ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಒತ್ತಡ ನಿಭಾಯಿಸುವುದು ಹೇಗೆ?

ಏನಾದ್ರೂ ಕೇಳ್ಬೋದು
Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಸರ್ಕಾರಿ ಗ್ರಾಮಲೆಕ್ಕಿಗ. ವಯಸ್ಸು 27. ಮನೆಯಲ್ಲಿ ಅಪ್ಪ– ಅಮ್ಮ ಮತ್ತು ತಂಗಿ ಇದ್ದಾರೆ. ತಂದೆಯವರಿಗೆ ಪಾರ್ಶ್ವವಾಯುವಾಗಿದೆ. ಅಪ್ಪ– ಅಮ್ಮ ನನಗಿಂತ ತುಂಬಾ ಚಿಕ್ಕವಳಾದ ಇನ್ನೂ ಹದಿನಾಲ್ಕು ವರ್ಷದ ಮಾವನ ಮಗಳನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ಒಪ್ಪದೆ ಇದ್ದರೆ ಮನೆಗೆ ಬರಬೇಡವೆಂದು ಹೇಳಿದ್ದಾರೆ. ಮಾವನ ಮಗಳನ್ನು ಒಪ್ಪಿಕೊಳ್ಳಲೇ ಅಥವಾ ತಿರಸ್ಕರಿಸಲೇ?

ಹೆಸರು, ಊರು ಬೇಡ

ನಿಮ್ಮ ತಂಗಿಯ ಸರಿಕಳಾದ ಮಾವನ ಮಗಳು ಇನ್ನೂ ವಯಸ್ಕಳಾಗಿಲ್ಲ. ಈಗಲೇ ಅವಳನ್ನು ಮದುವೆಯಾಗುವುದು ಬಾಲ್ಯವಿವಾಹದ ಅಪರಾಧವಾಗುವುದರಿಂದ ನೀವು ಸರ್ಕಾರಿ ಕೆಲಸ ಕಳೆದುಕೊಂಡು ಜೈಲು ಸೇರುತ್ತೀರಿ. ಅವಳು ವಯಸ್ಕಳಾಗುವವರೆಗೆ ಕಾಯ್ದರೆ ನಿಮ್ಮ ವಯಸ್ಸು ಮೀರುತ್ತದೆ ಮತ್ತು ಇಬ್ಬರ ವಯಸ್ಸಿನ ಅಂತರ ಹೆಚ್ಚಾಗಿರುವುದರಿಂದ ಹೊಂದಾಣಿಕೆ ಸುಲಭವಾಗಲಾರದು. ಇವೆಲ್ಲವನ್ನೂ ಪೋಷಕರಿಗೆ ಮತ್ತು ಮಾವನ ಮನೆಯವರಿಗೆ ತಿಳಿಸಿ ಹೇಳಿ. ಒತ್ತಾಯ, ಬೆದರಿಕೆಗಳಿಗೆ ಹಿಂಜರಿದರೆ ಹುಡುಗಿಗೂ ಅನ್ಯಾಯ ಮಾಡುವುದಲ್ಲದೆ ನೀವೂ ಅಸುಖಿಗಳಾಗುತ್ತೀರಿ. ನಿಮಗೆ ಒಪ್ಪುವ ಸಂಗಾತಿಯನ್ನು ಹುಡುಕಿ ಮದುವೆಯಾಗಿ.

ಪೋಷಕರಿಗೆ ಮಣಿಯದಿದ್ದರೂ ಅವರನ್ನು ತಿರಸ್ಕರಿಸಬೇಡಿ. ಅವರಿಗೆ ತೋರಿಸುವ ಪ್ರೀತಿ ಮತ್ತು ಅಗತ್ಯವಿರುವ ಆರ್ಥಿಕ ಬೆಂಬಲವನ್ನು ಪ್ರಾಮಾಣಿಕವಾಗಿ ಮುಂದುವರಿಸಿ. ತಾತ್ಕಾಲಿಕವಾಗಿ ನಿಮಗೆ ನೋವಾಗಬಹುದಾದರೂ ನಿಧಾನವಾಗಿ ಅವರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

****

ವಯಸ್ಸು 29. ಚಿಕ್ಕಂದಿನಿಂದ ಗೀಳು (ಒಸಿಡಿ) ಕಾಯಿಲೆಯಿದೆ. ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲವೊಮ್ಮೆ ಸುಧಾರಿಸಿದರೂ ಮತ್ತೆ ಯಥಾಸ್ಥಿತಿಗೆ ಬರುತ್ತೇನೆ. ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ದಿನಚರಿಯನ್ನು ಮಾಡಲು ಆಗುತ್ತಿಲ್ಲ. ನಿದ್ದೇನೂ ಬರುತ್ತಿಲ್ಲ. ಸಾಯಬೇಕು ಅನ್ನಿಸುತ್ತದೆ. ಸಹಾಯಮಾಡಿ.

ಹೆಸರು, ಊರು ಇಲ್ಲ

ಗೀಳಿನ ಲಕ್ಷಣಗಳನ್ನು ತಿಳಿಸಿಲ್ಲ. ಗೀಳು ಮನಸ್ಸಿನ ಆತಂಕವನ್ನು ಹೊರಹಾಕುವ ಪ್ರವೃತ್ತಿಯಾಗಿ ಶುರುವಾಗಿ ಅಂಟಿಕೊಳ್ಳುತ್ತದೆ. ವೈದ್ಯರು ಆತಂಕವನ್ನು ಕಡಿಮೆ ಮಾಡುವ ಔಷಧಿಗಳನ್ನು ಕೊಡುತ್ತಾರೆ. ಆದರೆ ನಿಮ್ಮ ಆತಂಕದ ಬೇರುಗಳು ಹಾಗೆಯೇ ಉಳಿಯುವುದರಿಂದ ಔಷಧಿಗಳು ಯಾವಾಗಲೂ ಉಳಿಯಬಲ್ಲ ಪರಿಣಾಮ ನೀಡುವುದಿಲ್ಲ. ಗೀಳಿನ ಪ್ರವೃತ್ತಿಗಳು ನಿಮ್ಮ ಕೌಟುಂಬಿಕ, ಸಾಮಾಜಿಕ ಬದುಕಿನ ಮೇಲೆ ಆಗಾಧವಾದ ಪರಿಣಾಮವನ್ನು ಬೀರಿ ಮಾನಸಿಕವಾಗಿ ಕುಗ್ಗಿಸುತ್ತವೆ. ಎಲ್ಲವನ್ನೂ ಒಮ್ಮೆಲೆ ಸುಧಾರಿಸಲು ಪ್ರಯತ್ನಿಸದೆ ನಿಧಾನವಾಗಿ ಮುಂದುವರೆಯಬೇಕು. ದಿನಚರಿಯನ್ನು ರೂಪಿಸಿಕೊಂಡು ನಿಮ್ಮ ಆತ್ಮಗೌರವವನ್ನು ಮತ್ತೆ ಪಡೆಯಬೇಕು. ಈ ಅಂಕಣದಲ್ಲಿ ಸರಳವಾಗಿ ಸಲಹೆ ನೀಡುವುದು ಕಷ್ಟ. ನಿಮಗೆ ದೀರ್ಘಕಾಲದ ಮನೋಚಿಕಿತ್ಸೆಯ ಅಗತ್ಯವಿದೆ.

ನೀವು ಧೈರ್ಯಗೆಡಬೇಕಾಗಿಲ್ಲ. ಒಂದು ವರ್ಷ ವ್ಯವಸ್ಥಿತವಾಗಿ ಪ್ರಯತ್ನಿಸಿದರೆ ಎಲ್ಲರಂತೆ ಗೌರವದ ಬದುಕನ್ನು ನಡೆಸಲು ಸಾಧ್ಯವಿದೆ. ಯೂಟ್ಯೂಬ್‍ನಲ್ಲಿ ಗೀಳನ್ನು ಸಮರ್ಥವಾಗಿ ನಿಭಾಯಿಸಿ ತೃಪ್ತಿಯಿಂದ ಬದುಕುತ್ತಿರುವವರ ಹಲವಾರು ಉಪನ್ಯಾಸಗಳನ್ನು (ಟೆಡ್‍ಟಾಕ್) ಕೇಳಬಹುದು.

***

ನಾನು ಸಹಕಾರಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಬಳ ಸಾಲುತ್ತಿಲ್ಲ. ಹೆಚ್ಚಿನ ಸಂಬಳಕ್ಕಾಗಿ ಬೆಂಗಳೂರಿಗೆ ಹೋಗಲು ನನಗಿಷ್ಟವಿಲ್ಲ. ನಾನು ಪ್ರೀತಿಸುತ್ತಿರುವ ಹುಡುಗಿ ನನ್ನನ್ನು ತಿರಸ್ಕರಿಸಿದ್ದಾಳೆ. ಒಳ್ಳೆಯ ಕೆಲಸಕ್ಕೆ ಸೇರಿ ಮದುವೆಯಾಗುತ್ತೇನೆಂದು ಹೇಳಿದರೂ ಒಪ್ಪುತ್ತಿಲ್ಲ. ಮುಂದಿನ ವರ್ಷ ಅವಳ ಮದುವೆ ಮಾಡಬಹುದು. ಅವಳು ಬೇರೆಯವರನ್ನು ಮದುವೆಯಾಗುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಅವಳು ಸಿಗದಿದ್ದರೆ ಬದುಕು ಬೇಡ ಎನ್ನಿಸುತ್ತದೆ. ಅವಳು ಬದಲಾಗುತ್ತಾಳೆಂಬ ನಂಬಿಕೆಯಿಂದ ಕರೆ, ಸಂದೇಶಗಳನ್ನು ಮುಂದುವರೆಸಲಾ ಅಥವಾ ಅವಳನ್ನು ಮರೆಯಲಾ?

ಹೆಸರು, ಊರು ಇಲ್ಲ

ಯೌವನದ ಆಕರ್ಷಣೆಗಳು ಇರುವುದೇ ಹೀಗೆ. ಬೇಕಾಗಿರುವುದು ಸಿಗಲಾರದು ಎಂದು ತಿಳಿದಿದ್ದರೂ ಅದರತ್ತ ಸೆಳೆತ ಕಡಿಮೆಯಾಗುವುದಿಲ್ಲ. ವಾಸ್ತವವನ್ನು ಈಗಲೇ ಒಪ್ಪಿಕೊಳ್ಳುತ್ತೀರೋ ಅಥವಾ ಮುಂದೆ ಅನಿವಾರ್ಯವಾದಾಗ ಒಪ್ಪಿಕೊಳ್ಳೊತ್ತೀರೋ? ನಿಮ್ಮ ಬಗ್ಗೆ ಆಕರ್ಷಣೆ, ಗೌರವವಿಲ್ಲದ ಹುಡುಗಿಯನ್ನು ಸಂಗಾತಿಯಾಗಿ ಹೇಗೆ ಒಪ್ಪಿಕೊಳ್ಳುತ್ತೀರಿ? ಅವಳಿಗೂ ತನ್ನದೇ ಆದ ಕಲ್ಪನೆ, ಕನಸುಗಳಿರುವುದಿಲ್ಲವೇ? ಅವಳು ಬದಲಾಗುವ ನಿರೀಕ್ಷೆಯಿಂದ ನಿಮ್ಮ ಆಸೆಗಳನ್ನು ಪೋಷಿಸಿಕೊಂಡು ಬಂದರೆ ಮುಂದೆ ನಿಮ್ಮ ನಿರಾಸೆ ಹೆಚ್ಚಬಹುದಲ್ಲವೇ? ನಿಮ್ಮ ತಕ್ಷಣದ ಆದ್ಯತೆ ಆರ್ಥಿಕವಾಗಿ ಸಬಲರಾಗುವುದು ಎಂದಾದ ಮೇಲೆ ಅದರತ್ತ ಪೂರ್ಣ ಗಮನ ಹರಿಸಿ. ನಿಮ್ಮತ್ತ ಆಕರ್ಷಿತಳಾಗುವ ಮತ್ತು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳುವ ಸಂಗಾತಿ ಎಲ್ಲೋ ಕಾಯುತ್ತಿರಬಹುದಲ್ಲವೇ?

***

ಸರ್ಕಾರಿ ಕೆಲಸದ ಆಕಾಂಕ್ಷಿ. ಪೊಲೀಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದೇನೆ. ದೇಹದಾರ್ಢ್ಯತೆ ಪರೀಕ್ಷೆಗೆ ಓಡಲು ಆಗುತ್ತಿಲ್ಲ. ಮನಸ್ಸು ಮತ್ತು ದೇಹ ಹೊಂದಿಕೆಯಾಗುತ್ತಿಲ್ಲ. ಹಿಂದಿನ ಪರೀಕ್ಷೆಗಳಲ್ಲಿಯೂ ಹೀಗೆಯೇ ಆಗಿದೆ. ಸಲಹೆ ನೀಡಿ.

ಪ್ರೀತಮ್, ಮೈಸೂರು

ಹಿಂದಿನ ಸೋಲಿನ ಅನುಭವಗಳು ನಿಮ್ಮನ್ನು ಕುಗ್ಗಿಸುತ್ತಿವೆ. ಸರ್ಕಾರಿ ಕೆಲಸ ಪಡೆಯಲೇಬೇಕೆಂಬ ಭಾರೀ ಒತ್ತಡದ ಹೊರೆಯನ್ನು ತಲೆಯೊಳಗೆ ಹೊತ್ತುಕೊಂಡಿದ್ದೀರಿ. ದೇಹ ಓಡಲು ಪ್ರಯತ್ನಿಸಿದಂತೆ ಈ ಸೋಲು ಮತ್ತು ಒತ್ತಡಗಳು ನಿಮ್ಮನ್ನು ಹಿಂದೆ ಎಳೆಯುತ್ತಿವೆ. ಸರ್ಕಾರಿ ಕೆಲಸವೇ ಜೀವನದ ಅಂತಿಮ ಗುರಿಯಲ್ಲ, ಅದಿಲ್ಲದಿದ್ದರೂ ನಾನು ಗೌರವದಿಂದ ಬದುಕಬಲ್ಲೆ ಎಂದುಕೊಂಡು ಪ್ರಯತ್ನಿಸಿ. ಇತರ ಉದ್ಯೋಗಗಳ ಆಯ್ಕೆಯನ್ನೂ ಈಗಲೇ ಪ್ರಾರಂಭಿಸಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT