ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ದೇಹತೂಕ ಹೆಚ್ಚುತ್ತಲೇ ಇರಲು ಇದೂ ಕಾರಣ!

Last Updated 17 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕೊರೋನಾ ಸೋಂಕು ಕಾಣಿಸಿಕೊಂಡ ಮೇಲೆ ನಮ್ಮ ಜೀವನಶೈಲಿಯಲ್ಲಿ ಹಲವು ರೀತಿಯ ಬದಲಾವಣೆಗಳಾಗಿವೆ. ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೇವೆ, ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ ಹೋಗುವುದು ಕಡಿಮೆ ಮಾಡಿದ್ದೇವೆ. ಇದರೊಂದಿಗೆ ಫಿಟ್‌ನೆಸ್‌ ಬಗ್ಗೆ ಗಮನ ಹರಿಸುವುದನ್ನೂ ಮರೆತಿದ್ದೇವೆ. ಆ ಕಾರಣಕ್ಕೆ ದೇಹತೂಕದಲ್ಲಿ ವ್ಯತ್ಯಾಸವಾಗಿದೆ.

‘ಕೋವಿಡ್‌ ಬಂದಾಗಿನಿಂದ ನಾನು ತುಂಬಾನೇ ದಪ್ಪವಾಗಿದ್ದೇನೆ. ಈಗ ತೂಕ ಇಳಿಸಲು ಹರಸಾಹಸ ಮಾಡುತ್ತಿದ್ದೇನೆ. ಆದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ. ಹಳೆಯ ಡ್ರೆಸ್‌ಗಳು ಒಂದೂ ಆಗುತ್ತಿಲ್ಲ. ಏನು ಮಾಡಬೇಕು ತೋಚುತ್ತಿಲ್ಲ’ ಎಂದು ಗೋಳು ತೋಡಿಕೊಳ್ಳುವವರೇ ಹಲವರು.

ಜಿಮ್‌ನಲ್ಲಿ ವರ್ಕೌಟ್‌, ಆಹಾರದಲ್ಲಿ ಡಯೆಟ್‌ ಪಾಲಿಸುತ್ತಿದ್ದರೂ ದೇಹತೂಕ ಕಡಿಮೆಯಾಗುತ್ತಿಲ್ಲ ಎಂದು ಬೇಸರಿಸುತ್ತಾರೆ. ಆದರೆ ಇದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. ಈ ಕಾರಣಗಳು ದೇಹತೂಕ ಕಡಿಮೆ ಮಾಡಿಕೊಳ್ಳಲು ನಿಮ್ಮನ್ನು ಅಡ್ಡಿಪಡಿಸುತ್ತಿವೆ.

ವಾರಾಂತ್ಯದ ತಪ್ಪು
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ಬೇಗ ಎದ್ದು ಜಿಮ್‌, ವರ್ಕೌಟ್‌, ಯೋಗ ಮಾಡಿ ಸರಿಯಾದ ಆಹಾರಕ್ರಮ ಪಾಲಿಸುವ ನಾವು ವಾರಾಂತ್ಯದಲ್ಲಿ ಇದಕ್ಕೆಲ್ಲಾ ಬ್ರೇಕ್ ಹಾಕುತ್ತೇವೆ. ವಾರವಿಡೀ ಡಯೆಟ್ ಆಹಾರ ಸೇವಿಸಿದ ನಾಲಿಗೆ ರುಚಿ ಬಯಸುತ್ತದೆ ಎಂದು ವಾರಾಂತ್ಯದಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಇದು ಸರಿಯಲ್ಲ. ಡಯೆಟ್‌ ಕ್ರಮವನ್ನು ವಾರಪೂರ್ತಿ ಸರಿಯಾದ ಕ್ರಮದಲ್ಲಿ ಪಾಲಿಸುವುದು ಸೂಕ್ತ. ಇದರೊಂದಿಗೆ ವಾರಾಂತ್ಯದಲ್ಲಿ ವರ್ಕೌಟ್ ಮಾಡದೇ ಇರುವುದು ಸರಿಯಲ್ಲ ಅಥವಾ ವಾರದ ದಿನಗಳಲ್ಲಿ ವರ್ಕೌಟ್ ಮಾಡದೇ ವಾರಾಂತ್ಯದಲ್ಲಿ ನಾಲ್ಕೈದು ಗಂಟೆಗಳ ಕಾಲ ವರ್ಕೌಟ್ ಮಾಡುವುದು ಸಲ್ಲ.

ತಯಾರಿ ಸರಿಯಾಗಿರಲಿ
ದೇಹತೂಕ ಇಳಿಸುವುದು ಸುಲಭವಲ್ಲ. ಹಾಗಾಗಿ ಡಯೆಟ್‌ ಅಥವಾ ಆಹಾರಕ್ರಮ ಪಾಲಿಸುವ ಮೊದಲು ತಯಾರಿ ಇರಬೇಕು. ತಿನ್ನುವ ಆಹಾರ ಹಾಗೂ ವರ್ಕೌಟ್‌ ಸೇರಿದಂತೆ ಇತರ ಜೀವನಶೈಲಿಗೆ ಸಂಬಂಧಿಸಿ ಮಾನಸಿಕ ಹಾಗೂ ದೈಹಿಕವಾಗಿ ಮೊದಲೇ ಸಿದ್ಧರಾಗಿರಬೇಕು. ಹೊರಗಡೆಯ ಆಹಾರಕ್ಕೆ ಕಡಿವಾಣ ಹಾಕಬೇಕು. ಆರೋಗ್ಯಕ್ಕೆ ಉತ್ತಮ ಎನ್ನಿಸುವ ಆಹಾರವಾದರೂ ಹೊರಗಡೆಯ ಆಹಾರ ಸೇವಿಸದೇ ಇರುವುದು ಉತ್ತಮ.

ತೂಕದ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ
ದೇಹತೂಕ ಹೆಚ್ಚಾದ ಕೂಡಲೇ ಹಲವರು ಈ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ತಲೆ ಕೆಡಿಸಿಕೊಳ್ಳುತ್ತಾರೆ. ತಾವು ಹಿಂದೆ ಧರಿಸುತ್ತಿದ್ದ ಬಟ್ಟೆಗಳು ಆಗುತ್ತಿಲ್ಲ, ಟೀ ಶರ್ಟ್ ಧರಿಸಿದರೆ ಹೊಟ್ಟೆ ಕಾಣಿಸುತ್ತದೆ, ಕುರ್ತಾ ಧರಿಸಲು ಆಗುವುದೇ ಇಲ್ಲ ಎಂದೇ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಾರೆ. ಆ ಬದಲು ನಿಮ್ಮ ಗಮನವನ್ನು ಹೆಚ್ಚಿನ ವರ್ಕೌಟ್‌ ಮೇಲೆ ನೀಡಿದರೆ ಉತ್ತಮ. ಆಹಾರ ನಿಯಂತ್ರಣ ಹಾಗೂ ಜಿಮ್‌, ಯೋಗದ ಮೇಲೆ ‌ಗಮನವಿರಬೇಕು.

ಅಗತ್ಯದಷ್ಟು ಮಾಡುತ್ತಿಲ್ಲ
ವಾಕಿಂಗ್‌, ರನ್ನಿಂಗ್‌, ಜಿಮ್‌ನಲ್ಲಿ ವರ್ಕೌಟ್‌, ಯೋಗ ಯಾವುದೇ ಇರಲಿ ನಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಮಾಡಲೇಬೇಕು. ಅದನ್ನು ಬಿಟ್ಟು ಮನಸ್ಸಿಗೆ ತೋಚಿದಷ್ಟು ಹೊತ್ತು ಮಾಡಿ ಬಿಡುವುದಲ್ಲ. ವಾಕಿಂಗ್‌ ಮಾಡುವುದಾದರೂ ಕನಿಷ್ಠ 5 ಕಿಲೋಮೀಟರ್ ನಡೆಯಬೇಕು. ಜಿಮ್‌ನಲ್ಲಿ ಕನಿಷ್ಠ ಒಂದು ಗಂಟೆ ಕಾಲ ವರ್ಕೌಟ್ ಮಾಡುವುದು ಉಚಿತ.

ಹಾರ್ಮೋನ್‌ನಲ್ಲಿನ ಅಸಮತೋಲನ
ಇತ್ತೀಚೆಗೆ ಜೀವನಶೈಲಿಯಲ್ಲಿನ ಬದಲಾವಣೆಯ ಕಾರಣದಿಂದ ಹಾರ್ಮೋನ್‌ನಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯವಾಗಿದೆ. ಆ ಕಾರಣಕ್ಕೆ ಹಾರ್ಮೋನ್‌ನಲ್ಲಿ ಅಸಮತೋಲನವಿರುವವರು ಹೆಚ್ಚು ಹೆಚ್ಚು ವರ್ಕೌಟ್ ಮಾಡುವುದರಿಂದ ದೇಹ ತೂಕದಲ್ಲಿ ಅಷ್ಟೊಂದು ಬದಲಾವಣೆ ಕಾಣಲು ಸಾಧ್ಯವಿರುವುದಿಲ್ಲ. ಹಾಗಾಗಿ ನಿಮಗೆ ಯಾವ ಕಾರಣಕ್ಕೆ ದೇಹತೂಕದಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ನೋಡಿಕೊಂಡು ಅದಕ್ಕೆ ಹೊಂದುವ ವ್ಯಾಯಾಮ, ಯೋಗ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT