ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಮಸ್ಯೆಗೆ ಲಸಿಕೆ ಜೊತೆಗೆ ಮಾನಸಿಕ ಆಪ್ತಸಲಹೆ ಕೂಡ ಬೇಕಿದೆ!

Last Updated 9 ಜೂನ್ 2021, 11:27 IST
ಅಕ್ಷರ ಗಾತ್ರ

ಕೋವಿಡ್‌-19 ಸಮಸ್ಯೆಯನ್ನು ವೈದ್ಯರು ಹಾಗೂ ತಜ್ಞರು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹೀಗೆ ವ್ಯಾಖ್ಯಾನಿಸುವಾಗ ಕೆಲವೊಮ್ಮೆ ನಾನಾ ಹಂತಗಳಲ್ಲಿ ಗೊಂದಲ ಸೃಷ್ಟಿಯಾಗಿರುವುದು ಸಾಮಾನ್ಯರಿಗೂ ಮನವರಿಕೆಯಾಗಿದೆ.

ಈ ಲೇಖನದಲ್ಲಿ ನಾನು ಕೊರೊನಾ ವೈರಸ್‌ ವ್ಯಾಖ್ಯಾನ ಅಥವಾ ವಿಶ್ಲೇಷಣೆ ಮಾಡುವ ಸಾಹಸ ಮಾಡಲಾರೆ ಏಕೆಂದರೆ ನಾನು ಆ ಸಮಸ್ಯೆ ಕುರಿತು ವ್ಯಾಖ್ಯಾನ ಮಾಡುವ ಪರಿಣಿತನಲ್ಲ. ನಾವು ಮಕ್ಕಳಾಗಿದ್ದಾಗ ಒಂದು ಚಿಕ್ಕ ಕಥೆ ಕೇಳಿದ್ದು ಎಲ್ಲರ ಮನಸ್ಸಿನಲ್ಲಿ ಇದೆ ಎಂದು ನನ್ನ ಅನಿಸಿಕೆ. ಅದೇನೆಂದರೆ ಐವರು ಅಂಧರು ಒಂದು ಆನೆಯ ವಿಶ್ಲೇಷಣೆ ಮಾಡಿದ ಕಥೆ. ಎಲ್ಲರೂ ಒಂದು ಆನೆಯನ್ನು ಗ್ರಹಿಸುವಲ್ಲಿ ಗೊಂದಲಮಯ ಎನಿಸುವುದು.

ಇದೇ ರೀತಿಯಲ್ಲಿ ಕೋವಿಡ್‌ ಕುರಿತು ಸಾಮಾನ್ಯ ಜನರಿಗೆ ಗೊಂದಲ ಆಗಿರುವುದು ಅಷ್ಟೇ ಸತ್ಯ. ಕೆಲವೊಮ್ಮೆ ಈ ಕೊರೊನಾ ವೈರಸ್‌ ಇದೆಯಾ? ಎಂಬ ಪ್ರಶ್ನೆಯೂ ಸಹ ಕಾಡಿದೆ. ಈ ಗೊಂದಲದಿಂದ ಜನಸಾಮಾನ್ಯರ ಬದುಕಿನ ಮೇಲೆ ಅತಿಯಾದ ಆತಂಕ ಉಂಟಾಗಿದೆ. ಕೋವಿಡ್‌ ಸಮಸ್ಯೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿ ಖಿನ್ನತೆ, ಆತ್ಮಹತ್ಯೆಯಂತಹ ಆಲೋಚನೆ ಸಮಸ್ಯೆಗಳಿಗೂ ದಾರಿಯಾಗಿದೆ. ವೈದ್ಯರು ದಾದಿಯರು, ಪೊಲೀಸರು ಹಾಗೂ ಕೋವಿಡ್‌ ವಾರಿಯರ್ಸ್‌ಗಳು ಜೀವ ಭಯವನ್ನು ತೊರೆದು ನಮ್ಮೆಲ್ಲರ ಬದುಕಿನ ಬಗ್ಗೆ ಹಗಲು ಇರುಳು ಶ್ರಮಿಸುತ್ತಿದ್ದಾರೆ.

ಡಾ. ಜಿ. ವೆಂಕಟೇಶ್ ಕುಮಾರ್
ಡಾ. ಜಿ. ವೆಂಕಟೇಶ್ ಕುಮಾರ್

ಕೋವಿಡ್‌ ಹಿನ್ನಲೆಯ ಸದ್ಯದ ಪರಿಸ್ಥಿತಿಯಲ್ಲಿಮಾನಸಿಕ ಒತ್ತಡ ವ್ಯಕ್ತಿಯ ನಂಬಿಕೆಯ ಆಧಾರವನ್ನು ಅವಲಂಭಿಸಿರುತ್ತದೆ. ಕೆಲವರಲ್ಲಿ ಆಂತರಿಕ ತಳಮಳ, ಇನ್ನು ಕೆಲವರಿಗೆ ಬಾಹ್ಯ ರೂಪದಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಅಂದರೆ people don't die with infection they die from infection. ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯಬೇಕಾದರೆ ಮೂಲತಹ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ರೋಗಾಣುಗಳನ್ನು ಬಲಹೀನಗೊಳಿಸುವ ಕಾರ್ಯವನ್ನು ಮಾಡುತ್ತದೆ.

ಇತ್ತೀಚಿನ ಸಂಶೋಧನೆಗಳಲ್ಲಿ ವರದಿ ಮಾಡಿರುವಂತೆ ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯು ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ ಎಂದು ವರದಿ ಮಾಡಿವೆ. ಹೀಗೆ ಒತ್ತಡಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಶ್ವಾಸಕೋಶ ಸೇರಿದಂತೆ ಇತರೆ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಒತ್ತಡಗಳು ನೇರವಾಗಿ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಬಲಹೀನಗೊಳಿಸಿ ಭಯ ಹಾಗೂ ಆತಂಕಗಳನ್ನು ವೃದ್ಧಿಗೊಳಿಸುತ್ತವೆ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರೋಗನಿರೋಧಕ ವ್ಯವಸ್ಥೆ ಹಲವಾರು ಮೂಲಗಳಿಂದ ಕೂಡಿರುತ್ತದೆ. ರೋಗಿಯಲ್ಲಿ ಒತ್ತಡ ಸನ್ನಿವೇಶಗಳು ಎದುರಾದಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತದೆ.

ಭಯ ಮನಸ್ಸನ್ನು ಜಡವಾಗಿಸುತ್ತದೆ, ಅಸೂಕ್ಷ್ಮವಾಗಿಸುತ್ತದೆ, ನಿರ್ಜೀವಗೊಳಿಸುತ್ತದೆ. ಇದರಿಂದ ದೇಹದ ಮನಸ್ಸಿನ ಮತ್ತು ಜೈವಿಕ ಪ್ರಕ್ರಿಯೆಗಳು ಹದಗೆಡುತ್ತವೆ. ಇನ್ನು ಮರಣದ ಜೊತೆಗಿನ ಹೋರಾಟ ಸುಲಭವೇನಲ್ಲ!ಪ್ರಸ್ತುತ ಸನ್ನಿವೇಶದಲ್ಲಿ ಒತ್ತಡಗಳನ್ನು ವಿಶ್ಲೇಷಣೆ ಮಾಡುವುದಾದರೆ ಮನುಷ್ಯರ ನಡವಳಿಕೆಗಳು, ವರ್ತನೆ, ಭಾವನೆಗಳು ಎಲ್ಲರಲ್ಲಿಯೂ ಸಮನಾಗಿರುವುದಿಲ್ಲ ಅವರವರ ಜೀವನದ ಘಟನೆಗಳ ಅನುಭವಗಳ ಹಿನ್ನೆಲೆಯಲ್ಲಿ ಒತ್ತಡ ಅನುಭವಿಸುತ್ತಾರೆ ಆದ್ದರಿಂದ ಒಬ್ಬರ ಒತ್ತಡ ಇನ್ನೊಬ್ಬರಿಗೂ ಒತ್ತಡವಾಗಿರುತ್ತದೆ ಎಂದು ಹೇಳಲಾಗದು.

ಮಾನಸಿಕ ಭಯ ಅನೇಕ ವರ್ತನೆಯ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗದ ಭಯ, ನೋವಿನ ಭಯ, ಸಾವಿನ ಭಯ ಸಮಾಜದ ಭಯ, ಗೌರವ ಕಳೆದುಕೊಳ್ಳುವ ಭಯ, ಜನರ ತಿರಸ್ಕಾರದ ಭಯ, ಇಂತಹ ಆತಂಡ ಕಡಿಮೆ ಮಾಡಲು ಅಥವಾ ಭಯದಿಂದ ಮುಕ್ತರಾಗಲು ತಜ್ಞರ ಸಹಾಯ ಬೇಕು. ಈ ಸಹಾಯ ಹಸ್ತ ನೀಡುವವರು ಮಾನಸಿಕ ಆಪ್ತ ಸಲಹೆಗಾರರು. ಆಪ್ತಸಲಹೆ ಎಲ್ಲರಿಂದಲೂ ಸಾಧ್ಯವಿಲ್ಲ ಮಾನಸಿಕ ಸಲಹೆಗಾರರು ವಿಷಯ ತಜ್ಞರು ತರಬೇತಿ ಹೊಂದಿರುವವರು ಬದುಕಿನ ವಿಭಿನ್ನ ಆಯಾಮಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ತಿಳಿದವರಾಗಿರಬೇಕು.

ಕೋವಿಡ್‌ ಕುರಿತು ವಿಶೇಷವಾಗಿ ಐಸಿಎಂಆರ್‌ ಮತ್ತು ಯುನಿಸೆಫ್‌, ವಿಶ್ವ ಆರೋಗ್ಯ ಸಂಸ್ಥೆಗಳು ಆಪ್ತಸಮಾಲೋಚನೆ ಬಗ್ಗೆ ಮಾರ್ಗಸೂತ್ರಗಳನ್ನು ಬಿಡುಗಡೆ ಮಾಡಿವೆ. ಕೋವಿಡ್‌ ಸದ್ಯಕ್ಕೆ ಒಂದು ವಾಸ್ತವಸತ್ಯವಾಗಿದೆ. ಇದರ ಭಯ ಬಿಟ್ಟು, ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂದು ಪ್ರಯತ್ನಪಟ್ಟಲ್ಲಿ ಈ ಸಮಸ್ಯೆಗೆ ಇರುವ ಇತಿಮಿತಿಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು.

ಐಸಿಎಂಆರ್‌ ಕೋವಿಡ್‌ ರೋಗಿ ಮತ್ತು ಅವರ ಕುಟುಂಬ ಸದಸ್ಯರಿಗೆ ಆಪ್ತಸಲಹೆ ಮಾರ್ಗದರ್ಶನ ಕುರಿತು ಒಂದು ಕೈಪಿಡಿ ಬಿಡುಗಡೆ ಮಾಡಿದೆ. ಇದರಲ್ಲಿ ಸುಮಾರು 20 ಪರಿಣಿತರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಎದುರಿಸುವಲ್ಲಿ ಕೇವಲ ವೈದ್ಯರು ಮತ್ತು ದಾದಿಯರು ಅಷ್ಟೇ ಅಲ್ಲದೆ ಪ್ರತಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಒಬ್ಬ ಮನೋವಿಜ್ಞಾನದ ಹಿನ್ನೆಲೆ ಇರುವ ತಜ್ಞರನ್ನು ನೇಮಕ ಮಾಡಿದರೆ ರೋಗಿಗಳಿಗೆ ಮಾನಸಿಕ ಒತ್ತಡ ಉಂಟಾಗದು. ತಜ್ಞರು ಅವರ ಆತಂಕ, ಭಯವನ್ನು ಆಪ್ತಸಲಹೆ ಮೂಲಕ ಬಗೆಹರಿಸುವುದರಿಂದ ಸಾಕಷ್ಟು ಸಾವು–ನೋವುಗಳನ್ನು ಕಡಿಮೆ ಮಾಡಬಹುದು.

ಕೋವಿಡ್‌ಗೆ ಈಗಾಗಲೇ ವೈದ್ಯರು ಔಷಧಿ, ಲಸಿಕೆಗಳನ್ನು ಕಂಡುಹಿಡಿದಿದ್ದಾರೆ. ಕೋವಿಡ್‌ ಪೀಡಿತರು ಆತಂಕದಿಂದ ದೂರವಾಗಿ ಚಿಕಿತ್ಸೆ ಪಡೆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೊರೊನಾ ವಾರಿಯರ್ಸ್‌ಗಳು ಕೂಡ ರೋಗಿಗಳಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡಬೇಕು. ಪ್ರತಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ತಜ್ಞ ಮನೋವೈದ್ಯರು ಇರಲೇಬೇಕು. ಈ ಮಧ್ಯೆ ರೋಗಿಗಳು ಕೂಡ ಆತಂಕಕ್ಕೆ ಒಳಾಗದೇ ಧೈರ್ಯವಾಗಿರಬೇಕು.

ದೇಶದ ಪ್ರತಿಯೊಬ್ಬ ಪ್ರಜೆಯೂ ನಾವೂ ಕೂಡ ಕೊರೊನಾ ವಾರಿಯರ್ಸ್‌ ಎಂದು ಭಾವಿಸಿ, ಸೋಂಕು ಪೀಡಿತರಲ್ಲಿ ಧೈರ್ಯ ತುಂಬಿದರೆ ಈ ಪಿಡುಗನ್ನು ಸುಲಭವಾಗಿ ಕೊನೆಗಾಣಿಸಬಹುದು.

(ಲೇಖಕರು: ಡಾ. ಜಿ. ವೆಂಕಟೇಶ್ ಕುಮಾರ್,ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು (ಮನೋವಿಜ್ಞಾನ),ಮೈಸೂರು ವಿಶ್ವವಿದ್ಯಾಲಯ,ಮೈಸೂರು. ಮೊಬೈಲ್ ಸಂಖ್ಯೆ:9448058140)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT