ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಚಳಿಗಾಲದಲ್ಲಿ ಹೃದಯದ ಆರೈಕೆ ಬಗ್ಗೆ ನಿರ್ಲಕ್ಷ್ಯ ಬೇಡ

ಡಾ. ಶ್ರೀನಿವಾಸ್ ಪ್ರಸಾದ್ ಬಿ.ವಿ.
Published 12 ಜನವರಿ 2024, 8:39 IST
Last Updated 12 ಜನವರಿ 2024, 8:39 IST
ಅಕ್ಷರ ಗಾತ್ರ

ಸಾಕಷ್ಟು ಆರೋಗ್ಯ ಸಮಸ್ಯೆಗೆ ಚಳಿಗಾಲ ಅಪವಾದವಿದ್ದಂತೆ, ಈ ಕಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚು. ಹೌದು, ಹೃದಯಾಘಾತಕ್ಕೆ ಚಳಿಗಾಲ ಇನ್ನಷ್ಟು ಇಂಬುನೀಡಲಿದ್ದು, ವಾತಾವರಣದಲ್ಲಾಗುವ ಬದಲಾವಣೆಯಿಂದ ಹೃದಯದ ಮೇಲೂ ಪರಿಣಾಮ ಬೀರಲಿದೆ. ಚಳಿಗಾಲದಲ್ಲಿ ಹೃದಯದ ಆರೈಕೆ ಮಾಡುವುದು ಹೇಗೆ? ಹಠಾತ್‌ ಹೃದಯಾಘಾತ ಹಾಗೂ ಇತರೆ ಹೃದಯಸಮಸ್ಯೆಗೆ ಪರಿಹಾರಗಳ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್‌ ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಳ ಏಕೆ?

ಚಳಿಗಾಲದಲ್ಲಿ ಶೀತ ತಾಪಮಾನ ಹೆಚ್ಚಿರುವ ಕಾರಣ ರಕ್ತನಾಳಗಳು ಸಂಕುಚಿತಗೊಳ್ಳಲಿವೆ. ಮೊದಲೇ ದೇಹದ ಉಷ್ಣಾಂಶ ಕೂಡ ಕಡಿಮೆ ಇರುವುದರಿಂದ ಸಂಕುಚಿತಗೊಂಡ ರಕ್ತನಾಳದಲ್ಲಿ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಹೊರೆ ಹೃದಯವನ್ನು ಆಯಾಸಗೊಳಿಸಬಹುದು, ಈ ಮೊದಲೇ ಹೃದಯದ ಸಮಸ್ಯೆಗೆ ಒಳಗಾಗಿರುವವರಿಗೆ ಹೃದಯ ಇನ್ನಷ್ಟು ಆಯಾಸಗೊಳ್ಳುವ ಸಾಧ್ಯತೆ ತೀರ ಹೆಚ್ಚು. ಹೀಗಾಗಿ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಹೊಂದಿರುವವರು, ಈಗಾಗಲೇ ಹೃದಯ ಸಮಸ್ಯೆ ಇರುವವರು, ಒಬೆಸಿಟಿ, ಡಯಾಬಿಟಿಸ್‌ ಹಾಗೂ ಬಿಪಿ ಹೊಂದಿರುವ ಜನರು ಚಳಿಗಾಲದಲ್ಲಿ ತಮ್ಮ ಹೃದಯದ ಆರೈಕೆಗೆ ಹೆಚ್ಚು ಆದ್ಯತೆ ನೀಡುವುದು ಒಳಿತು.

ಯಾವ ಕಾರಣಕ್ಕೆ ಹೃದಯಾಘಾತವಾಗಲಿದೆ?

ರಕ್ತದೊತ್ತಡ: ಶೀತಗಾಳಿ ಅಥವಾ ಶೀತದ ವಾತಾವರಣವು ಹೃದಯದ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡಲಿದ್ದು, ಇದರಿಂದ ಹೃದಯದ ಕವಾಟಗಳಲ್ಲಿ ರಕ್ತಸಂಚಲನ ಕ್ಲಿಷ್ಟವಾಗಲಿದೆ.

ಉಸಿರಾಟದ ಸಮಸ್ಯೆ: ಚಳಿಗಾಲದಲ್ಲಿ ವ್ಹೀಸಿಂಗ್‌, ಅಸ್ತಮಾ ಇರುವವರಿಗೆ ಹಾಗೂ ಪ್ರದೂಷಣೆಗೆ ಒಳಗಾಗುವವರಲ್ಲಿ ಉಸಿರಾಟದ ಸಮಸ್ಯೆ ಕಾಡಲಿದೆ. ಹೆಚ್ಚು ವಾಯುಮಾಲಿನ್ಯದಂತಹ ಗಾಳಿಗೆ ಒಳಗಾದಾಗ ಇದರಿಂದ ಉಸಿರಾಟದ ಮೇಲೆ ಪರಿಣಾಮ ಬೀರಲಿದ್ದು, ಇದು ಕೂಡ ಹೃದಯದ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗಲಿದೆ.

ವ್ಯಾಯಾಮದ ಕೊರತೆ: ಚಳಿಗಾಲದಲ್ಲಿ ಹೆಚ್ಚಾಗಿ ಜನ ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಾರೆ ತಣ್ಣನೆಯ ಗಾಳಿ ಜನರನ್ನು ಸೋಮಾರಿಯನ್ನಾಗಿಸಲಿದೆ. ಹೀಗೆ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಹೃದಯದ ರಕ್ತನಾಳಗಳು

ಜಂಕ್‌ಫುಡ್‌ ಸೇವೆನೆ: ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ತಿನ್ನುವ ಬಯಕೆ ಹೆಚ್ಚಾಗುತ್ತದೆ, ಅದರಲ್ಲೂ ಬಜ್ಜಿ, ಬೋಂಡ ರಸ್ತೆಬದಿಯಲ್ಲಿರುವ ಇತರೆ ಜಂಕ್‌ಫುಡ್‌ ತಿನ್ನಲು ಮುಂದಾಗುತ್ತಾರೆ, ಇದರಿಂದಲೂ ಸಹ ಹೃದಯದ ಆರೋಗ್ಯ ಹಾಳಾಗಲಿದ್ದು, ಹೃದಯಾಘಾತಕ್ಕೂ ಕಾರಣವಾಗಬಹುದು.

ಹೃದಯದ ಆರೈಕೆಗೆ ಈ ಸಲಹೆ ಪಾಲಿಸಿ?

ದೇಹದ ಉಷ್ಣಾಂಶ ಕಾಪಾಡಿಕೊಳ್ಳಿ: ಚಳಿಗಾಲದಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಬಹುದು, ಹೀಗಾಗಿ ಆದಷ್ಟು ಬೆಚ್ಚಗಿನ ಉಡುಪು ಧರಿಸುವ ಮೂಲಕ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಿ. ಇದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗಲಿದೆ.

ನಿಯಮಿತ ದೈಹಿಕ ಚಟುವಟಿಕೆ: ಚಳಿಗಾಲದಲ್ಲಿ ಸಾಧ್ಯವಾದಷ್ಟು ವಾಕಿಂಗ್‌, ಜಾಕಿಂಗ್‌, ಯೋಗ, ಜಿಮ್‌ ಯಾವುದಾದರೊಂದು ವ್ಯಾಯಾಮವನ್ನು ನಿಯಮಿತವಾಗಿ ತೊಡಗಿಸಿಕೊಳ್ಳಿ.

ರಕ್ತದೊತ್ತಡದ ಮೇಲೆ ಗಮನವಿರಲಿ: ಈಗಾಗಲೇ ಬಿಪಿ ಹೊಂದಿರುವ ಜನರು ಚಳಿಗಾಲದಲ್ಲಿ ತಮ್ಮ ಬಿಪಿಯ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ.

ಧೂಮಪಾನ ತೊರೆಯಿರಿ: ಧೂಮಪಾನ ಹೃದ್ರೋಗಕ್ಕೆ ಅಪಾಯಕಾರಿ. ಹೀಗಾಗಿ ಧೂಮಪಾನ ತ್ಯಜಿಸುವುದು ಉತ್ತಮ.

ಆರೋಗ್ಯಕರ ಆಹಾರ ಸೇವಿಸಿ: ಚಳಿಗಾಲದಲ್ಲಿ ನಾಲಿಗೆಯ ಬಯಕೆಗಿಂತ ದೇಹದ ಬಯಕೆಗೆ ಆಧ್ಯತೆ ನೀಡಿ, ಪಾನಿಪುರಿ, ಬೋಂಡ ಬಜ್ಜಿ, ಇತರೆ ಜಂಕ್‌ಫುಡ್‌ ಸೇವನೆಗಿಂತ ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳು ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಿದ್ರೆ ಮಾಡಿರಿ: ಹೃದಯರಕ್ತನಾಳದ ಯೋಗಕ್ಷೇಮ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಈಗಾಗಲೇ ಹೃದಯದ ಸಮಸ್ಯೆ ಇರುವವರು ಹಾಗೂ ಹೃದಯಾಘಾತದ ಕುಟುಂಬದ ಇತಿಹಾಸ ಹೊಂದಿರುವವರು ಆಗಾಗ್ಗೇ ವೈದ್ಯರನ್ನು ಕಾಣುವುದು ಉತ್ತಮ. ಸಣ್ಣದಾಗಿ ಎದೆನೋವು ಕಾಣಿಸಿಕೊಂಡರೆ, ಹೃದಯಾಘಾತದ ಲಕ್ಷಣಗಳು ನಿಮ್ಮಲ್ಲಿ ಕಂಡರೆ ತಡಮಾಡದೇ ವೈದ್ಯರನ್ನು ಕಾಣುವುದು ಉತ್ತಮ. ಅದರಲ್ಲೂ ಚಳಿಗಾಲ ಮುಗಿಯುವವರೆಗೂ ಹೃದಯದ ಮೇಲೆ ಒಂದು ಗಮನವಿರಲಿ.

ಲೇಖಕ: ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್‌, ಫೋರ್ಟಿಸ್ ಆಸ್ಪತ್ರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT