ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣದ ಮನಸ್ಥಿತಿಗೂ ಮದ್ದಿದೆ..

Last Updated 3 ಮೇ 2021, 19:30 IST
ಅಕ್ಷರ ಗಾತ್ರ

ರೋಗ ಹರಡುವುದನ್ನು ತಡೆಗಟ್ಟುವುದು, ರೋಗ ತಗಲಿಸಿಕೊಳ್ಳದಂತೆ ಎಚ್ಚರ ವಹಿಸುವ ಪ್ರತಿಯೊಂದು ವಿಷಯವೂ ವ್ಯಕ್ತಿಯ ಮಾನಸಿಕ ಸಮತೋಲನದ ಮೇಲೆ ಒತ್ತಡ ಹೇರುತ್ತಿದೆ. ಆದರೂ ಕೂಡ ಉಡುಗಿಹೋಗುತ್ತಿರುವ ನಮ್ಮ ಮನೋಬಲವನ್ನು ಒಗ್ಗೂಡಿಸಿ ಸಕಾರಾತ್ಮಕ ಆಲೋಚನೆಗಳತ್ತ ನಿಗಾ ಹೆಚ್ಚಿಸಿಕೊಳ್ಳಬೇಕಿದೆ.

ನಾವಿಂದು ಎದುರಿಸುತ್ತಿರುವ ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ದುರಂತಗಳು ಬಹಳಷ್ಟು ಜನರ ಮನಸ್ಸಿಗೆ ಆಘಾತ ಉಂಟುಮಾಡುತ್ತಿವೆ. ರೋಗರುಜಿನಗಳಿಂದಾಗಿ ಮನಸ್ಸಿಗೆ ಬೇಸರವಾಗುವುದು, ಹಿಂಸೆಯಾಗುವುದು ಪ್ರಕೃತಿ ಸಹಜ. ನೆಂಟರಿಷ್ಟರ ಸಾವು– ನೋವುಗಳನ್ನು ಕ್ಷಣಕ್ಷಣವೂ ಎದುರಿಸುತ್ತಿರುವ ಮನಸ್ಸು ತಲ್ಲಣಕ್ಕೆ ಒಳಗಾಗದಿರುವುದು ಅಸಾಧ್ಯ. ಲಕ್ಷಾಂತರ ಜನರು ರೋಗಕ್ಕೆ ತುತ್ತಾಗುತ್ತಿರುವುದರಿಂದ ಹುಟ್ಟಿಕೊಳ್ಳುತ್ತಿರುವ ಭೀತಿ ಸಾಮಾನ್ಯ ರೀತಿಯದ್ದಲ್ಲ. ಜನಸಾಮಾನ್ಯರ ದಿನನಿತ್ಯದ ಬದುಕಿನ ಎಲ್ಲ ರೀತಿಯ ಹೊಂದಾಣಿಕೆಗಳನ್ನೂ ಬುಡಮೇಲು ಮಾಡಿರುವಂತಹ ಪರಿಸ್ಥಿತಿಯಿದು. ಮನಸ್ಸಿನ ಸಮಭಾವ ಏರುಪೇರಾದಾಗ ನಡೆ–ನುಡಿಗಳಲ್ಲೂ ಏರುಪೇರು ಕಾಣಿಸಿಕೊಳ್ಳುವುದಷ್ಟೇ ಅಲ್ಲದೆ ಇತರರ ನಡೆ–ನುಡಿಗಳ ಮೇಲೂ ಪರಿಣಾಮ ಬೀರುತ್ತದೆ.

ಸಕಾರಾತ್ಮಕ ಆಲೋಚನೆ

ರೋಗ ಹರಡುವುದನ್ನು ತಡೆಗಟ್ಟುವುದು, ರೋಗ ತಗಲಿಸಿಕೊಳ್ಳದಂತೆ ಎಚ್ಚರ ವಹಿಸುವುದು ಮತ್ತು ರೋಗ ತಗಲಿದವರೊಡನೆ ವ್ಯವಹರಿಸುವ ಪ್ರತಿಯೊಂದು ವಿಷಯವೂ ವ್ಯಕ್ತಿಯ ಮಾನಸಿಕ ಸಮತೋಲನದ ಮೇಲೆ ಒತ್ತಡ ಹೇರುತ್ತಿದೆ. ಆದರೂ ಕೂಡ ಉಡುಗಿಹೋಗುತ್ತಿರುವ ನಮ್ಮ ಮನೋಬಲವನ್ನು ಒಗ್ಗೂಡಿಸಿ ಮಾನಸಿಕ ಹೊಂದಾಣಿಕೆಗಾಗಿ ಪ್ರಯತ್ನಿಸಲೇ ಬೇಕು. ಸಕಾರಾತ್ಮಕ ಆಲೋಚನೆಗಳತ್ತ ನಮ್ಮ ನಿಗಾ ಹೆಚ್ಚಿಸಿಕೊಳ್ಳುವುದನ್ನು ಕಲಿಯುವ ಅಗತ್ಯವಿದೆ.

ಕಷ್ಟಗಳು ಎದುರಾದಾಗ ತಪ್ಪಿಸಿಕೊಳ್ಳುವ ವಿಧಗಳಲ್ಲಿ ಬಹಳ ಪರಿಣಾಮಕಾರಿಯೆಂದರೆ ವಿಚಾರ ಮಾಡುವುದು. ದುರುದೃಷ್ಟಕರದ ಸಂಗತಿ ಎಂದರೆ ವಿಚಾರ ಮಾಡುವುದನ್ನು ತಡೆಗಟ್ಟುವ ಭಾವೋದ್ವೇಗಗಳೇ ಮೊದಲು ಮೂಡುತ್ತವೆ. ಭಯ, ಆತಂಕ, ಭ್ರಾಂತುಗಳ ಮೂಲಕ ಸಂಕಟ ಎನ್ನುವ ಭಾವನೆ ಗಾಢವಾಗುವುದಕ್ಕೂ ಇದು ಕಾರಣ. ಇದು ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೆಚ್ಚಿಸಿ ತಡೆಯಲಾಗದಂತಹ ಭಯ ಭೀತಿಗೆ ದಾರಿ ಮಾಡಿಕೊಡುತ್ತದೆ. ಇದರ ಜೊತೆಗೆ ನಿರಾಶೆ, ಹತಾಶೆ ಭಾವನೆಗಳು ಸೇರಿಬಿಟ್ಟರಂತೂ ವ್ಯಕ್ತಿಯ ಚೈತನ್ಯ ನಿತ್ರಾಣಗೊಳ್ಳುವುದು ಖಂಡಿತ.

ರೋಗ ತಗಲುವ ಭಯ, ರೋಗ ತಗುಲಿದ ನಂತರದ ಪರಿಸ್ಥಿತಿಯ ಬಗ್ಗೆ ಆತಂಕಗಳು ಮನಸ್ಸಿಗೆ ಅಹಿತವನ್ನೇ ತರುತ್ತವೆ. ಮುಂದೆ ಏನೇನಾಗಿಬಿಡುವುದೋ ಎನ್ನುವಂತಹ ಮನದ ಸ್ಥಿತಿಯು ತವಕ, ತಲ್ಲಣಗಳ ಜಾಲವನ್ನು ಹಣಿಯುತ್ತದೆ. ಇವೇ ನಾಳೆಗಳ ಬಗ್ಗೆ ಭ್ರಮೆಯಾಧಾರಿತ ಕೆಟ್ಟ ಯೋಚನೆಗಳು ಮೂಡುವಂತೆ ಮಾಡುವುದು. ಇಂತಹ ಅಸಹಾಯಕತೆಯ ಸ್ಥಿತಿಗಳು ಹೆಚ್ಚುಕಡಿಮೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಂತಹದ್ದೇ.

ಸ್ವಾನುಕಂಪದಿಂದ ಕದಡುವ ಮಾನಸಿಕ ಸಮತೋಲನ

ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಆರೋಗ್ಯವಂತರಲ್ಲಿಯೂ ಅಸಹಾಯಕ ಮಾನಸಿಕತೆ ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಬಹುಮುಖ್ಯ ಮನೋವೈಜ್ಞಾನಿಕ ಕಾರಣ ಅನುಕಂಪ ಎನ್ನುವ ಮನುಷ್ಯ ಗುಣ. ಸ್ವಾನುಕಂಪ ಅಥವಾ ತನ್ನ ಬಗೆಯಷ್ಟೇ ಅತಿಯಾಗಿ ಯೋಚಿಸುವುದು ಒಂದು ರೀತಿಯದ್ದಾದರೆ, ಇನ್ನೊಂದು ರೀತಿಯಲ್ಲಿ ಅದು ಮನದ ಸಮತೋಲನವನ್ನೇ ಕದಡುವಂತಹದ್ದು. ಹಳೆಯ ಅಹಿತಕರ ನೆನಪು, ಥಟ್ಟನೆ ಮನಸ್ಸಿಗೆ ಗೋಚರಿಸಿ ಕ್ಷಣದಲ್ಲಿ ಮನವನ್ನು ಆವರಿಸಿಬಿಡುತ್ತದೆ. ನೀವು ಮಂದಿಯೊಂದಿಗಿರಿ, ದೂರವಿದ್ದು ಒಬ್ಬಂಟಿಯಾಗಿರಿ, ದುಡಿಯುತ್ತಿರಲಿ, ಪೂಜೆ, ಪ್ರಾರ್ಥನೆಗಳಿರಲಿ, ಮನದ ಈ ತಳಮಳದ ಸ್ಥಿತಿಯಲ್ಲಿ ಉದ್ರಿಕ್ತತೆ ಬಂದು ಹೋಗುತ್ತಲೇ ಇರುತ್ತದೆ. ಕೋವಿಡ್‌–19ಗಿಂತಲೂ ಭೀಕರ ಅದರ ಬಗ್ಗೆ ಮೂಡುವ ತಪ್ಪು ಮಾಹಿತಿಗಳು. ಈ ಮಾಹಿತಿಗಳೇ ಸಾಮಾಜಿಕ ಸಂಪರ್ಕ, ಸುಖ ನಿದ್ದೆ, ಹಸಿವು ಮುಂತಾದವುಗಳಲ್ಲಿ ಏರುಪೇರುಗಳನ್ನುಂಟು ಮಾಡಿ ಮನೋಯಾತನೆಗೆ ಕಾರಣವಾಗಬಲ್ಲವು. ಬೇರೆ ರೀತಿಯ ಕಾಯಿಲೆಗಳು ಇದ್ದರಂತೂ ವ್ಯಕ್ತಿಯ ಮನಸ್ಸು ಮತ್ತಷ್ಟು ಕುಸಿದುಬಿಡುತ್ತದೆ.

ವೈದ್ಯರು ಮತ್ತು ವೈಜ್ಞಾನಿಕ ಸಂಶೋಧನೆಗಳು ಕೋವಿಡ್‌–19 ಗೆ ನಂಬಲು ಅರ್ಹವಾದ, ಪರಿಣಾಮಕಾರಿ ಔಷಧಿ ಮತ್ತು ಚುಚ್ಚುಮದ್ದುಗಳಿವೆ ಎನ್ನುವುದನ್ನು ತಿಳಿಸುತ್ತವೆ. ರೋಗ ತಗಲಿದ ಮೇಲೂ ಚಿಕಿತ್ಸೆ ಪಡೆದು ಚೇತರಿಸಿಕೊಂಡವರ ಪ್ರಮಾಣ ಉತ್ತಮವಾಗಿಯೇ ಇದೆ. ಹೀಗಾಗಿ ಕಟ್ಟುನಿಟ್ಟಾಗಿ ಆರೋಗ್ಯದ ನಿಯಮಗಳನ್ನು ಅನುಸರಿಸುವುದೊಂದೇ ಅತ್ಯುತ್ತಮ ಮಾರ್ಗ, ಇದರಲ್ಲಿಯೇ ಮನದ ಸ್ಥೈರ್ಯವನ್ನು ಹೆಚ್ಚಿಸುವ ಪೌಷ್ಟಿಕಾಂಶ ಅಡಗಿದೆ; ಮನುಷ್ಯ ಸಹಜ ಶಕ್ತಿಗಳೆನ್ನಬಹುದಾದ ತಾಳ್ಮೆ, ಸಂಯಮ ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದಕ್ಕೂ ಉತ್ತೇಜನ ನೀಡಿ ಮನಸು ತಿಳಿಗೊಳ್ಳುವಂತೆ ಮಾಡುತ್ತದೆ. ಮನಸ್ಸು ಹಗುರವಾದಷ್ಟೂ ವಿವೇಚನಾ ಬಲದ ಹೆಚ್ಚಳ ಸಾಧ್ಯ. ಇದರಿಂದ ಸಾಂಕ್ರಾಮಿಕ ರೋಗವನ್ನು ಎದುರಿಸುವುದು ಕಷ್ಟಕರವಾಗದು.

ಮನೋಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

* ನಾವು ನೋಡುವ, ಕೇಳಿಸಿಕೊಳ್ಳುವ, ಅಥವಾ ನಂಬುವಂತಹ ವಿಷಯ, ಚಿತ್ರ ಅಥವಾ ಭಾವವನ್ನು ದಿಢೀರನೆ ಒಪ್ಪಿಕೊಳ್ಳದಿರುವುದು

* ಯಾವುದೇ ವಿಷಯವಿರಲಿ ಅದು ಉತ್ಪ್ರೇಕ್ಷೆಯಿಂದ ಕೂಡಿರಬಹುದಲ್ಲವೆ ಎನ್ನುವ ಪ್ರಶ್ನೆ ಇರಬೇಕು

* ರೋಗ ಹರಡುತ್ತಿರುವುದರ ಬಗ್ಗೆ, ರೋಗಕ್ಕೆ ತುತ್ತಾದವರ ಬಗ್ಗೆ, ರೋಗದ ಬಗ್ಗೆ ಹೊರಬರುವಂತಹ ಮಾಹಿತಿಗಳ ಮೂಲ, ಕಾರಣಗಳತ್ತವೂ ಗಮನ ಹರಿಸುವುದು ಮುಖ್ಯ

* ರೋಗದ ಬಗ್ಗೆ ವೈದ್ಯವಲಯಗಳಿಂದ ಬರುವಂತಹ ಸೂಚನೆ, ನಿಯಮಗಳನ್ನು ನಂಬಿ ಆತಂಕವಿಲ್ಲದೆ ಪಾಲಿಸುವುದು ಒಳ್ಳೆಯದು

* ನಿದ್ದೆ, ಊಟ, ವಿಶ್ರಾಂತಿ, ವ್ಯಾಯಾಮ, ಮನರಂಜನೆಯ ಅವಧಿಗಳನ್ನು ಗುರುತಿಸಿಟ್ಟುಕೊಳ್ಳುವುದರಿಂದ ನೆಮ್ಮದಿಯ ಸ್ವಭಾವಗಳು ಬಲಗೊಳ್ಳುತ್ತವೆ

* ರೋಗದ ಸಾಂಕ್ರಾಮಿಕ ಲಕ್ಷಣಗಳ ಬಗ್ಗೆ ಲಭ್ಯವಿರುವ ಮಾಹಿತಿಗಳು, ನಿಯಂತ್ರಣದ ವಿಧಗಳು, ಚಿಕಿತ್ಸೆಯ ಮಾದರಿಗಳ ಬಗ್ಗೆ ನಂಬಲು ಅರ್ಹವಾದಂತಹ ವೈಜ್ಞಾನಿಕ ವೈದ್ಯ ಮೂಲಗಳಿಂದ ಬಂದಿರುವುದರ ಬಗ್ಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು

* ಗಿಡಮೂಲಿಕೆ, ಹಣ್ಣು-ಕಾಯಿಗಳ ರಸ, ಪಶುಪಕ್ಷಿಗಳ ವಿಸರ್ಜನೆ, ಛೂ ಮಂತ್ರಗಳ ಜಾಲದತ್ತ ಸುಳಿಯದಿರುವುದೇ ಲೇಸು.

(ಲೇಖಕರು: ಮನೋವಿಜ್ಞಾನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT