ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಮುಟ್ಟಾದಾಗ ಹೊಟ್ಟೆನೋವು: ಪರಿಹಾರವೇನು?

Last Updated 19 ನವೆಂಬರ್ 2021, 19:30 IST
ಅಕ್ಷರ ಗಾತ್ರ

* ನನಗೆ 30 ವರ್ಷ. ಮದುವೆಯಾಗಿ 12 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನನಗೆ 25 ದಿನಗಳಿಗೊಮ್ಮೆ ಮುಟ್ಟಾಗುತ್ತದೆ. ಮೊದಲ ಮೂರು ದಿನಗಳು ಸ್ವಲ್ಪ ಮಾತ್ರ ರಕ್ತಸ್ರಾವ ಆಗುತ್ತದೆ. 4-5ನೇ ದಿನ ಹೆಚ್ಚು ಸ್ರಾವವಾಗಿ ತುಂಬಾ ಹೊಟ್ಟೆನೋವು ಇರುತ್ತದೆ. 6ನೇ ದಿನದಿಂದ ಕಡಿಮೆಯಾಗುತ್ತಾ ಬರುತ್ತದೆ. ಪರಿಹಾರ ತಿಳಿಸಿ?

–ಪವಿತ್ರಾ, ಬೆಂಗಳೂರು

ಉತ್ತರ: ಪವಿತ್ರಾರವರೇ, ನಿಮಗಿರುವುದು ಸೆಕೆಂಡರಿ ಡಿಸ್‌ಮೆನೋರಿಯಾ (ದ್ವೀತಿಯ ಸ್ತರದ ಋತುರೋಧನ). ಈ ತರಹದ ಹೊಟ್ಟೆನೋವು ಸಾಮಾನ್ಯವಾಗಿ ಸಂತಾನೋತ್ಪತ್ತಿ ಅಂಗಗಳಲ್ಲಾಗುವ ತೊಂದರೆಯಿಂದ ಉಂಟಾಗುತ್ತದೆ. ಈ ನೋವು ಮುಟ್ಟು ಬರುವ ಮೊದಲೇ ಆರಂಭವಾಗುವಂತಹದ್ದು. ನಂತರವೂ ಮುಂದುವರೆಯುತ್ತದೆ. ನೀವು ವೈದ್ಯರ ಸಲಹೆಯ ಮೇರೆಗೆ ಒಮ್ಮೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕೆಂದರೆ ಇಂತಹ ಸೆಕೆಂಡರಿ ಡಿಸ್‌ಮೆನೋರಿಯಾ ಗರ್ಭಕೋಶದಲ್ಲಿ ನಾರುಗಡ್ಡೆಗಳಿದ್ದಾಗ (ಫೈಬ್ರಾಯ್ಡ್‌) ಕಾಣಿಸಿಕೊಳ್ಳಬಹುದು. ಮತ್ತು ಹೆಚ್ಚಿನ ಸಂದರ್ಭದಲ್ಲಿ ಎಂಡೋಮೆಟ್ರಿಯೋಸಿಸ್ ಹಾಗೂ ಅಡಿನೋಮಯೋಸಿಸ್‌ನಿಂದ ಉಂಟಾಗುತ್ತದೆ. ಗರ್ಭಕೋಶ, ಅಂಡಾಶಯ ಹಾಗೂ ಗರ್ಭನಾಳದ ಸೋಂಕಾಗಿದ್ದಾಗ, ಕೆಲವೊಮ್ಮೆ ಕಾಪರ್ಟಿ ಅಳವಡಿಸಿಕೊಂಡಾಗಲೂ ಗರ್ಭಕೋಶಕ್ಕೆ ಆ ಮೂಲಕ ನಂಜುಂಟಾಗಿದ್ದರೂ ಈ ರೀತಿಯ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ನೀವು ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರ ಹತ್ತಿರ ಸೂಕ್ತ ತಪಾಸಣೆ ಹಾಗೂ ಅವಶ್ಯವಾದಲ್ಲಿ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಪರೀಕ್ಷೆಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಋತುಚಕ್ರದ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ.

* ನನಗೆ 35 ವರ್ಷ. ಒಂದು ತಿಂಗಳು ಮುಟ್ಟಾದಾಗ ಬ್ಲೀಡಿಂಗ್ ಮೂರುದಿನ ಆಗುತ್ತದೆ. ಇನ್ನೊಂದು ಬಾರಿ ಮುಟ್ಟಾದಾಗ ಎರಡು ದಿನಕ್ಕೇ ನಿಲ್ಲುತ್ತದೆ. ಯಾಕೆ ಮುಟ್ಟು ಹೀಗಾಗುತ್ತದೆ ತಿಳಿಸಿ?

–ಹೆಸರು, ಊರು ತಿಳಿಸಿಲ್ಲ

ಉತ್ತರ: ಋತುಚಕ್ರದಲ್ಲಿ ರಕ್ತಸ್ರಾವ ಒಬ್ಬೊಬ್ಬರಿಗೆ ಒಂದೊಂದು ತರನಾಗಿ ಆಗುತ್ತದೆ. ಕೆಲವರಿಗೆ ಎರಡೇ ದಿನ ರಕ್ತಸ್ರಾವವಾದರೆ ಕೆಲವರಿಗೆ ಮೂರು– ನಾಲ್ಕು ದಿನ ರಕ್ತಸ್ರಾವವಾಗುತ್ತದೆ. ಇದರಿಂದ ಏನೂ ತೊಂದರೆಯಿಲ್ಲ. ಅಂದರೆ ತಿಂಗಳ ಮುಟ್ಟಿನಲ್ಲಿ 30 ಮಿ.ಲೀ.ನಿಂದ 80 ಮಿ.ಲೀ ತನಕ ರಕ್ತಸ್ರಾವವಾಗುವುದು ಸಹಜ. ಹಾಗಾಗಿ ನೀವೇನೂ ಚಿಂತಿಸಬೇಡಿ. ಅಧಿಕ ರಕ್ತಸ್ರಾವವಾದರಷ್ಟೇ ಅಂದರೆ 6-7 ದಿನವಾದರೂ ರಕ್ತಸ್ರಾವ ನಿಲ್ಲದಿದ್ದಲ್ಲಿ ಮತ್ತು ದಿನಕ್ಕೆ ಐದಾರು ಪ್ಯಾಡ್‌ಗಳಿಗಿಂತಲೂ ಹೆಚ್ಚು ಬದಲಿಸಬೇಕಾಗಿ ಬಂದರೆ ಆ ಸಂದರ್ಭದಲ್ಲಿ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಿ.

* ನನಗೆ 32 ವರ್ಷಗಳು. 56 ಕೆ.ಜಿ ಇದ್ದೀನಿ. 40 ದಿನಕ್ಕೊಮ್ಮೆ ಮುಟ್ಟಾಗುತ್ತದೆ. ಬೇರೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರು ‘ನಿಮಗೆ ಅಂಡಾಣು ಬಿಡುಗಡೆಯಾಗುತ್ತಿಲ್ಲ’ ಎಂದು ಹೇಳಿದ್ದಾರೆ. ನನಗೆ ಗರ್ಭ ಧರಿಸಲು ಏನಾದರೂ ಸಮಸ್ಯೆಯಾಗುತ್ತದೆಯೇ? ದಯವಿಟ್ಟು ತಿಳಿಸಿ.

–ಹೆಸರು, ಊರು ತಿಳಿಸಿಲ್ಲ

ಉತ್ತರ: ನೀವು ಎಷ್ಟು ಎತ್ತರವಿದ್ದೀರಿ ಎಂದು ತಿಳಿಸಿಲ್ಲ. ನಿಮಗೆ ಅಂಡಾಣು ಬಿಡುಗಡೆಯಾಗುತ್ತಿಲ್ಲ ಎಂದರೆ ನಿಮಗೆ ಪಿ.ಸಿ.ಒ.ಡಿ ಸಮಸ್ಯೆ ಇರಬಹುದು. ನಾನು ಈ ಸಮಸ್ಯೆಯ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿಸಿದ್ದೀನಿ. ಈ ಬಗ್ಗೆ ನೀವು ಓದಿಕೊಂಡು ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ. ನಿಮ್ಮ ಸಮಸ್ಯೆ ಸರಿಹೋಗಬಹುದು. ವೈದ್ಯರು ಈಗಾಗಲೇ ಚಿಕಿತ್ಸೆಕೊಡುತ್ತಿದ್ದರೆ ಅದನ್ನು ಮುಂದುವರೆಸಿ.

* ನನ್ನ ಸ್ನೇಹಿತೆ 18 ವರ್ಷದವಳು. ಅವಳು ವರ್ಷಕ್ಕೊಮ್ಮೆ ಮುಟ್ಟಾಗುತ್ತಾಳೆ ಮತ್ತು 3 ತಿಂಗಳ ತನಕ ರಕ್ತಸ್ರಾವವಾಗುತ್ತದೆ. ಈ ಸಮಸ್ಯೆ ಅವಳ 9ನೇ ವಯಸ್ಸಿನಿಂದಲೇ ಆರಂಭವಾಗಿದೆ. ಯಾಕೆ ಹೀಗೆ? ಏನಾದರೂ ಪರಿಹಾರವಿದೆಯೇ?

–ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮ್ಮ ಸ್ನೇಹಿತೆಗೆ 9 ವರ್ಷಕ್ಕೆ, ಬೇಗನೇ ಋತುಪ್ರಾಪ್ತಿಯಾಗಿರುವುದರಿಂದ, ತಿಂಗಳಿಗೆ ಸರಿಯಾಗಿ 18 ವರ್ಷವಾದರೂ ಋತುಚಕ್ರ ಆಗುತ್ತಿಲ್ಲವೆಂದರೆ ಅವರಿಗೂ ಹದಿಹರೆಯದ ಪಿ.ಸಿ.ಒ.ಡಿ. ಸಮಸ್ಯೆ ಇರಬಹುದು. ಅವರು ಕೂಡಾ ಜೀವನಶೈಲಿ ಬದಲಾಯಿಸಿಕೊಂಡು ಪೌಷ್ಟಿಕ ಹಾಗೂ ಸಮತೋಲನ ಆಹಾರ ಸೇವಿಸುತ್ತಾ, ನಿಯಮಿತವಾಗಿ ದೈಹಿಕ ಚಟುವಟಿಕೆ ಅಳವಡಿಸಿಕೊಂಡು ಸಮತೂಕ ಕಾಯ್ದುಕೊಳ್ಳುತ್ತಾ ತಜ್ಞರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಲಿ.

* 3ನೇ ಹೆರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯಿಂದ ಆಗಿದೆ. ನಾವು ಲೈಂಗಿಕ ಸಂಪರ್ಕ ಮಾಡಿದರೆ ನೋವು ಹಾಗೂ ಉರಿಯಾಗುತ್ತದೆ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮಗೆ ಯೋನಿ ಸೋಂಕಾಗಿದ್ದರೂ ಲೈಂಗಿಕ ಸಂಪರ್ಕದಲ್ಲಿ ಈ ರೀತಿಯಾದ ನೋವು ಹಾಗೂ ಉರಿಯಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯಿಂದ ಅಡೆಶನ್ಸ್ ಅಥವಾ ಪರಸ್ಪರ ಮೆತ್ತಿಕೊಳ್ಳುವಿಕೆಯಿಂದ ಕೂಡಾ ಈ ರೀತಿಯ ನೋವುಂಟಾಗಬಹುದು. ಕೆಲವೊಮ್ಮೆ ಮೂತ್ರಕೋಶದ ಸೋಂಕು ಇತ್ಯಾದಿಗಳಿಂದಲೂ ಲೈಂಗಿಕ ಸಂಪರ್ಕದಲ್ಲಿ ನೋವುಂಟಾಗಬಹುದು. ಕೆಲವೊಮ್ಮೆ ಬಾಣಂತನದಲ್ಲಿ ಬದಲಾಗುತ್ತಿರುವ ಹಾರ್ಮೋನ್‌ ಮಟ್ಟ ಹಾಗೂ ಮಗುವಿನ ಬಗ್ಗೆ ಹೆಚ್ಚುವ ಕಾಳಜಿಯಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಿ ಈ ರೀತಿ ಅನಿಸಿರಲೂಬಹುದು. ಯಾವುದಕ್ಕೂ ಸೂಕ್ತ ಕಾರಣ ಕಂಡುಹಿಡಿದು ಚಿಕಿತ್ಸೆ ಕೊಡಬೇಕಾಗುತ್ತದೆ. ನಿಮ್ಮ ಹತ್ತಿರದ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಿ.

–ಡಾ. ವೀಣಾ ಎಸ್‌. ಭಟ್‌
–ಡಾ. ವೀಣಾ ಎಸ್‌. ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT