ಸೋಮವಾರ, ಆಗಸ್ಟ್ 8, 2022
21 °C

ಆಹಾರದಲ್ಲಿದೆ ವ್ಯಾಧಿ ಕ್ಷಮತೆಯ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗತ್ರೆ ವಹಿಸುವುದು ಅತೀ ಅಗತ್ಯ. ಸದ್ಯಕ್ಕೆ ಕೊರೊನಾಗೆ ಮುಂಜಾಗ್ರತೆಯೇ ಮದ್ದು. ಮುಂಜಾಗ್ರತೆಯೊಂದಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅಷ್ಟೇ ಮುಖ್ಯ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡಷ್ಟೂ ರೋಗಗಳು ನಮ್ಮಿಂದ ದೂರ ಉಳಿಯತ್ತವೆ. ಅದರಲ್ಲೂ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕೆಮ್ಮು, ಶೀತ, ನೆಗಡಿ ಹಾಗೂ ಸಾಮಾನ್ಯ ಜ್ವರದಂತಹ ಕಾಯಿಲೆಗಳನ್ನು ಮನೆಮದ್ದಿನಿಂದಲೇ ಗುಣಪಡಿಸಬಹುದು. ಮನೆಯಲ್ಲಿ ಸಿಗುವ ಸ್ವಾತಿಕ ಆಹಾರ ಪದಾರ್ಥಗಳಾದ ನೆಲ್ಲಿಕಾಯಿ, ಜೇನುತುಪ್ಪ, ತುಪ್ಪ ಹಾಗೂ ಗೆಡ್ಡೆ ತರಕಾರಿಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಕೆಲ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಇವುಗಳಲ್ಲಿದೆ. ಹಾಗಾಗಿ ಊಟ ತಿಂಡಿಯ ಜೊತೆಗೆ ಸಾತ್ವಿಕ ಆಹಾರ ಸೇವನೆಗೂ ಹೆಚ್ಚು ಒತ್ತು ನೀಡಬೇಕು. 

ದೇಹಕ್ಕೆ ಹಿತ ಎನ್ನಿಸುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಸಾತ್ವಿಕ ಆಹಾರಗಳು ಹಾಗೂ ಅವುಗಳ ಉಪಯೋಗಗಳು ಇಲ್ಲಿವೆ. 

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ ಹಾಗೂ ಅದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಕೂಡ ಹೆಚ್ಚಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಕಾರಣಕ್ಕೆ ಸ್ವಾತಿಕ ಆಹಾರಗಳ ಪಟ್ಟಿಯಲ್ಲಿ ನೆಲ್ಲಿಕಾಯಿಗೆ ಅಗ್ರಸ್ಥಾನವಿದೆ. ಇದರಿಂದ ಉಪ್ಪಿನಕಾಯಿ, ಜ್ಯೂಸ್‌ ಅಥವಾ ನೆಲ್ಲಿಕಾಯಿ ಕ್ಯಾಂಡಿ ತಯಾರಿಸಿ ತಿನ್ನಬಹುದು. ಇದನ್ನು ಪ್ರತಿದಿನ ಬಳಸುವುದರಿಂದ ಆರೋಗ್ಯದಲ್ಲಿ ಬದಲಾವಣೆಯನ್ನು ಗಮನಿಸಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ. ಸರಸ್ವತಿ ಎಸ್‌. ಭಟ್‌.

ಸಿರಿಧಾನ್ಯಗಳು

ಸಜ್ಜೆ, ನವಣೆಯಂತಹ ಸಿರಿಧಾನ್ಯಗಳಲ್ಲಿ ನಾರಿನಂಶ ಹಾಗೂ ಪೋಷಕಾಂಶ ಅಧಿಕವಿರುತ್ತದೆ. ಬಾರ್ಲಿಯಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶ ಅಧಿಕವಿದೆ. ಅಲ್ಲದೇ ಇದು ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ಒದಗಿಸುತ್ತದೆ. ಅಲ್ಲದೇ ದೇಹದಲ್ಲಿರುವ ಟಾಕ್ಸಿನ್‌ ಅಂಶವನ್ನು ಶುದ್ಧಗೊಳಿಸುತ್ತದೆ. ಬಾರ್ಲಿ ನೀರು ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ದೇಹ ತೂಕವನ್ನು ನಿಯಂತ್ರಿಸುವುದಲ್ಲದೇ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಜೇನುತುಪ್ಪ

ಯೋಗಾಹಾರದ ಪ್ರಕಾರ ಜೇನುತುಪ್ಪದ ಕಿಣ್ವ ಸಂಯೋಜನೆಯು ರಕ್ತದಷ್ಟೇ ಪರಿಶುದ್ಧವಾಗಿರುತ್ತದೆ. ಅಲ್ಲದೇ ರಕ್ತಹೀನತೆಯ ಸಮಸ್ಯೆಗಳಿಗೆ ಇದು ತುಂಬಾನೇ ಸಹಕಾರಿ. ಅಲ್ಲದೇ ಸೋಂಕಿನ ವಿರುದ್ಧ ಹೋರಾಡುವ ಮೂಲಕ ದೇಹವನ್ನ ರಕ್ಷಿಸುತ್ತದೆ. ಇದರಲ್ಲಿರುವ ಪ್ರತಿರೋಧಕ ಶಕ್ತಿಯು ದೇಹಕ್ಕೆ ಸೋಂಕು ತಗುಲದಂತೆ ಕಾಪಾಡುತ್ತದೆ. ಕಫ ಹಾಗೂ ಶೀತ ಲಕ್ಷಣವಿದ್ದಾಗ ಕಾಳುಮೆಣಸಿನೊಂದಿಗೆ ಜೇನುತುಪ್ಪ ಸೇವಿಸುವುದು ವಾಡಿಕೆ. 

ತುಪ್ಪ

ತುಪ್ಪ ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅನೇಕರು ಮನೆಯಲ್ಲೇ ತುಪ್ಪ ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ತುಪ್ಪದಲ್ಲಿ ಕಲಬೆರಕೆ ಇಲ್ಲದ ಕಾರಣ ಇದು ಆರೋಗ್ಯಕ್ಕೂ ತುಂಬಾ ಉತ್ತಮ. ತುಪ್ಪದಲ್ಲಿ ಮಿಟಮಿನ್‌ ಅಂಶಗಳಾದ ಎ, ಬಿ, ಡಿ ಹಾಗೂ ಕೆ ಅಂಶಗಳು ಹೆಚ್ಚಿವೆ. ಅಲ್ಲದೇ ಇದರಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಿದೆ. ಪ್ರತಿರೋಧಕ ಶಕ್ತಿಯು ಇದರಲ್ಲಿ ಹೆಚ್ಚಿರುವುದರಿಂದ ಟಾಕ್ಸಿನ್ ವಿರುದ್ಧ ಹೋರಾಡುತ್ತದೆ. ಚಯಾಪಯಚ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಹವನ್ನು ಆಂತರಿಕವಾಗಿ ಸದೃಢವಾಗಿರಿಸುತ್ತದೆ. ತುಪ್ಪ, ಬೆಲ್ಲ ಹಾಗೂ ಕಲ್ಲುಸಕ್ಕರೆಯ ಮಿಶ್ರಣವನ್ನು ಶೀತಕ್ಕೆ ಮದ್ದಾಗಿ ಬಳಸುತ್ತಾರೆ ಎನ್ನುತ್ತಾರೆ ವೈದ್ಯರು. 

ಗೆಡ್ಡೆ ತರಕಾರಿ

ಕೋಸುಗೆಡ್ಡೆ, ಕುಂಬಳಕಾಯಿ, ಕ್ಯಾರೆಟ್‌, ಪಾಲಕ್‌ ಸೊಪ್ಪಿನ ಖಾದ್ಯಗಳಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕು. ಇವುಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಉತ್ತಮ. ಜೊತೆಗೆ ಇದು ಪ‍್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚುವಂತೆ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಕಾಪಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು