ಮಂಗಳವಾರ, ಜನವರಿ 25, 2022
25 °C

ಫಿಟ್‌ನೆಸ್‌ ವಿಷಯದಲ್ಲಿ ಹೋಲಿಕೆ ಬೇಡ, ತಜ್ಞರ ಸಲಹೆ ಅಗತ್ಯ

ಪ್ರೊ.ಶೇಷಣ್ಣ Updated:

ಅಕ್ಷರ ಗಾತ್ರ : | |

ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವಲ್ಲಿ ಸ್ನಾಯು ಬಲ (ಸ್ಟ್ರೆಂತ್‌), ಸ್ನಾಯು ಕಷ್ಟ ಸಹಿಷ್ಣುತೆ (ಮಸ್ಕ್ಯುಲರ್‌ ಎಂಡ್ಯುರೆನ್ಸ್‌), ಹೃದಯ ಮತ್ತು ರಕ್ತನಾಳಗಳ ಸಾಮರ್ಥ್ಯ (ಕಾರ್ಡಿಯೊವ್ಯಾಸ್ಕ್ಯುಲರ್‌ ಎಂಡ್ಯುರೆನ್ಸ್‌), ಮೈಮಣಿತ (ಫ್ಲೆಕ್ಸಿಬಿಲಿಟಿ) ಪ್ರಮುಖವಾಗಿರುವ ಅಂಶಗಳು.

ಆರೋಗ್ಯಕ್ಕೆ ಸಂಬಂಧಿಸಿದ ದೈಹಿಕ ಸಾಮರ್ಥ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ದೈಹಿಕ ಸಾಮರ್ಥ್ಯ ಪ್ರತೇಕವಾದಂಥವು. ಜನಸಾಮಾನ್ಯರು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಹೇಗೆ? ಒಬ್ಬ ವ್ಯಕ್ತಿ ದೈನಂದಿನ ಚಟುವಟಿಕೆಗಳನ್ನು ಆಯಾಸವಿಲ್ಲದೆ ನಿರ್ವಹಿಸಿ, ಹೆಚ್ಚುವರಿ ಕಾರ್ಯ ಬಂದರೆ ಅವುಗಳನ್ನೂ ಮಾಡಿ, ಬಿಡುವಿನ ವೇಳೆ ಮನರಂಜನೆ ಚಟುವಟಿಕೆಗಳಲ್ಲಿ ಭಾಗಿಯಾಗುವ ಚೈತನ್ಯ ಪಡೆದುಕೊಂಡಿದ್ದರೆ ಆತ ದೈಹಿಕವಾಗಿ ಸಮರ್ಥನಾಗಿದ್ದಾನೆ ಎಂದು ಅರ್ಥ. ಆತ ವಿದ್ಯಾರ್ಥಿ, ಉದ್ಯೋಗಿ, ಕಾರ್ಮಿಕ ಯಾರೇ ಆಗಿರಬಹುದು.

ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವಲ್ಲಿ ಸ್ನಾಯು ಬಲ (ಸ್ಟ್ರೆಂತ್‌), ಸ್ನಾಯು ಕಷ್ಟ ಸಹಿಷ್ಣುತೆ (ಮಸ್ಕ್ಯುಲರ್‌ ಎಂಡ್ಯುರೆನ್ಸ್‌), ಹೃದಯ ಮತ್ತು ರಕ್ತನಾಳಗಳ ಸಾಮರ್ಥ್ಯ (ಕಾರ್ಡಿಯೊವ್ಯಾಸ್ಕ್ಯುಲರ್‌ ಎಂಡ್ಯುರೆನ್ಸ್‌), ಮೈಮಣಿತ (ಫ್ಲೆಕ್ಸಿಬಿಲಿಟಿ) ಪ್ರಮುಖವಾಗಿರುವ ಅಂಶಗಳು. ಜೊತೆಗೆ ಸ್ಥೂಲಕಾಯದಿಂದ (ಒಬೆಸಿಟಿ) ದೂರವಿರುವ ಅಂಶ ಕೂಡ ಇದರಲ್ಲಿ ಸೇರಿದೆ. ಯಾವುದೇ ಪರಿಕರಗಳಿಲ್ಲದೆಯೂ ಶರೀರವನ್ನು ಆಧಾರವಾಗಿಟ್ಟುಕೊಂಡು ವ್ಯಾಯಾಮ ಮಾಡಿ ಈ ಅಂಶಗಳನ್ನು ರೂಢಿಸಿಕೊಳ್ಳಬಹುದು.

ಒಂದು ಮಟ್ಟ ತಲುಪಿದ ಮೇಲೆ, ಹೆಚ್ಚಾಗಿ ಸ್ನಾಯು ಬೆಳೆಸಿಕೊಳ್ಳಲು ಪರಿಕರಗಳ ಆಶ್ರಯ ಪಡೆಯಬೇಕಾಗುತ್ತದೆ. ಜಿಮ್‌ಗೆ ಹೋಗಿ ಕಸರತ್ತು ನಡೆಸಬೇಕಾಗುತ್ತದೆ. ಆಹಾರ ಸೇವನೆ, ಜೀವನಶೈಲಿ ಕೂಡ ಪ್ರಭಾವ ಬೀರುತ್ತವೆ. ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ತೂಕ ಹೊಂದಿರಬೇಕು. ಚಟುವಟಿಕೆಗೆ ತಕ್ಕಂತೆ ಆಹಾರ ಪೋಷಣೆ ಇರಬೇಕು. ಕಾರ್ಬೊಹೈಡ್ರೇಟ್ಸ್‌, ಪ್ರೋಟೀನ್ಸ್‌, ಫ್ಯಾಟ್‌, ಮಿನರಲ್ಸ್‌, ವಿಟಮಿನ್ಸ್‌ ಅಂಡ್‌ ಸಾಲ್ಟ್ಸ್ ಹಾಗೂ ನೀರು ನಾವು ತಿನ್ನುವ ಆಹಾರದಲ್ಲಿ ಸರಿಸಮಾನವಾಗಿ, ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ತಜ್ಞರ ಅಭಿಪ್ರಾಯ ಪಡೆದು ಸೇವಿಸಿ ವ್ಯಾಯಾಮ ಮಾಡಿದರೆ ದೈನಂದಿನ ಚಟುವಟಿಕೆಗಳಿಗೆ ನೆರವಾಗುತ್ತದೆ.

ಯಾರನ್ನೋ ನೋಡಿ ಬೇಗನೇ ಸ್ನಾಯು ಬೆಳೆಸಿಕೊಳ್ಳಬೇಕೆಂದು ಅತಿರೇಕದ ವರ್ತನೆ ತೋರುವುದು ತಪ್ಪು. ಶ್ರಮದಾಯಕ ವ್ಯಾಯಾಮ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು, ಪರೀಕ್ಷಿಸಿಕೊಳ್ಳಬೇಕು. ದೇಹದ ಆಂತರಿಕ ಸ್ಥಿತಿ ಅರಿಯುವುದು ಕಷ್ಟ. ಒಮ್ಮೆಲೇ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳಲು ಪ್ರಯತ್ನಿಸುವ ಬದಲು ವೇಳಾಪಟ್ಟಿ ಹಾಕಿಕೊಂಡು ಕ್ರಮೇಣವಾಗಿ ಕಸರತ್ತು ನಡೆಸಿ ಸ್ನಾಯುಗಳನ್ನು ಗಟ್ಟಿಮುಟ್ಟಾಗಿಸಿಕೊಳ್ಳಬೇಕು.

ಲೇಖಕ: ಕ್ರೀಡಾತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು