ಸೋಮವಾರ, ಮಾರ್ಚ್ 30, 2020
19 °C

ಏನಾದ್ರೂ ಕೇಳ್ಬೋದು | ಮಕ್ಕಳಿಗೇಕೆ ಅನಗತ್ಯ ನಿರ್ಬಂಧ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ಮಗ ಎರಡನೆಯ ಪಿಯುಸಿ ಪರೀಕ್ಷೆಗೆ ಓದುತ್ತಿದ್ದಾನೆ. ಮನೆಯಲ್ಲಿ ಟಿವಿ, ಮೊಬೈಲ್, ಕಂಪ್ಯೂಟರ್‌ಗಳೆಲ್ಲವನ್ನೂ ನಿರ್ಬಂಧಿಸಲಾಗಿದೆ. ಇದು ಸರಿಯಾದ ಕ್ರಮವೇ? ಎರಡನೆಯದಾಗಿ ಉದ್ಯೋಗಸ್ಥ ಮಹಿಳೆಯಾಗಿ ನನ್ನ ಕೆಲವು ಆದ್ಯತೆಗಳಿವೆ. ಆದರೆ ಮಗನ ಹಿತದೃಷ್ಟಿಯಿಂದ ಇವು ದೊರೆಯಬೇಕು ಎಂದುಕೊಳ್ಳುವುದು ಸರಿಯೆ?

ಹೆಸರಿಲ್ಲ, ತುಮಕೂರು.

ಪ್ರಶ್ನೆಯ ಸರತಿ ಬರುವಷ್ಟರಲ್ಲಿ ಒಂದು ವಿಷಯ ಬಿಟ್ಟು ಉಳಿದ ಪರೀಕ್ಷೆಗಳು ಮುಗಿದಿವೆ. ಅದಕ್ಕಾಗಿ ಕ್ಷಮೆ ಕೋರುತ್ತ ಮುಂದೆ ಸಹಾಯವಾಗಬಹುದು ಎಂದು ಪ್ರಶ್ನೆಗಳ ಮೂಲಕವೇ ಉತ್ತರಿಸುತ್ತಿದ್ದೇನೆ.

ಪಿಯು ಓದುತ್ತಿರುವ 17-18 ವರ್ಷದ ಮಕ್ಕಳನ್ನು ನಿರ್ಬಂಧಿಸುವ ಅಗತ್ಯವೇಕೆ ಬೀಳಬೇಕು? ಮಕ್ಕಳಿಗೆ ತಮ್ಮ ಸೌಲಭ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವುದನ್ನು ನಮಗೇಕೆ ಕಲಿಸಲಾಗುತ್ತಿಲ್ಲ? ಇಂತಹ ನಿರ್ಬಂಧವನ್ನು ಎಷ್ಟು ವರ್ಷ ಮುಂದುವರಿಸುತ್ತೀರಿ? ಜವಾಬ್ದಾರಿಯುತ ವರ್ತನೆಗಳನ್ನು ಮಕ್ಕಳು ಕಲಿಯುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಅಂತರಂಗದಲ್ಲಿ ಉತ್ತರ ಹುಡುಕುವುದು ಸಾಧ್ಯವಾದರೆ ತಿಳಿಯುವುದೇನು ಗೊತ್ತೇ– ಮಕ್ಕಳು ತಪ್ಪು ಮಾಡಬಹುದು ಎನ್ನುವ ಪೋಷಕರ ಆತಂಕಗಳೇ ನಿರ್ಬಂಧಗಳ ರೂಪವಾಗಿ ವ್ಯಕ್ತವಾಗುತ್ತವೆ. ಪೋಷಕರ ಆತಂಕಗಳು ನ್ಯಾಯಯುತವಾದದ್ದು, ಆದರೆ ನಿರ್ಬಂಧಗಳು ಯಾವುದಕ್ಕೂ ಪರಿಹಾರವಲ್ಲ. ಇಂತಹ ನಿರ್ಬಂಧಗಳಿಂದ ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ತಮ್ಮ ಅಗತ್ಯಗಳನ್ನು ಬಿಟ್ಟುಕೊಡಬೇಕಾಯಿತು ಎನ್ನುವ ಬೇಸರವು ಸಿಟ್ಟಿಗೆ ಕಾರಣವಾಗಿ ಮನೆ ರಣರಂಗವಾಗಬಹುದು.

ಮಕ್ಕಳಿಗೆ ಸ್ವಾತಂತ್ರ್ಯವನ್ನು ಕೊಡುತ್ತಲೇ ಜವಾಬ್ದಾರಿಯುತವಾಗಿರಲು ಕಲಿಸಬೇಕೆಂದಿದ್ದರೆ ಒಂದು ಪ್ರಯೋಗವನ್ನು ಮಾಡಿ. ಮಕ್ಕಳನ್ನು ನಿಮ್ಮ ಆಜ್ಞಾಧಾರಕರು ಎಂದುಕೊಳ್ಳದೆ ಕುಟುಂಬದ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸಿ. ಮನೆಯವರೆಲ್ಲರೂ ಕುಳಿತು ತಮ್ಮತಮ್ಮ ಅಗತ್ಯಗಳೇನು, ಜವಾಬ್ದಾರಿಗಳೇನು? ಅದನ್ನು ಹೇಗೆ ಪಡೆದುಕೊಳ್ಳುವುದು? ಬೇರೆಯವರಿಗೆ ತೊಂದರೆಯಾದಾಗ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸದಿರುವಾಗ ಏನು ಮಾಡಬೇಕು? ಉತ್ತಮವಾಗಿ ನಿರ್ವಹಿಸಿದಾಗ ಸಿಗುವ ಬಹುಮಾನಗಳೇನು?- ಮುಂತಾಗಿ ಎಲ್ಲವನ್ನೂ ಚರ್ಚೆ ಮಾಡಿ ಒಂದು ಹೊಂದಾಣಿಕೆಗೆ ಬನ್ನಿ. ಎಲ್ಲ ನೀತಿನಿಯಮಗಳು ಮನೆಯವರೆಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಮಕ್ಕಳಿಗೆ ಮಾತ್ರ ಅವರ ಒಪ್ಪಿಗೆಯಿಲ್ಲದೆ ವಿಶೇಷ ನಿಯಮಗಳಿರುವಂತಿಲ್ಲ. ವಾರಕ್ಕೊಮ್ಮೆ ಸಭೆ ನಡೆಸಿ ಎಲ್ಲದರ ಬಗೆಗೆ ಮುಕ್ತವಾಗಿ ಚರ್ಚೆ ಮಾಡಿ. ತಪ್ಪು ಮಾಡಿದ ದೊಡ್ಡವರಿಗೂ ಶಿಕ್ಷೆ ಕೊಡಿ. ಮಕ್ಕಳು ಆರಂಭದಲ್ಲಿ ಮಾಡುವ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿ.

ಅಂದರೆ ಕುಟುಂಬವನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಸಿದಾಗ ಮಕ್ಕಳು ಜವಾಬ್ದಾರಿಯುತ ಪ್ರೌಢರಾಗಲೇಬೇಕಲ್ಲವೇ? ಕುಟುಂಬದ ಮಿತಿಗಳಲ್ಲಿ ಎಲ್ಲರ ಅಗತ್ಯಗಳೂ ಪೂರೈಕೆಯಾಗುತ್ತಿರುವಾಗ ದೋಷ ಹೊರಿಸುವುದು, ಬೇಸರ ಮತ್ತು ಸಿಟ್ಟಿಗೆ ಅವಕಾಶವೆಲ್ಲಿರುತ್ತದೆ?

ನನಗೆ ಚೆನ್ನಾಗಿ ಓದಬೇಕೆಂಬ ಮಹದಾಸೆಯಿದೆ. ಮನೆಯಲ್ಲಿ ದೊಡ್ಡವನಾದ ಕಾರಣ ನನ್ನ ಮೇಲೆ ಜವಾಬ್ದಾರಿಗಳಿವೆ. ಓದಲು ಆಸಕ್ತಿ ಕಡಿಮೆಯಾಗಿದೆ. ಏನು ಮಾಡಲಿ?

ಹೆಸರು, ಊರು ಇಲ್ಲ.

ಜವಾಬ್ದಾರಿಗಳು ಹೆಚ್ಚಾಗಿರುವಾಗ ಹೆಚ್ಚಿನ ಶ್ರಮ ಮತ್ತು ಸಮಯ ಅದಕ್ಕೆ ವ್ಯಯವಾಗುತ್ತದೆ ಎನ್ನುವುದು ನಿಜ. ಆದರೆ ಜವಾಬ್ದಾರಿಗಳು ನಿಮ್ಮ ವಿದ್ಯಾಭ್ಯಾಸದ ಆಸಕ್ತಿಯನ್ನು ಕಡಿಮೆ ಮಾಡುತ್ತಿರುವುದು ಹೇಗೆ? ಜವಾಬ್ದಾರಿಗಳನ್ನು ಒತ್ತಡವಾಗಿ ಸ್ವೀಕರಿಸಿದಾಗ ಉಂಟಾಗುವ ಬೇಸರ, ಹತಾಶೆ, ಆತಂಕಗಳು ನಿಮ್ಮ ಆಸಕ್ತಿಯನ್ನು ಕಡಿಮೆ ಮಾಡುತ್ತಿರಬಹುದೇ? ಮನೆಯಲ್ಲಿ ಹಿರಿಯನಾಗಿ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಮನೆಯವರ ಸಹಕಾರವನ್ನು ಪಡೆದು ನಿಮಗಾಗಿ ಒಂದಿಷ್ಟು ಸಮಯವನ್ನು ಉಳಿಸಿಕೊಂಡು ಓದನ್ನು ಮುಂದುವರಿಸಿದರೆ ಹೇಗಿರುತ್ತದೆ? ಆಗ ಸ್ವಲ್ಪ ನಿಧಾನವಾಗಿಯಾದರೂ ನಿಮ್ಮ ಮಹದಾಸೆ ಪೂರ್ಣವಾಗಲೇಬೇಕಲ್ಲವೇ? ಪೂರ್ಣವಾಗದಿದ್ದರೂ ನೂರಾರು ಹೊಸ ದಾರಿಗಳು ತೆರೆದುಕೊಳ್ಳುವುದಂತೂ ಖಚಿತ.
ಮನೆಯ ಜವಾಬ್ದಾರಿಗಳು ನಿಮ್ಮಲ್ಲಿ ಮೂಡಿಸುತ್ತಿರುವ ಆತಂಕ, ಬೇಸರದ ಕಹಿಯನ್ನು ಹೋಗಲಾಡಿಸುವುದು ಹೇಗೆ ಎಂದು ಯೋಚಿಸಿ. ಆಗ ದುರಂತನಾಯಕನ ಮನಃಸ್ಥಿತಿಯಿಂದ ಹೊರಬಂದು ಓದುವುದು ಸಾಧ್ಯವಾಗುತ್ತದೆ.

ಒಬ್ಬಳು ಹುಡುಗಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಅವಳಿಗೂ ನನ್ನನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಆದರೆ ಅವರ ಮನೆಯಲ್ಲಿ ಒತ್ತಾಯದಿಂದ ಮದುವೆ ಮಾಡುತ್ತಾ ಇದ್ದಾರೆ. ಮದುವೆಯಾಗುವ ಹುಡುಗನಿಗೆ ಎಲ್ಲವನ್ನೂ ಹೇಳಿದ್ದರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಮ್ಮ ತಂದೆ ಹೇಳಿದರೂ ಅವರ ತಂದೆ ಒಪ್ಪಿಲ್ಲ. ಹುಡುಗಿಯ ಮನಸ್ಸು ಚಂಚಲವಾಗಿದೆ. ಒಂದೇ ನಿರ್ಧಾರಕ್ಕೆ ಬದ್ಧಳಾಗಿಲ್ಲ. ಸಹಾಯ ಮಾಡಿ.

ಹೆಸರು, ಊರು ಇಲ್ಲ.

ನಿಮ್ಮಿಬ್ಬರ ಪ್ರೀತಿ ಪ್ರಾಮಾಣಿಕವಾದದ್ದು ಎನ್ನುವುದು ನಿಜವಿದ್ದರೂ, ನಿಮ್ಮದೇ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೇಕೆ ಸಾಧ್ಯವಾಗುತ್ತಿಲ್ಲ? ಪೋಷಕರ ಒಪ್ಪಿಗೆಯಿಂದಲೇ ಮದುವೆ ನಡೆಯಬೇಕು ಎಂದೇಕೆ ಪ್ರಯತ್ನಿಸುತ್ತಿದ್ದೀರಿ? ಇದರ ಬಗ್ಗೆ ಪತ್ರದಲ್ಲಿ ಯಾವುದೇ ವಿವರಗಳಿಲ್ಲ. ಬಹುಶಃ ನೀವಿನ್ನೂ ಆರ್ಥಿಕವಾಗಿ ಪೋಷಕರನ್ನು ಅವಲಂಬಿಸಿದ್ದೀರಿ ಅಥವಾ ಪೋಷಕರ ಒತ್ತಡ, ಬೆದರಿಕೆಗಳನ್ನು ಮೀರಲಾರದ ಮಾನಸಿಕ ಸ್ಥಿತಿಯಲ್ಲಿದ್ದೀರಿ. ಹೀಗೆ ಇತರರ ಮೇಲೆ ಅವಲಂಬಿತರಾಗಿದ್ದಾಗ ನಿಮಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಸಾಧ್ಯ?

ನಿಮ್ಮ ಅವಲಂಬನೆ ಯಾವ ರೀತಿಯದ್ದು ಎನ್ನುವುದರ ಮೇಲೆ ನೀವು ಮುಂದೇನು ಮಾಡಬೇಕು ಎಂದು ನಿರ್ಧರಿಸಿ. ಆರ್ಥಿಕ ಸ್ವಾವಲಂಬನೆಗೆ ದಾರಿಯನ್ನು ನೀವೇ ಹುಡುಕಿಕೊಳ್ಳಬೇಕು. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಿದ್ದರೆ ಆಪ್ತಸಮಾಲೋಚನೆ ಸಹಾಯ ಮಾಡುತ್ತದೆ. ಪ್ರೀತಿಯನ್ನು ಆನಂದಿಸಬೇಕಾದರೆ ಅದನ್ನು ಉಳಿಸಿಕೊಳ್ಳುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕಲ್ಲವೇ?

(ಅಂಕಣಕಾರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು