ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದಿಂದ ಓಡುವುದಾದರೂ ಎಲ್ಲಿಗೆ?

Last Updated 15 ಮೇ 2020, 19:45 IST
ಅಕ್ಷರ ಗಾತ್ರ

ಕಳೆದೆರೆಡು ತಿಂಗಳಿಂದ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲಿ ಹರಿದಾಡುತ್ತಿರುವ ಶಬ್ದ ಕೊರೊನಾ. ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಎಲ್ಲರೂ ಹೇಳುತ್ತಿರುವುದು ಒಂದೇ ಮಾತು ‘ಎಚ್ಚರಿಕೆಯಿರಲಿ, ಭಯ ಬೇಡ’ ಎಂದು. ಎಚ್ಚರಿಕೆ ಯಾವಾಗ ಮುಗಿಯುತ್ತದೆ, ಭಯ ಎಲ್ಲಿಂದ ಪ್ರಾರಂಭವಾಗುತ್ತದೆ ಎಂದು ಹೇಳುವುದು ಹೇಗೆ? ಎಚ್ಚರಿಕೆ ಭಯವಾಗದಂತೆ ತಡೆಯುವುದು ಸಾಧ್ಯವೇ ಮತ್ತು ಸಾಧ್ಯವಿದ್ದರೆ ಹೇಗೆ? ಪೋಷಕರ ನಿರಂತರ ಎಚ್ಚರಿಕೆಯೇ ಮಕ್ಕಳಲ್ಲಿ ಭಯ ಮತ್ತು ಆತಂಕವಾಗುವ ರುದ್ರನಾಟಕವನ್ನು ನೋಡುವ ನನ್ನಂತಹ ಮನೋಚಿಕಿತ್ಸಕರಿಗೆ ಇದೊಂದು ಬಿಡಿಸಲು ಕಠಿಣವಾದ ಪ್ರಶ್ನೆ.

ಭಯ ಮತ್ತು ಆತಂಕ ಎಲ್ಲಾ ಪ್ರಾಣಿವರ್ಗದ ಅನಿವಾರ್ಯ ಅನುಭವಗಳಷ್ಟೇ ಅಲ್ಲ, ಪ್ರಕೃತಿಯ ವರದಾನ ಕೂಡ. ಭಯವೇ ಇಲ್ಲದಿದ್ದರೆ ಜೀವಸಂಕುಲ ಯಾವಾಗಲೋ ನಶಿಸಿ ಹೋಗುತ್ತಿತ್ತೇನೋ. ಹಾಗಾಗಿಯೇ ಭಯವನ್ನು ಮನಶ್ಯಾಸ್ತ್ರದಲ್ಲಿ ‘ಪ್ರೈಮಲ್‌ ಎಮೋಷನ್’ ಎನ್ನುತ್ತಾರೆ. ಜೀವರಕ್ಷಣೆ ಮಾಡಿಕೊಂಡು ವಂಶಾಭಿವೃದ್ಧಿಯನ್ನು ಮುಂದುವರೆಸಲು ಅನುಕೂಲಗೊಳಿಸುವ ಸದುದ್ದೇಶದಿಂದಲೇ ಪ್ರಕೃತಿ ನಮ್ಮ ಮೆದುಳು ಮತ್ತು ದೇಹವನ್ನು ಒಂದು ಮಟ್ಟದ ಭಯ ಮತ್ತು ಆತಂಕವನ್ನು ಸಮರ್ಥವಾಗಿ ಎದುರಿಸುವಂತೆ ರೂಪಿಸಿದೆ. ಆದರೆ ಆಧುನಿಕ ಮಾನವ ನಮ್ಮ ದೇಹ ಮತ್ತು ಮನಸ್ಸಿನ ಸಮತೋಲನವನ್ನು ತಪ್ಪಿಸಿ ಬದುಕಲು ಪ್ರಯತ್ನಿಸುವ ಮೂಲಕ ಹೆಚ್ಚಿನ ಭಯ ಮತ್ತು ಆತಂಕವನ್ನು ಆಹ್ವಾನಿಸಿಕೊಂಡಿದ್ದಾನೆ.

ಆತಂಕದಿಂದ ಭಯಾನಕ ಕನಸು

ಭಯ ಮತ್ತು ಆತಂಕವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಇವು ರೂಪಾಂತರ ಹೊಂದಿ ಕೋಪ, ದುಃಖ, ಹತಾಶೆಗಳಾಗಿ ಅಥವಾ ಮಧುಮೇಹ, ರಕ್ತದ ಏರೊತ್ತಡ, ನಿದ್ರಾಹೀನತೆ ಮುಂತಾದ ಕಾಯಿಲೆಗಳಾಗಿಯೂ ಕಾಣಿಸಿಕೊಳ್ಳಬಹುದು. ಚಿತ್ರವಿಚಿತ್ರ ಭಯಾನಕ ಕನಸುಗಳೂ ಕೂಡ ಆತಂಕವನ್ನು ಹೊರಹಾಕುವ ಮನಸ್ಸಿನ ಪ್ರಯತ್ನವೇ ಆಗಿರಬಹುದು.

ಭಯ ಮತ್ತು ಆತಂಕವನ್ನು ನಾವೆಲ್ಲಾ ನಿಭಾಯಿಸಲು ಕಲಿತಿರುವ ರೀತಿಗಳೂ ಕೂಡ ಕೆಲವೇ. ಮನಸ್ಸನ್ನು ಬೇರೆ ಕಡೆ ತಿರುಗಿಸುವುದು (ಉದಾಹರಣೆಗೆ ಮನೋರಂಜನೆ, ಪೂಜೆ ಧ್ಯಾನ, ದುಡಿಮೆ), ನಾನು ಭಯಪಡಬೇಕಾಗಿಲ್ಲ ಎಂದು ನಮ್ಮೊಳಗೆ ಪದೆಪದೆ ಹೇಳಿಕೊಳ್ಳುವುದು, ದೈಹಿಕ ಕಾಯಿಲೆಗಳನ್ನು ಮಾತ್ರೆಗಳ ಮೂಲಕ ಹತ್ತಿಕ್ಕುವುದು ಮುಂತಾದವು. ಇವೆಲ್ಲವೂ ಒಂದು ಮಟ್ಟದವರೆಗೆ ಸಹಾಯ ಮಾಡುತ್ತವೆ. ಜೊತೆಗೆ ಭಯದಿಂದ ಓಡುವ ಪ್ರವೃತ್ತಿಯನ್ನೂ ಬೆಳೆಸುತ್ತದೆ. ಕೊನೆಗೆ ಭಯದ ನಿರೀಕ್ಷೆಯೇ ಭಯ ಹುಟ್ಟಿಸಲು ತೊಡಗಿದಾಗ ನಾವು ಅಸಹಾಯಕರಾಗುತ್ತೇವೆ.

ಮನೆಯವರೆಲ್ಲಾ ಒಟ್ಟಾಗಿ ಸೇರಿ

ಮನೆಯವರೆಲ್ಲಾ ದಿನಕ್ಕೆ ಅರ್ಧಗಂಟೆ ಒಟ್ಟಾಗಿರಲು ಸಮಯ ಹೊಂದಿಸಿಕೊಳ್ಳಿ. ಮಕ್ಕಳನ್ನು ಸೇರಿಸಿಕೊಳ್ಳಿ. ವೃತ್ತಾಕಾರದಲ್ಲಿ ಕುಳಿತು ಒಬ್ಬರಿಗೊಬ್ಬರ ಕೈ ಹಿಡಿದುಕೊಳ್ಳಿ ಅಥವಾ ಹೆಗಲನ್ನು ಬಳಸಿ. ಮೊದಲ ಮೂರು ನಿಮಿಷ ಎಲ್ಲರೂ ದೀರ್ಘವಾಗಿ ಉಸಿರಾಡಿ. ನಂತರ ಒಬ್ಬೊಬ್ಬರಾಗಿ ತಮ್ಮ ಭಯದ ಅನುಭವಗಳನ್ನು ಹಂಚಿಕೊಳ್ಳಿ. ರಾತ್ರಿ ಕಂಡ ಕನಸುಗಳನ್ನೂ ಹೇಳಿ. ಯಾರ ಮಾತನ್ನೂ ತಡೆಯುವಂತಿಲ್ಲ ಅಥವಾ ಯಾರು ಯಾರಿಗೂ ಸಮಾಧಾನ ಪಡಿಸುವಂತಿಲ್ಲ, ಬುದ್ಧಿ ಹೇಳುವಂತಿಲ್ಲ. ಪ್ರಶ್ನೆಗಳನ್ನು ಕೇಳಿ ಮತ್ತೊಬ್ಬರ ಭಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು. ಭಯವನ್ನು ದುಃಖ, ಕೋಪ, ನೋವು ಮುಂತಾದ ರೂಪಗಳಲ್ಲಿಯೂ ವ್ಯಕ್ತಪಡಿಸಲು ಅವಕಾಶವಿರಲಿ. ಯಾರಾದರೂ ಹದತಪ್ಪಬಹುದು ಎನ್ನಿಸಿದರೆ ಅವರಿಗೆ ಮಾತನ್ನು ನಿಲ್ಲಿಸಿ ದೀರ್ಘವಾಗಿ ಉಸಿರಾಡಲು ಸಹಾಯ ಮಾಡಿ. ಮತ್ತೊಂದು ದಿನ ಅವರ ಅನುಭವವನ್ನು ಹಂಚಿಕೊಳ್ಳಲು ಉತ್ತೇಜಿಸಿ.

ಭಯದ ಅನುಭವ ಹೇಗೆ?

ದಿನಕ್ಕೆ ಹದಿನೈದು ನಿಮಿಷ ಭಯದ ಜೊತೆ ಸ್ನೇಹ ಬೆಳೆಸಲು ಮೀಸಲಿಡಿ. ದೇಹವನ್ನು ಸಡಿಲ ಬಿಟ್ಟು ಬೆನ್ನನ್ನು ನೇರವಾಗಿಟ್ಟು ಕುಳಿತುಕೊಂಡು ದೀರ್ಘವಾಗಿ ಉಸಿರಾಡುತ್ತಿರಿ. ನಿಮ್ಮ ಮನಸ್ಸು ಕಳಿಸುವ ಭಯದ ಸೂಚನೆಗಳನ್ನು ತಡೆಯದೆ ನೀವಾಗಿಯೇ ಭಯವನ್ನು ಆಹ್ವಾನಿಸಿ. ಯಾವ ಕೆಟ್ಟ ಅನುಭವ ಕಲ್ಪನೆಗಳನ್ನು ತಡೆಯಬೇಡಿ. ಭಯ ಹೆಚ್ಚುತ್ತಿದ್ದಂತೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ಗಮನಿಸಿ. ಉದಾಹರಣೆಗೆ ಎದೆಬಡಿತ ಹೆಚ್ಚುವುದು, ಮೈ ಬೆವರುವುದು, ಎದ್ದು ಓಡಬೇಕೆನ್ನಿಸುವುದು, ಮನಸ್ಸನ್ನು ಒಳ್ಳೆಯ ಯೋಚನೆಗಳಿಗೆ ತಿರುಗಿಸಬೇಕೆನ್ನಿಸುವುದು ಮುಂತಾದವು. ದೇಹವನ್ನು ಸಡಿಲ ಬಿಡುತ್ತಾ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಭಯವನ್ನು ಅನುಭವಿಸಿ. ತೀರಾ ಕಷ್ಟವೆನ್ನಿಸಿದಾಗ ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಟ್ಟು ಪ್ರಯೋಗವನ್ನು ನಿಲ್ಲಿಸಿ.

ಈ ಪ್ರಯೋಗವನ್ನು ಹಲವಾರು ದಿನಗಳು ಮಾಡಿದರೆ ಭಯವನ್ನು ಸಹಿಸುವ ನಿಮ್ಮ ಮನೋದೈಹಿಕ ಶಕ್ತಿ ಹೆಚ್ಚುತ್ತದೆ.

(ಲೇಖಕರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT