ಗುರುವಾರ , ಮಾರ್ಚ್ 30, 2023
24 °C

ಚರ್ಮೋ ರಕ್ಷತಿ ರಕ್ಷಿತಃ | ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

ಡಾ. ಅನಿತಾ ರವಿ Updated:

ಅಕ್ಷರ ಗಾತ್ರ : | |

Prajavani

ಸೌಂದರ್ಯ ನೋಡುವ ಕಣ್ಣಿನಲ್ಲಿರುತ್ತದೆ. ಹಾಗೆಯೇ ಆ ಸೌಂದರ್ಯದ ಗುಟ್ಟು ಚರ್ಮದ ಆರೋಗ್ಯದಲ್ಲಿದೆ.

ಪಂಚ ಜ್ಞಾನೇಂದ್ರಿಯಗಳಲ್ಲಿ ಚರ್ಮವೂ ಒಂದು. ವಾತಾವರಣಕ್ಕೆ ಮೈಯೊಡ್ಡಿ ನಿಲ್ಲುವ ಇದು ನಮಗೆ ಸ್ಪರ್ಶ, ಬಿಸಿ, ತಂಪು, ನೋವು – ಇವುಗಳ ಅರಿವನ್ನು ಮೂಡಿಸುತ್ತದೆ. ಹಾಗೆಯೇ ದೇಹದ ತಾಪಮಾನವನ್ನು, ಕಲ್ಮಶಗಳನ್ನು ಬೆವರಿನ ಮೂಲಕ ಹೊರ ಹಾಕಿ ದೇಹವನ್ನು ಸುಸ್ಥಿತಿಯಲ್ಲಿರಿಸುತ್ತದೆ. ಗರ್ಭದಿಂದಾರಭ್ಯ ನಮ್ಮ ಇಳಿವಯಸ್ಸಿನ ತನಕವೂ ವಯೋಮಾನದಂತೆ ಬದಲಾಗುತ್ತಾ, ವಾತಾವರಣದಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುತ್ತಾ, ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಕನ್ನಡಿಯಾಗಿರುತ್ತದೆ ಈ ಚರ್ಮ. ಇದು ರೋಗಮಾರ್ಗವೂ ಹೌದು, ನಮ್ಮ ಆರೋಗ್ಯ ರಕ್ಷಣೆಯ ಮೊದಲ ತಡೆಗೋಡೆಯೂ ಹೌದು. ಚರ್ಮವನ್ನು ಸರಿಯಾದ ಆಹಾರ-ವಿಹಾರದಿಂದ ಆರೈಕೆ ಮಾಡಿದ್ದಲ್ಲಿ, ಚರ್ಮವು ನಮ್ಮ ದೇಹವನ್ನು ಆರೋಗ್ಯದಲ್ಲಿರಿಸುತ್ತದೆ.

ಚರ್ಮದ ಅನಾರೋಗ್ಯಕ್ಕೆ ಕಾರಣಗಳು

*ಅತಿಯಾದ ಜಿಡ್ಡು, ಸಿಹಿ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ, ಕಾರ್ಬೋನೇಟೆಡ್ ಪಾನೀಯಗಳು.

*ರಾತ್ರಿ ತಡವಾಗಿ ಮಲಗುವುದು, ನಿದ್ರಾಹೀನತೆ.

*ಮಾನಸಿಕ ಒತ್ತಡ ಅತಿ ಮುಖ್ಯ ಕಾರಣ. ಒತ್ತಡದಿಂದಾಗಿ ಬಿಡುಗಡೆಯಾಗುವ ಹಾರ್ಮೋನ್ ಮನಸ್ಸಿನ ನೆಮ್ಮದಿಯೊಂದಿಗೆ ಚರ್ಮದ ಆರೋಗ್ಯವನ್ನೂ ಹಾಳು ಮಾಡುತ್ತದೆ.

*ಚರ್ಮದಲ್ಲಿ ಸಾಕಷ್ಟು ತೇವಾಂಶ ಇಲ್ಲದಿರುವುದು, ನವೆ/ತುರಿಕೆಗೆ ಕಾರಣವಾಗುತ್ತದೆ.

*ರಾಸಾಯನಿಕ ಸೌಂದರ್ಯವರ್ಧಕಗಳು, ಪರ್ಫ್ಯೂಮ್‌ಗಳ ಅತಿ ಬಳಕೆ.

*ಕೆಲವೊಮ್ಮೆ ಆಹಾರದಿಂದ, ದೂಳಿನಿಂದ ಅಲರ್ಜಿ ಉಂಟಾಗಿ, ಚರ್ಮದಲ್ಲಿ ಉರಿ, ನವೆ, ಊತ ಉಂಟಾಗುತ್ತದೆ.

ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

*ಸತ್ವಯುತ ಆಹಾರಸೇವನೆ.

*ಬೆಳಗ್ಗೆ ಬೇಗ ಏಳುವುದು, ರಾತ್ರಿ ಬೇಗ ಮಲಗುವುದು. ತಡ ರಾತ್ರಿ ಮಲಗುವುದು/ ನಿದ್ರಾಹೀನತೆ ಚರ್ಮದ ಅನಾರೋಗ್ಯಕ್ಕೆ ಬಹು ಮುಖ್ಯ ಕಾರಣ.

*ಚರ್ಮದ ತೇವಾಂಶ, ಕಾಪಿಡಲು ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯುವುದು.

*ಪ್ರತಿದಿನ ವ್ಯಾಯಾಮದಿಂದ ರಕ್ತಪರಿಚಲನೆ ಸರಿಯಾಗಿ ಉಂಟಾಗಿ ಚರ್ಮವು ವಯಸ್ಸಾದ ನಂತರವೂ ಸುಕ್ಕುಗಟ್ಟದೆ ಆರೋಗ್ಯದಿಂದಿರುವುದು.

*ಅಭ್ಯಂಗ/ ಆಯಿಲ್ ಮಸಾಜ್ ಚರ್ಮದ ಆರೋಗ್ಯ, ಕಾಂತಿಯನ್ನು ಹೆಚ್ಚಿಸುತ್ತದೆ.  ಚರ್ಮದ ಕಾಯಿಲೆಗಳು ಬರದಂತೆ ತಡೆಯುತ್ತದೆ. ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಹರಳೆಣ್ಣೆ – ಇವುಗಳಲ್ಲಿ ಯಾವುದಾದನ್ನಾದರೂ ಬಳಸಿ ಪ್ರತಿದಿನ ಮಾಡುವ ಅಭ್ಯಂಗ ಅತ್ಯಂತ ಉಪಯುಕ್ತ.

*ಗಿಡಮೂಲಿಕೆಗಳಿಂದ ತಯಾರಿಸಿದ ಮಿಶ್ರಣದಿಂದ ಮೇಲ್ಮೈ ಮುಖವಾಗಿ ಮಸಾಜ್ ಮಾಡುವುದರಿಂದ ಚರ್ಮದ ಕೆಳಗಿನ ಅತ್ಯಧಿಕ ಜಿಡ್ಡಿನ ಅಂಶವನ್ನು ಕರಗಿಸಿ, ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮವನ್ನು ಮೃದುವಾಗಿಸಿ, ಚರ್ಮದ ಡೆಡ್ ಸೆಲ್ಸ್ ಮತ್ತು ಕಲ್ಮಶಗಳನ್ನು ತೆಗೆಯುತ್ತದೆ.

*ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು, ಹೆಸರುಕಾಳಿನ ಹಿಟ್ಟು, ಕಡಲೆಹಿಟ್ಟು ಬಳಕೆ.

*ಮಾನಸಿಕ ಒತ್ತಡದಿಂದಾಗಿ ಚರ್ಮದ ಆರೋಗ್ಯ ತೀರಾ ಹದಗೆಡುತ್ತದೆ. ಮೊಡವೆ ಮತ್ತಿತರ ಚರ್ಮದ ಕಾಯಿಲೆಗಳು ಉಲ್ಬಣವಾಗುತ್ತದೆ. ಮನಸ್ಸನ್ನು ಸಮಾಧಾನದಲ್ಲಿಟ್ಟುಕೊಳ್ಳುವುದು ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು.

*ಆಯುರ್ವೇದದಲ್ಲಿ ಚರ್ಮದ ಆರೋಗ್ಯ ಮತ್ತು ಕಾಂತಿ ಹೆಚ್ಚಿಸಲು ವಿಶೇಷವಾಗಿ ರಕ್ತಚಂದನ, ಶ್ರೀಗಂಧ, ಲೋಧ್ರ, ಪ್ರಿಯಂಗು, ಅರಿಸಿನ ಮುಂತಾದ ‘ವರ್ಣ್ಯದ್ರವ್ಯ’ಗಳ ಉಪಯೋಗವನ್ನು ಹೇಳಲಾಗಿದೆ. ಮೊಡವೆ, ಗಾಯ, ಚರ್ಮದ ವಿವಿಧ ತೊಂದರೆಗಳಿಗೆ ಲೇಪನದಂಥ ಚಿಕಿತ್ಸೆಯನ್ನು ವಿವರಿಸಲಾಗಿದೆ.

*ವೈರಾಣುವಿನಿಂದ ಉಂಟಾಗುವ ವಾರ್ಟ್ಸ್ ಅನ್ನು ಅಲೋವೆರಾ (ಲೋಳೆಸರ) ಬಳಕೆಯಿಂದ ಕಡಿಮೆ ಮಾಡಬಹುದು.

*ಬೇಸಿಗೆಯಲ್ಲಿ ಉಂಟಾಗುವ ಬೆವರುಸಾಲೆಗೆ, ಅಕ್ಕಿ ತೊಳೆದ ನೀರು ಅತ್ಯಂತ ಉಪಯುಕ್ತ.

*ಆಗಷ್ಟೇ ತೆಗೆದ ಬೆಣ್ಣೆಯನ್ನು ಶ್ರೀಗಂಧದ ಪುಡಿಯೊಂದಿಗೆ ಬೆರೆಸಿ, ಬಿರಿದ/ಒಡೆದ ಹಿಮ್ಮಡಿಗೆ ರಾತ್ರಿ ಮಲಗುವ ಮುನ್ನ ಹಚ್ಚಿದರೆ, ಉರಿ ನೋವು ಶಮನವಾಗಿ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ಪಾದವೂ ಕೋಮಲವಾಗುತ್ತದೆ.

*ಹಾರ್ಮೋನ್‌ಗಳ ತೊಂದರೆಯಿಂದ ಉಂಟಾಗುವ ಕಪ್ಪುಕಲೆಗಳು ಸೌತೆಕಾಯಿಯ ರಸವನ್ನು ನಿಂಬೆರಸದೊಂದಿಗೆ ಬೆರೆಸಿ ಹಚ್ಚಿಕೊಂಡರೆ ಮಾಯವಾಗುತ್ತವೆ.

*ಸ್ನಾನದ ನೀರಿಗೆ ಬೇವು, ತುಳಸಿ, ಗುಲಾಬಿ ದಳಗಳು ನಿಂಬೆರಸ ಹಾಕಿ ಸ್ನಾನ ಮಾಡುವುದರಿಂದ ತುರಿಕೆ ಗುಣವಾಗುತ್ತದೆ.

*ಮುಖದಲ್ಲಿನ ನಗು, ಚರ್ಮದ ಸೌಂದರ್ಯವನ್ನು ವರ್ಧಿಸುವ ವ್ಯಾಯಾಮ. ಹೀಗಾಗಿ ಸದಾ ನಗುತ್ತಿರಿ.

ಚರ್ಮದ ಅಲರ್ಜಿ ನಿವಾರಣೆಗೆ ಕೆಲವು ಸುಲಭ ಉಪಾಯಗಳು

*ಒಂದು ಚಿಟಿಕೆ ಅರಿಸಿನವನ್ನು ಅರ್ಧ ಲೋಟ ಬಿಸಿನೀರು/ ಹಾಲಿಗೆ ಹಾಕಿ, ಬೆಳಿಗ್ಗೆ/ ರಾತ್ರಿ ಮಲಗುವ ಮೊದಲು ಕುಡಿಯುವುದು.

*ಆದಷ್ಟು ಬಿಸಿ ನೀರಿನ ಸೇವನೆ ಹಿತಕರ.

*ಆಹಾರದಲ್ಲಿ ತುಪ್ಪ, ಬೆಣ್ಣೆ, ಮೆಂತ್ಯೆ, ಅರಿಸಿನ, ಶುಂಠಿ, ಏಲಕ್ಕಿ, ಲವಂಗ, ದಾಳಿಂಬೆ, ಜೀರಿಗೆ, ಪಾಲಕ್ ಸೊಪ್ಪು, ಪಡವಲಕಾಯಿ, ಕರಿಬೇವು, ಪಪ್ಪಾಯಿ, ಒಣದ್ರಾಕ್ಷಿ, ನಿಂಬೆ ಹಣ್ಣು, ಬಾದಾಮಿಯನ್ನು ಸೇರಿಸಿ.

*ರಾತ್ರಿ ಆಹಾರದಲ್ಲಿ ಸಿಹಿ, ಜಿಡ್ಡಿನ ತಿನಿಸುಗಳು, ಮೈದಾಹಿಟ್ಟು ಬಳಸಿ ತಯಾರಿಸಿದ ತಿನಿಸುಗಳು, ಮೊಸರು ಬೇಡ.

*ಮೂಲಂಗಿ, ಬೆಂಡೆಕಾಯಿ, ಮೀನು, ಬದನೆಕಾಯಿ ಬೇಡ.

(ಲೇಖಕಿ ಆಯುರ್ವೇದ ವೈದ್ಯೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು