ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇಕೆ ರೆಬೆಲ್‌ ಆಗುತ್ತಾರೆ?

ಮಕ್ಕಳ ದಿನದ ವಿಶೇಷ-ಮನಸು 'ಮಗು'ವಾಗದ ಹೊರತು, ಮಕ್ಕಳ ಮನ ತಿಳಿಯದು...
Last Updated 11 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಅ ವನು ನಮ್ಮೊಂದಿಗೆ ಕುಳಿತು ಊಟ ಮಾಡದೆ ವರ್ಷವಾಯಿತೇನೊ. ನಾವಾಗಿಯೇ ಕರೆದರೂ ನುಣುಚಿಕೊಳ್ಳುತ್ತಾನೆ. ಏನಾದರೂ ಹೇಳಲು ಹೋದರೆ ಸಿಡುಕುತ್ತಾನೆ. ಅಸಹನೆ ತೋರಿಸುತ್ತಾನೆ. ಅವನದೇ ಬೇರೆ ಲೋಕ ಕಟ್ಟಿಕೊಂಡಿದ್ದಾನೇನೊ ಎನ್ನುವ ಆತಂಕ ಶುರುವಾಗಿದೆ.

***

ಎಲ್ಲದಕ್ಕೂ ತನ್ನ ಸ್ನೇಹಿತರ ಉದಾಹರಣೆ ಕೊಡುತ್ತಾನೆ. ನಾವು ಅವನಿಗಾಗಿ ಮಾಡುತ್ತಿರುವುದು ಏನೂ ಅಲ್ಲ ಅನ್ನುತ್ತಾನೆ. ಅಮ್ಮ ಅಪ್ಪ ಇರುವುದೇ ತನ್ನ ಬೇಕು ಬೇಡಗಳನ್ನು ನೋಡಿಕೊಳ್ಳಲು, ಅವರಿಗೆ ಅವರದೇ ಆದ ಅಸ್ತಿತ್ವ ಇದೆ ಅಂತಲೇ ಅವನಿಗೆ ಅನಿಸುತ್ತಿಲ್ಲ. ಮಗನ ಈ ವರ್ತನೆ ಬಹಳ ಬೇಸರ ತರಿಸುತ್ತಿದೆ...

ಒಂದು ಮಾತಾಡಿದರೆ ಹತ್ತು ಉತ್ತರ ಕೊಡುತ್ತಾಳೆ. ನಾವು ತರುವ ಬಟ್ಟೆ-ಬರೆ ಅವಳಿಗೆ ಈಗ ಇಷ್ಟವಾಗುತ್ತಿಲ್ಲ. ಏನಾದ್ರೂ ಪ್ರಶ್ನೆ ಮಾಡಿದರೆ ಕಟುವಾಗಿ ವರ್ತಿಸುತ್ತಾಳೆ. ಅವಳಿಗಾಗಿ ಏನು ಮಾಡಿದರೂ ತೃಪ್ತಿ ಇಲ್ಲ. ಕೇಳಿದ್ದನ್ನೆಲ್ಲಾ ಕೊಟ್ಟರೂ ಅವಳಿಗೆ ಖುಷಿ ಇಲ್ಲ.

ಹಲವು ಮನೆಗಳ ಕಥೆಯಿದು. ಮಕ್ಕಳ ಬಗ್ಗೆ ಪೋಷಕರ ದೂರು, ಪೋಷಕರ ಬಗ್ಗೆ ಮಕ್ಕಳ ದುಮ್ಮಾನವೆಂಬುದು ಎಲ್ಲ ಕಾಲಕ್ಕೂ ಇರುವಂಥದ್ದು. ಈ ಘರ್ಷಣೆಯು ತನ್ನ ರೂಪ–ವ್ಯಾಖ್ಯಾನ ಬದಲಿಸುತ್ತ ಮನೆಗಳಲ್ಲಿ ಒಂದು ಬಗೆಯ ಅಶಾಂತಿಗೆ ಕಾರಣವಾಗಿದೆ. ಈ ಸಂಘರ್ಷದಿಂದಾಗಿ ಪೋಷಕರು ಮತ್ತು ಮಕ್ಕಳು ಆಪ್ತ ಸಮಾಲೋಚನಾ ಕೇಂದ್ರಗಳ ಬಾಗಿಲನ್ನು ಎಡತಾಕುವಂತಾಗಿದೆ.

ಈ ಕಾಲದದೊಡ್ಡ ಸವಾಲು ಎಂದರೆ ಪೇರೆಂಟಿಂಗ್‌. ಮಕ್ಕಳ ಪೋಷಣೆ ವಿಚಾರದಲ್ಲಿ ಗೊಂದಲ ಇದ್ದೇ ಇರುತ್ತದೆ. ಹೇಗೆ ಬೆಳೆಸಿದರೂ ಆತಂಕ; ಏನೋ ಕಳವಳ.ಇನ್ನು ದುಡಿಯುವ ಅಪ್ಪ ಅಮ್ಮಂದಿರಾದರೆ ಅವರ ಚಡಪಡಿಕೆ ಹೇಳತೀರದು. ಮಕ್ಕಳಲ್ಲಿ ದಿನ ದಿನಕ್ಕೂ ಬದಲಾಗುವ ಮಾತಿನ ಈಟಿ, ಕಟುವರ್ತನೆ, ಶೀಘ್ರ ಪ್ರತಿಕ್ರಿಯೆಗಳಿಗೆ ಕಳವಳಗೊಳ್ಳುತ್ತ, ಆತಂಕಕ್ಕೀಡಾಗುತ್ತ ಸಂತೈಸಿಕೊಳ್ಳಲೆತ್ನಿಸುವ ಪಾಡು ಅವರದ್ದು.

ಮಕ್ಕಳು ಕೊಡುವ ಸಣ್ಣ ಸಣ್ಣ ಖುಷಿಗಳಿಗೆ ಹಿಗ್ಗುತ್ತ, ಅವರು ತರುವ ಚಿಕ್ಕಪುಟ್ಟ ಸಿಹಿ ಸುದ್ದಿಗಳಿಗೆ ಮೈಯೆಲ್ಲಾ ಕಿವಿಯಾಗುತ್ತ, ಅವರು ಬಯಸುವ ಖುಷಿಗಳಲ್ಲೇ ಸಂತಸ ಕಾಣುತ್ತ, ತಾವು ದುಡಿದ್ದನ್ನೆಲ್ಲಾ ಸುರಿದು, ಮಕ್ಕಳ ಕನಸನ್ನೇ ಬದುಕುತ್ತಿದ್ದರೂ. ನಾವೇ ಹೆತ್ತ ಮಕ್ಕಳು ಏಕೆ ನಮ್ಮನ್ನು ಕಂಡರೆ ದುರುಗುಡುತ್ತಾರೆ ಎನ್ನುವ ಪ್ರಶ್ನೆ ಮಾತ್ರ ಹಲವರದ್ದು.

ಬಯಸಿದ ಲೋಕವನ್ನೇ ತಂದು ಅವರ ಮುಂದಿಟ್ಟರೂ ಮಕ್ಕಳೇಕೆ ರೆಬೆಲ್‌ ಆಗುತ್ತಾರೆ. ಗೌರವ ಇರಲಿ, ಕಿಂಚಿತ್‌ ಪ್ರೀತಿಗೂ ಅನರ್ಹರೂ ಎಂಬಂತೆ ಅಪ್ಪ ಅಮ್ಮಂದಿರನ್ನುಕಾಣುತ್ತಾರೆ.ಈ ತಲ್ಲಣಕ್ಕೆ ತಂಪು ಸುರಿಯುವುದು ಹೇಗೆ? .

ಮಕ್ಕಳು ಹಾಗೂ ಪೋಷಕರ ನಡುವಿನ ಸಂಘರ್ಷ ಬೆಳೆಯದಂತೆ ಏನು ಮಾಡಬಹುದು. ಎಲ್ಲದಕ್ಕೂ ಪೋಷಕರೇ ರಾಜಿ ಆಗುತ್ತ, ಅವರು ಬಯಸುವುದನ್ನೆಲ್ಲಾ ಅವರಿಗೆ ಒದಗಿಸಿ ಕೊಡುತ್ತ ಹೋಗುವುದರಿಂದ ಎದುರಾಗಬಹುದಾದ ಆಪತ್ತುಗಳು ಕಡಿಮೆಯಲ್ಲ. ಅಮ್ಮ ಅಪ್ಪನ ಆರ್ಥಿಕ–ಸಾಮಾಜಿಕ ಇತಿಮಿತಿಗಳನ್ನು ಒಪ್ಪಿಕೊಳ್ಳುವಂತೆ ಮಕ್ಕಳನ್ನು ಸಿದ್ಧಗೊಳಿಸುವುದು ಅಷ್ಟು ಸುಲಭವೇ?

‘ಮಕ್ಕಳು ಹಾಗೂ ಪೋಷಕರ ಸಂಘರ್ಷ ಹೊಸದೇನಲ್ಲ, ಎಲ್ಲಾ ಕಾಲಘಟ್ಟದಲ್ಲೂ, ಎಲ್ಲಾ ವರ್ಗಗಳಲ್ಲೂ ಇರುವಂಥದ್ದೇ. ಅದನ್ನು ನೋಡುವ ಪರಿ ಈಗ ಬದಲಾಗಿದೆಯಷ್ಟೆ’ ಎನ್ನುತ್ತಾರೆ ದಾವಣಗೆರೆಯ ಮಕ್ಕಳ ಮನಶ್ಶಾಸ್ತ್ರಜ್ಞೆ ಡಾ. ಆಶಾ ಎಚ್.ಎನ್.

‘ಬಾಲ್ಯದಲ್ಲಿ ತಾವು ಅನುಭವಿಸಿದ ಕಷ್ಟಗಳು, ನೋವು, ಅವಮಾನ, ಸೋಲುಗಳನ್ನು ತಮ್ಮ ಮಕ್ಕಳು ಅನುಭವಿಸಬಾರದು. ಅವರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು ಎನ್ನುವ ಪೋಷಕರು ಇದು ತಮ್ಮ ಮಕ್ಕಳ ಬೆಳವಣಿಗೆಗೆ ಪೂರಕವಾದ ಮನಸ್ಥಿತಿಯಲ್ಲ ಎನ್ನುವುದನ್ನು ಮನಗಾಣಬೇಕು. ಬಯಸುವ ಮುನ್ನವೇ ಎಲ್ಲವನ್ನೂ ಅವರಿಗೆ ಒದಗಿಸಿಕೊಡುವುದು ಈ ಸಮಸ್ಯೆಗೆ ಪರಿಹಾರವಲ್ಲ. ಮಕ್ಕಳಿಗೆ ಪಡೆದುಕೊಳ್ಳುವುದರ ಜತೆಗೆ ಕಳೆದುಕೊಳ್ಳುವ ಅನುಭವವೂ ಬೇಕು. ಬರೀ ಗೆಲುವೇ ಜೀವನ ಅಲ್ಲ. ಸೋಲಿನ ಅನುಭವವೂ ಆಗಬೇಕು. ಒಂದು ವಸ್ತುವನ್ನು ಕೇಳಿದೊಡನೆಯೇ ಅವರ ಕೈಗಿಟ್ಟುಬಿಟ್ಟರೆ, ಪ್ರಯಾಸವಿಲ್ಲದೆ ಎಲ್ಲವೂ ಸಿಕ್ಕುಬಿಟ್ಟರೆ ಅವರಿಗೆ ಜೀವನಾನುಭವ ದಕ್ಕದು. ಕೇಳಿದ್ದನ್ನೆಲ್ಲ ಕೊಡುತ್ತಿದ್ದರೆ ನೀವು ಮಕ್ಕಳನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದೀರಿ ಎಂದೇ ಅರ್ಥ. ಸಹನೆ, ತಾಳ್ಮೆ, ಹೊಂದಾಣಿಕೆಯ ಜತೆಗೆ ಕಳೆದುಕೊಳ್ಳುವುದನ್ನೂ ಕಲಿಸಬೇಕು’ ಎನ್ನುತ್ತಾರೆ ಅವರು.

ಆದರೆ, ಬಹುತೇಕ ಪೋಷಕರಿಗೆ ಇಂಥ ಮಕ್ಕಳನ್ನು ನಿರ್ವಹಿಸುವ ಕೌಶಲದ ಕೊರತೆ ಇದೆ. ಇದರಿಂದ ತಾವೂ ಆತಂಕಕ್ಕೀಡಾಗುವ ಜತೆಗೆ, ಮಕ್ಕಳನ್ನೂ ಪೀಡಿಸುತ್ತಾರೆ. ತಮ್ಮ ಸಾಮಾಜಿಕ–ಕೌಟುಂಬಿಕ ನಿರೀಕ್ಷೆಗಳು, ವೈಯಕ್ತಿಕ ಆದರ್ಶಗಳು, ಚಿಂತನೆಗಳು, ಕೆಲಸದ ಸ್ಥಳದಲ್ಲಿನ ಕಿರಿಕಿರಿ, ಮಾನಸಿಕ ಒತ್ತಡ ಸೇರಿ ಎಲ್ಲಾ ಭಾವಾತಿರೇಕಗಳನ್ನು ಮಕ್ಕಳ ಮೇಲೆ ಹೇರಲು ಹೋಗುತ್ತಾರೆ. ಹೀಗಾಗಿ, ತಾವೂ ನಿರಾಶೆಗೆ ಒಳಗಾಗುತ್ತಾರೆ, ಮಕ್ಕಳಲ್ಲಿಯೂ ಅಸಹನೆ ಬಿತ್ತುತ್ತಾರೆ.

‘ಸಂಘರ್ಷಕ್ಕೆ ಮುಖ್ಯ ಕಾರಣ ಇಬ್ಬರ ನಡುವಿನ ವಯಸ್ಸಿನ ಅಂತರ. ಮಕ್ಕಳು ಹಾಗೂ ಪೋಷಕರ ನಡುವೆ ಕನಿಷ್ಠ 30 ವರ್ಷಗಳ ಅಂತರವಿರುತ್ತದೆ. 30 ವರ್ಷಗಳ ಹಿಂದೆ ಇದ್ದ ಬಾಲ್ಯ, ಬದುಕು, ವರ್ತನೆಯನ್ನು ಮಕ್ಕಳಲ್ಲಿ ಕಾಣುವುದು ತಪ್ಪು. ನಿಮ್ಮ ಬದುಕಿಗೂ ಅವರ ಬದುಕಿಗೂ 30 ವರುಷಗಳ ಅಂತರವಿರುವುದನ್ನು ಮರೆಯಬಾರದು‘ ಎನ್ನುತ್ತಾರೆ ಬೆಂಗಳೂರಿನ ಆಪ್ತ ಸಮಾಲೋಚಕಿ ಭಾರತಿ ಸಿಂಗ್.

ಕಾರಣ ಅರಿತರೆ ಪರಿಹಾರ ಸುಲಭ

ಮಕ್ಕಳ ಪ್ರತಿ ವರ್ತನೆಗೂ ಒಂದು ಕಾರಣವಿರುತ್ತದೆ. ಆ ಕಾರಣವನ್ನು ಗುರುತಿಸಿದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವೊಮ್ಮೆ, ತಮ್ಮ ನಡವಳಿಕೆ, ದರ್ಪ, ನಿರ್ಧಾರಗಳನ್ನು ಒಪ್ಪಿಕೊಳ್ಳುವಿರಾ ಎಂದುತಿಳಿದುಕೊಳ್ಳಲು ಕೆಲವು ಮಕ್ಕಳು ಹೀಗೆ ವರ್ತಿಸಿ ನೋಡುತ್ತಾರೆ.
ಕೆಲವೊಮ್ಮೆ ಬೇರೆ ಮಕ್ಕಳನ್ನು ನೋಡಿ ಅನುಕರಣೆ ಮಾಡಬಹುದು. ಸಂಬಂಧಿಕರ ಮಕ್ಕಳು, ಅಕ್ಕಪಕ್ಕದವರು ಅಥವಾ ಸ್ನೇಹಿತರಲ್ಲಿ ಇಂಥ ವರ್ತನೆ ನೋಡಿ ತಾವೂ ಹಾಗೆ ಮಾಡಲು ಹೋಗಬಹುದು. ಇದು ಸರಿಯಾದ ನಡವಳಿಕೆ ಅಲ್ಲ. ಇಂತಹ ವರ್ತನೆಗಳು ಸಮ್ಮತವಲ್ಲ, ಅವುಗಳಿಗೆ ಆಸ್ಪದವಿಲ್ಲ ಎನ್ನುವುದನ್ನು ಸೌಮ್ಯ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು.

ನಿಮ್ಮ ಗಮನ ಸೆಳೆಯಲು, ನಿಮ್ಮೊಂದಿಗೆ ಸಮಯ ಕಳೆಯಲು, ಬೆರೆತು ಹಗುರಾಗಲು ಮಗು ಇಂತಹ ವರ್ತನೆಯನ್ನು ತೋರಬಹುದು. ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ತಮ್ಮ ಜೀವನದ ಮೇಲೆ ಪೋಷಕರ ನಿಯಂತ್ರಣವನ್ನು ತಪ್ಪಿಸಲು ಮತ್ತು ಸ್ವಾತಂತ್ರ್ಯ ಪಡೆಯಲು ಹೀಗೆ ಮಾಡಬಹುದು. ತಮಗೇ ಅರ್ಥವಾಗದ, ಹಾರ್ಮೋನ್‌ ಬದಲಾವಣೆಯ ಪರಿಣಾಮವೂ ಇರಬಹುದು. ತುಸು ಶಾಂತವಾಗಿ, ತಾಳ್ಮೆಯಿಂದ ವರ್ತಿಸಿ.ಅವರ ನಡವಳಿಕೆಯ ಹಿಂದಿನ ಕಾರಣವನ್ನು ತಿಳಿಯಿರಿ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಪರಿಹರಿಸಲು ಯತ್ನಿಸಿ. ನಿಮ್ಮ ಮಿತಿಯಲ್ಲಿ ಅದು ಸಾಧ್ಯವಾಗದಿದ್ದರೆ ಬಂಧುಗಳ, ಸ್ನೇಹಿತರ, ಶಿಕ್ಷಕರ ಅಥವಾ ತಜ್ಞರ ನೆರವು ಪಡೆಯಬಹುದು.

ಮಗು ಎನ್ನುವುದೊಂದು ಚಂದದ ಕವಿತೆ. ಒಮ್ಮೆಲೆ ಅರ್ಥವಾಗಿ ಬಿಡುವಂಥದ್ದಲ್ಲ. ಹಾಗೇ ಅದು ಅರ್ಥವಾಗದ ಮಹಾಗ್ರಂಥವೇನಲ್ಲ. ಮುದ್ದಿನಿಂದ ಓದಬೇಕು. ಪ್ರೀತಿಯಿಂದ ತಿದ್ದಬೇಕು. ಅಂದಾಗ ಮಾತ್ರ ಅದು ನಮ್ಮ ಬದುಕಿನ ಮಹಾಕಾವ್ಯವಾಗಬಹುದು.

ಹೀಗೆ ಮಾಡಿ...

- ಮಕ್ಕಳು ಪ್ರತಿ ಹೆಜ್ಜೆಯನ್ನು ಪೋಷಕರ ಅನುಮತಿ ಪಡೆದೇ ಇಡಬೇಕುಎನ್ನುವ ನಿರೀಕ್ಷೆ ಬೇಡ.

- ನಿಮ್ಮೆಲ್ಲ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ. ಅವರು ನಿಮ್ಮ ಕೈ ಜಾರಿದ ಕನಸುಗಳನ್ನು, ಕೈಗೂಡದ ಆಕಾಂಕ್ಷೆಗಳನ್ನು ಹೊರುವ ಗೋಣಿ ಚೀಲಗಳಲ್ಲ.

- ನಿಮ್ಮ ಸಾಮಾಜಿಕ, ಆರ್ಥಿಕ, ಕೌಟುಂಬಿಕ ಪರಿಸ್ಥಿತಿಗಳನ್ನು, ಇತಿಮಿತಿಗಳನ್ನು ಅವರಿಗೆ ಮನಮುಟ್ಟುವಂತೆ ಅರ್ಥ ಮಾಡಿಸಿ.

- ಮಕ್ಕಳ ಸಾಮರ್ಥ್ಯವನ್ನು ಅರಿಯದೇ ಅವರ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ

- ನಿಮ್ಮ ಜವಾಬ್ದಾರಿ, ಒತ್ತಡ, ಅಸಹನೆ, ಅಸಹಾಯಕತೆಗಳ ನಿಟ್ಟುಸಿರನ್ನು ಮಕ್ಕಳಿಗೆ ತಲುಪಿಸಬೇಡಿ.

- ನಿಮ್ಮ ಅಮೂಲ್ಯ ಸಮಯವನ್ನು ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಕಳೆಯಿರಿ.

- ಇಬ್ಬರ ನಡುವೆ ಅಂತರ ಸೃಷ್ಟಿಯಾಗಲು ಅವಕಾಶ ಕೊಡಬೇಡಿ.

- ನಾವೇ ಹೆಚ್ಚು ತಿಳಿದುಕೊಂಡವರು, ವಿದ್ಯಾವಂತರು, ಬುದ್ಧಿವಂತರು ಎಂಬ ನಿಲುವನ್ನು ಮಕ್ಕಳ ಮುಂದೆ ಪ್ರದರ್ಶಿಸಬೇಡಿ.

- ಪ್ರೀತಿ, ಸಹನೆ, ಪರಸ್ಪರ ಗೌರವಾದರಗಳನ್ನು ನಿಮ್ಮ ವರ್ತನೆಯ ಮೂಲಕ ಅವರಿಗೆ ಕಲಿಸಿ

- ಡಾ. ಆಶಾ ಎಚ್.ಎನ್ , ಮನಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT