಿ ಹೊಡೆದು, ನಿದ್ದೆ ದೂರ ಓಡಿತ್ತು. ಆದರೂ ನಾಳೆ ಒಂದು ಮುಗಿದರೆ ಮೂರು ಕಿಮೊ ಇಂಜೆಕ್ಷನ್‌ ಮುಗಿದು ಹೋಗುತ್ತಲ್ಲ ಅನ್ನೋ ವಿಚಾರ ಮಾಡಿ ಮನಸ್ಸನ್ನು ಸಂತೈಸಿಕೊಂಡೆ. ನಿದ್ರಾದೇವಿಯೂ ಸಾಥ್‌ ಕೊಟ್ಟಳು.

ಜನವರಿ 13ರ ಬೆಳಕು ಹರಿಯಿತು. ಪ್ರತಿದಿನಕ್ಕಿಂತಲೂ ಒಂದು ತಾಸು ಮುಂಚೆ ಎದ್ದೆ. ಸ್ನಾನ ಮಾಡಿ, ಗಾಯತ್ರಿ ಮುದ್ರೆ, ಪ್ರಾಣಾಯಾಮ ಮುಗಿಸಿ, ತಿಂಡಿ ತಿಂದು ಆಸ್ಪತ್ರೆಗೆ ಹೊರಡೋ ಹೊತ್ತಿಗೆ 9.30 ಆಗಿತ್ತು. ಅಷ್ಟೊತ್ತಿಗಾಗಲೇ ಗಿರೀಶ ಹೋಗಿ ಟೋಕನ್‌ ತಂದಿದ್ದರು.

ಆಸ್ಪತ್ರೆಗೆ ಹೋಗಿ ನೋಡಿದರೆ ಜನವೋ ಜನ. ಒಂದು ಸಮಾಧಾನವೆಂದರೆ ರಾತ್ರಿ ನಾನು ಚಿಂತಿಸಿದಷ್ಟು ಗಂಭೀರವಾಗಿರಲಿಲ್ಲ. ಕ್ಯಾನೂಲಾ ಚುಚ್ಚುವಾಗ ಎರಡನೇ ಯತ್ನಕ್ಕೆ ನರ ಸಿಕ್ಕಿಬಿಟ್ಟಿತು. ಪ್ರತಿ ಬಾರಿಯಂತೆ ಕೊಠಡಿಯಲ್ಲಿ ಬೆಡ್‌ ಸಿಗಲಿಲ್ಲ. ಡೇ ಕೇರ್‌ ವಿಶಾಲವಾದ ಕೊಠಡಿ ಅದಾಗಲೇ ಭರ್ತಿಯಾಗಿತ್ತು. ನಾನು ಕುರ್ಚಿಗಾಗಿ ಸ್ವಲ್ಪ ಹೊತ್ತು ಕಾಯಬೇಕಾಯಿತು. ಮೂರನೇ ಕಿಮೊ ಹನಿಹನಿಯಾಗಿ ನನ್ನ ದೇಹ ಸೇರಿತು. ಮಾಮೂಲಿಯಂತೆ ಇಂಜೆಕ್ಷನ್‌ ಮುಗಿಯುವಲ್ಲಿಗೆ ಸಂಜೆ 6.30 ಆಗಿತ್ತು.

ಮಾರನೇ ದಿನ ಸಂಕ್ರಾಂತಿ ಹಬ್ಬ. ಅಮ್ಮ ಹಬ್ಬದ ಪಾಯಸ ಮಾಡಿದ್ದರು. ಸ್ವಲ್ಪ ತಿಂದೆ. ಜ.15ರಿಂದ ಶುರುವಾಯಿತು ನೋಡಿ ಕಿಮೊ ಇಫೆಕ್ಟ್‌; ಕಾಲು ನೋವು, ತುರಿಕೆ, ತುರಿಸಿಕೊಂಡ ನಂತರದ ಉರಿ, ಬಳಲಿಕೆ.. ಅಬ್ಬಾ... ಬದುಕೇ ಅಸಹನೀಯವೆನಿಸಿತು. ಜ.16, 17, 18, 19, 20ರವರೆಗೂ ಈ ಬದುಕು ಮುಂದುವರೆಯಿತು. ನನ್ನ ಶತ್ರುವಿಗೂ ಇಂಥ ವೇದನೆ, ಕಷ್ಟ ಬೇಡಪ್ಪಾ ಅಂತಾ ಮನಸ್ಸು ಬೇಡಿಕೊಂಡಿತು. ನಾನು ಯಾರ ಮನಸ್ಸಿಗೂ ನೋವುಂಟುಮಾಡಿದ ನೆನಪಿಲ್ಲ. ಆದರೂ ನನಗ್ಯಾಕೆ ಇಂಥ ನರಕಯಾತನೆ, ಯಾವ ಜನ್ಮದ ಪಾಪದ ಫಲವಿದೋ ಈ ಜನ್ಮದಲ್ಲಿ ಅನುಭವಿಸುತ್ತಿದ್ದೆನೆನೋ ಎಂದು ಮನ ನೊಂದುಕೊಂಡಿತು. ಕಿಮೊ ಇಂಜೆಕ್ಷನ್‌ ತಗೊಂಡ ಮೇಲೆ ಆರು ದಿನಗಳವರೆಗೆ ಈ ಯಾತನೆ ಅನುಭವಿಸದೇ ಅನ್ಯ ಮಾರ್ಗವಿರಲಿಲ್ಲ. ಬೇಸತ್ತ ಮನಸ್ಸು ನಿಧಾನವಾಗಿ ಖಿನ್ನತೆಗೆ ಜಾರುತ್ತಿತ್ತು. ನನ್ನ ಮೇಲೆ ನಾನೇ ನಿಯಂತ್ರಣ ತಪ್ಪುತ್ತಿದ್ದ ಭಾವ. ಕ್ಷಣಕ್ಷಣಕ್ಕೂ ನೆಗೆಟಿವ್‌ ಯೋಚನೆಗಳು. ಮಲಗಿದರೂ ನಿದ್ದೆ ಬಾರದು. ಖಿನ್ನತೆಗೆ ಹೋಗಲು ಬಿಡಬಾರದು ಎಂದು ಶತಾಯ ಗತಾಯ ಮನಸ್ಸನ್ನು ಎತ್ತಿ ಕಟ್ಟಿ ಹಾಕಲು ನಾನು ಪ್ರಯತ್ನಿಸುತ್ತಲೇ ಇದ್ದೆ. ಬಿಸಿಬಿಸಿ ನೀರಿನ ಸ್ನಾನ ಮಾಡಿದ ಮೇಲೆ ಸ್ವಲ್ಪ ಹಾಯ್‌ ಎನಿಸಿತು. ಜೊತೆಗೆ ಧ್ಯಾನ, ಗಾಯತ್ರಿ ಮುದ್ರೆ ಮಾಡಿದ ಮೇಲೆ ಜೀವಕ್ಕೊಂದಿಷ್ಟು ಸಮಾಧಾನ.

ಕಿಮೊ ಇಂಜೆಕ್ಷನ್‌ ಮೆದುಳು, ನರಗಳ ಮೇಲೆ ನೇರ ಪರಿಣಾಮ ಬಿರೋದ್ರಿಂದ ಅದು ದೇಹದ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನಸ್ಸನ್ನು ದುರ್ಬಲಗೊಳಿಸುತ್ತದೆ. ಅದರ ದುಷ್ಪರಿಣಾಮವೇ ದೇಹ ಮನಸ್ಸಿನ ಅಸ್ತವ್ಯಸ್ತ ಸ್ಥಿತಿ. ಕಿಮೊ ದೇಹದಲ್ಲಿನ ಕ್ಯಾನ್ಸರ್‌ ಕೋಶಗಳನ್ನು ಮಾತ್ರವಲ್ಲದೆ ಒಳ್ಳೆ ಕೋಶಗಳನ್ನೂ ಸಾಯಿಸುವುದರಿಂದ ದೇಹ ಬಳಲಿ, ಅಸಾಧ್ಯ ಯಾತನೆ ಅನುಭವಿಸುವುದು ಅನಿವಾರ್ಯ. ಜೀವವೇ ಬೇಡ ಎಂಬಷ್ಟರ ಮಟ್ಟಿಗೆ ಮನ ಬಯಸುತ್ತಿತ್ತು. ತೀರಾ ವಯಸ್ಸಾದವರಲ್ಲಿ ಇಂಥದ್ದೆ ಮನಃಸ್ಥಿತಿ ಇರುತ್ತದಂತೆ. ನನ್ನದಾದರೂ ತಾತ್ಕಾಲಿಕ. ಪಾಪ ತೀರಾ ವಯಸ್ಸಾದವರು ಜೀವನಪರ್ಯಂತ ಅನುಭವಿಸಬೇಕಲ್ಲ ಅಂದ್ಕೊಂಡೆ. ಶತಾಯುಷಿ ನನ್ನ ಅಜ್ಜ ನೆನಪಾದರು. ಅವರ ನಿತ್ಯದ ವರ್ತನೆ ನನಗೆ ಅದು ಹೌದೆನಿಸಿತು. ಅಂತೂ ಮೂರನೇ ಕಿಮೊ ಯಾತನೆ ಕೊನೆಗೊಂಡಿತು. ಮೈ ಮನ ಸಹಜ ಸ್ಥಿತಿಗೆ ಮರಳಿದ್ದವು. ಕ್ಯಾನ್ಸರ್‌ ಜೀವನದ ಪಾಠವನ್ನು ಕಲಿಸುತ್ತದೆ ಎಂಬುದು ಅಷ್ಟೊತ್ತಿಗಾಗಲೇ ನನಗೆ ಅರಿವಾಗಿತ್ತು.

ಜ.23ರಂದು ಶಿರಸಿಯಿಂದ ಶೈಲಕ್ಕಾ (ಶೈಲಜಾ ಗೋರ್ನಮನೆ) ಹಾಗೂ ಅವರ ಮನೆಯವರಾದ ಆರ್‌.ಪಿ. ಹೆಗಡೆಯವರು ಬಂದಿದ್ದರು. ನನ್ನ ನೋಡಿ ಮಾತಾಡಿದ ಮೇಲಷ್ಟೇ ಅವರಿಗೆ ಸಮಾಧಾನವೆನಿಸಿತು. ನನ್ನ ಧೈರ್ಯ ಕಂಡು ಅವರಿಗೂ ಖುಷಿಯಾಯ್ತು. ಅವರ ಮಾತುಗಳು ನನಗೆ ಮತ್ತಷ್ಟು ಬಲ ನೀಡಿದವು.

ಅವರು ಹೋದ ಮೇಲೆ ಮತ್ಯಾಕೋ ಮನಸ್ಸಿಗೆ ಬೇಸರ ಎನಿಸಿತು. ಫೇಸ್‌ಬುಕ್‌ಗೆ ನನ್ನ ಹೈಸ್ಕೂಲ್‌ ಬೀಳ್ಕೊಡುಗೆ ಸಮಾರಂಭದ ಫೋಟೊ ಅಪ್‌ಲೋಡ್‌ ಮಾಡಿದೆ. ಅದಾಗಲೇ ನನ್ನ ಎಫ್‌ಬಿಯಲ್ಲಿ ಫ್ರೆಂಡ್‌ ಆಗಿದ್ದ ಕ್ಲಾಸ್‌ಮೇಟ್‌ ಶಾಂತಕುಮಾರನಿಂದ ಕಾಮೆಂಟ್ಸ್‌ ಬಂತು– ‘ಫೋಟೊದಲ್ಲಿ ನಾನೆಲ್ಲಿದ್ದೇನೆ?’. ಅವನೆಲ್ಲಿದ್ದ ಅಂಥ ಅದನ್ನೂ ನಾನೇ ಹೇಳಬೇಕಾಯ್ತು. ನಾನು ಅವನಿಗೆ ಒಂದು ಸಲಹೆ ಕೊಟ್ಟೆ, ‘ಶಾಂತು, ನಮ್ಮ ಹೈಸ್ಕೂಲ್‌ಮೇಟ್ಸ್‌ ವಾಟ್ಸ್‌ಆ್ಯಪ್‌ ಗ್ರುಪ್‌ ಮಾಡೋಣ’ ಎಂದು. ಅದಕ್ಕೆ ಅವನು ‘ಒಳ್ಳೆ ಐಡಿಯಾ. ಎಲ್ಲ ಎಲ್ಲೆಲ್ಲಿದ್ವೆನಾ, ಸೇರಿಸಿದಂಗಾಗ್ತು. ಮಧು ನಂಬರ್‌ ಇದ್ದು’ ಎಂದವನೇ ವಾಟ್ಸ್ಆ್ಯಪ್‌ ಗ್ರೂಪ್‌ ಕ್ರಿಯೆಟ್‌ ಮಾಡಿ ಆಗೋಯ್ತು. ಒಬ್ಬೊಬ್ಬರನ್ನು ಹುಡುಕಿ ಹುಡುಕಿ ಗ್ರೂಪ್‌ಗೆ ಸೇರಿಸಿದ್ದೂ ಆಯ್ತು. 40ರಷ್ಟಿದ್ದವರಲ್ಲಿ 20ಜನ ಸಿಕ್ಕರು. ಉಳಿದವರು ಎಲ್ಲಿದ್ದಾರೋ ಹೇಗಿದ್ದಾರೋ?

ಅದೆಷ್ಟು ಬೇಗ 21 ದಿನಗಳು ಕಳೆದು ಹೋದವೋ ತಿಳಿಯದು. ನೋಡನೋಡುತ್ತಲೇ ನಾಲ್ಕನೇ ಕಿಮೊ ದಿನ ಬಂದೇ ಬಿಟ್ಟಿತು.

ಫೆಬ್ರುವರಿ 4ನೇ ತಾರೀಕು; ಎಂಟು ಕಿಮೊದಲ್ಲಿ ನಾಲ್ಕನೆಯದು. ಅಬ್ಬಾ ಇವತ್ತಿನ ದಿನ ಸಂಜೆಯೊಳಗೆ ನನ್ನ ಕಿಮೊ ಪಟ್ಟಿಯಲ್ಲಿ ಅರ್ಧ ಮುಗಿತದಲ್ಲ ಅನ್ನೋದು ಒಳಗೊಳಗೆ ಖುಷಿ. ಇನ್ನು 4 ಕಿಮೋ ಮುಗಿಸಿದ್ರೆ ಸಾಕಪ್ಪ ಅಂತ ಅಂದ್ಕೊಂಡು ಎಚ್‌ಸಿಜಿಗೆ ಬಂದೆ. ನೋಡಿದ್ರೆ ಬೆಳಿಗ್ಗೆ ಬೆಳಿಗ್ಗೆಯೇ ಫುಲ್‌ ರಶ್‌. ಕುತ್ಕೊಳ್ಳೊದಿರಲಿ; ನಿಲ್ಲಕ್ಕೂ ಜಾಗವಿಲ್ಲದಷ್ಟು... ಇದೇನಿದಪ್ಪಾ, ಕ್ಯಾನ್ಸರ್‌ ಪೇಷಂಟ್ಸ್‌ ಹೆಚ್ಚುತ್ತಲೇ ಇದ್ದಾರಲ್ಲ ಅಂತ ಮನಸ್ಸು ಅಚ್ಚರಿಗೊಂಡಿತು. ಅಷ್ಟೇ ಬೇಗ ವಿಷಾದವೆನಿಸಿತು. ಅಂತೂ ನನ್ನ ಪಾಳಿ ಬಂತು. ಚೆಕ್‌ ಮಾಡಿದ ಡಾಕ್ಟರ್‌, ಹಿಂದಿನ ಕಿಮೊ ನಂತರ ಟ್ಯೂಮರ್‌ ಸೈಜ್‌ 1 ಸೆಂ.ಮೀ.ನಷ್ಟು ಕುಗ್ಗಿದೆ ಅಂದ್ರು. ಖುಷಿಯಾಗದೇ ಇರತ್ತ.... ತೂಕ ಕೂಡ 1 ಕೆ.ಜಿ (67ಕೆ.ಜಿ) ಇಳಿದಿತ್ತು. ಆದರೂ ಯಾಕೋ ಅಲ್ಲಿದ್ದವರನ್ನೆಲ್ಲ ನೋಡಿದಾಗ ಮನಸ್ಸು ವಿಹ್ವಲಗೊಂಡಿತು. ಚಿಕ್ಕ ಚಿಕ್ಕ ವಯಸ್ಸಿನವರೂ ಕಿಮೊ ಇಂಜೆಕ್ಷನ್‌ ಏರಿಸಿಕೊಂಡು ಕುಂತಿದ್ರು. ನೋಡಿ ವೇದನೆಯೆನಿಸಿತು. ನಮ್ಮ ಹಣೆಬರಹ ಹಳಿಯಬೇಕೋ? ದೇವರನ್ನು ಬೈಯಬೇಕೋ... ತಿಳಿಯಲಿಲ್ಲ.

ಇಂಜೆಕ್ಷನ್‌ ತಗೊಂಡು ಬಂದ ರಾತ್ರಿಯಿಂದಲೇ ಬಾಯಿ ರುಚಿ ಇರಲಿಲ್ಲ. ಅಮ್ಮ ನೋಡಿದ್ರೆ ಊಟದ ತಟ್ಟೆ ಖಾಲಿ ಮಾಡಬೇಕು ಅಂತಾರೆ. ನನಗೋ ಸೇರ್ತಾನೆ ಇರ್ಲಿಲ್ಲ. ಮಾರನೇ ದಿನ ಕಾಲು ನೋವು, ಸುಸ್ತು, ಮೈಯೆಲ್ಲ ತುರಿಕೆಯೋ ತುರಿಕೆ. ಅಂತೂ ಐದಾರು ದಿನ ಹೀಗೆ ಒದ್ದಾಡಬೇಕಲ್ಲ. ಮನಸ್ಸು ಸಹಜವಾಗಿ ಕಸಿವಿಸಿಗೊಂಡಿತು. ಫೆ.9ರವರೆಗೂ ಇದೇ ಪರಿಸ್ಥಿತಿ. ಮಲಗಿದರೆ ನಿದ್ದೆ ಬಾರದು; ಮಲಗಲೂ ಆಗಲ್ಲ, ಕೂರಲೂ ಆಗಲ್ಲ; ಓಡಾಡೋಕೆ ಮೊದಲು ಆಗಲ್ಲ...ಇಂಥ ಹೈರಾಣ ಸ್ಥಿತಿಯಲ್ಲಿ ಮನಸ್ಸು ಮಕಾಡೆ ಮಲಗಿತ್ತು. ಬರೆಯಲು ಹೋದರೆ ಬರೆಯಲಾಗದಷ್ಟು ಅಸಹನೆ, ಅಕ್ಷರಗಳನ್ನೇ ಕುರೂಪಗೊಳಿಸುವಷ್ಟು ಧಿಮಾಕು ಕಿಮೊಗೆ ಅನ್ನಿಸಿತು. ಮನಸ್ಸು ಎಷ್ಟೊಂದು ಅಲ್ಲೋಲ ಕಲ್ಲೋಲ ಆಗಿರುತ್ತದೆ ಎಂಬುದನ್ನು ನಾ ಬರೆದಿದ್ದ ಅಕ್ಷರಗಳೇ ಹೇಳುತ್ತಿದ್ದವು. ಮನಸ್ಸು ಇನ್ನಿಲ್ಲವೆಂಬಷ್ಟು ಖಿನ್ನತೆಗೆ ಜಾರುತ್ತಿತ್ತು. ಏನೇ ಆಗಲಿ; ಇನ್ನು ಮೂರು ದಿನಗಳಷ್ಟೇ ಅಲ್ವಾ, ಈ ಅಸಹನೀಯ ಸಮಯ. ನಾನೇ ನಿನ್ನ ಬಗ್ಗುಬಡಿಯುತ್ತೇನೆ ಅಂತ ಮನಸ್ಸು ಹೇಳುತ್ತಿತ್ತು. ಅಂತೂ ಮತ್ತೆ ಸಹಜ ಸ್ಥಿತಿಗೆ ಬರೋವಾಗ ಫೆ.8 ಮುಗಿದಿತ್ತು.

ಕಿಮೊ ಇಂಜೆಕ್ಷನ್‌ ಇತರ ಇಂಜೆಕ್ಷನ್‌ಗಳಂತೆ ಸಹಜ ಪರಿಣಾಮ ಬೀರುವಂತಿದ್ದರೆ, ಎಲ್ಲ ಕಡೆ ಆರಾಮಾಗಿ ಓಡಾಡುವಂತಿದ್ದರೆ ಎಷ್ಟು ಚೆಂದಿತ್ತು ಅಲ್ವಾ ಅಂದಿತು ಮನಸ್ಸು. ಆದರೆ ಅಂತಹ ಕ್ಯಾನ್ಸರ್‌ ಚಿಕಿತ್ಸೆ ಯಾವಾಗ ಬರಲಿದೆಯೋ ಗೊತ್ತಿಲ್ಲ. ಫೆ.11 ಆಗುತ್ತಲೇ ಕ್ಯಾನ್ಸರ್‌ ನನ್ನೊಳಗಿಲ್ಲ ಎಂಬಷ್ಟು ಮನಸ್ಸು ಎದ್ದು ನಿಂತಿತ್ತು. ಅದೇ ವಿಶ್ವಾಸ, ಅದೇ ಉತ್ಸಾಹ ಮನದಲ್ಲಿ ತೊನೆದಾಡಿದವು.

ಕಿಮೊ ಎಂದರೆ ಈ ಮೊದಲು ಹೇಳಿದಷ್ಟೇ ಅಡ್ಡಪರಿಣಾಮಗಳಲ್ಲ. ವೈದ್ಯರು ನೀಡುವ ಕಿಮೊ ಅಡ್ಡಪರಿಣಾಮಗಳ ಪಟ್ಟಿಯನ್ನೂ ಮೀರಿದವು ಇರಲಿವೆ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಕಿಮೊ ಇಂಜೆಕ್ಷನ್‌ ಚಿಕಿತ್ಸಾ ಅವಧಿಯಲ್ಲಿ ಎದೆಗೂಡಿನ ಎಲುವುಗಳು ಹಿಡಿದುಕೊಂಡಿದ್ದವು. ನಾಲ್ಕು ಕಿಮೊ ಮುಗಿಸುವ ಹೊತ್ತಿಗಾಗಲೇ ಎಲುವುಗಳು ತೀರಾ ಮಿದುಗೊಂಡಿದ್ದವು. ತುಸು ಕೆಮ್ಮಿದರೂ, ಸೀನಿದರೂ ಎದೆಗೂಡಿನ ಎಲುವುಗಳು ನೋಯಿಸುತ್ತಿದ್ದವು. ಪಕ್ಕೆಲವುಗಳು ಹಿಡಿದುಬಿಡುತ್ತಿದ್ದವು. ಕೈ, ಕಾಲಿನ ಉಗುರುಗಳ ಬುಡ ಕಪ್ಪಾಗಿ ಬಂದವು. ಉಗುರುಗಳು ಬೆಳೆದಂತೆ ಪೂರ್ತಿ ಉಗುರೇ ಕಪ್ಪಾದವು. 

ಕಿಮೊ ದೇಹವನ್ನು ವ್ಯಾಪಿಸುವಾಗ ಅದರ ವಿರುದ್ಧ ನಾವು ಸೆಟೆದು ನಿಲ್ಲಲೇಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಆಪೋಷಣ ಮಾಡಿಕೊಳ್ಳುತ್ತದೆ. ಅದಕ್ಕಾಗಿ ನಾವು ನಮ್ಮ ಮನಸ್ಸನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಇದಕ್ಕಾಗಿ ಯಾವುದೇ ಮಾಧ್ಯಮವನ್ನಾದರೂ ಬಳಸಿಕೊಳ್ಳಬಹುದು. ಓದು–ಬರಹದ ದಾರಿ ಹಿಡಿದಾಗ ನನಗದು ಅಷ್ಟಾಗಿ ಒಗ್ಗಲಿಲ್ಲ. ಆ ಅವಧಿಯಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕರಗಿ, ತೀರಾ ಬಳಲಿಕೆ ಇರುವುದರಿಂದ ನಿದ್ದೆ ಮಂಪರಿನ ಸ್ಥಿತಿ. ಪುಸ್ತಕ ಹಿಡಿದರಂತೂ ನಿದ್ದೆಯೇ ಆವರಿಸೋದು. ಬರವಣಿಗೆ ಮಾಡಲು ಹೋದರೆ ಬರಹದ ಮೇಲೆ ನಿಯಂತ್ರಣವೇ ಸಿಗದು.  ಇನ್ನು ಉಳಿದಿದ್ದೆಂದರೆ ಟಿ.ವಿಯಲ್ಲಿ ಒಳ್ಳೊಳ್ಳೆ ಸಿನಿಮಾ ನೋಡಬಹುದು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳನ್ನು ಬಳಸುವುದು. ಒಟ್ಟಾರೆ ಉದ್ದೇಶ ಮನಸ್ಸನ್ನು ಕ್ಯಾನ್ಸರ್‌ ಚಿಂತೆಯಿಂದ ದೂರವಿಡುವುದು. ಆದ್ದರಿಂದ ಆದಷ್ಟು ಧನಾತ್ಮಕ ಚಿಂತನೆಯಲ್ಲಿ ಮುಳುಗಿರಬೇಕು. ಅವು ಮನಸ್ಸನ್ನು ಸಂತೈಸಿ, ನಿರಾಳವಾಗಿಸಬೇಕು. ನಮ್ಮಲ್ಲಿ ಕ್ಯಾನ್ಸರ್‌ ಇದೇ ಎಂಬುದನ್ನೇ ಮರೆಯಿಸಬೇಕು. ರೋಗಿ ಯಾವಾಗ ಇಂಥ ಸ್ಥಿತಿಯನ್ನು ತಲುಪುತ್ತಾನೋ ನಿಜಕ್ಕೂ ಕ್ಯಾನ್ಸರ್‌ ನಮ್ಮನ್ನು ಬೇಗ ಬಿಟ್ಟು ಹೋಗುತ್ತದೆ. ಇದೇ ಸ್ಥಿತಿಯನ್ನು ಸಾಧನೆ ಮೂಲಕ ನಾನು ಹೊಂದಿದ್ದೆ.

ಕಿಮೊಥೆರಪಿ ಅವಧಿಯಲ್ಲಿ ಮುಟ್ಟು ಮುಂದೂಡುವುದು ಕಿಮೊ ಇಂಜೆಕ್ಷನ್‌ನ ಮತ್ತೊಂದು ಅಡ್ಡಪರಿಣಾಮ. ಪೂರ್ತಿಯಾಗಿ ನಿಂತೇ ಹೋಗುತ್ತದೆ ಅಂತೇನಲ್ಲ. ಕೆಲವರಿಗೆ ಕಿಮೊ ಮುಗಿದ ನಂತರ ಮತ್ತೆ ಆರಂಭವಾಗಬಹುದು. ಇನ್ನು ಕೆಲವರಿಗೆ ಅನಿಯಮಿತವಾಗಿ ಆಗಬಹುದು. ಕೆಲವರಿಗೆ ಪೂರ್ತಿ ನಿಂತೇ ಹೋಗಬಹುದು. ಇನ್ನು ಕೆಲವರಿಗೆ ತಿಂಗಳಿಗೆ ನಿಯಮಿತವಾಗಿಯೂ ನಡೆಯಬಹುದು. ಕಿಮೊ ಇಂಜೆಕ್ಷನ್‌ ತೆಗೆದುಕೊಂಡ ಮೇಲೆ ಮುಟ್ಟು ಆಗಬಾರದು. ಆದರೆ ಅದರಿಂದ ತೊಂದರೆ. ಹಾಗೇ ಹೀಗೆ ಎಂದು ಪುಗಸಟ್ಟೆ ಸಲಹೆ ಕೊಡುವವರ ಮಾತಿಗೆ ಬೆಲೆ ಕೊಡದೆ, ಅದರ ಪಾಡಿಗೆ ಮುಟ್ಟಿನ ಪ್ರಕ್ರಿಯೆ ನಡೆಯಲಿ ಎಂದು ಸುಮ್ಮನಿದ್ದು ಬಿಡುವುದರಿಂದಲೂ ಉಪಯೋಗವಿದೆ. ಈ ವಿಚಾರದಲ್ಲೂ ನಾನು ಸಕಾರಾತ್ಮಕವಾಗಿಯೇ ಉಳಿದೆ. 

PV Web Exclusive: ಕೈ ಹಿಡಿದಳು ಗಾಯತ್ರಿ –1: ಮಡುಗಟ್ಟಿದ ದುಗುಡಭಾವ

PV Web Exclusive: ಕೈ ಹಿಡಿದಳು ಗಾಯತ್ರಿ –2: ಮೆಮೊಗ್ರಾಂ, ಸ್ಕ್ಯಾನಿಂಗ್‌ ಪುರಾಣ ಏನ್‌ ಕೇಳ್ತಿರಿ...

PV Web Exclusive |ಕೈ ಹಿಡಿದಳು ಗಾಯತ್ರಿ –3: ಯಾರ‍್ರೀ ‍ಪೇಷಂಟ್‌; ಎಲದಾರ್‍ರೀ...

PV Web Exclusive:ಕೈ ಹಿಡಿದಳು ಗಾಯತ್ರಿ –4:  ಕೈ ಹಿಡಿದಳು ಗಾಯತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ –5: ಪೆಟ್ (PET) ಸ್ಕ್ಯಾನ್‌ನ ವಿಭಿನ್ನ ಅನುಭವ

PV Web Exclusive:ಕೈ ಹಿಡಿದಳು ಗಾಯತ್ರಿ –7: ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

PV Web Exclusive-ಕ್ಯಾನ್ಸರ್‌ ಜೊತೆಯೊಂದು ಪಾಸಿಟಿವ್ ಪಯಣ 8| ಕೇಶ ರಾಶಿಯ ನಾಮಾವಶೇಷ

PV Web Exclusive| ಕ್ಯಾನ್ಸರ್ ಜೊತೆಗೊಂದು ಪಯಣ 9: ಸಾಥ್‌ ನೀಡಿದ ಸೋಷಿಯಲ್‌ ಮೀಡಿಯಾ

(ಮುಂದಿನ ವಾರ: ನರ ಸುಡುತ್ತ ಸಾಗಿದವು ಆ ನಾಲ್ಕು ಕಿಮೊ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು