ಸೋಮವಾರ, ಮಾರ್ಚ್ 1, 2021
28 °C

ಕೊರೊನಾ ಒಂದಿಷ್ಟು ತಿಳಿಯೋಣ: ಗಂಭೀರ ಕೋವಿಡ್‌ ತಡೆಗೂ ವಿಟಮಿನ್‌ ಡಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಶುರುವಾದಾಗ ವೈದ್ಯರು ಹಾಗೂ ಸಂಶೋಧಕರು ಹೆಚ್ಚಾಗಿ ಚರ್ಚಿಸಿದ್ದು ವಿಟಮಿನ್‌ ಡಿ ಸೇವನೆಯ ಬಗ್ಗೆ. ಕೋವಿಡ್‌ ಬರದಂತೆ ತಡೆಯಲು ಹಾಗೂ ಕೋವಿಡ್‌ ಬಂದವರಿಗೆ ಅದು ತೀವ್ರವಾಗದಂತೆ ನೋಡಿಕೊಳ್ಳಲು ವಿಟಮಿನ್‌ ಡಿ ನೀಡಬೇಕು; ಈ ಮೂಲಕ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ಎಂಬುದು ಇದಕ್ಕೆ ಕಾರಣ.

ಈಗ ಅಮೆರಿಕದ ಮಸಾಚುಸೆಟ್ಸ್‌ನ ಬ್ರಿಗ್ಹಾಮ್‌ ಆ್ಯಂಡ್‌ ವಿಮೆನ್ಸ್‌ ಆಸ್ಪತ್ರೆ ಮತ್ತು ಸಾರ್ವಜನಿಕ ಆರೋಗ್ಯ ಕುರಿತ ಹಾರ್ವರ್ಡ್‌ ಟಿ.ಎಚ್.ಚಾನ್‌ ಸ್ಕೂಲ್‌ನ ಸಂಶೋಧಕರು ವಿಟಮಿನ್‌ ಡಿ ಸೇವನೆಯಿಂದ ಕೋವಿಡ್‌ ಗಂಭೀರ ಸ್ಥಿತಿಗೆ ತಲುಪುವುದನ್ನು ಹಾಗೂ ಸಾವನ್ನು ತಡೆಯಬಹುದೇ ಎಂಬುದರ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.

ದೇಹದಲ್ಲಿ ಪ್ರತಿರಕ್ಷಣೆಯ ಗುಣವನ್ನು ಹೆಚ್ಚಿಸಲು ಹಾಗೂ ಇದು ಕಡಿಮೆಯಾದಾಗ ಉರಿಯೂತವನ್ನು ತಡೆಯಲು ವಿಟಮಿನ್‌ ಡಿ ನೆರವಾಗುತ್ತದೆ ಎಂಬುದು ಗೊತ್ತೇ ಇದೆ. ಕೋವಿಡ್‌ ಬಂದವರಲ್ಲಿ ಹಲವರಿಗೆ ನಿಗದಿತ ಮಟ್ಟಕ್ಕಿಂತ ಕಡಿಮೆ ವಿಟಮಿನ್‌ ಡಿ ಇರುವುದು ಕಂಡು ಬಂದಿದೆ ಎಂದು ಬ್ರಿಗ್ಹಾಮ್‌ ಆಸ್ಪತ್ರೆಯ ಅಧ್ಯಯನ ತಂಡದ ಮುಖ್ಯಸ್ಥರಾದ ಜೋಆ್ಯನ್‌ ಮ್ಯಾನ್ಸನ್‌ ಆಸ್ಪತ್ರೆಯ ಜರ್ನಲ್‌ನಲ್ಲಿ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ. ತೀವ್ರತರದ ಕೋವಿಡ್‌ ಪ್ರಕರಣಗಳಲ್ಲಿ ರೋಗ ನಿರೋಧಕ ವ್ಯವಸ್ಥೆಯು ಉರಿಯೂತ ಕುರಿತಂತೆ ಹೆಚ್ಚಿನ ಪ್ರಮಾಣದ ಸಂಕೇತಗಳನ್ನು ಕಳಿಸುವುದು ಇದಕ್ಕೆ ಕಾರಣವಿರಬಹುದು ಎಂಬುದು ಅವರ ಅಭಿಪ್ರಾಯ.

ಹೀಗಾಗಿ ಅಧ್ಯಯನದಲ್ಲಿ ಭಾಗವಹಿಸುವವರಿಗೆ ವಿಟಮಿನ್‌ ಡಿ ಮಾತ್ರೆ ನೀಡಿ ತೀವ್ರತರದ ಕೋವಿಡ್‌ ಅನ್ನು ಕಡಿಮೆ ಮಾಡಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ವಿಟಮಿನ್‌ ಡಿ ಕೊರತೆಯು ಕೋವಿಡ್‌ ಗಂಭೀರವಾಗಲು ಅಥವಾ ಸಾವು ಸಂಭವಿಸಲು ಕಾರಣ. ಹೀಗಾಗಿ ರಕ್ತ ಪರೀಕ್ಷೆಯ ಮೂಲಕ ವಿಟಮಿನ್‌ ಡಿ ಮಟ್ಟವನ್ನು ಪರೀಕ್ಷಿಸಿಕೊಂಡು ಸಪ್ಲಿಮೆಂಟ್‌ ಸೇವಿಸಬಹುದು. ಸದ್ಯ ವಯಸ್ಕರಿಗೆ 600 ಐಯು ಡೋಸ್‌ ವಿಟಮಿನ್‌ ಡಿ ಸೇವಿಸುವಂತೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ಮ್ಯಾನ್ಸನ್‌ ಅವರು ಲೇಖನದಲ್ಲಿ ತಿಳಿಸಿದ್ದಾರೆ.

ವಿಟಮಿನ್‌ ಡಿಯನ್ನು ಶಿಫಾರಸ್ಸು ಮಾಡಿದ್ದಕ್ಕಿಂತ ಹೆಚ್ಚಿನ ಡೋಸ್‌ ತೆಗೆದುಕೊಂಡರೆ ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಇನ್ನಿತರ ಅಪಾಯಗಳು ಸಂಭವಿಸಬಹುದು. ಹೀಗಾಗಿ ವೈದ್ಯರ ಶಿಫಾರಸ್ಸಿನ ಅನ್ವಯ ಸೇವಿಸಬೇಕು. ಮಾತ್ರೆಯ ಹೊರತಾಗಿ ಬಿಸಿಲಿನಲ್ಲಿ ನಿಲ್ಲುವುದರಿಂದ, ಅಣಬೆ, ಮೊಟ್ಟೆಯ ಹಳದಿ ಭಾಗ, ಸ್ಯಾಮನ್‌ನಂತಹ ಎಣ್ಣೆಭರಿತ ಮೀನಿನ ಸೇವನೆಯಿಂದ ಕೂಡ ವಿಟಮಿನ್‌ ಡಿ ಪಡೆದುಕೊಳ್ಳಬಹುದು.

ಕೋವಿಡ್‌ ಮಾತ್ರವಲ್ಲ, ಕ್ಯಾನ್ಸರ್‌ ಸೇರಿದಂತೆ ಕೆಲವು ಕಾಯಿಲೆಗಳು ಬಂದಾಗ ವಿಟಮಿನ್‌ ಡಿ ಪ್ರಮಾಣ ಕಡಿಮೆಯಿರುವುದು ರಕ್ತ ಪರೀಕ್ಷೆಯಿಂದ ಗೊತ್ತಾಗುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸುವಲ್ಲಿ ಹಾಗೂ ಶ್ವಾಸಕೋಶದ ಸೋಂಕಿನಲ್ಲಿ ವಿಟಮಿನ್‌ ಡಿ ಪಾತ್ರ ಮಹತ್ವದ್ದು. ಕೋವಿಡ್‌–19 ನಿಯಂತ್ರಣದಲ್ಲೂ ಇದರ ಪಾತ್ರ ಮುಖ್ಯ, ಏಕೆಂದರೆ ವಿಟಮಿನ್‌ ಡಿ ಮಟ್ಟ ಹೆಚ್ಚಿದ್ದವರು ಕೋವಿಡ್‌ನಿಂದ ಬೇಗ ಚೇತರಿಸಿಕೊಂಡಿರುವುದು ಇದುವರೆಗಿನ ಅಧ್ಯಯನದಿಂದ ಗೊತ್ತಾಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು