ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಇರಿ ಫಿಟ್‌ನೆಸ್‌ ಮರೆಯದಿರಿ

Last Updated 26 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೋವಿಡ್‌ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಕೊರೊನಾ ವೈರಾಣುವಿಗೆ ಕಡಿವಾಣ ಹಾಕುವ ಸಲುವಾಗಿ ವಿಶ್ವದೆಲ್ಲೆಡೆ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಹಾಲಿವುಡ್‌, ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌, ಸ್ಯಾಂಡಲ್‌ವುಡ್‌ ಹೀಗೆ ಅನೇಕ ತಾರೆಯರು, ಕ್ರೀಡಾ ಕ್ಷೇತ್ರದ ದಿಗ್ಗಜರು ‘ಗೃಹಬಂಧನ’ದಲ್ಲಿದ್ದಾರೆ.

ಜಿಮ್‌ಗಳು, ಯೋಗ ಕೇಂದ್ರಗಳಿಗೆ ಬೀಗ ಬಿದ್ದಿದೆ. ಹಾಗಂತ ಕ್ರೀಡೆ ಹಾಗೂ ಚಲನಚಿತ್ರ ತಾರೆಯರು ಕೈಕಟ್ಟಿ ಕುಳಿತಿಲ್ಲ.ಮನೆಯಲ್ಲೇ ನಿತ್ಯ ಒಂದಷ್ಟು ವ್ಯಾಯಾಮಗಳನ್ನು ಮಾಡಿ, ದೇಹದಲ್ಲಿ ಸಂಗ್ರಹವಾಗುವ ಅನಗತ್ಯ ಕೊಬ್ಬು ಹಾಗೂ ಕ್ಯಾಲೊರಿಗಳನ್ನು ಕರಗಿಸುತ್ತಿದ್ದಾರೆ. ಆ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಅನೇಕರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ದೇಹ ದಂಡಿಸದೇ ಹೋದರೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಂಭವವಿರುತ್ತದೆ. ಈ ಕಾರಣದಿಂದಲೇ18 ರಿಂದ 64 ವರ್ಷದೊಳಗಿನವರು ವಾರದಲ್ಲಿ ಕನಿಷ್ಠ ಮೂರು ಗಂಟೆ ವ್ಯಾಯಾಮ ಮಾಡಬೇಕೆಂದು ಆಸ್ಟ್ರೇಲಿಯಾದ ನ್ಯಾಷನಲ್‌ ಎಕ್ಸರ್‌ಸೈಸ್‌ ಗೈಡ್‌ಲೈನ್ಸ್‌ ಸಲಹೆ ನೀಡಿದೆ.

ಪ್ರತಿನಿತ್ಯ ಒಂದಷ್ಟು ಹೊತ್ತು ಸ್ಕಿಪ್ಪಿಂಗ್‌ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕೊಬ್ಬು ಕರಗಿಸಲು ಇದು ಪರಿಣಾಮಕಾರಿ ಮಾರ್ಗ.ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ದೇಹದಲ್ಲಿ ರಕ್ತ ಪರಿಚಲನೆಯೂ ಸರಾಗವಾಗುತ್ತದೆ. ಜೊತೆಗೆ ಏಕಾಗ್ರತೆ ಕಾಪಾಡಿಕೊಳ್ಳಲು ಹಾಗೂ ಸ್ಟಾಮಿನಾ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ. ದೇಹ ತೂಕ ಇಳಿಸಲು ಹಾಗೂ ಖಿನ್ನತೆಯಿಂದ ಪಾರಾಗಲೂ ಇದು ರಾಮಬಾಣ.

ನಿತ್ಯವೂ ಒಂದೇ ಬಗೆಯ ವ್ಯಾಯಾಮಗಳನ್ನು ಮಾಡಿ ಬೇಸರವಾದರೆ ಏರೋಬಿಕ್‌ ನೃತ್ಯದ ಮೊರೆ ಹೋಗಬಹುದು. ಕ್ಯಾಲೋರಿಗಳನ್ನು ಕರಗಿಸಲು ಇದೂ ಕೂಡ ಉತ್ತಮ ಮಾರ್ಗ. ಇದರಿಂದ ಒತ್ತಡಗಳೆಲ್ಲಾ ದೂರವಾಗಿ ಮನಸ್ಸು ಪ್ರಫುಲ್ಲವಾಗುತ್ತದೆ.

ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಮೂಲಕವೂ ದೇಹ ದಂಡಿಸಬಹುದು. ಸಿಂಗಲ್‌ ಸ್ಟೆಪ್‌‌, ಡಬಲ್‌ ಸ್ಟೆಪ್‌‌, ಸೈಡ್‌ಸ್ಟೆಪ್‌ ಕ್ರಾಸ್‌ಓವರ್‌, ಡಬಲ್‌ ಸ್ಟೆಪ್‌ ಲೆಗ್‌ರೈಸ್‌, ಸಿಂಗಲ್‌ ಸ್ಟೆಪ್ ಹಾಗೂ ಡಬಲ್‌ ಸ್ಟೆಪ್‌ ಹಾಪ್ಸ್‌ ಹೀಗೆ ಮೆಟ್ಟಿಲುಗಳ ನೆರವಿನಿಂದ ಹಲವು ಪ್ರಕಾರದ ವ್ಯಾಯಾಮಗಳನ್ನು ಮಾಡಬಹುದಾಗಿದೆ.

ಮೂಳೆಗಳನ್ನು ಬಲಗೊಳಿಸಲು, ಒತ್ತಡದಿಂದ ಪಾರಾಗಲು ಮತ್ತು ದೇಹದ ಶಕ್ತಿ ಹೆಚ್ಚಿಸಲು ಜಂಪಿಂಗ್‌ ವ್ಯಾಯಾಮಗಳು ಹೆಚ್ಚು ಉಪಯುಕ್ತವಾಗಿವೆ. ಸ್ಕ್ವಾಟ್‌ ಜಂಪ್‌, ಸ್ಪ್ಲಿಟ್‌ ಸ್ಕ್ವಾಟ್‌ ಜಂಪ್‌, ಸಿಂಗಲ್‌ ಲೆಗ್‌ ಹಾಪ್‌, ಫ್ರಾಗ್‌ ಜಂಪ್‌ (ಕಪ್ಪೆ ಜಿಗಿತ), ಜಂಪಿಂಗ್‌ ಜಾಕ್ಸ್‌ ಹೀಗೆ ಅನೇಕ ಪ್ರಕಾರಗಳು ಇದರಲ್ಲಿವೆ.

‘ಕೊರೊನಾ ವೈರಾಣು ತಲ್ಲಣ ಸೃಷ್ಟಿಸಿದೆ. ಇಂತಹ ಸಮಯದಲ್ಲಿ ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ಮೈ–ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವತ್ತಲೂ ಚಿತ್ತ ಹರಿಸಬೇಕಿದೆ. ಇದಕ್ಕಾಗಿ ದಿನದಲ್ಲಿ ಕನಿಷ್ಠ ಅರ್ಧ ಗಂಟೆ ಸರಳ ವ್ಯಾಯಾಮಗಳನ್ನು ಮಾಡುವುದು ತುಂಬಾ ಅವಶ್ಯ’ ಎಂದು ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಫಿಟ್‌ ಆ್ಯಂಡ್‌ ಫಿಸಿಕ್‌ ಜಿಮ್‌ನ ಮಾಲೀಕ ಹಾಗೂ ಟ್ರೈನರ್‌ ನಾಗಭೂಷಣ್‌ ಹೇಳುತ್ತಾರೆ.

‘ಮನೆಯಲ್ಲಿ ಡೆಂಬೆಲ್ಸ್‌ ಇರುವವರು ಅವುಗಳ ಸಹಾಯದಿಂದ ಬೈಸೆಪ್ಸ್‌, ಟ್ರೈಸೆಪ್ಸ್‌, ಸ್ಟಾಂಡಿಂಗ್‌ ಪ್ಲೇಟ್‌ ಕರ್ಲ್‌, ಸ್ಟಾಂಡಿಂಗ್‌ ಡೆಂಬಲ್‌ ಕರ್ಲ್‌, ಸೀಟೆಡ್‌ ಡೆಂಬಲ್‌ ಕಾನ್ಸಂಟ್ರೇಷನ್‌ ಕರ್ಲ್, ಚೆಸ್ಟ್‌‌ ಪ್ರೆಸ್‌, ಸಿಂಗಲ್‌ ಹ್ಯಾಂಡ್ ಎಕ್ಸ್‌ಟೆನ್ಸನ್ ಹೀಗೆ ಹಲವು ವ್ಯಾಯಾಮಗಳನ್ನು ಮಾಡಬಹುದು. ಡೆಂಬಲ್ಸ್‌ ಇಲ್ಲದವರು ಒಂದು ಲೀಟರ್‌ನ ಎರಡು ನೀರಿನ ಬಾಟಲ್‌ಗಳನ್ನು ಬಳಸಿ ಅಥವಾ ರೆಸಿಸ್ಟೆಂಟ್‌ ಬ್ಯಾಂಡ್‌ಗಳನ್ನು ಬಳಸಿಯೂ ಇವುಗಳನ್ನು ಮಾಡಬಹುದು’ ಎಂದು ಅವರು ಹೇಳುತ್ತಾರೆ.

‘ಮನೆಯಲ್ಲಿರುವ ಕುರ್ಚಿ, ಸೋಫಾ, ಟೇಬಲ್‌ಗಳನ್ನು ಬಳಸಿಕೊಂಡು ಅನೇಕ ಕಸರತ್ತುಗಳನ್ನು ಮಾಡಬಹುದು. ವಯಸ್ಸಾದವರಿಗೆ ಮೆಟ್ಟಿಲು ಹತ್ತಿ ಇಳಿಯುವ ವ್ಯಾಯಾಮಗಳನ್ನು ಮಾಡುವುದು ಕಷ್ಟವಾಗುತ್ತದೆ. ಇದರಿಂದ ಮಂಡಿಯ ನೋವು ಬಾಧಿಸಬಹುದು. ಅಂತಹವರು ಸೋಫಾ ಮೇಲೆ ಕುಳಿತು ಏಳುವುದನ್ನು ಅಭ್ಯಾಸ ಮಾಡಬೇಕು. ನಿಂತುಕೊಂಡು ಮುಂದಕ್ಕೆ ಬಾಗಿ ಹಣೆಯನ್ನು ಮಂಡಿಗೆ ತಾಗಿಸುವುದು (ಸ್ಟಾಂಡಿಂಗ್‌ ಹ್ಯಾಮ್‌ಸ್ಟ್ರಿಂಗ್ ಸ್ಟ್ರೆಚ್‌), ಅಂಗಾತ ಮಲಗಿ ಬಳಿಕ ಎರಡು ಕಾಲುಗಳ ಮಂಡಿಯನ್ನು ಹಿಡಿದು ಅವುಗಳನ್ನು ಎದೆಗೆ ತಾಗಿಸುವುದು (ನೀಸ್‌ ಟು ಚೆಸ್ಟ್‌), ಹೀಗೆಹಲವು ಸ್ಟ್ರೆಚಿಂಗ್‌ ವ್ಯಾಯಾಮಗಳನ್ನು ಮಾಡುವುದೂ ಒಳಿತು. ರೆಸಿಸ್ಟೆಂಟ್‌ ಬ್ಯಾಂಡ್‌ ಅನ್ನು ಕಿಟಕಿಗೆ ಕಟ್ಟಿ ಇನ್ನೊಂದು ಭಾಗವನ್ನು ಸೊಂಟಕ್ಕೆ ಸಿಲುಕಿಸಿಕೊಂಡು ಓಡುವುದು ಸೇರಿದಂತೆ ಹಲವು ವ್ಯಾಯಾಮಗಳನ್ನು ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT