ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಅರಿವಿನ ಕೌಶಲ್ಯಗಳ ಪಾತ್ರ

Last Updated 20 ಜುಲೈ 2021, 18:01 IST
ಅಕ್ಷರ ಗಾತ್ರ

ಒಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಯಲ್ಲಿ ಗ್ರಹಿಕಾಸಾಮರ್ಥ್ಯಗಳು ಅತಿ ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ನಾವು ಈ ಕೌಶಲಗಳನ್ನು ಸಮಸ್ಯೆಗಳನ್ನು ಪರಿಹರಿಸಲು, ಕೆಲಸಗಳನ್ನು ನೆನಪಿನಲ್ಲಿಡಲು ಹಾಗು ನಿರ್ಧಾರಗಳನ್ನು ಕೈಗೊಳ್ಳಲು ಬಳಸುತ್ತೇವೆ; ಅಂತೆಯೆ ಅವು ನಮ್ಮ ಕಲಿಕೆ ಮತ್ತು ಕಾರ್ಯಸಾಧನೆಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ಈ ಲೇಖನವು ಗ್ರಹಿಕಾಸಾಮರ್ಥ್ಯ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಅದರ ಔಚಿತ್ಯದ ಮೇಲೆ ಬೆಳಕು ಚೆಲ್ಲುತ್ತದೆ.

ಕಮಲೇಶ್ ಡಿ ಪಟೇಲ್
ಕಮಲೇಶ್ ಡಿ ಪಟೇಲ್

ಗ್ರಹಿಕಾಸಾಮರ್ಥ್ಯಗಳೆಂದರೆ ಮೆದುಳಿನ ಮೂಲಭೂತ ಕಾರ್ಯಗಳಾದ ಯೋಚಿಸುವುದು, ಓದುವುದು, ಕಲಿಯುವುದು, ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಗಮನ ನೀಡುವುದು.
ಗ್ರಹಿಕೆಯ ಅತಿಮುಖ್ಯವಾದ ಮೂಲ ಕೌಶಲವೆಂದರೆ ಗಮನ. ನಮ್ಮ ಸುತ್ತಲಿನ ಪರಿಸರದ ಆವಶ್ಯಕ ಮಾಹಿತಿಯನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಗಮನ ನಮಗೆ ನೀಡುತ್ತದೆ. ಸಾಮಾನ್ಯವಾಗಿ ನಾವು ಅಂತಹ ಮಾಹಿತಿಯನ್ನು ನಮ್ಮ ಇಂದ್ರಿಯಗಳು, ಸಂಚಿತ ಸ್ಮರಣೆ ಮತ್ತು ಇತರ ಗ್ರಹಿಕಾಪ್ರಕ್ರಿಯೆಗಳ ಮೂಲಕ ಸಂಸ್ಕರಿಸುತ್ತೇವೆ.

ಹಾಗೆಯೆ, ಗಮನದ ಕೊರತೆಯಿಂದ ನಮ್ಮ ಮಾಹಿತಿ ಸಂಸ್ಕರಣೆಯ ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ. ಅರ್ಥಾತ್, ನಾವು ಚಂಚಲರಾಗುವ ಕಾರಣ ಕಲಿತದ್ದನ್ನು ನೆನಪಿಡಲು ಮತ್ತು ಪುನರುಚ್ಛರಿಸಲು ಹೆಣಗುತ್ತೇವೆ. ಒಮ್ಮೆಲೆ ಅನೇಕ ಕೆಲಸಗಳನ್ನು ಮಾಡಬಯಸುವವರಲ್ಲಿ ಇದನ್ನು ಕಾಣಬಹುದು; ಉದಾಹರಣೆಗೆ, ಯಾವುದೋ ಕಾರ್ಯಕ್ರಮವನ್ನು ವೀಕ್ಷಿಸುತ್ತ, ಇ-ಮೇಲ್ ಅಥವಾ ಸಂದೇಶವನ್ನು ಬರೆಯುವುದು. ಎರಡೂ ಕೆಲಗಳನ್ನು ಏಕಕಾಲಕ್ಕೆ, ಸಮರ್ಪಕವಾಗಿ ನಿರ್ವಹಿಸುವುದು ಕಷ್ಟ. ವಾಸ್ತವದಲ್ಲಿ, ಆಸಕ್ತಿಯೇ ನಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಮಾಹಿತಿಯನ್ನು ಪುನಃ ನೆನಪಿಸಿಕೊಳ್ಳುವುದೇ ಮತ್ತೊಂದು ಗ್ರಹಿಕಾಸಾಮರ್ಥ್ಯವಾದ ಸ್ಮೃತಿ. ಉದಾಹರಣೆಗೆ, ಈ ಬಹುಮುಖ್ಯ ಕೌಶಲವಿರುವ ಕಾರಣ ವಿದ್ಯಾರ್ಥಿಯೊಬ್ಬನು ಕಳೆದ ವಾರದ ವಿಜ್ಞಾನ ತರಗತಿಯಲ್ಲಿನ ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ, ಇದು ದೀರ್ಘಕಾಲಿಕ ಸ್ಮೃತಿ. ಮೊತ್ತಮೊದಲು, ವಿಷಯದ ಕಡೆಗೆ ಆತನು ಗಮನ ನೀಡಿದನೆಂಬುದೇ ಇಲ್ಲಿನ ನಿಯಮ.
ಈ ಉದಾಹರಣೆಯಿಂದ ಗ್ರಹಣಾಸಾಮರ್ಥ್ಯಗಳು ಪರಸ್ಪರ ಸಂಬಂಧಿಸಿವೆಯೆಂಬುದು ತಿಳಿಯುತ್ತದೆ. ನಾವು ಒಂದು ವಿಷಯಕ್ಕೆ ಗಮನ ನೀಡಿದಾಗ ಮಾತ್ರ ನಮ್ಮ ದೀರ್ಘಕಾಲಿಕ ಸ್ಮೃತಿ ಪರಿಣಾಮಕಾರಿಯಾಗಬಲ್ಲುದು; ಆ ಮಾಹಿತಿ, ಕಾರ್ಯನಿರತ ಸ್ಮೃತಿ ಎಂಬ ಅಲ್ಪಕಾಲಿಕ ಸ್ಮೃತಿಯಲ್ಲಿ ಸಂಚಯವಾಗುತ್ತದೆ. ಕೆಲಕಾಲದ ಅವಲೋಕನದ ನಂತರ, ಈ ಕಾರ್ಯನಿರತ ಸ್ಮೃತಿಯಲ್ಲಿ ಸಂಚಿತ ಮಾಹಿತಿಯು, ದೀರ್ಘಕಾಲಿಕ ಸ್ಮೃತಿಗೆ ವರ್ಗಾವಣೆಗೊಳ್ಳುತ್ತದೆ.

ಆದರೆ, ತರಗತಿಯಲ್ಲಿ ವಿಷಯಗಳೆಡೆಗೆ ಗಮನ ನೀಡುವ, ನೆನಪಿಡುವಲ್ಲಿನ ಅಸಮರ್ಥತೆಯ ಕಾರಣದಿಂದ ಕಲಿಕೆಯಷ್ಟೇ ಅಲ್ಲದೆ ನಮ್ಮ ಜೀವನದಲ್ಲೂ ಅನೇಕ ದೀರ್ಘಕಾಲಿಕ ಸವಾಲುಗಳನ್ನು ಮುಂದೊಡ್ಡುತ್ತದೆ. ವಸ್ತುಗಳನ್ನು ಕ್ರಮವಾಗಿ ನೆನಪಿನಲ್ಲಿಡುವುದನ್ನು ಕಲಿಯುವುದರಿಂದ ಮರುಸ್ಮರಣೆ ಸುಲಭವಾಗುತ್ತದೆ.

ಇತರ ಗ್ರಹಣಾಸಾಮರ್ಥ್ಯಗಳೆಂದರೆ ತರ್ಕ ಮತ್ತು ವಿಚಾರವಾದ, ಶ್ರವಣ ಮತ್ತು ದೃಶ್ಯ ಸಂಸ್ಕರಣೆ ಹಾಗು ವೇಗದ ಸಂಸ್ಕರಣೆ. ಸಮಸ್ಯೆಗಳನ್ನು ಪರಿಹರಿಸುವುದು ಹಾಗು ಹೊಸ ಕಲ್ಪನೆಗಳ ಉದಯಕ್ಕೆ ತರ್ಕ ಮತ್ತು ವಿಚಾರವಾದ ನೆರವಾಗುತ್ತದೆ. ಅದರಲ್ಲೂ ಮುಖ್ಯವಾಗಿ ತರಗತಿಯಲ್ಲಿನ ಕಲಿಕೆಯಲ್ಲಿ ಪರಿಹರಿಸಲು, ಯೋಜಿಸಲು, ವಿಶ್ಲೇಷಿಸಲು, ಅರ್ಥೈಸಿಕೊಳ್ಳಲು ಮತ್ತು ಆವಶ್ಯಕ ಮಾಹಿತಿಯನ್ನು ತಾರ್ಕಿಕವಾಗಿ ನಿರ್ಧರಿಸಲು ವಿದ್ಯಾರ್ಥಿಗಳಿಗೆ ತರ್ಕ ಮತ್ತು ವಿಚಾರವಾದಗಳು ನೆರವಾಗುತ್ತವೆ.
ನಾವು ಕೇಳುವ ಮತ್ತು ಆಲಿಸುವ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ನಮ್ಮ ಮಿದುಳು ಶ್ರವಣ ಸಂಸ್ಕರಣೆಯನ್ನು ಬಳಸುತ್ತದೆ. ಈ ಮಾಹಿತಿಯನ್ನು ಸಂಸ್ಕರಿಸಲು ನಾವು ಶಬ್ದಗಳನ್ನು ಸಮನ್ವಯಗೊಳಿಸಿ, ವಿಶ್ಲೇಷಿಸಿ, ವಿಭಾಗಗೊಳಿಸುತ್ತೇವೆ. ಈ ಗ್ರಹಣಾಸಾಮರ್ಥ್ಯವು ತರಗತಿಯಲ್ಲಿ ಶಿಕ್ಷಕರು ಕಲಿಸುವುದನ್ನು ಆಲಿಸಿ, ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.

ಹೆಸರೇ ಹೇಳುವಂತೆ ದೃಶ್ಯ ಸಂಸ್ಕರಣೆಯು ಚಿತ್ರಗಳನ್ನು ಅರ್ಥೈಸಿಕೊಳ್ಳಲು ನಮಗೆ ನೆರವಾಗುತ್ತದೆ. ಪ್ರಬಲ ದೃಶ್ಯ ಸಂಸ್ಕರಣಾ ಸಾಮರ್ಥ್ಯವು ವಿನ್ಯಾಸ ರಚನೆಯಲ್ಲಿ, ಗ್ರಾಫ್ ಮತ್ತು ಪಟ್ಟಿಗಳನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ. ದುರ್ಬಲ ದೃಶ್ಯ ಸಂಸ್ಕರಣಾ ಸಾಮರ್ಥ್ಯದಿಂದ ನಾವು ಕಂಡಿದುದನ್ನು ಅಥವಾ ಓದಿದುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು; ಅದರಿಂದಾಗಿ ನಮಗೆ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು, ನಿರ್ದೇಶನಗಳ ಪಾಲನೆ, ನಕ್ಷೆಯನ್ನು ಓದುವುದು ಹಾಗು ಗಣಿತದಲ್ಲಿ ಶಾಬ್ದಿಕ ಸಮಸ್ಯೆಗಳನ್ನು ಬಿಡಿಸಲು ಕಠಿಣವಾಗುತ್ತದೆ.

ವೇಗದ ಸಂಸ್ಕರಣೆಯಿಂದ ಕೆಲಸಗಳನ್ನು ನಾವು ತ್ವರಿತವಾಗಿ ಮತ್ತು ನಿಖರವಾಗಿ ಮಾಡಬಹುದು. ವೇಗದ ಸಂಸ್ಕರಣೆಯಲ್ಲಿ ಅದಕ್ಷತೆ ಇದೆಯೆಂದರೆ, ನಾವು ಶಾಲೆ ಅಥವಾ ಕೆಲಸದಲ್ಲಿ ಮಾಡಬೇಕಾದ ಕಾರ್ಯಗಳನ್ನು ಪೂರ್ಣಗೊಳಿಸಲು ಅಧಿಕ ಸಮಯ ತೆಗೆದುಕೊಳ್ಳುತ್ತಿದ್ದೇವೆ ಹಾಗು ಸೂಚನೆಗಳನ್ನು ಅನುಸರಿಸುವುದು ನಮಗೆ ಕಠಿಣವಾಗುತ್ತಿದೆಯೆಂದು ಅರ್ಥ. ವಸ್ತುವಿಷಯದ ಸೂಕ್ತ ತಿಳಿವಳಿಕೆಯಿಂದ ವೇಗ ಅಧಿಕವಾಗುತ್ತದೆ. ಆಟಗಳಲ್ಲಿಯೂ ಕೂಡ, ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ತಮಾಷೆಗೂ ಅದನ್ನು ಆಡಲಾಗುವುದಿಲ್ಲ.

ವಿದ್ಯಾರ್ಥಿಯು ತಾನು ಕಲಿಯಲಿರುವ ಪಾಠದಿಂದ ಪರಿಚಿತನಾಗಿದ್ದರೆ ತರಗತಿಯ ಕಲಿಕೆಯನ್ನು ಸಮರ್ಥಗೊಳಿಸಬಹುದು. ಉದಾಹರಣೆಗೆ, 5ನೇ ಅಧ್ಯಾಯವನ್ನು ಶುಕ್ರವಾರ ಹೇಳಿಕೊಡಲಿದ್ದಾಗ, ಕೆಲದಿನಗಳ ಮೊದಲೇ ವಿದ್ಯಾರ್ಥಿಯು ಆ ಪಾಠವನ್ನು ಮನೆಯಲ್ಲಿ ಓದಿಕೊಂಡರೆ ಹೆಚ್ಚು ಅರ್ಥವಾಗುತ್ತದೆ. ಇಲ್ಲಿ ತರಗತಿಯ ಪಾಠಕ್ಕಿಂತ ಮುಂದಿರುವುದು ಮುಖ್ಯ.

ಗ್ರಹಣಾಸಾಮರ್ಥ್ಯಗಳು ಮತ್ತು ಅವುಗಳ ಕಾರ್ಯವಿಧಾನವನ್ನು ಹೆಚ್ಚು ತಿಳಿದುಕೊಂಡ ನಂತರ, ತರಗತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲು ಸುಲಭವಾಗುತ್ತದೆ. ಈ ಮಾನಸಿಕ ಸಾಮರ್ಥ್ಯಗಳು ವಿದ್ಯಾರ್ಥಿಗಳ ಕಲಿಕೆ ಪರಿಣಾಮಕಾರಿಯಾಗಲು ಅತ್ಯಾವಶ್ಯಕವಾಗಿವೆ. ಶಾಲೆಯಲ್ಲಿನ ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ವಿಷಯವನ್ನು ಓದುವುದು, ಬರೆಯುವುದು, ಯೋಚಿಸುವುದು, ವಿಶ್ಲೇಷಿಸುವುದು, ನೆನಪಿಡುವುದು, ಪರಿಹರಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಅಗತ್ಯ. ಅದು ಯಶಸ್ವಿಯಾಗಲು ಗ್ರಹಣಾಸಾಮರ್ಥ್ಯಗಳಲ್ಲಿ ಪ್ರತಿಯೊಂದೂ ಉಳಿದವುಗಳ ಜೊತೆಗೂಡಿ, ಪರಸ್ಪರ ಪೂರಕವಾಗಬೇಕು. ಇವೇ ಸಾಮರ್ಥ್ಯಗಳು ಕಲಿಕೆಯ ಫಲವನ್ನು ನಿರ್ಣಯಿಸುತ್ತವೆ. ಬಹಳಷ್ಟು ಕಲಿಕಾಸಮಸ್ಯೆಗಳಿಗೆ ಕಾರಣವೂ ಇವೇ ಸಾಮರ್ಥ್ಯಗಳ ಕೊರತೆ ಎಂಬುದನ್ನು ತಿಳಿದುಕೊಳ್ಳುವುದು ಹಾಗು ನಾವು ನಮ್ಮ ಭವಿಷ್ಯದ ನೇತಾರರನ್ನು ಹೇಗೆ ಬೆಳೆಸುತ್ತಿದ್ದೇವೆ? ಪೋಷಣಾಯುಕ್ತ ಪರಿಸರದಲ್ಲಿ ಅವರ ಬೆಳವಣಿಗೆಗೆ ನಾವು ಎಂತಹ ಸಾಧನಗಳನ್ನು ನೀಡಬಲ್ಲೆವು? ಎಂದು ಪ್ರಶ್ನಿಸುವುದೂ ಇಲ್ಲಿ ಸೂಕ್ತ.

ವಿದ್ಯಾರ್ಥಿಗಳ ಗ್ರಹಣಾಸಾಮರ್ಥ್ಯವನ್ನು ಹೆಚ್ಚಿಸಲು ಶಾಲೆಗಳು ಅನೇಕ ಸೂಕ್ತ ವಿಧಾನಗಳನ್ನು ಜಾರಿಗೆ ತಂದು, ವಯಸ್ಸಿಗೆ ತಕ್ಕ ತರಬೇತಿಯನ್ನು ನೀಡುವುದರೆಡೆಗೆ ಗಮನ ಹರಿಸಬೇಕು. ದೈಹಿಕ ಚಟುವಟಿಕೆಗಳು ಮತ್ತು ಮೆದುಳಿನ ಕಸರತ್ತುಗಳು ಮೆದುಳಿನ ಆರೋಗ್ಯ ಮತ್ತು ಗ್ರಹಿಕೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತವೆ. ವ್ಯಾಯಾಮದ ಸಮಯದಲ್ಲಿ ಬಿಡುಗಡೆಯಾಗುವ ಎಂಡೋರ್ಫಿನ್‍ನಂತಹ ರಾಸಾಯನಿಕಗಳು ನರವ್ಯೂಹ ಮತ್ತು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸಬಲ್ಲೆವು ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ.

ಜೊತೆಗೆ, ಮಕ್ಕಳಿಗೆ ಕಲೆ, ಸಂಗೀತ ಮತ್ತು ಕರಕುಶಲ ತರಬೇತಿಯನ್ನು ನೀಡುವ ಮೂಲಕ ಅವರ ಸೃಜನಾತ್ಮಕತೆಯನ್ನು ವೃದ್ಧಿಸಲು ಶಿಕ್ಷಕರು ಪ್ರಯತ್ನಿಸಬಹುದು. ಮಗುವಿನ ಕುತೂಹಲವನ್ನು ಬೆಂಬಲಿಸುವುದು ಹಾಗು ಮೆದುಳನ್ನು ಪ್ರಚೋದಿಸುವ ಜಿಗ್‍ಸಾ ಪಝಲ್, ಸುಡೋಕು ಅಥವಾ ಪದಬಂಧಗಳಲ್ಲಿ ಅವರನ್ನು ತೊಡಗಿಸುವುದರಿಂದ ಅವರ ತಾರ್ಕಿಕ ಕೌಶಲಗಳು ಸಾಕಷ್ಟು ವೃದ್ಧಿಯಾಗುತ್ತವೆ. ಮತ್ತೊಂದು ಬಹುಮುಖ್ಯ ಚಟುವಟಿಕೆಯೆಂದರೆ ವಿದ್ಯಾರ್ಥಿಗಳಿಗೆ ಪ್ರಾಕೃತಿಕ ಜಗತ್ತಿನ ಪರಿಚಯ ಮತ್ತು ಒಡನಾಟದ ಅವಕಾಶವನ್ನು ಕಲ್ಪಿಸಿಕೊಡುವುದು. ನಿಸರ್ಗದೊಂದಿಗೆ ಸಮರಸವಾಗಿರುವುದು ಸಾಮಾನ್ಯವಾಗಿ ಜೀವನದಲ್ಲಿ ಸಹಜಪಥವನ್ನು ನಿರ್ಮಿಸುತ್ತದೆ.

ಲೇಖಕರ ಪರಿಚಯ:
ಕಮಲೇಶ್ ಡಿ ಪಟೇಲ್‍ರವರು (ದಾಜಿ) ಹಾರ್ಟ್‍ಫುಲ್‍ನೆಸ್ ಇನ್‍ಸ್ಟಿಟ್ಯೂಟ್‍ನ ಮಾರ್ಗದರ್ಶಿಯಾಗಿದ್ದಾರೆ. ಇವರು ಸರಳ, ಪಾಲಿಸಲು ಸುಲಭ ಮತ್ತು ಎಲ್ಲ ಬಗೆಯ ಜನರಿಗೂ ಲಭ್ಯವಿರುವಂತೆ, ವೈಯಕ್ತಿಕ ಪ್ರಗತಿ ಹಾಗು ಪರಿವರ್ತನೆಗಾಗಿ ಪ್ರಾಯೋಗಿಕ, ಅನುಭವಾಧಾರಿತ ವಿಧಾನವನ್ನು ನೀಡುತ್ತಾರೆ. ದಾಜಿಯವರು ಉತ್ತಮ ವಾಗ್ಮಿಯೂ, ಬರಹಗಾರರೂ ಆಗಿದ್ದಾರೆ. ಅವರ ‘ದಿ ಹಾರ್ಟ್‍ಫುಲ್‍ನೆಸ್ ವೇ’ ಮತ್ತು ‘ಡಿಸೈನಿಂಗ್ ಡೆಸ್ಟಿನಿ’ ಪುಸ್ತಕಗಳು ಅತ್ಯಧಿಕ ಮಾರಾಟ ಕಂಡಿವೆ.

-ಕಮಲೇಶ್ ಡಿ ಪಟೇಲ್ (ದಾಜಿ), ಹಾರ್ಟ್‍ಫುಲ್‍ನೆಸ್ ಇನ್‍ಸ್ಟಿಟ್ಯೂಟ್‍ನ ಮಾರ್ಗದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT