ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ರಕ್ತದಾನಿಗಳ ದಿನ| ರಕ್ತದಾನದ ಕುರಿತ ತಪ್ಪು ಕಲ್ಪನೆಗಳು ಮತ್ತು ಸತ್ಯ

ಅಕ್ಷರ ಗಾತ್ರ

‘ಇಂದು ವಿಶ್ವ ರಕ್ತದಾನಿಗಳ ದಿನ. ಆದರೆ ರಕ್ತದಾನದ ಕುರಿತು ನಮ್ಮಲ್ಲಿ ಅನೇಕ ತಪ್ಪು ನಂಬಿಕೆಗಳಿವೆ. ಅದರಲ್ಲೂ ಈ ಕೊರೊನಾ ಸಂದರ್ಭದಲ್ಲಿ ಅನೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ರಕ್ತದಾನ ಮಾಡಿದರೆ ಎಷ್ಟೋ ಜೀವಗಳನ್ನು ಉಳಿಸಬಹುದು’ ಎನ್ನುತ್ತಾರೆ 43 ಬಾರಿ ರಕ್ತದಾನ ಮಾಡಿರುವ ಕಾರ್ಕಳದ ರಾಮ್‌.

ರಾಮ್ ಕಾರ್ಕಳ

ರಕ್ತದಾನದ ಬಗ್ಗೆ ಜನರಲ್ಲಿ ಅವರದ್ದೆ ಆದ ಊಹೆಗಳು ಹಾಗೂ ತಪ್ಪು ನಂಬಿಕೆಗಳಿವೆ. ಇದರ ಕುರಿತಾದ ತಪ್ಪುಗಳನ್ನು ಜನರು ಪರಾಮರ್ಶೆ ಮಾಡದೆ ಕಣ್ಣು ಮುಚ್ಚಿ ನಂಬುತ್ತಿದ್ದಾರೆ. ಆ ಕಾರಣಕ್ಕೆ ಅನೇಕರು ರಕ್ತದಾನ ಮಾಡುವುದಕ್ಕೆ ಹೆದರುತ್ತಾರೆ. ಪ್ರತಿ ವರ್ಷ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ರಕ್ತದ ಕೊರತೆಯಿಂದಾಗುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ, ಜೀವಗಳನ್ನು ಉಳಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತಿದೆ. ವಿಶ್ವ ರಕ್ತದಾನಿಗಳ ದಿನವಾದ ಇಂದು ರಕ್ತದಾನದ ಕುರಿತು ನಮ್ಮಲಿರುವ ಕೆಲವು ತಪ್ಪು ನಂಬಿಕೆಗಳಿವೆ. ಅವುಗಳನ್ನು ನಿವಾರಿಸುವ ಪ್ರಯತ್ನವಿದು.

ತಪ್ಪು ನಂಬಿಕೆ 1: ರಕ್ತದಾನ ಮಾಡುವುದರಿಂದ ನೋವಾಗುತ್ತದೆ

ಸತ್ಯ: ನಾವು ಬಾಲ್ಯದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಚುಚ್ಚುಮದ್ದು ಚುಚ್ಚಿಸಿಕೊಂಡಿರುತ್ತೇವೆ. ಚುಚ್ಚುಮದ್ದು ಚುಚ್ಚಿಸಿಕೊಳ್ಳುವುದು ಭಯವಾದರೂ ಈ ನೋವು ನಮಗೆ ಅಭ್ಯಾಸವಾಗಿರುತ್ತದೆ. ರಕ್ತದಾನ ಮಾಡುವಾಗಲೂ ಅಷ್ಟೇ ಚುಚ್ಚುಮದ್ದು ಚುಚ್ಚಿಸಿದಾಗ ಆಗುವ ನೋವೇ ಈ ಸಂದರ್ಭದಲ್ಲೂ ಆಗುತ್ತದೆ. ನಮ್ಮ ನರದೊಳಗೆ ಸೂಜಿ ಚುಚ್ಚುವಾಗ ಕೊಂಚ ನೋವಾಗುತ್ತದೆ. ಅದನ್ನು ಹೊರತು ಪಡಿಸಿದರೆ ಯಾವುದೇ ನೋವು ಇರುವುದಿಲ್ಲ.

ತಪ್ಪು ನಂಬಿಕೆ 2: ರಕ್ತದಾನದ ಪರಿಣಾಮದಿಂದ ದೇಹ ದುರ್ಬಲಗೊಳ್ಳುತ್ತದೆ

ಸತ್ಯ: ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಆದರೆ ರಕ್ತದಾನದಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಬೀರುವುದಿಲ್ಲ. ಇದು ದೇಹದಲ್ಲಿ ಉತ್ಪತ್ತಿಯಾಗುವ ಕಬ್ಬಿಣಾಂಶದ ಪರಿಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಸಂಗ್ರಹವಾಗುವುದನ್ನು ತಡೆಯುತ್ತದೆ. ಇದರಿಂದ ಹೃದಯಾಘಾತ ಹಾಗೂ ಪಿತ್ತಜನಕಾಂಗಕ್ಕೆ ಹಾನಿಯಾಗುವುದು ತಪ್ಪುತ್ತದೆ. ಅಲ್ಲದೇ ರಕ್ತದಾನದ ನಂತರ ಹೊಸ ರಕ್ತಕಣಗಳು ಉತ್ಪತ್ತಿಯಾಗುವ ವೇಗವೂ ಹೆಚ್ಚುತ್ತದೆ.

ತಪ್ಪು ನಂಬಿಕೆ 3: ರಕ್ತದಾನದ ನಂತರ ಬೊಜ್ಜು ಬೆಳೆಯುತ್ತದೆ

ಸತ್ಯ: ರಕ್ತದಾನಕ್ಕೂ ಬೊಜ್ಜಿಗೂ ಯಾವುದೇ ಸಂಬಂಧವಿಲ್ಲ. ರಕ್ತದಾನದ ನಂತರ ದೇಹತೂಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ಸದಾ ಜಂಕ್ ಆಹಾರಗಳನ್ನು ಸೇವಿಸುತ್ತಿದ್ದರೆ ದೇಹದ ತೂಕ ಹೆಚ್ಚುತ್ತದೆ.

ತಪ್ಪು ನಂಬಿಕೆ 4: ಸಸ್ಯಾಹಾರಿಗಳು ರಕ್ತದಾನ ಮಾಡಬಾರದು

ಸತ್ಯ: ನಮ್ಮ ಆಹಾರಕ್ರಮದ ಕಾರಣದಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಇರುತ್ತದೆ ಎಂಬುದು ಸಸ್ಯಾಹಾರಿಗಳ ನಂಬಿಕೆ. ಕಬ್ಬಿಣಾಂಶವು ದೇಹದಲ್ಲಿ ಹಿಮೊಗ್ಲೋಬಿನ್‌ ಅಂಶ ಹೆಚ್ಚಲು ಸಹಾಯ ಮಾಡುತ್ತದೆ. ಸಸ್ಯಾಹಾರದಲ್ಲಿ ಸಾಕಷ್ಟು ಕಬ್ಬಿಣಾಂಶ ಇಲ್ಲ ಎನ್ನುವುದು ಜನರ ತಪ್ಪು ಕಲ್ಪನೆ. ಆದರೆ ಸೊಪ್ಪು, ತರಕಾರಿಗಳಲ್ಲಿ ದೇಹಕ್ಕೆ ಅವಶ್ಯವಿರುವ ಸಾಕಷ್ಟು ಕಬ್ಬಿಣಾಂಶ ಇರುತ್ತದೆ. ಹಾಗಾಗಿ ರಕ್ತದಾನ ಮಾಡಲು ಸಸ್ಯಾಹಾರಿ, ಮಾಂಸಾಹಾರಿ ಎಂಬ ಭೇದಭಾವವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT