ಶನಿವಾರ, ಅಕ್ಟೋಬರ್ 16, 2021
22 °C

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆ; ಇರಲಿ ಎಚ್ಚರಿಕೆ

ಡಾ|| ಸ್ಮಿತಾ ಜೆ.ಡಿ Updated:

ಅಕ್ಷರ ಗಾತ್ರ : | |

Prajavani

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಹಾಗೂ ಈ ಸಮಸ್ಯೆಗಳಿಂದ ದೂರ ಉಳಿಯಲು ಮಾಡಬಹುದಾದ್ದೇನು ಎಂಬುದರ ಬಗ್ಗೆ ಸಂಕ್ಷಿಪ್ತ ಅಧ್ಯಯನ ಆಧರಿತ ಮಾಹಿತಿ ಇಲ್ಲಿದೆ.

ಈಗಿನ ಪರಿಸ್ಥಿತಿಯಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆ ಅನಿವಾರ್ಯವಾಗಿದೆ. ಕೋವಿಡ್‌ನಿಂದಾದ ಸಾಮಾಜಿಕ ಬದಲಾವಣೆಗಳಲ್ಲಿ ಪ್ರಮುಖವಾದದ್ದು ಇದು ಎಂದು ಹೇಳಬಹುದಾಗಿದೆ. ಶಾಲಾಕಾಲೇಜುಗಳ ಬಾಗಿಲುಗಳು ಮುಚ್ಚಿ ಎರಡು ವರ್ಷಗಳ ಸಮೀಪಕ್ಕೆ ಬರುತ್ತಿದೆ. ಪಾಠ ಪ್ರವಚನಗಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಅವಲಂಬಿಸುವುದು ಪೋಷಕರನ್ನು ಆಂತಕಕ್ಕೆ ಎಡೆಮಾಡಿದೆ. ಮಕ್ಕಳಲ್ಲದೆ ಅನೇಕ ಇತರೆ ವೃತ್ತಿನಿರತರೂ ಕೂಡ ತಮ್ಮ ದೈನಂದಿನ ಚಟುವಟಿಕೆಗಳಿಗೆ ಗ್ಯಾಜೆಟ್‌ಗಳನ್ನು ಬಳಸುವಂತಾಗಿದೆ. ಇದರ ಬಳಕೆ ಎಷ್ಟು ಉಪಯುಕ್ತವೋ ಅತಿಯಾದರೆ ಗಂಭೀರ ಪರಿಣಾಮವನ್ನು ಬೀರಬಲ್ಲದ್ದಾಗಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಹಾಗೂ ಈ ಸಮಸ್ಯೆಗಳಿಂದ ದೂರ ಉಳಿಯಲು ಮಾಡಬಹುದಾದ್ದೇನು ಎಂಬುದರ ಬಗ್ಗೆ ಸಂಕ್ಷಿಪ್ತ ಅಧ್ಯಯನ ಆಧರಿತ ಮಾಹಿತಿ ಇಲ್ಲಿದೆ.

ಪ್ರಪಂಚವನ್ನು ಹಾಗೂ ನಮ್ಮ ದೈನಂದಿನ ಜೀವನವನ್ನು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಲ್ಲದೆ ಊಹಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ ಎಂದರೆ ಫೋನು, ಟ್ಯಾಬ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಟಿವಿ ಮುಂತಾದವುಗಳು. ಇದರಿಂದಾಗುವ ದುಷ್ಪರಿಣಾಮಗಳೆಂದರೆ :

ದೈಹಿಕ ಸಮಸ್ಯೆಗಳು :

* ಹೆಚ್ಚು ಹೊತ್ತು ಕಂಪ್ಯೂಟರ್ ಅಥವಾ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮುಂದೆ ಸಮಯ ಕಳೆಯುವುದರಿಂದ ದೈಹಿಕ ಚಟುವಟಿಕೆಗಳಿಂದ ವಂಚಿತರಾಗುವುದರಿಂದ ಬೊಜ್ಜಿನ ಸಮಸ್ಯೆ, ಮಾಂಸಖಂಡಗಳು ಗಡಸಾಗುವುದು, ಮಂಡಿನೋವು , ಸ್ನಾಯುಸೆಳೆತ ಮುಂತಾದ ಸಮಸ್ಯೆಗಳಿಂದ ಬಳಲಬಹುದಾಗಿದೆ.

* ಕೈಗಳಲ್ಲಿ ಮೊಬೈಲ್‌ಗಳನ್ನು, ಟ್ಯಾಬ್‌ಗಳನ್ನು ಹಿಡಿದು ಗಂಟೆಗಟ್ಟಲೆ ಗೇಮ್‌ಗಳನ್ನು ಆಡುವವರಲ್ಲಿ ಕುತ್ತಿಗೆಯಲ್ಲಿ 'ಪುನರಾವರ್ತಿತ ಸ್ನಾಯುಗಳ ಸೆಳೆತ '(Repetitive Strain Injury) ಯಾಗಬಹುದಾಗಿದೆ.

* ಮೊಬೈಲ್‌ಗಳಲ್ಲಿ ಅತಿಯಾದ ಟೆಕ್ಸ್ಟ್ ಮೇಸೇಜ್‌ಗಳನ್ನು ಕಳಿಸುವ ಅಭ್ಯಾಸವಿರುವವರಲ್ಲಿ ಟೆಕ್ಸ್ಟ್ ನೆಕ್ / ಟೆಕ್ಸ್ಟ್ ಕುತ್ತಿಗೆ ಸಮಸ್ಯೆಯಿಂದ ಬಳಲಬಹುದಾಗಿದೆ. ಅತಿಯಾಗಿ ಹೆಬ್ಬೆರಳುಗಳನ್ನು ಬಳಸುವುದರಿಂದ ಪ್ಲೇಸ್ಟೇಷನ್ thumb / ಸೆಲ್ ಫೋನ್ ಹೆಬ್ಬೆರಳು ಎಂಬ ಸಮಸ್ಯೆಯಿಂದ ಬಳಲಬಹುದಾಗಿದೆ.

* ಅತಿಯಾದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆ ಚಟವಾಗಿ ಪರಿಣಮಿಸಬಹುದಾಗಿದೆ. ಅದು ಗೇಮಿಂಗ್‌ನ ರೂಪದಲ್ಲಿರಬಹುದು, ಸಾಮಾಜಿಕ ಜಾಲತಾಣಗಳಲ್ಲಿರಬಹುದು.

* ಕಣ್ಣುಗಳ ಮೇಲಿನ ಪರಿಣಾಮವನ್ನು ಕಂಪ್ಯೂಟರ್ ದೃಷ್ಟಿ ಸಿಂಡ್ರೋಮ್ ( COMPUTER VISION SYNDROME ) ಎನ್ನಬಹುದಾಗಿದೆ. ಇದರಿಂದ ಕಣ್ಣುಗಳಲ್ಲಿ ಉರಿ, ಒಣಗುವಿಕೆ, ಕಣ್ಣು ಕೆಂಪಾಗುವುದು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆಗಳು ಉದ್ಭವಿಸಬಹುದು.

ಮಾನಸಿಕ ಸಮಸ್ಯೆಗಳು : ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಅತಿಯಾದ ಬಳಕೆಯಿಂದ ಆಂತರಿಕ ಆತಂಕ, ಖಿನ್ನತೆ, ಅಭದ್ರತೆ, ಕುಂದಿದ ಆತ್ಮಾಭಿಮಾನ, ಸಾಮಾಜಿಕ ಸಂಬಂಧಗಳಲ್ಲಿ ಅಸ್ಥಿರತೆ, ಉದ್ವಿಗ್ನತೆ, ನಿದ್ರೆಯಲ್ಲಿ ಏರುಪೇರು, ನಿದ್ರೆ ಬಾರದೇ ಇರುವುದು, ಪಚನಶಕ್ತಿಯಲ್ಲಿನ ಏರುಪೇರು ಹೀಗೆ ಅನೇಕ ಸಮಸ್ಯೆಯಿಂದ ಬಳಲುವವರಾಗಿರುತ್ತಾರೆ.

ಈ ಸಮಸ್ಯೆಗಳನ್ನು ತಡೆಗಟ್ಟಲು ಮಾಡಬಹುದಾದ್ದೇನು?

• ಎರಡು ವರ್ಷದ ಕೆಳಗಿನ ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಗಳಿಂದ ಸಂಪೂರ್ಣವಾಗಿ ದೂರ ಇರಿಸಿ.
• ಎರಡರಿಂದ ಐದು ವರ್ಷದ ಮಕ್ಕಳಿಗೆ ಪೋಷಕರು ಇರುವಿಕೆಯಲ್ಲಿ ಕೆಲ ಅವಶ್ಯಕತೆ ಇರುವ ಹಾಗೂ ವಯಸ್ಸಿಗೆ ಅನುಗುಣವಾಗಿ ಒಂದು ಗಂಟೆಯವರೆಗಿನ ಗ್ಯಾಜೆಟ್‌ಗಳ ಬಳಕೆಯಿಂದ ಹಾನಿಯುಂಟಾಗಲಾರದು. ಆರು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮಕ್ಕಳ ನಿದ್ರೆ, ವ್ಯಾಯಾಮ, ನಡವಳಿಕೆ, ಓದು ಇವುಗಳ ಮೇಲೆ ಪರಿಣಾಮ ಬೀರದಂತೆ ಕೆಲವು ಗಂಟೆಗಳ ವೀಕ್ಷಣೆ ಸಮಂಜಸವಾಗಿರುತ್ತದೆ.
• ಈ ಅಭ್ಯಾಸಗಳನ್ನು ತರಲು ಪೋಷಕರ ಪಾತ್ರ ಹಾಗೂ ಜವಾಬ್ದಾರಿ ಅತ್ಯಂತ ಪೂರಕ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುವ ಅಭ್ಯಾಸ, ಪುಸ್ತಕಗಳನ್ನು ಓದಿ ಹೇಳುವುದು ಹಾಗೂ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರ ಉಳಿಯುವಂತೆ ಮಾಡಬಹುದಾಗಿದೆ.
• ಕೋವಿಡ್‌ನ ಈ ಪರಿಸ್ಥಿತಿಯಲ್ಲಿ ಇವುಗಳ ಬಳಕೆ ಶಿಕ್ಷಣಕ್ಕೆ ಅನಿವಾರ್ಯವಾಗಿರುವುದರಿಂದ ಹಾಗೂ ವಯಸ್ಕರರಿಗೆ ಅವಶ್ಯಕತೆ ಇರುವುದರಿಂದ ಈ ಕೆಲವು ಟಿಪ್ಸ್‌ಗಳನ್ನು ಅನುಸರಿಸಬಹುದು.
• ಅರ್ಧ ಗಂಟೆಗೊಮ್ಮೆ ಕೂತ ಸ್ಥಳದಿಂದ ಎದ್ದು ಓಡಾಡುವುದು ಇದರಿಂದ ದೇಹ ಚಟುವಟಿಕೆಯಿಂದ ಇರುವುದಲ್ಲದೆ ರಕ್ತಸಂಚಲನೆಗೆ ಸಹಕಾರವಾಗುತ್ತದೆ.
• ಕಂಪ್ಯೂಟರ್ ಮುಂದೆ ಕೂರುವಾಗ ಬೆನ್ನು ನೇರವಾಗಿ ಕುತ್ತಿಗೆಗೆ ಹಾಗೂ ಭುಜಕ್ಕೆ ತೊಂದರೆಯಾಗದಂತೆ ಸರಿಯಾದ ಮೇಜು, ಕುರ್ಚಿ ಹಾಗೂ ಭಂಗಿಯ ಉಪಯೋಗ.
• ಫೋನ್‌ಗಳನ್ನು ಧೀರ್ಘಕಾಲ ಬಳಸಬೇಕಾದ ಸಂದರ್ಭಗಳಲ್ಲಿ ಕಣ್ಣಿನ ಸಮಕ್ಕೆ ಹಿಡಿದುಕೊಂಡು ಉಪಯೋಗಮಾಡಬಹುದು. ಇದರಿಂದ ಕುತ್ತಿಗೆ ತೊಂದರೆಯಿಂದ ದೂರ ಉಳಿಯಬಹುದು.
• 20-20-20 ನಿಯಮ : ಅಮೇರಿಕನ್ ಅಪಟೀಮಿಟ್ರಿಕ್ ಅಸೋಸೀಯೇಷನ್‌ನ ಪ್ರಕಾರ ವಿಕಿರಣಗಳನ್ನು ಹೊರಹಾಕುವ ಸಲಕರಣೆಗಳಿಂದ 20 ಅಡಿ ದೂರವಿದ್ದು, 20 ನಿಮಿಷಕ್ಕೆ ಹೆಚ್ಚು ಉಪಯೋಗ ಮಾಡದೆ, 20 ನಿಮಿಷಗಳಿಗೊಮ್ಮೆ ಬಿಡುವು ತೆಗೆದುಕೊಳ್ಳುವುದು ಉತ್ತಮ.
• ಡಿಜಿಟಲ್ ಹೈಜಿನ್ / ಡಿಜಿಟಲ್ ಸ್ವಚ್ಛತೆ : ಸಿಂಗಪುರದಲ್ಲಿ ನಡೆದ ಜಂಕ್ ಸ್ಲೀಪ್ ಮೂವ್‌ಮೆಂಟ್‌ನ ( JUNK SLEEP MOVEMENT ) ಪ್ರಕಾರ ಮಲಗುವುದಕ್ಕಿಂತ ಕನಿಷ್ಠ ಒಂದು ಗಂಟೆಯ ಮೊದಲು ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರ ಉಳಿಯುವುದು ಒಳಿತು. ಇದು ಗುಣಮಟ್ಟದ ನಿದ್ರೆಗೆ ಪೂರಕ.
• ಗ್ಯಾಜೆಟ್ ಫ್ರೀ ಜೋನ್ ( GADGET FREE ZONES) : ಮಲಗುವ ಕೋಣೆ ಮುಂತಾದ ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸದೆ ಕೌಟುಂಬಿಕ ಸಮಯಕ್ಕೆ ಒತ್ತು ಕೊಡುವುದು.
• ಕಣ್ಣುಗಳ ರೆಪ್ಪೆಯನ್ನು ಆಗಾಗ್ಗೆ ಮುಚ್ಚುವುದರಿಂದ ಕಣ್ಣಿನ ಗುಡ್ಡೆಯ ಮೇಲೆ ಕಣ್ಣಿನ ದ್ರವದ ಪದರವು ಸೃಷ್ಠಿಯಾಗಿ ಸ್ವಾಭಾವಿಕವಾಗಿ ಆಮ್ಲಜನಕ ದೊರೆಯುವಂತೆ ಮಾಡಿ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದಾಗಿದೆ.

(ಲೇಖಕರು: ಡಾ|| ಸ್ಮಿತಾ ಜೆ.ಡಿ, ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು