ಸೋಮವಾರ, ನವೆಂಬರ್ 30, 2020
20 °C

ಕೊರೊನಾ ವೈರಸ್‌ ಮರುಸೋಂಕು: ಚೇತರಿಕೆಗೆ ಬೇಕು ದೀರ್ಘ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಸ್ತುತ ಕೋವಿಡ್–19 ಸಾಂಕ್ರಾಮಿಕವು ಇನ್ನೂ ಕೂಡ ಸಾಕಷ್ಟು ಸಕ್ರಿಯವಾಗಿದ್ದು, ಒಂದು ಅಂದಾಜಿನ ಪ್ರಕಾರ ಇದು ಮುಂದಿನ ಒಂದು ಅಥವಾ ಎರಡು ವರ್ಷಗಳವರೆಗೆ ಮುಂದುವರಿಯುವ ನಿರೀಕ್ಷೆ ಇದೆ. ಇದುವರೆಗಿನ ಸೋಂಕಿನ ಪ್ರಮಾಣ, ಅದು ಹರಡುವ ರೀತಿ ನೋಡಿದರೆ ಒಂದೆರಡು ವರ್ಷಗಳ ಕಾಲ ಹಾಗೇ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಬೆಂಗಳೂರಿನ ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬರೇಟರಿಯ ವೈದ್ಯಕೀಯ ನಿರ್ದೇಶಕ ಡಾ. ಸುಜಯ್ ಪ್ರಸಾದ್.

ಇದುವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು ಕಂಡು ಬರುತ್ತಿದ್ದರೂ ಕೂಡ ಒಮ್ಮೆ ಬಂದವರಲ್ಲಿ ಪುನಃ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಜಾಸ್ತಿ ಇದೆ. ಈ ಹಿಂದೆ ಇತರ ಮಾನವ ಕೊರೊನಾ ವೈರಸ್ (ಎಚ್‌ಸಿಒವಿ)ಗಳ ಹರಡುವಿಕೆ ಪ್ರಕರಣಗಳನ್ನು ತೆಗೆದುಕೊಂಡರೆ ಈ ಮೊದಲು ಸೋಂಕು ತಗುಲಿದವರಲ್ಲಿ ಶೇ 3ರಿಂದ 21ರಷ್ಟು ಜನರಿಗೆ ಮತ್ತೆ ಸೋಂಕು ಉಂಟಾಗಿತ್ತು. ಆದರೆ ಕೋವಿಡ್-19 ತೆಗೆದುಕೊಂಡರೆ ಪುನಃ ಸೋಂಕು ಉಂಟಾಗುವ ಪ್ರವೃತ್ತಿಯನ್ನು ಇದುವರೆಗೂ ದಾಖಲಿಸಿಲ್ಲ.

ಒಮ್ಮೆ ಕೊರೊನಾ ಸೋಂಕು ಉಂಟಾದವರಿಗೆ ಪುನಃ ಬರುವುದು ಬಹಳ ಅಪರೂಪ ಎನ್ನಲಾಗಿದೆ. ಇತರೆ ಕೊರೊನಾ ವೈರಸ್‌ಗಳು ತಗುಲಿದ ವ್ಯಕ್ತಿಗಳಲ್ಲಿ ಆರು ತಿಂಗಳಿಂದ 30 ತಿಂಗಳಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಕೋವಿಡ್‌–19 ಹೊಸದಾಗಿರುವುದರಿಂದ ಈ ವೈರಸ್ ವಿಕಾಸಗೊಳ್ಳುವುದು ಹೇಗೆ ಎಂಬುದನ್ನು ನಾವು ಈಗಷ್ಟೇ ತಿಳಿದುಕೊಳ್ಳಲು ಪ್ರಾರಂಭಿಸಿದ್ದೇವೆ. ಹೀಗಾಗಿ ಎಷ್ಟು ದಿನಗಳಲ್ಲಿ ಮತ್ತೆ ಸೋಂಕು ತಗುಲಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಇದುವರೆಗೆ ವಿಶ್ವದಲ್ಲಿ ಸೋಂಕು ಉಂಟಾಗಿ ಗುಣಮುಖರಾಗಿದ್ದ 24 ಮಂದಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಐಸಿಎಂಆರ್ ವರದಿ ಪ್ರಕಾರ, ಮುಂಬೈನಲ್ಲಿ ಇಬ್ಬರು ಮತ್ತು ಅಹ್ಮದಾಬಾದ್‌ನಲ್ಲಿ ಒಬ್ಬರಲ್ಲಿ ಪುನಃ ಸೋಂಕು ಕಾಣಿಸಿಕೊಂಡ ಪ್ರಕರಣಗಳು ದಾಖಲಾಗಿವೆ.

ಕೆಲವು ವರದಿಗಳ ಪ್ರಕಾರ, ಸೋಂಕು ಮರುಕಳಿಸಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿರುವ ಲಕ್ಷಣಗಳು ಗಂಭೀರ ಸ್ವರೂಪವನ್ನು ಹೊಂದಿವೆ ಮತ್ತು ಇದರಿಂದ ಗುಣಮುಖರಾಗಲು ಹೆಚ್ಚು ಸಮಯ ಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು