ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳುಕುವ ಬಳ್ಳಿ ರಕುಲ್‌ಪ್ರೀತ್‌ ಆರೋಗ್ಯದ ಗುಟ್ಟು

Last Updated 10 ನವೆಂಬರ್ 2019, 19:30 IST
ಅಕ್ಷರ ಗಾತ್ರ

ರಕುಲ್ ಅವರು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುತ್ತಾರೆ. ಹೊರಗಡೆ ತಿನ್ನುವುದಕ್ಕೆ ಸಂಪೂರ್ಣ ಕಡಿವಾಣ ಹಾಕಿಕೊಂಡಿದ್ದಾರೆ. ಶೂಟಿಂಗ್ ಇದ್ದಾಗಲೂ ತಮ್ಮೊಂದಿಗೆ ಚಿಕ್ಕ ಎಲೆಕ್ಟ್ರಿಕಲ್ ಸ್ಟೌ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲಿ ದಾಲ್–ಚಾವಲ್ ತಯಾರಿಸಿಕೊಂಡು ಸೇವಿಸುತ್ತಾರೆ.

ರಕುಲ್‌ಪ್ರೀತ್‌ ಸಿಂಗ್ ಎಂಬ ಪಂಜಾಬ್‌ ಮೂಲದ ನಟಿ ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟವರು. ತೆಲುಗಿನ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿದ್ದ ಈ ಬೆಡಗಿ ಬಾಲಿವುಡ್‌ನಲ್ಲೂ ಮಿಂಚಿದವರು.

29ರ ಹರೆಯದಲ್ಲೂ ಹದಿನೆಂಟರ ಬಾಲೆಯಂತೆ ಕಾಣಿಸುವ ಈ ಸುಂದರಿ, ಡಯೆಟ್ ಹಾಗೂ ಫಿಟ್‌ನೆಸ್‌ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ.ನೋಡುಗರನ್ನು ಸೌಂದರ್ಯದಿಂದ ಆರ್ಕಷಿಸುವ ರಕುಲ್‌ಪ್ರೀತ್ ರೂಪದರ್ಶಿಯಾಗಿ ಬೆಳಕಿಗೆ ಬಂದವರು. ಬಳಿಕ ನಟನೆಯತ್ತ ಹೊರಳಿದವರು. ದೈವದತ್ತವಾಗಿ ಬಂದ ದೇಹಸಿರಿ ಮತ್ತು ಅದಕ್ಕೆ ತಕ್ಕಂತಹ ಎತ್ತರ ಈಕೆಯ ಪ್ಲಸ್‌ ಪಾಯಿಂಟ್‌.

ದೈಹಿಕ ಚಟುವಟಿಕೆ ಈಕೆಗೆ ಪ್ರಿಯ

ಇವರಿಗೆ ಸುಮ್ಮನೆ ಒಂದೆಡೆ ಕೂರುವುದೆಂದರೆ ಆಗದು. ಸದಾ ಚಟುವಟಿಕೆಯಿಂದ ಇರುವ ಇವರು ವಾರದಲ್ಲಿ ಆರು ದಿನ ವರ್ಕೌಟ್ ಮಾಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಜಿಮ್‌ನತ್ತ ಧಾವಿಸುವ ಈ ಚೆಲುವೆ ಅಪ್ಪಟ ಆಹಾರಪ್ರಿಯೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ತಿನ್ನುವ ಇವರು ಪ್ರತಿದಿನ ದೇಹ ದಂಡಿಸುವ ಮೂಲಕ ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುತ್ತಾರೆ.

ಬಳಕುವ ಬಳ್ಳಿಯಂತಿರುವ ಈ ಸುಂದರಿ ತೆಳ್ಳಗಾಗುವ ಉದ್ದೇಶದಿಂದ ವರ್ಕೌಟ್ ಮಾಡುವುದಿಲ್ಲ. ಆರೋಗ್ಯವಂತರಾಗಿ, ಫಿಟ್ ಹಾಗೂ ಸದೃಢರಾಗಿರುವ ಸಲುವಾಗಿ ದೇಹ ದಂಡಿಸುತ್ತಾರೆ. ಬೆವರಿಳಿಯುವಷ್ಟು ಕೆಲಸ ಮಾಡುವುದೆಂದರೆ ಈಕೆಗೆ ಅಚ್ಚುಮೆಚ್ಚು. ಅನಿವಾರ್ಯ ಕಾರಣಗಳಿಂದ ಎರಡು ಮೂರು ದಿನ ವರ್ಕೌಟ್ ಮಾಡುವುದನ್ನು ನಿಲ್ಲಿಸಿದರೂ ಆಲಸ್ಯ ಕಾಡುತ್ತದೆ ಎನ್ನುತ್ತಾರೆ ರಕುಲ್‌. ‘ವರ್ಕೌಟ್ ಇಲ್ಲದೇ ನನ್ನ ದಿನ ಪೂರ್ಣಗೊಳ್ಳುವುದೇ ಇಲ್ಲ’ ಎನ್ನುತ್ತಾರೆ.

ಫಿಟ್‌ನೆಸ್ ಮೇಲೆ ಇಷ್ಟೆಲ್ಲಾ ಕಾಳಜಿ ಇರುವ ರಕುಲ್ ಹೆಲ್ತ್‌ ಕ್ಲಬ್‌ ಹಾಗೂ ಜಿಮ್ ಒಂದರ ಫ್ರಾಂಚೈಸಿ ಕೂಡ ಹೊಂದಿದ್ದಾರೆ. ಡಯಟ್, ಫಿಟ್‌ನೆಸ್‌ ಬಗ್ಗೆ ಕಾಳಜಿ ಹೊಂದಿರುವುದಲ್ಲದೇ ಬೇರೆಯವರಿಗೂ ಫಿಟ್‌ನೆಸ್‌ ಕಾಳಜಿ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ವರ್ಕೌಟ್ ಬಗ್ಗೆ ಗಂಭೀರವಾಗಿ ಯೋಚಿಸಿರುವ ರಕುಲ್ ತನ್ನ ಆಹಾರಕ್ರಮದಲ್ಲೂ ಕೊಂಚ ಮಟ್ಟಿಗೆ ನಿರ್ಬಂಧ ಹಾಕಿಕೊಂಡಿದ್ದಾರೆ. ಡಯೆಟ್‌ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳ ಸೇವನೆ ಈ ಎರಡರಲ್ಲೂ ಸಮತೋಲನವಿರಬೇಕು ಎಂಬುದು ಈ ನಟಿಯ ಮಾತು.

ಜಂಕ್‌ಫುಡ್‌ಗಳಿಂದ ದೂರ

ಆರೋಗ್ಯಕರವಾಗಿ ಹಾಗೂ ಫಿಟ್ ಆಗಿರುವ ಈ ಬೆಡಗಿ ಹುರಿದ, ಸಂಸ್ಕರಿತ ಆಹಾರ ಹಾಗೂ ಸಿಹಿ ಪದಾರ್ಥಗಳಿಂದ ಸದಾ ದೂರ. ಇವರು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರಗಳನ್ನೇ ತಿನ್ನಲು ಬಯಸುತ್ತಾರೆ. ಅಪರೂಪಕ್ಕೆ ಆಲೂ ಪರಾಟ ಹಾಗೂ ಜಾಮೂನ್‌ ತಿನ್ನುವ ಮೂಲಕ ಬಾಯಿ ಚಪಲ ನೀಗಿಸಿಕೊಳ್ಳುತ್ತಾರೆ.

ಬ್ರೆಡ್‌, ಪಿಜ್ಜಾ, ಬಿಸ್ಕತ್ತು, ಕೇಕ್‌ ಹಾಗೂ ಐಸ್‌ಕ್ರೀಂಗಳಿಗೆ ಇವರ ಆಹಾರಪಟ್ಟಿಯಲ್ಲಿ ಅವಕಾಶವಿಲ್ಲ. ಅನೇಕ ಆರೋಗ್ಯತಜ್ಞರು ಹೇಳುವಂತೆ ರಕುಲ್ ಕೂಡ ಹಣ್ಣು, ತರಕಾರಿ ಹಾಗೂ ಕಾರ್ಬೊಹೈಡ್ರೆಟ್ ಅಂಶ ಅಧಿಕ ಇರುವ ಪದಾರ್ಥಗಳನ್ನೇ ತಿನ್ನುವಂತೆ ಸಲಹೆ ನೀಡುತ್ತಾರೆ.

ಕಾರ್ಬೋಹೈಡ್ರೆಟ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ದೇಹದಲ್ಲಿ ಕೊಬ್ಬಿನಂಶವನ್ನು ಕಡಿಮೆ ಮಾಡುವ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇವರ ಪ್ರಧಾನ ಆಹಾರ ಗೋಧಿ. ರೊಟ್ಟಿ ತಯಾರಿಸಲು ಗೋಧಿಯನ್ನು ಬಳಸುತ್ತಾರೆ. ಅದರೊಂದಿಗೆ ಹೆಚ್ಚು ತರಕಾರಿ ಹಾಗೂ ದಾಲ್ ಸೇವಿಸುತ್ತಾರೆ.

ಪ್ರತಿದಿನದ ದಿನಚರಿಯಲ್ಲಿ ಮೊದಲು ಕೋಚ್‌ ಸಲಹೆಯಂತೆ 10 ನಿಮಿಷಗಳ ಕಾಲ ವಾರ್ಮ್ಅಪ್ ಮಾಡುತ್ತಾರೆ. ಸೈಕ್ಲಿಂಗ್‌, ಥ್ರೆಡ್‌ಮಿಲ್‌, ಸ್ಕಿಪ್ಪಿಂಗ್‌ ಹಾಗೂ ಕಿಕ್‌ಬಾಕ್ಸಿಂಗ್ ಮಾಡುವುದರಿಂದ ದೇಹದಲ್ಲಿನ ಕೊಬ್ಬು ಕರಗಲು ನೆರವಾಗುತ್ತದೆ ಎಂಬುದನ್ನು ರಕುಲ್ ನಂಬುತ್ತಾರೆ.

ಮನೆ ಅಡುಗೆ ಇಷ್ಟ

ಸಮತೋಲಿತ ಆಹಾರ ಸೇವಿಸುವ ರಕುಲ್ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುತ್ತಾರೆ. ಹೊರಗಡೆ ತಿನ್ನುವುದಕ್ಕೆ ಸಂಪೂರ್ಣ ಕಡಿವಾಣ ಹಾಕಿಕೊಂಡಿದ್ದಾರೆ. ಹೊರಗಡೆ ಶೂಟಿಂಗ್ ಇದ್ದಾಗಲೂ ರಕುಲ್ ತಮ್ಮೊಂದಿಗೆ ಚಿಕ್ಕ ಎಲೆಕ್ಟ್ರಿಕಲ್ ಸ್ಟೌ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಅದರಲ್ಲಿ ದಾಲ್–ಚಾವಲ್ ತಯಾರಿಸಿಕೊಂಡು ತಿನ್ನುತ್ತಾರೆ.

ದಿನಚರಿ

ಬೆಳಿಗ್ಗೆ ಎದ್ದ ಕೂಡಲೇ 2 ಗ್ಲಾಸ್ ಬಿಸಿನೀರು ಹಾಗೂ ಬ್ಲ್ಯಾಕ್‌ ಕಾಫಿ ಹೀರುತ್ತಾರೆ. ಸಾಮಾನ್ಯವಾಗಿ ಬ್ಲಾಕ್‌ ಕಾಫಿಯೊಂದಿಗೆ ಬೆಣ್ಣೆಯನ್ನು ಹಾಕಿಕೊಂಡು ಕುಡಿದರೆ ರಕುಲ್ ಐದು ಗ್ರಾಂ ತುಪ್ಪ ಹಾಕಿಕೊಂಡು ಕುಡಿಯುತ್ತಾರೆ. ಇದು ಅವರು ವರ್ಕೌಟ್‌ ಮಾಡುವ ಮುನ್ನ ಮಾಡುವುದು. ಬ್ಲಾಕ್‌ ಕಾಫಿ ಕುಡಿಯುವುದರಿಂದ ಇಡೀ ದಿನ ಎನರ್ಜಿಯಿಂದ ಇರಬಹುದು ಎನ್ನುವುದು ಇವರ ಅಭಿಪ್ರಾಯ. ಇದರಿಂದ ಹಸಿವನ್ನು ತಡೆಯಬಹುದು ಜೊತೆಗೆ ಮಾನಸಿಕವಾಗಿಯೂ ಸದೃಢವಾಗಿರಲು ಇದು ಸಹಕಾರಿ ಎಂಬುದು ಅವರ ಅನಿಸಿಕೆ.

* ಬ್ರೇಕ್‌ಫಾಸ್ಟ್‌: ವರ್ಕೌಟ್ ಮಾಡಿದ ನಂತರ ಇವರು ಮೊಟ್ಟೆ ಹಾಗೂ ಹುರುಳಿ ರೊಟ್ಟಿ ಸೇವಿಸುತ್ತಾರೆ. ಜೊತೆಗೆ ತರಕಾರಿ ಹಾಗೂ ಅಣಬೆಯ ಸಲಾಡ್ ತಿನ್ನುತ್ತಾರೆ.

* ಲಂಚ್‌: ಬ್ರೌನ್ ರೈಸ್‌, ತರಕಾರಿ, ದಾಲ್ ಹಾಗೂ ಚಿಕನ್‌

* ರಾತ್ರಿ ಊಟ: ಸಲಾಡ್, ಮೀನು ಹಾಗೂ ತರಕಾರಿ.

ಸೌಂದರ್ಯದ ಗುಟ್ಟು

ಮನೆಯಲ್ಲೇ ಸಿಗುವ ವಸ್ತುಗಳಿಂದ ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವ ಇವರು ಕಡಲೆಹಿಟ್ಟು, ಅರಿಸಿನ, ಜೇನುತುಪ್ಪ ಹಾಗೂ ನಿಂಬೆಹಣ್ಣನ್ನು ಉಪಯೋಗಿಸುತ್ತಾರೆ. ಕಣ್ಣಿನ ಸೌಂದರ್ಯದ ರಕ್ಷಣೆಗೆ ಸೌತೆಕಾಯಿ ಹಾಗೂ ಆಲೂಗಡ್ಡೆ ಜ್ಯೂಸ್ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT