ಶನಿವಾರ, ಜನವರಿ 18, 2020
26 °C

ಚಲನೆಯ ಧ್ಯಾನ ‘ಥಾಯ್‌ ಚಿ’

ಮೋಹನ್‌ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಚೀನಾದ ನೆಲದಲ್ಲಿ ಅರಳಿದ ಸಮರ ಕಲೆಗಳಲ್ಲಿ ‘ಥಾಯ್‌ ಚಿ’ ಕೂಡ ಒಂದು. ಕ್ರಿ.ಶ. 500ರಲ್ಲಿ ಧ್ಯಾನ ಕಲೆಯಾದ ಚಿಗಂಗ್‌ ಅನ್ನು ಸಮರ ಕಲೆಯನ್ನಾಗಿ ಪರಿವರ್ತಿಸಲು ಚೀನಾದ ಲಿಯಾಂಗ್‌ ರಾಜಮನೆತನ ಪ್ರೋತ್ಸಾಹ ನೀಡಿತು. ಅದರಂತೆ ಥಾಯ್‌ ಚಿ ಹುಟ್ಟು ಪಡೆದಿದೆ. ಸ್ವರಕ್ಷಣೆಗೆ ಮತ್ತು ಫಿಟ್‌ನೆಸ್‌ ಕಾಯ್ದುಕೊಳ್ಳಲು ಇದು ಸಹಕಾರಿಯಾಗಿದೆ. 

‘ಥಾಯ್‌ ಚಿ’ ಅನ್ನು ಯಾವ ವಯಸ್ಸಿನವರೂ ಮಾಡಬಹುದು.‌ ಇದು ಧ್ಯಾನಕ್ಕೆ ವಿಶೇಷ ಪ್ರಾತಿನಿಧ್ಯವನ್ನು ನೀಡುವ ಸಮರ ಕಲೆಯಾಗಿದೆ. ಇಲ್ಲಿ ನಿರ್ದಿಷ್ಟ, ನಿಧಾನ ಗತಿಯಿಂದ ತಾಳಬದ್ಧವಾಗಿ (ರಿದಂ) ಅಂಗಾಂಗಗಳ ಚಲನೆಯನ್ನು ಮಾಡಬೇಕಾಗುತ್ತದೆ. ಇದು ಮನಸ್ಸನ್ನು ಪ್ರಶಾಂತಗೊಳಿಸುವುತ್ತದೆ. ಇದನ್ನು ಸಿದ್ಧಿಸಿಕೊಳ್ಳಲು ಪರಿಶ್ರಮ ಮತ್ತು ತಾಳ್ಮೆ ಅಗತ್ಯ. ಯಾವುದೇ ಒತ್ತಡದ ಸನ್ನಿವೇಶ ಎದುರಾದರೂ ಭಾವೋದ್ವೇಗಕ್ಕೆ ಒಳಗಾಗದೇ ಶಾಂತಚಿತ್ತದಿಂದ ಸಮಸ್ಯೆಗಳನ್ನು ಬಗೆಹರಿಸುವ ಉಪಾಯಗಳನ್ನು ಥಾಯ್‌ ಚಿ ನೀಡುತ್ತದೆ. 

ಚಲನೆಯ ಧ್ಯಾನ

‘ಚಲನೆಯ ಧ್ಯಾನವೇ ಥಾಯ್‌ ಚಿ’ ಎಂದು ಫಿಟ್‌ನೆಸ್‌ ತಜ್ಞರು ಬಣ್ಣಿಸಿದ್ದಾರೆ. ಇದು ನೋಡಲು ಸರಳವಾಗಿ ಕಂಡರೂ ಶಕ್ತಿಶಾಲಿ ಕಲೆಯಾಗಿದೆ. ಈ ಸಮರ ಕಲೆಯನ್ನು ಮಾನಸಿಕ ಮತ್ತು ದೈಹಿಕ ಫಿಟ್‌ನೆಸ್‌ ಕಾಯ್ದುಕೊಳ್ಳಲು ವ್ಯಾಯಾಮದ ಚೌಕಟ್ಟಿಗೆ ಅಳವಡಿಸಿಕೊಳ್ಳಲಾಗಿದೆ. ಥಾಯ್‌ ಚಿ ಸೃಜನಶೀಲ ಮತ್ತು ಹಿತಕಾರಿ ಅನುಭವ ನೀಡುವ ಕಲೆಯಾಗಿದ್ದು, ಇದು ಎದುರಾಳಿಯನ್ನು ಮಣಿಸುವ ಸಾಮರ್ಥ್ಯವನ್ನೂ ನೀಡುತ್ತದೆ. ನಿಧಾನಗತಿಯ ಉಸಿರಾಟದೊಂದಿಗೆ ಸಮನ್ವಯಗೊಂಡ ದೇಹದ ಅಂಗಾಂಗಗಳ ಶಾಂತ ಚಲನೆಯು ದೇಹದ ಒಟ್ಟು ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತದೆ.

ಉಸಿರಿಗೆ ಪ್ರಾತಿನಿಧ್ಯ

ಥಾಯ್‌ ಚಿ ಸರಳ ವ್ಯಾಯಾಮದಂತೆ ಕಂಡರೂ ಇಲ್ಲಿ ಉಸಿರಿಗೆ ವಿಶೇಷ ಮಹತ್ವವಿದೆ. ದೇಹಕ್ಕೆ ಚೈತನ್ಯ ನೀಡುವ ಥಾಯ್‌ ಚಿ, ಸಾಧ್ಯತೆಗಳ ಮಾಯಾಲೋಕವನ್ನು ತೆರೆದಿಡುತ್ತದೆ. ಬಲವನ್ನು ಪ್ರಯೋಗಿಸುವಾಗ ಉಸಿರನ್ನು ಬಿಟ್ಟರೆ, ಬಲವನ್ನು ಕ್ರೋಡೀಕರಿಸಲು ಉಸಿರನ್ನು ತೆಗೆದುಕೊಳ್ಳಲಾಗುತ್ತದೆ. ಉಚ್ಛ್ವಾಸ– ನಿಶ್ವಾಸದ ಶಿಸ್ತಿನಲ್ಲಿ ಇದನ್ನು ಕಲಿಯುವುದರಿಂದ ದೀರ್ಘಾಯಸ್ಸು ಕೂಡ ಗಳಿಸಬಹುದಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಇದು ಸಹಕರಿಸುತ್ತದೆ. 

ದೇಹದ ಮೇಲೆ ಕಾಳಜಿ

ನಮ್ಮ ದೇಹದ ಪ್ರತಿಯೊಂದು ಅಂಗದ ಮೇಲೆ ಮಾನಸಿಕ ಸ್ಪರ್ಶ, ಕಾಳಜಿ, ಭಾವನೆಯನ್ನು ಇಟ್ಟುಕೊಂಡಿದ್ದೇ ಆದಲ್ಲಿ ದೇಹ ಗೆಲುವಾಗಿ ಸ್ಪಂದಿಸಬಲ್ಲದು. ಹೃದಯದ ಬಡಿತವನ್ನು ಗ್ರಹಿಸುವಂತೆ, ಯಕೃತ್ತು ಸೇರಿದಂತೆ ದೇಹದ ಎಲ್ಲ ಅಂಗಗಳ ಮೇಲೆ ಕಾಳಜಿಯನ್ನು ತೋರಬೇಕು. ಇದನ್ನು ಥಾಯ್‌ ಚಿ ಕಲಿಸುತ್ತದೆ. ಉಸಿರಿನ ಶಕ್ತಿ ದೇಹದ ಪ್ರತಿ ಅಂಗಾಂಶಗಳನ್ನು ತಲುಪುವಂತೆ ಇದು ಮಾಡಬಲ್ಲದು. ಹೀಗಾಗಿಯೇ ಫಿಟ್‌ನೆಸ್‌ ಪ್ರಿಯರು ಥಾಯ್ ಚಿ ಮೊರೆ ಹೋಗುತ್ತಾರೆ. ಇದು ಸ್ನಾಯು ಮತ್ತು ಮೂಳೆಗಳ ಬಲವನ್ನೂ ಹೆಚ್ಚಿಸುತ್ತದೆ. 

ಸಾಮರಸ್ಯ

ಥಾಯ್‌ ಚಿ, ವ್ಯಕ್ತಿಗೆ ಶಾಂತತೆ ಮತ್ತು ಪ್ರಸನ್ನತೆಯನ್ನು ನೀಡುತ್ತದೆ. ಪ್ರಕೃತಿಯ ಶಕ್ತಿ ದೇಹಕ್ಕೆ ಆವಾಹಿಸಿಕೊಂಡಂತೆ ದೇಹದ ಚೈತನ್ಯ ವ್ಯಾಯಾಮದ ಮೂಲಕ ಹೊರಹೊಮ್ಮುತ್ತದೆ. ಕೋಪ, ಸಿಟ್ಟು ಮೊದಲಾದವನ್ನು ಕಳೆದುಕೊಂಡು ಧನಾತ್ಮಕ ಚಿಂತನೆಯೆಡೆಗೆ ವ್ಯಕ್ತಿಯನ್ನು ಕರೆದೊಯ್ಯುತ್ತದೆ. ಸಾಮರಸ್ಯದ ವಾತಾವರಣವನ್ನು ನಿರ್ಮಿಸುವ ಜೀವನ ಕಲೆಯನ್ನು ಇದು ಕಲಿಸುತ್ತದೆ. 

ಸ್ವರಕ್ಷಣೆ

ಥಾಯ್‌ ಚಿ ಸ್ವರಕ್ಷಣೆಯ ಕಲೆಯಾಗಿದೆ. ಇದನ್ನು ಕಲಿತರೆ ಅಪಾಯದ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸಬಹುದು. ಎದುರಾಳಿಯನ್ನು ದೃಷ್ಟಿಯಿಂದಲೇ ಅರ್ಧ ಸೋಲಿಸುವ ಮಾನಸಿಕ ಸಾಮರ್ಥ್ಯವನ್ನು ಥಾಯ್‌ ಚಿ ನೀಡುತ್ತದೆ. ಆತ್ಮಸ್ಥೈರ್ಯವೇ ಈ ಕಲೆಯ ಗುಟ್ಟಾಗಿದೆ.

ಆತ್ಮ ವಿಶ್ವಾಸವನ್ನು ‌ಹೆಚ್ಚಿಸುತ್ತದೆ

ಭಯವನ್ನು ಹೋಗಲಾಡಿಸುವ ಇದು, ನಿಲುವಿನಲ್ಲಿ ಗಟ್ಟಿತನವನ್ನು ತಂದುಕೊಡುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತವೆ. ಬೆಳಿಗ್ಗೆ ಈ ಸಮರ ಕಲೆಯನ್ನು ಒಂದು ಗಂಟೆ ಅಭ್ಯಾಸ ಮಾಡಿದರೇ ಸಾಕು, ದೇಹ ಮತ್ತು ಮನಸ್ಸು ದಿನವಿಡೀ ಚೈತನ್ಯದಾಯಕವಾಗಿರುತ್ತವೆ. 

ಆರೋಗ್ಯ

ಹೃದಯದ ರಕ್ತನಾಳ, ಶ್ವಾಸಕೋಶಗಳನ್ನು ಆರೋಗ್ಯಪೂರ್ಣವಾಗಿ ಇಡಲು, ರಕ್ತ ಪರಿಚಲನೆ ಮತ್ತು ಪಚನ ಕ್ರಿಯೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಥಾಯ್‌ ಚಿ ಸಹಾಯ ಮಾಡುತ್ತದೆ. ಏಕಾಗ್ರತೆಯನ್ನು ನೀಡುವ ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ದೇಹದ ಕೆಳ ಮತ್ತು ಮೇಲ್ಭಾಗಗಳೆರಡರ ಶಕ್ತಿಯನ್ನೂ ಸಮನಾಗಿ ಹೆಚ್ಚಿಸುತ್ತದೆ. ಒಂದು ಚುರುಕಿನ ನಡಿಗೆ ನೀಡುವ ಹಿತಾನುಭವವನ್ನೇ ಥಾಯ್‌ ಚಿ ನೀಡುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು