ಮಂಗಳವಾರ, ಮೇ 26, 2020
27 °C

ಸಂವಹನ ಸಮಸ್ಯೆಗೆ ಸ್ಮೈಲ್‌ ಮಾಸ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಟೆಕ್ನಿಕಲ್ ಅಧಿಕಾರಿ ಪೃಥ್ವಿ ರಘುರಾಮ್‌ಗೆ ಮಾತು ಬಾರದು, ಕಿವಿ ಕೇಳುವುದಿಲ್ಲ. ಅವರು ಎದುರಿಗಿರುವವರ ತುಟಿಗಳ ಚಲನೆ ನೋಡುತ್ತಾ, ಮಾತುಗಳನ್ನು ಗ್ರಹಿಸಿ ಪ್ರತಿಕ್ರಿಯಿಸುತ್ತಾರೆ. ಆದರೆ, ಕೋವಿಡ್‌ 19 ಸೋಂಕು ರಕ್ಷಣೆಗಾಗಿ ಎಲ್ಲರೂ ಮಾಸ್ಕ್‌ನಿಂದ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳಲು ಆರಂಭಿಸಿದ ಮೇಲೆ ಇವರಿಗೆ ಎದುರಿಗಿರುವವರ ತುಟಿಗಳ ಚಲನೆ ಕಾಣಿಸುತ್ತಿಲ್ಲ. ಏನು ಮಾತನಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ಇದರಿಂದ ಅವರಿಗೆ ಸಂಹವನ ನಡೆಸಲು ಕಷ್ಟವಾಗಿದೆ.

ಡಿಆರ್‌ಡಿಒದಲ್ಲಿ ಎರಡು ವಾರಗಳ ಹಿಂದೆ ಎಂದಿನಂತೆ ಕೆಲಸ ಆರಂಭವಾದರೂ ಪೃಥ್ವಿ ಅವರು ಆರಂಭದಲ್ಲಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆಗ ತಮಗೆ ಮಾಸ್ಕ್‌ ಬಳಕೆಯಿಂದ ಸಂವಹನಕ್ಕೆ ಆಗುತ್ತಿರುವ ತೊಂದರೆಯನ್ನು ಸಹೋದ್ಯೋಗಿ, ಅಸಿಸ್ಟೆಂಟ್‌ ಸೈಂಟಿಸ್ಟ್‌ ವಿನೋದ್ ಕರ್ತವ್ಯ‌ ಅವರ ಬಳಿ ಹಂಚಿಕೊಂಡರು. ವಿನೋದ್‌ ಅವರ ಮನೆ ಪಕ್ಕದಲ್ಲಿಯೂ ಇಬ್ಬರಿಗೆ ಇಂತಹದೇ ಸಮಸ್ಯೆ ಎದುರಾಗಿತ್ತು.

ಈ ಸಮಸ್ಯೆಯನ್ನು ಮನಗಂಡು ವಿನೋದ್ ಕಿವಿ ಕೇಳದ, ಮಾತು ಬಾರದವರಿಗೆ ಸಂಜ್ಞಾ ಭಾಷೆಯ ಮೂಲಕ ಸಂವಹನ ನಡೆಸಲು ಸುಲಭವಾಗುವಂತೆ ವಿಶೇಷ ಮಾಸ್ಕ್ ರೂಪಿಸಿದರು. ಅದಕ್ಕೆ ‘ಸ್ಮೈಲ್ ಮಾಸ್ಕ್‌‘ ಎಂದು ಹೆಸರಿಸಿಟ್ಟಿದ್ದಾರೆ. ಇಂತಹ ಮಾಸ್ಕ್‌ಗಳನ್ನು ತಯಾರಿಸಿ, ಅಗತ್ಯವಿರುವವರಿಗೆ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದ್ದಾರೆ. 

ವಿನೋದ್‌ ಕರ್ತವ್ಯ ಮೊದಲು ಬಾಯಿ ಚಲನೆ ಕಾಣುವಂತಹ ಮಾಸ್ಕ್‌ ಇದೆಯೇ ಎಂದು ಔಷಧಿ ಅಂಗಡಿಗಳಲ್ಲಿ ವಿಚಾರಿಸಿದರಂತೆ. ಎಲ್ಲೂ ಸಿಗದಿದ್ದಾಗ ಕೊನೆಗೆ ತಾವೇ ಪಾರದರ್ಶಕ ಮಾಸ್ಕ್‌ ತಯಾರಿಸಲು ಮುಂದಾದರು. ಈ ಮಾಸ್ಕ್‌ನ ಬಾಯಿಯ ಜಾಗದಲ್ಲಿ ಪ್ಲಾಸ್ಟಿಕ್‌ ಶೀಟ್‌ ಹೊಂದಿದ್ದು, ಬಾಯಿಯ ಚಲನೆ ಎದುರಿದ್ದವರಿಗೆ ಕಾಣುತ್ತದೆ. 

‘ಈ ಮಾಸ್ಕ್‌ ತಯಾರಿಸಿದ ನಂತರ ನಾನು ಪೃಥ್ವಿ ರಘುರಾಮ್‌ ಹಾಗೂ ಮನೆ ಪಕ್ಕದವರಿಗೆ ನೀಡಿದೆ. ಮಾಸ್ಕ್‌ ತೊಟ್ಟು ಚೆನ್ನಾಗಿದೆ ಎಂದು ನಗು ಬೀರಿದರು. ಹಾಗಾಗಿ ಅದಕ್ಕೆ ‘ಸ್ಮೈಲ್‌ ಮಾಸ್ಕ್‌’ ಎಂದು ಕರೆದೆ’ ಎಂದು ‘ಪ್ರಜಾ ಪ್ಲಸ್’‌ಗೆ ವಿವರಿಸಿದರು.

ಈ ಮಾಸ್ಕ್‌ನಲ್ಲಿ ಎರಡು ಪದರಗಳಲ್ಲಿ ಬಟ್ಟೆ ಜೋಡಿಸಿ, ಅದರ ಮಧ್ಯದಲ್ಲಿ ಫೇಸ್‌ಶೀಲ್ಡ್‌ಗೆ ಬಳಸುವ ಉತ್ತಮ ಗುಣಮಟ್ಟದ, ‌ಸ್ಕ್ರಾಚ್‌ ಪ್ರೂಫ್‌ ಪಾರದರ್ಶಕ ಪ್ಲಾಸ್ಟಿಕ್‌ ಬಳಸಲಾಗಿದೆ. ಈ ಪ್ಲಾಸ್ಟಿಕ್ ಹಗುರವಾಗಿದ್ದು, ಪರಿಸರ ಸ್ನೇಹಿ ಹಾಗೂ ಮಣ್ಣಿನಲ್ಲಿ ಕರಗುತ್ತದೆ. ಪ್ಲಾಸ್ಟಿಕ್‌ ಅನ್ನು ಬಾಕ್ಸ್‌ ರೀತಿಯಲ್ಲಿ ಕಟ್‌ ಮಾಡಿ, ಬಟ್ಟೆಗೆ ಜೋಡಿಸಿ ಹೊಲಿಯಲಾಗಿದೆ.

ಒಂದು ಮಾಸ್ಕ್‌ ತಯಾರಿಗೆ ಕಚ್ಚಾವಸ್ತು, ಹೊಲಿಗೆ ಚಾರ್ಜ್ ಸೇರಿ ₹ 25 ವೆಚ್ಚವಾಗುತ್ತದೆ. ಈಗಾಗಲೇ, 200ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಹಂಚಿದ್ದಾರೆ. ಕರ್ನಾಟಕವಲ್ಲದೇ ತಮಿಳುನಾಡು, ಆಂಧ್ರಪ್ರದೇಶಕ್ಕೂ ಈ ಮಾಸ್ಕ್‌ಗಳನ್ನು ತಲುಪಿಸಲಿದ್ದಾರೆ.

ವಿನೋದ್‌ ಸಂಪರ್ಕಕ್ಕೆ– ಮೊಬೈಲ್‌ 96117 33032

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು