ಸೋಮವಾರ, ಅಕ್ಟೋಬರ್ 25, 2021
25 °C

ಕೆಮ್ಮಿಗೆ ಸಾವಿರ ಕಾರಣ!

ಡಾ. ರಾಮಪ್ರಸಾದ್ ಕೊಣನೂರ್ Updated:

ಅಕ್ಷರ ಗಾತ್ರ : | |

Prajavani

ಹಲವು ಸಂದರ್ಭಗಳಲ್ಲಿ ಕೆಮ್ಮಿಗೆ ಕಾರಣವನ್ನು ಕಂಡುಹಿಡಿಯುವುದು ಸಾಧ್ಯವಾಗದೆ ಹೋಗಬಹುದು. ಆದರೆ ಕುಶಲ ವೈದ್ಯನೊಬ್ಬ ರೋಗಿಗೆ ಪ್ರಶ್ನೆಗಳನ್ನು ಕೇಳಿ ಕೇಳಿ ಕಾರಣವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಬಹುದು.

ಮನುಷ್ಯನಿಗೆ ಅತಿ ಹೆಚ್ಚು ಕಾಡುವ ಕಾಯಿಲೆ ನೆಗಡಿ ಮತ್ತು ಕೆಮ್ಮು. ಕೆಮ್ಮಿಗೆ ಕಾರಣಗಳ ಪಟ್ಟಿಯೂ ದೊಡ್ಡದು. ಇದರಲ್ಲಿ ಕೆಲವನ್ನು ನೋಡೋಣ.

ಸಾಮಾನ್ಯವಾಗಿ ನೆಗಡಿ ಅಥವಾ ಕೆಮ್ಮು ಕಾಣಿಸಿಕೊಂಡಾಗ ನಾವು ಮೊದಲು ಮಾಡುವುದು ಮನೆಮದ್ದು; ಇಲ್ಲವೇ ಮೆಡಿಕಲ್ ಶಾಪ್‌ಗೆ ಹೋಗಿ ನಾವೇ ಕೇಳಿ ಪಡೆಯುವ ‘antihistamine’ ಮಾತ್ರೆಗಳು. ಕೆಮ್ಮು ಕಡಿಮೆ ಆಗದಿದ್ದಾಗ ವೈದ್ಯರ ಮೊರೆ ಹೋಗುತ್ತೇವೆ. ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ರೋಗಿಗಳನ್ನು ನೋಡುವುದು ಈ ‘ಕೆಮ್ಮಿ’ಗಳನ್ನೇ ಎಂದರೆ ನಂಬಲೇ ಬೇಕು! ಈ ಮೊದಲು ಸಾಮಾನ್ಯ ಎಂದುಕೊಂಡ ಕೆಮ್ಮು ಈಗ ವೈದ್ಯನಿಗೊಂದು ಸವಾಲಾಗುತ್ತಿರುವುದು ನಿಜ.

ನೆಗಡಿ ಸಾಮಾನ್ಯವಾಗಿ ತೊಂಬತ್ತು ಪ್ರತಿಶತ ವೈರಸ್‌ನಿಂದಲೇ ಬಂದಿರುತ್ತದೆ. ಮೂಗಿನ ಹಿಂದಿನ ಹೊಳ್ಳೆಯಿಂದ ದ್ರವವು ಗಂಟಲಿಗೆ ಬಂದಾಗ ಆಗುವ ಕಿರಿಕಿರಿಯಿಂದ ಕೆಮ್ಮು ಬಂದು, ಕಫ ಹೊರಹೋಗಲು ಸಹಾಯವಾಗುತ್ತದೆ; ಮತ್ತು ಇದರಿಂದ ಕಫದಲ್ಲಿರುವ ವೈರಸ್/ಬ್ಯಾಕ್ಟಿರಿಯಾದಂತಹ ಕ್ರಿಮಿಗಳು ನಮ್ಮ ದೇಹದಿಂದ ಹೊರಹಾಕಲ್ಪಡುತ್ತದೆ. ಕೆಮ್ಮು ನಮ್ಮ ಶ್ವಾಸಕೋಶದ ರಕ್ಷಣೆಯ ಕವಚ ಇದ್ದ ಹಾಗೆ. ನನ್ನ ಉಪಾಧ್ಯಾಯರು ಡಾ. ಎಡ್ಯೂರಪ್ಪ ‘Cough is the watchdog of respiratory system’ (ಉಸಿರಾಟ ವ್ಯವಸ್ಥೆಯ ಕಾವಲುಗಾರ ಕೆಮ್ಮು) ಎಂದು ಪದೇಪದೇ ಹೇಳುತ್ತಿದ್ದರು. ಕೆಮ್ಮಿನಿಂದ ರೋಗಿಗೆ ತೊಂದರೆಯಾಗಬಹುದು. ಆದರೆ ಇದು ಯಾವುದೇ ಕ್ರಿಮಿ ಅಥವಾ ವಸ್ತುವನ್ನು ಉಸಿರಾಟದ ನಾಳಗಳಿಂದ ಹೊರಹಾಕುವ ನೈಸರ್ಗಿಕವಾಗಿ ಕ್ರಿಯೆ.

ಕೆಮ್ಮು ವೈರಸ್‌ನಿಂದ ಬಂದಿದ್ದರೆ ತಾನಾಗಿಯೇ ಒಂದು ವಾರದಲ್ಲಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಬಹುದು; ಅಂತಹ  ನೆಗಡಿ ಮತ್ತು ಕೆಮ್ಮಿಗೆ antihistamine ಮಾತ್ರೆಗಳು ಸಾಕಾಗಬಹುದು. ರೋಗಿಯು ತಂಪು ವಾತಾವರಣ ಮತ್ತು ಥಂಡಿಗೆ ಸಹಾಯವಾಗುವ ಪದಾರ್ಥಗಳಿಂದ ದೂರವಾದರೆ ಸಾಕು. ಒಂದು ವಾರದ ನಂತರವೂ ಕೆಮ್ಮು ಕಡಿಮೆಯಾಗದೆ ಜ್ವರ ಮತ್ತು ಹೆಚ್ಚು ಕಫ ಕಾಣಿಸಿಕೊಂಡಾಗ ಬ್ಯಾಕ್ಟೀರಿಯಾ ಸೋಂಕಿನಿಂದ ಕೆಮ್ಮು ಉಂಟಾಗಿರಬಹುದು. ಆಗ ಕಫವನ್ನು ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಕಫಪರೀಕ್ಷೆಯಿಂದ ಕ್ಷಯರೋಗವನ್ನು ಪತ್ತೆ ಹಚ್ಚಬಹುದು. ಎಕ್ಸ್–ರೇಯಿಂದ ನ್ಯುಮೋನಿಯಾದಂತಹ ಸೋಂಕನ್ನು ಪತ್ತೆ ಹಚ್ಚಬಹುದು. ಕೋವಿಡ್‌ ಕೂಡ ಒಂದು ವೈರಸ್ ಕಾಯಿಲೆ.

ತಂಬಾಕು ಸೇದುವವರಲ್ಲಿ ‘ಸ್ಮೋಕರ್ಸ್‌ ಕಾಫ್‌’ ಆಗಿರಬಹುದು; ಚಟ ತುಂಬಾ ವರ್ಷಗಳಿಂದ ಇದ್ದರೆ COPD (ಕ್ರಾನಿಕ್‌ ಅಬಸ್ಟ್ರಕ್ಟೀವ್‌ ಪುಲ್ಮನರಿ ಡಿಸೀಸ್‌) ಆಗಿರುವ ಸಾಧ್ಯತೆ ಹೆಚ್ಚು. ಈ ಎರಡು ಕಾಯಿಲೆಗಳಲ್ಲಿ ತಂಬಾಕು ಸೇವನೆ ನಿಲ್ಲಿಸದಿದ್ದರೆ ಕೆಮ್ಮು ಕಡಿಮೆಯಾಗುವುದಿಲ್ಲ. ಕೆಮ್ಮು ಔಷಧಗಳಿಗೆ ಬಗ್ಗದಿದ್ದಾಗ ‘ಸಿಟಿ ಸ್ಕ್ಯಾನ್’ ಮಾಡಿಸಬೇಕಾಗುತ್ತದೆ.

ಜೀವನೋಪಾಯಕ್ಕೆ ಮಾಡುವ ಕೆಲಸಗಳನ್ನು ರೋಗಿಗಳು ವೈದ್ಯರಿಗೆ ತಿಳಿಸುವುದು ಉತ್ತಮ. ಈ ಮಾಹಿತಿಯು ಕೆಮ್ಮಿನ ಕಾರಣಗಳನ್ನು ಊಹಿಸಲು ವೈದ್ಯರಿಗೆ ನೆರವಾಗುತ್ತದೆ.

ಮನೆಯಲ್ಲಿ ಬೆಕ್ಕು, ನಾಯಿ ಮತ್ತು ಪಕ್ಷಿಗಳನ್ನು ಸಾಕಿದ್ದರೆ ಅವುಗಳ ಕೂದಲು, ಮಲಮೂತ್ರಗಳಿಂದ ಶ್ವಾಸಕೋಶದಲ್ಲಿ ಅಲರ್ಜಿ ತೊಂದರೆಯುಂಟಾಗಿ, ಕೆಮ್ಮು ಕಾಣಿಸಿಕೊಂಡಿರಬಹುದು.

ರೋಗಿಗೆ ರಕ್ತದೊತ್ತಡ ಇದ್ದು ‘ACE- Inhibitor’ ಗುಂಪಿಗೆ ಸೇರಿದ ಮಾತ್ರೆಗಳನ್ನು ಹಾಕಿದ್ದರೆ, ಅವರ ಕೆಮ್ಮು ಈ ಮಾತ್ರೆಯಿಂದ ಬಂದಿರಬಹುದು. 

ಹೃದಯದಲ್ಲಿ ಸಮಸ್ಯೆಯಿದ್ದವರಿಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದರಿಂದ ಕಾಣಿಸುವ ಕೆಮ್ಮಿಗೆ ‘ಕಾರ್ಡಿಕ್‌ ಕಾಫ್‌’ ಎನ್ನುತ್ತೇವೆ. ಈ ಸಮಸ್ಯೆಗೆ ಹೃದ್ರೋಗತಜ್ಞರನ್ನು ಕಾಣುವುದು ಒಳಿತು.

ರೋಗಿಗೆ ಹುಳಿ ತೇಗು ಬರುತ್ತಿದ್ದರೆ ವೈದ್ಯರಲ್ಲಿ ತಿಳಿಸುವುದು ಉತ್ತಮ. ಆಗ ಕೆಮ್ಮಿಗೆ ‘ಗ್ಯಾಸ್ಟ್ರೈಟೀಸ್‌’ ತೊಂದರೆಗೆ ಕೊಡುವ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಆಹಾರವನ್ನು ನಿಯಮಿತವಾಗಿ ತಿನ್ನುವುದು, ದೇಹದ ತೂಕ ಇಳಿಸುವುದು ಮುಂತಾದ ವಿಧಾನಗಳ ಮೂಲಕ ಇಂಥ ಕೆಮ್ಮನ್ನು ನಿವಾರಣೆಮಾಡಿಕೊಳ್ಳಬಹುದು.

ಕೆಮ್ಮು–ನೆಗಡಿಯಿದ್ದಾಗ ಭ್ರೂಮಧ್ಯಭಾಗದಲ್ಲಿ ತಲೆನೋವು ಬರುತ್ತಿದ್ದು, ನೆಗಡಿ ನಿಲ್ಲದೆ ಕೆಮ್ಮು ಹಾಗೆಯೇ ಇದ್ದರೆ, ‘ಸೈನಸ್‌ ಎಕ್ಸ್‌ರೇ’ ಮತ್ತು ಮೂಗಿನ ‘ಎಕ್ಸ್‌–ರೇ’ ಮಾಡಿಸಬೇಕಾಗುತ್ತದೆ.

‘ಬ್ರಾಂಕೈಲ್‌ ಚಾಲೇಂಜ್‌’ ಪರೀಕ್ಷೆಯನ್ನು ಮಾಡುವ ಮೂಲಕ ಆಸ್ತಮಾ ಕಾಯಿಲೆಯನ್ನು ಕಂಡುಹಿಡಿಯಬಹುದು. ಇಂಥವರು ದೂಳಿನಿಂದ ದೂರವಿರುವುದು ಒಳ್ಳೆಯದು. ಮಧುಮೇಹಿಗಳಲ್ಲಿ ‘ಸ್ಯುಡೋಮೊನಸ್‌ ಬ್ಯಾಕ್ಟೀರಿಯಲ್‘ ತೊಂದರೆ ಹೆಚ್ಚು. ಏಡ್ಸ್ ಪೀಡಿತರಲ್ಲಿ ಅವರ CD4 ಸಂಖ್ಯೆಯ ಮೇಲೆ ಬೇರೆ ಬೇರೆ ರೀತಿಯ ಸೋಂಕು ಉಂಟಾಗಬಹುದು. ಮನೆಯಲ್ಲಿ ಏರ್ ಕಂಡೀಶನ್ ಉಪಯೋಗಿಸುತ್ತಿದ್ದರೆ, ಅದರಲ್ಲೇನಾದರೂ ಸೋರುವಿಕೆಯಿದ್ದರೆ ‘ಲೀಜಿನಿಯರ್ಸ್‌’ ಎಂಬ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು.

ಮೇಲೆ ಹೇಳಿದ ಅಷ್ಟು ಪರೀಕ್ಷೆ ಮಾಡಿಯೂ ಕೆಮ್ಮಿನ ಕಾರಣ ತಿಳಿಯದಿದ್ದಾಗ ‘ಬ್ರಾಂಕೋಸ್ಕೋಪಿ’ ಮಾಡಿಸಬೇಕಾಗುತ್ತದೆ. ಶ್ವಾಸಕೋಶದಲ್ಲಿ ಗಡ್ಡೆಯಂತಹದ್ದು ಏನಾದರೂ ಕಾಣಿಸಿದರೆ, ಅದರ ಬಯಾಪ್ಸಿ ಮಾಡಿ, ಅರ್ಬುದ ಪರೀಕ್ಷೆಗೆ ಅದನ್ನು ಕಳುಹಿಸಬೇಕಾಗುತ್ತದೆ.

ಇಷ್ಟೆಲ್ಲಾ ಅಗಿಯು ಕೆಮ್ಮು ನಿಲ್ಲದಿದ್ದರೆ, ವೈದ್ಯರು ಹೇಳಿದ ಸೂಚನೆಗಳನ್ನು ರೋಗಿ ಪಾಲನೆ ಮಾಡುತ್ತಿಲ್ಲವೆಂದು ಗ್ರಹಿಸಬೇಕಾಗುತ್ತದೆ. ಉದಾಹರಣೆಗೆ, ತಂಬಾಕು ಸೇವನೆಯನ್ನು ನಿಲ್ಲಿಸದಿರುವುದು, ಹೇಳಿದಷ್ಟು ದಿನ ಮಾತ್ರೆಗಳನ್ನು ತೆಗೆದು ಕೊಳ್ಳದಿರುವುದು. ಮನೋರೋಗ ಕೂಡ ಇದಕ್ಕೆ ಕಾರಣವಾಗಿರಬಹುದು.

ಕೆಮ್ಮಿನ ಚಿಕಿತ್ಸೆಗೆ ವೈದ್ಯರ ಹತ್ತಿರ ಹೋದಾಗ ಅವರು ಹಲವಾರು ಪ್ರಶ್ನೆಗಳನ್ನು ಎಸೆಯುತ್ತಾರೆ. ಪ್ರತಿ ಪ್ರಶ್ನೆಯೂ ವೈದ್ಯರಿಗೆ ರೋಗಿಯು ಯಾವ ಕಾಯಿಲೆಯಿಂದ ಬಳಲುತ್ತಿರಬಹುದು ಅಥವಾ ಕೆಮ್ಮು ಆ ಕಾಯಿಲೆಯ ಲಕ್ಷಣವಾಗಿರಬಹುದು ಎಂದು ಗ್ರಹಿಸಲಿಕ್ಕೆ ಸಹಾಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು