ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ಊಟ ಯಾವ ಸಮಯಕ್ಕೆ ಮಾಡಲಿ?

Last Updated 5 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಳೆದ ಒಂದು ವರ್ಷದಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡುವವರಲ್ಲಿ ಕೆಲವರಿಗಾದರೂ ಈ ಅನುಭವ ಆಗಿರಬಹುದು– ಮಧ್ಯಾಹ್ನದ ಊಟ ತಡವಾಗಿ ಕೆಲವೊಮ್ಮೆ ಸಂಜೆಯ ಕಾಫಿ ಸಮಯದಲ್ಲಿ ಮಾಡಿದ್ದೂ ಇದೆ ಅಲ್ಲವೇ? ಆದರೆ ಯಾವಾಗ ಮಧ್ಯಾಹ್ನದ ಊಟ ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ನಮ್ಮ ಹೊಟ್ಟೆ ಹಸಿವಾಗಿದೆ ಎಂಬ ಸಂಕೇತ ನೀಡಬೇಕು. ಹಾಗೆಯೇ ಜೀರ್ಣಕ್ರಿಯೆ ಬಗ್ಗೆಯೂ ನಮಗೆ ಅರಿವಿರಬೇಕು. ಸರಿಯಾದ ಸಮಯಕ್ಕೆ ಊಟ ಮಾಡಿದರೆ ಇದು ನಮ್ಮ ಉತ್ಪಾದಕತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು.

‘ಮಧ್ಯಾಹ್ನದ ಊಟದ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗೆಯೇ ದೇಹಕ್ಕೆ ಸೇರುವ ಕ್ಯಾಲೊರಿ, ಹಸಿವು, ಚಟುವಟಿಕೆಯ ಜೊತೆಗೆ ಮನೆಯಿಂದಲೇ ಕೆಲಸ ಮಾಡುವ ನಮ್ಮ ರೀತಿ– ನೀತಿಯೂ ಪ್ರಭಾವ ಬೀರುವ ಅಂಶಗಳು’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ. ಟಿ.ಎಸ್‌. ತೇಜಸ್‌.

ಮನೆಯಿಂದಲೇ ಕೆಲಸ ಎಂದರೆ ಹೆಚ್ಚಿನ ಸಮಯ ಕೂತೇ ಇರುತ್ತಾರೆ. ಬೇರೆ ಚಟುವಟಿಕೆಗಳಲ್ಲಿ ಏರುಪೇರಾಗುವುದು ಸಹಜ. ಹಾಗೆಯೇ ಕೋವಿಡ್‌ನಿಂದ ಒತ್ತಡ ಹೆಚ್ಚೇ ಇರುತ್ತದೆ. ಹೀಗಾಗಿ ಇವೆಲ್ಲವೂ ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ. ಅವಶ್ಯಕತೆಗಿಂತ ಹೆಚ್ಚಾಗೇ ತಿನ್ನಬಹುದು. ಇದರಿಂದ ಸುಸ್ತು, ಕಿರಿಕಿರಿ, ಏಕಾಗ್ರತೆಯ ಕೊರತೆ ಉಂಟಾಗಬಹುದು ಎಂದು ಅವರು ಎಚ್ಚರಿಸುತ್ತಾರೆ.

ಊಟ– ತಿಂಡಿಯ ನಡುವಿನ ಅಂತರ

ಹೀಗಾಗಿ ಇವೆಲ್ಲವೂ ಸರಿಯಾಗಬೇಕಾದರೆ ಮಧ್ಯಾಹ್ನದ ಊಟಕ್ಕೆ, ನಂತರದ ತಿಂಡಿಗೆ ನಿಗದಿತ ಅಂತರವಿರಬೇಕಾಗುತ್ತದೆ. ಹಾಗೆಯೇ ಚಟುವಟಿಕೆಯ ಮಟ್ಟ, ಲಿಂಗ, ಆರೋಗ್ಯ ಸಮಸ್ಯೆ, ಗರ್ಭ ಧರಿಸಿದ್ದರೆ.. ಈ ಮೊದಲಾದ ಅಂಶಗಳನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ.

ಹಸಿವಿನ ಸಂವೇದನೆಯೂ ಮುಖ್ಯ. ಕೆಲವರಿಗೆ ಶಕ್ತಿಯೇ ಇಲ್ಲ ಎನಿಸುವುದು, ತಲೆನೋವು, ಹೊಟ್ಟೆಯಲ್ಲಿ ಗಾಳಿ ಓಡಾಡಿದಂತೆ ಸದ್ದಾಗುವುದು, ಹೊಟ್ಟೆ ಖಾಲಿಯಾದಂತೆ ಎನಿಸುವುದು.. ಇವೆಲ್ಲ ಹಸಿವಿನ ಸಂಕೇತಗಳು. ಇದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು.

ಬೆಳಿಗ್ಗೆ ಎದ್ದು ಅರ್ಧ ತಾಸಿನಿಂದ ಒಂದು ತಾಸಿನೊಳಗೆ ಮೊದಲ ಆಹಾರ ಅಂದರೆ ಉಪಾಹಾರ ಸೇವಿಸಬೇಕು ಎನ್ನುತ್ತಾರೆ ಡಾ. ತೇಜಸ್‌. ಇದು ನಿಮ್ಮ ದೇಹಕ್ಕೆ ಇಂಧನವಿದ್ದಂತೆ. ಇದು ಜೀರ್ಣವಾಗಲು ಎಷ್ಟು ಸಮಯ ಬೇಕು ಎಂಬುದರ ಅರಿವೂ ಇರಬೇಕು. ಸಾಮಾನ್ಯವಾಗಿ ಅರ್ಧ ಹೊಟ್ಟೆ ತುಂಬಿದ್ದರೆ ನಾಲ್ಕು ತಾಸಿನೊಳಗೆ ಇದು ಜೀರ್ಣವಾಗುತ್ತದೆ.

ಉಪಾಹಾರವಾದ 3–4 ಗಂಟೆ ನಂತರ ಊಟ

ಹೀಗಾಗಿ ಉಪಾಹಾರದ ನಂತರ 3–4 ತಾಸು ಬಿಟ್ಟು ಊಟ ಅಥವಾ ಲಘು ಉಪಾಹಾರ ತಿನ್ನುವುದು ಸೂಕ್ತ. ಆದರೆ ನಿಮ್ಮ ದೇಹದ ಸೂಚನೆಯನ್ನೂ ನೀವು ಪರಿಗಣಿಸಿ ನಿಯಮ ರೂಢಿಸಿಕೊಂಡರೆ ಒಳಿತು. ಹಾಗೆಯೇ ಉಪಾಹಾರಕ್ಕೆ ಏನನ್ನು ತಿಂದಿರಿ, ಯಾವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಿ ಎಂಬುದೂ ಮುಖ್ಯ. ಕಡಿಮೆ ತಿಂದರೆ ಒಂದೆರಡು ತಾಸಿನಲ್ಲೇ ಹಸಿವು ಕಾಣಿಸಿಕೊಳ್ಳಬಹುದು. ಆದರೆ ಪ್ರೊಟೀನ್‌ ಹಾಗೂ ನಾರಿನಾಂಶವಿದ್ದರೆ ಅಷ್ಟು ಬೇಗ ಹಸಿವಿನ ಅನುಭವವಾಗುವುದಿಲ್ಲ.

ಕೆಲವು ಆಹಾರ ಪದ್ಧತಿಯಿಂದ ಜಠರ ಹಾಗೂ ಮೆದುಳಿನ ಮಧ್ಯೆ ಉತ್ತಮ ಸಂಪರ್ಕ ಏರ್ಪಡುತ್ತದೆ. ಅಂದರೆ ಭಾವನೆಗಳ ಏರಿಳಿತ, ಮಾನಸಿಕ ಆರೋಗ್ಯ ಎಲ್ಲವೂ ಆಹಾರವನ್ನು ಅವಲಂಬಿಸಿರುತ್ತವೆ. ಉತ್ತಮ ಬ್ಯಾಕ್ಟೀರಿಯ ಹೆಚ್ಚಾಗಲು ಪ್ರೊಬಯಾಟಿಕ್‌ ಆಹಾರ ಅಂದರೆ ಮೊಸರು ತಿನ್ನಬಹುದು. ಪ್ರಿಬಯಾಟಿಕ್‌ ಆಹಾರಗಳಾದ ಧಾನ್ಯ, ತರಕಾರಿ, ಒಣ ಹಣ್ಣು ತಿನ್ನಬಹುದು.

ಇಂಟರ್‌ಮಿಟೆಂಟ್‌ ಅಂದರೆ ಕೆಲವು ಗಂಟೆಗಳ ಕಾಲ ಉಪವಾಸ ಇರುವ ಡಯಟ್‌ ಇತ್ತೀಚೆಗೆ ಜನಪ್ರಿಯ. ಆದರೆ ಆಗಾಗ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಎನ್ನುತ್ತಾರೆ ತಜ್ಞರು.

ಆರೋಗ್ಯಕರ ಆಹಾರ

ಹೆಚ್ಚು ಹಸಿವಾದರೆ ನಮ್ಮ ಮುಂದೆ ಯಾವ ಆಹಾರ ಇರುತ್ತದೋ ಅದನ್ನೇ ತಿನ್ನುವುದು ಮಾಮೂಲು. ಆಗ ಆರೋಗ್ಯಕರ ಆಹಾರ ಸೇವನೆ ಮರೆತುಬಿಡುತ್ತೇವೆ. ಹೀಗಾಗಿ ಹೆಚ್ಚು ಹಸಿವಾಗಲು ಬಿಡಬೇಡಿ. ಅದೇ ರೀತಿ ಯಾವಾಗಲೂ ಹೊಟ್ಟೆ ತುಂಬ ತಿನ್ನುವುದು ಕೂಡ ಸರಿಯಲ್ಲ. ಆ್ಯಸಿಡಿಟಿ, ಅಜೀರ್ಣ ಉಂಟಾಗಬಹುದು. ನಿಧಾನವಾಗಿ, ಆರೋಗ್ಯಕರ ಆಹಾರ ತಿಂದರೆ ಹೊಟ್ಟೆ ತುಂಬಿದ ತೃಪ್ತಿ ಸಿಗುತ್ತದೆ. ಕೆಲಸ ಮಾಡಲೂ ಉತ್ಸಾಹ ಬರುತ್ತದೆ.

ಹಣ್ಣು, ತರಕಾರಿ, ಲೀನ್‌ ಪ್ರೊಟೀನ್‌, ಆರೋಗ್ಯಕರ ಕೊಬ್ಬು ಇರುವ ಆಹಾರ ಮಧ್ಯಾಹ್ನದ ಊಟಕ್ಕೆ ಸೂಕ್ತ.

ಹೆಚ್ಚು ಕಾರ್ಬೊಹೈಡ್ರೇಟ್‌ ಇರುವ, ಕೊಬ್ಬು ಜಾಸ್ತಿ ಇರುವ ಆಹಾರ ಬೇಡ. ಊಟವಾದ ಎರಡು ತಾಸುಗಳ ನಂತರ ಹಸಿವು ಎನಿಸಿದರೆ ಸ್ನ್ಯಾಕ್‌ ತಿನ್ನಬಹುದು. ಇದು ಕೂಡ ಪ್ರೊಟೀನ್‌ಯುಕ್ತವಾಗಿರಲಿ. ಉದಾಹರಣೆಗೆ ಒಂದು ಸೇಬು, ಒಂದು ಮುಷ್ಟಿ ಒಣ ಹಣ್ಣು ಅಥವಾ ಕ್ರ್ಯಾಕರ್‌ ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT