ಬದುಕಿನಲ್ಲಿ ಎಲ್ಲವೂ ಅಸ್ಥಿರ, ಕ್ಷಣಿಕ, ಅಭದ್ರ; ಯಾವುದನ್ನೂ ದೀರ್ಘಕಾಲ ಆಶ್ರಯಿಸಿ ಬದುಕುವುದು ಕಷ್ಟಸಾಧ್ಯ. ನಂಬಿಕೆಗಳು, ಭಾವನೆಗಳು, ನಿಲುವು, ದೃಷ್ಟಿಕೋನಗಳು-ಎಲ್ಲವೂ ಬದಲಾಗುವುದು ಖಂಡಿತ. ಯಾವ ಬಾಂಧವ್ಯವೂ ಶಾಶ್ವತವಲ್ಲ, ಯಾವ ಸಾಧನೆ, ಯಶಸ್ಸು ಕೊಡುವ ಸಂತೋಷವೂ ನಿರಂತರವಲ್ಲ. ಯಾವಾಗ ನಾವು ಕಟ್ಟಿಕೊಂಡಿರುವ 'ನಮ್ಮ ಬದುಕು' ಎಂಬ ಸೌಧ ಕುಸಿಯುವುದೋ ಗೊತ್ತಾಗುವುದಿಲ್ಲ.

ಭೌತಿಕ, ಭಾವನಾತ್ಮಕ ಅಪಾಯಗಳಂತೂ ಯಾವ ಕ್ಷಣದಲ್ಲಿ, ಯಾವ ದಿಕ್ಕಿನಿಂದಾದರೂ ಎದುರಾಗಬಲ್ಲದು; ಪ್ರತಿಕ್ಷಣವೂ ಎಚ್ಚರವಾಗಿದ್ದು ನಮ್ಮ ಬದುಕನ್ನು ಸಾಧ್ಯವಿದ್ದಷ್ಟು ಎಲ್ಲ ಹೊಡೆತಗಳಿಂದ ರಕ್ಷಿಸಿಕೊಂಡು ಸುಸ್ಥಿರ, ಸುಂದರ, ಸುಖಮಯಗೊಳಿಸಿಕೊಳ್ಳಬೇಕೆಂಬುದು ಪ್ರತಿ ಮನುಷ್ಯನ ಬಯಕೆ. ಬದುಕಿನ ಏನೊಂದರ ಮೇಲೂ ನಮ್ಮ ನಿಯಂತ್ರಣ ಸ್ಥಿರವಲ್ಲ. 'ನಮ್ಮ ದೇಹವೇ ನಮ್ಮ ಆಜ್ಞೆ ಪಾಲಿಸುವುದಿಲ್ಲ, ಇನ್ನು ಮಿಕ್ಕಿದುದರ ಗತಿಯೇನು?' ಎನಿಸುವಂತಹ ಪರಿಸ್ಥಿತಿಯಲ್ಲಿ ನಮಗೆ ನಮ್ಮ ನಿಯಂತ್ರಣದಲ್ಲಿರುವ ವಸ್ತು ಯಾವುದು ಎನ್ನುವುದರ ಹುಡುಕಾಟ ಶುರುವಾಗಿ, ಕೊನೆಗೆ ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ ಎನ್ನುವುದರ ಅರಿವು ಭಯವಾಗಿ, ಆತಂಕವಾಗಿ ರೂಪಾಂತರಹೊಂದುತ್ತದೆ.

ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ ಎಂದರೆ ಯಾವಾಗ ಏನು ಬೇಕಾದರೂ ಆಗಬಹುದು, ಅಪಾಯ ಹೇಗೆ ಬೇಕಾದರೂ ಬಂದೊದಗಬಹುದಾದರೆ, ಧುತ್ತೆಂದು ಬಂದು ನಿಲ್ಲುವ ಅನಿರೀಕ್ಷಿತಗಳಿಗಾಗಿ, ಅವುಗಳು ತರುವ ತಾಪ ನಿವಾರಣೆಗಾಗಿ ಸಿದ್ಧತೆ ಬೇಡವೇ? ಹಾಗಾಗಿ ಮನಸ್ಸು ಅನಿರೀಕ್ಷಿತಗಳಿಗೆ ಸಿದ್ಧತೆ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿ, ಅತಿಯಾಗಿ, ವಿಪರೀತವಾಗಿ ದುಡಿಯತೊಡಗುತ್ತದೆ; ದುಡಿದು ಬಳಲಿ, ಆ ಬಳಲಿಕೆ ಅನಿರೀಕ್ಷಿತಗಳ ಭಯವನ್ನು ಮತ್ತೂ ತೀವ್ರಗೊಳಿಸಿ ಕೊನೆಗೆ ಎಲ್ಲದರ ಮೇಲಿನ ಹಿಡಿತ ಸಾಧಿಸುವ ಮಹತ್ವಾಕಾಂಕ್ಷೆಯಲ್ಲಿ ನಮ್ಮ ಯೋಚನೆಗಳು ಮಿತಿಮೀರಿ ತಾನೇತಾನಾಗಿ ಹುಟ್ಟಿಕೊಳ್ಳುತ್ತಾ ನಮ್ಮನ್ನು ದಣಿಸುತ್ತವೆ.

ಸಾಧಾರಣವಾಗಿ ಬಾಲ್ಯವೇ ನಮ್ಮೆಲ್ಲಾ ಭಾವನೆಗಳು, ವರ್ತನೆಗಳು ರೂಪುಗೊಳ್ಳುವ ಕಾಲ. ಬಾಲ್ಯದಲ್ಲಿ ನಾವು ಪೋಷಕರ ಆಸರೆಯಲ್ಲಿ ಸುರಕ್ಷಿತವಾಗಿದ್ದೇವೆಂಬ ಬಲವಾದ ನಂಬಿಕೆ ಬದುಕಿನ ಅನಿರೀಕ್ಷಿತಗಳನ್ನು ಸಮತೋಲನದಿಂದ ನಿರ್ವಹಿಸಲು ಸಹಕಾರಿ. ನಾವು ಬಾಲ್ಯದಲ್ಲಿ, ಯೌವನದ ಪ್ರಾರಂಭದ ದಿನಗಳಲ್ಲಿ ಬದುಕಿನ ಏರುಪೇರುಗಳನ್ನು, ಅಶಾಶ್ವತತೆ, ಅನಿಶ್ಚಿತತೆಯನ್ನು ಅನುಭವಿಸುತ್ತಿರುವಾಗ ನಮ್ಮೊಂದಿಗೆ ಭಾವನಾತ್ಮಕವಾಗಿ ಪ್ರಬುದ್ಧರಾಗಿರುವ, ನಮ್ಮನ್ನು ಪ್ರೀತಿಸುವ ಹಿರಿಯರೊಬ್ಬರು / ಪ್ರೌಢವಯಸ್ಕರೊಬ್ಬರು ನಮಗೆ ಬೆನ್ನೆಲುಬಾಗಿ ನಿಂತಿದ್ದಾಗ ಬದುಕಿನ ಅಸ್ಥಿರತೆಯನ್ನು ನಾವು ಸಹಜವಾಗಿ ಸ್ವೀಕರಿಸಬಹುದು; ಆದರೆ ಸಣ್ಣವಯಸ್ಸಿನಲ್ಲಿ ಅನಿರೀಕ್ಷಿತ ಆಘಾತಗಳನ್ನು ಯಾರ ಆಸರೆಯಿಲ್ಲದೆ ಒಬ್ಬಂಟಿಯಾಗಿ ಎದುರಿಸಬೇಕಾದಾಗ ,ನಮ್ಮ ಬಳಿ ಇರುವ ಏಕೈಕ ಸಂಪನ್ಮೂಲ ನಮ್ಮ ಬುದ್ಧಿಯೊಂದೇ ಆಗಿರುವಾಗ ಅದನ್ನೇ ಅತಿಯಾಗಿ ಬಳಸದೇ ಇರುವುದು ಹೇಗೆ?

ಹಾಗಾಗಿ ಬುದ್ಧಿಯನ್ನು ಧಾರಾಳವಾಗಿ ಖರ್ಚುಮಾಡಿ' ಅದು ಹೀಗಾದರೆ ಹೇಗೆ? ಅವರು ಹಾಗೆಂದುಬಿಟ್ಟರೆ? ಅಲ್ಲಿ ಏನಾದರೆ ಏನು ಮಾಡಬೇಕು?’ ಹೀಗೆ ಮನಸ್ಸು ಮುಂದಾಗಬಹುದಾದ್ದನ್ನು ಹತ್ತಾರು ದೃಷ್ಟಿಕೋನಗಳಿಂದ ಊಹಿಸಿ, ವಿಶ್ಲೇಷಿಸಿ ಅನಿರೀಕ್ಷಿತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾ, ಅದೇ ಪ್ರಕ್ರಿಯೆಯಲ್ಲಿ ವಾಸ್ತವದಲ್ಲಿ ಎದುರಾಗಬಹುದಾದ ಕಷ್ಟ-ನಷ್ಟಗಳೆಷ್ಟು, ಕಲ್ಪನೆಯಲ್ಲಿ ನಾವು ಎದುರಿಸುತ್ತಿರುವ ಕಷ್ಟ-ನಷ್ಟಗಳೆಷ್ಟು ಎಂಬುದರ ನಡುವಿನ ಗೆರೆ ಮಾಸಿಹೋಗಿ ಎಲ್ಲ ಕಾಲದಲ್ಲೂ ಯುದ್ಧಕ್ಕೆ ಸನ್ನದ್ಧನಾಗಿರುವ ಸೈನಿಕನಂತೆ, ತುರ್ತು ಪರಿಸ್ಥಿತಿಗಳಿಗೆ ಮನಸ್ಸು ಸಜ್ಜಾಗಿ ನಿಂತಿರುತ್ತದೆ. ಸದಾ ಯಾವುದೋ ಗಹನ ಗಂಭೀರ ಸಮಸ್ಯೆ ಎದುರಿಸಲು ಸಜ್ಜಾದ ಮನಸ್ಸು ವಿರಮಿಸುವುದು, ಆನಂದವಾಗಿ ವಿಹಾರ ಮಾಡುವುದು, ನಿರ್ಭಯವಾಗಿ ವಿಚಾರಗಳನ್ನು ಗ್ರಹಿಸುವುದು ಸಾಧ್ಯವೇ?

ತುರ್ತುಪರಿಸ್ಥಿತಿಗಳನ್ನಷ್ಟೇ ಎದುರಿಸಲು ತರಬೇತಿ ಹೊಂದಿದ ಮನಸ್ಸಿಗೆ ಸಂತೋಷ ಸ್ವೀಕರಿಸುವುದು ಹೇಗೆ ಎನ್ನುವುದರ ಅರಿವಾಗುವುದು ತುಸು ಕಷ್ಟವೇ ಹೌದು. ಬದುಕಿನ ಎಲ್ಲ ಸಂತೋಷವನ್ನೂ ಯಾವುದೋ ಭಯ, ಸಂಶಯದ ನೆರಳಲ್ಲೇ ಕಾಣುವುದು ಬದುಕಿನ ಪರಿಪೂರ್ಣತೆಗೆ, ಸೌಂದರ್ಯಕ್ಕೆ ವಿಮುಖರಾದಂತೆಯೇ ಸರಿ.ನಾವು ಎಲ್ಲ ರೀತಿಯ ಕಷ್ಟ, ನೋವು, ಅವಮಾನವನ್ನು ಎದುರಿಸುವ, ಅದನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯನ್ನು ಕರಗತ ಮಾಡಿಕೊಂಡಿದ್ದು ಬದುಕಿನ ಭಾರ ಹೊರಲು ಸಿದ್ಧರಾಗುತ್ತೇವೆ; ಆದರೆ ಯಾವ ಭಾರಗಳನ್ನೂ ನಮ್ಮ ರೆಕ್ಕೆಗಳಿಗೆ ನಾವೇ ಕಟ್ಟಿಕೊಳ್ಳದೇ ಸ್ವಚ್ಛಂದವಾಗಿ, ಹಗುರವಾಗಿ, ಹಾರಾಡುವ ಹಕ್ಕಿಯಂತೆ ಸಂತೋಷ, ಸಂಭ್ರಮ, ಸುಖಗಳನ್ನು ಅನುಭವಿಸುವುದಕ್ಕೆ ನಮ್ಮ ಹೃದಯವನ್ನು ಸಿದ್ಧಮಾಡಿಕೊಂಡಿದ್ದೇವೆಯೇ?ಹೌದು, ಸಂತೋಷವನ್ನು ಸ್ವೀಕರಿಸಲೂ ನಾವು ನಮ್ಮ ದೇಹ, ಮನಸ್ಸು, ಹೃದಯವನ್ನು ಒಂದು ಹದಕ್ಕೆ ತಂದುಕೊಳ್ಳಬೇಕು, ಇಲ್ಲವಾದರೆ ಸಂತೋಷವೂ ಒಂದು ಹೊತ್ತು ಸಾಗಬೇಕಾದ ಹೊರೆಯಂತೆ ಅನಿಸುತ್ತದೆ. ವಿಪರೀತ ಆಲೋಚನೆಗಳಲ್ಲಿ ಬಸವಳಿಯದೇ ಕ್ಷಣಿಕ ಬದುಕಿನಲ್ಲಿ ಸಂತೋಷವನ್ನು ಸ್ವೀಕರಿಸುವುದು ಹೇಗೆ ಎಂಬುದರ ಬಗೆಗೆ ಕೆಲವು ವಿಚಾರಗಳು ಇಲ್ಲಿವೆ:

ಅತಿಯಾಗಿ ಯೋಚನೆ ಮಾಡುವುದು ದುಃಖ, ನೋವುಗಳನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಲು ನಾವೇ ಕಂಡುಕೊಂಡಿರುವ ಮಾರ್ಗ. ಮೇಲ್ನೋಟಕ್ಕೆ ನಾವು ಸದಾ ತರ್ಕಬದ್ಧವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವಂತೆ ಆತಂಕಿತರಾಗಿರುತ್ತೇವೆ ,ಆದರೆ ಒಳಗೆ ಅಸ್ಥಿರತೆ, ಅಭದ್ರತೆ ತರುವ ಅಪಾರ ನೋವು ಸ್ಫೋಟಗೊಳ್ಳದಂತೆ ತಡೆಹಿಡಿಯುತ್ತಿರುತ್ತೇವೆ. ಅನಿಶ್ಚಿತತೆ, ಅನಿರೀಕ್ಷಿತತೆ ತರುವ ಸಂಕಟವನ್ನು ಮನಸಾರೆ ಅನುಭವಿಸಿ, ನೋವು ತಿನ್ನುತ್ತಿರುವ ಆ ಒಳಗಿನ ಮೃದು, ಮುಗ್ಧ ಮಗು ಮನಸ್ಸನ್ನು ಪ್ರೀತಿಯಿಂದ ಕಂಡಾಗ ಅತಿಯಾದ ಆಲೋಚನೆಗಳು ನಮ್ಮ ಅಸಹಾಯಕತೆಯ ಸೃಷ್ಟಿ ಎನ್ನುವುದು ಮನದಟ್ಟಾಗುತ್ತದೆ.

ಕೆಲವೊಮ್ಮೆ ಮನದಲ್ಲಿ ಒಂದೇ ವಿಷಯವನ್ನು ಮೆಲುಕು ಹಾಕುತ್ತಿರುತ್ತೇವೆ, ಅದನ್ನು ಬಿಟ್ಟು ಬೇರೇನೂ ಯೋಚಿಸಲು ಸಾಧ್ಯವೇ ಆಗುತ್ತಿರುವುದಿಲ್ಲ. ಅದು ಯಾವುದಾದರೂ ಸಮಸ್ಯೆ, ಸಂಘರ್ಷ, ಸವಾಲಿನ ಕುರಿತಾಗಿದ್ದರೆ ಆ ಆಲೋಚನೆಗಳನ್ನು, ಅದರ ಹಿಂದಿರುವ ಭಾವಗಳನ್ನು ಸಂಸ್ಕರಿಸಿ (processing) ಆ ಆಲೋಚನೆ ಏನನ್ನು ಸೂಚಿಸುತ್ತಿದೆ ಎಂದು ಅರ್ಥಮಾಡಿಕೊಳ್ಳಬಹುದು. ಆ ಆಲೋಚನೆ ನಮಗೀಗ ಅವಶ್ಯವಾಗಿ ಬೇಕಾದ ಯಾವುದರ ಕಡೆಗೆ ನಮ್ಮ ಗಮನ ಸೆಳೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಮುಂದಿನ ದಾರಿ ಸುಲಭ. ಉದಾಹರಣೆಗೆ ಯಾರ ಬಗೆಗಾದರೂ ಅತಿಯಾದ ಸಿಟ್ಟಿನಿಂದ ಕೂಡಿದ ಆಲೋಚನೆಗಳು ಪದೇ ಪದೇ ಬರುತ್ತಿದ್ದರೆ ಅಥವಾ ಹತ್ತಿರದವರು ನಮ್ಮನ್ನು ದೂರವಿಡುತ್ತಿದ್ದಾರೆ ಎನ್ನುವ ಆತಂಕವಾಗುತ್ತಿದ್ದರೆ ಅಂತಹ ಆಲೋಚನೆಗಳನ್ನು ಸುಮ್ಮನೆ ಕತ್ತರಿಸಿ ಬಿಸಾಕಿಬಿಡುವುದು ಸಾಧ್ಯವಿಲ್ಲ. ಇಂತಹ ಭಾವಗಳ ಹಿಂದೆ ನಮ್ಮ ಭಾವನಾತ್ಮಕ ಅವಶ್ಯಕತೆಗಳು ಕೆಲಸ ಮಾಡುತ್ತಿರುತ್ತವೆ, ಅವುಗಳನ್ನು ಅರಿಯುವುದರಿಂದ ಆಲೋಚನೆಗಳ ದಾಳಿ ತಗ್ಗುತ್ತದೆ.

'ನಾವು ನಮ್ಮ ಆತ್ಮಸಾಕ್ಷಿಗೆ ನಿಷ್ಠರಾಗಿ ನಡೆದುಕೊಂಡರೆ ಸಾಕು, ಎಲ್ಲರಿಗೂ ನಮ್ಮ ಬದುಕಿನ ಎಲ್ಲದರ ಬಗ್ಗೆ ಮಾಹಿತಿ, ಸಮಜಾಯಿಷಿ ಕೊಡುವ ಅಗತ್ಯವಿಲ್ಲ' ಎನ್ನುವ ನಿಲುವು ನಮ್ಮನ್ನು ಅನಗತ್ಯ ಯೋಚನೆಗಳಿಂದ ಪಾರುಮಾಡುತ್ತದೆ. ' ಅವರು ಹಾಗೆಂದಾಗ ನಾನು ಯಾವ ರೀತಿ ಉತ್ತರ ಕೊಟ್ಟಿದ್ದರೆ ಸರಿಹೋಗುತ್ತಿತ್ತು, ಮುಂದೆ ಅವರು ಟೀಕಿಸಿದಾಗ ನಾನು ಏನು ಹೇಳಬಹುದು?' ಹೀಗೆಲ್ಲಾ ಮನಸ್ಸಿನಲ್ಲೇ ಒಂದು ಕಲ್ಪನೆಯ ವಾದ-ವಿವಾದದ ಸರಣಿ ಹೆಣೆಯುವ ತ್ರಾಸದಾಯಕ ಕೆಲಸದಿಂದ ಬಿಡುಗಡೆ ಹೊಂದಬೇಕಾದರೆ 'ನಾನು ನನ್ನ ಬದುಕನ್ನು ಬೇರೆಯವರಿಗೆ ಅರ್ಥಮಾಡಿಸುವ ಜವಾಬ್ದಾರಿ ಹೊರಬೇಕಾಗಿಲ್ಲ' ಎಂಬ ಅರಿವಾಗಬೇಕು.

ಬೇರೆಯವರ ಮನಸ್ಸಿನಲ್ಲೇನಿದೆ ಎನ್ನುವ ಊಹೆಗಳನ್ನು ಅತಿಯಾಗಿ ಮಾಡುವುದು ವ್ಯರ್ಥ. ಸಾಧಾರಣವಾಗಿ ಬೇರೆಯವರು ನಮ್ಮನ್ನು 'ಹೀಗೆ ನೋಡುತ್ತಿದ್ದಾರೆ' ಎಂದುಕೊಳ್ಳುವುದೆಲ್ಲಾ ನಮ್ಮ ಬಗ್ಗೆ ನಮಗೇನೆನಿಸುತ್ತಿದೆ ಎನ್ನುವುದರ ಪ್ರತಿಬಿಂಬವಷ್ಟೇ. ಉದಾಹರಣೆಗೆ ‘ಬೇರೆಯವರು ನನ್ನನ್ನು ಅಗೌರವದಿಂದ ಕಾಣುತ್ತಿದ್ದಾರೆ’ ಎನಿಸುವುದಾದರೆ, ‘ನನ್ನನ್ನು ನಾನೆಷ್ಟು ಗೌರವದಿಂದ ಕಂಡುಕೊಳ್ಳುತ್ತಿದ್ದೇನೆ’ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು ಕ್ಷೇಮ. ಬೇರೆಯವರು ನಮ್ಮ ಬಗೆಗೆ ಏನಂದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಯೋಚಿಸುವುದು ಸಮಯ ಮತ್ತು ಮಾನಸಿಕ ಶಕ್ತಿಯ ಸಂಪೂರ್ಣ ವ್ಯರ್ಥವಷ್ಟೇ ಎನ್ನುವುದರ ಅರಿವಾಗಬೇಕು.

ಭೌತಿಕ ವಿಪತ್ತುಗಳಿಗಿಂತ ಭಾವನಾತ್ಮಕ ವಿಪತ್ತುಗಳಿಗೆ ನಾವು ಹೆದರಿ ಅದಕ್ಕೆ ತಯಾರಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮಿತಿಮೀರಿದ ಆಲೋಚನೆಗಳ ಸುಳಿಯಲ್ಲಿ ಸಿಲುಕುವುದು ಸಹಜ. ಯಾರನ್ನಾದರೂ 'ಅತಿ' ಎನಿಸುವಷ್ಟು ಹಚ್ಚಿಕೊಳ್ಳುವುದು, 'ಅವರಿಲ್ಲದೆ ಬದುಕಿಲ್ಲ' ಎಂದುಕೊಳ್ಳುವುದು, 'ಅವರು ನನ್ನನ್ನು ದೂರಮಾಡಿದರೆ, ಪ್ರೀತಿಸದಿದ್ದರೆ, ನನಗೆ ಮೋಸ ಮಾಡಿದರೆ' ಎಂಬೆಲ್ಲಾ ಆಲೋಚನೆಗಳು ಪದೇ ಪದೇ ಬರುತ್ತಿರುವಾಗ ಅದನ್ನು ನಿರ್ಲಕ್ಷಿಸುವುದು ಅಸಾಧ್ಯವಷ್ಟೇ ಅಲ್ಲ, ಅಂತಹ ಆಲೋಚನೆಗಳು ಬಾಂಧವ್ಯದ ಸಹಜ ವಿಕಾಸಕ್ಕೆ ಅಡ್ಡಿಯಾಗುವುದೂ ಹೌದು. ಪ್ರೀತಿಗಾಗಿ ಹಂಬಲಿಸಿ, ಅದನ್ನು ಪಡೆದುಕೊಂಡೂ ಅದರ ಕ್ಷಣಿಕತೆಗೆ ಹೆದರದೆ ಪ್ರೀತಿಯ, ಬಾಂಧವ್ಯದ ಸಿಹಿಯನ್ನು ಸಂಪೂರ್ಣವಾಗಿ ಸವಿಯಬೇಕಾದರೆ ಆತ್ಮವಿಕಸನದ, ಭಾವವಿಕಸನದ ಸುದೀರ್ಘ ಸಂಕೀರ್ಣ ಪ್ರಯಾಣವನ್ನು ಬಲು ತಾಳ್ಮೆಯಿಂದ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.