ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಶ್ವವಾಯು ದಿನ: ಏನಿದು ಸ್ಟ್ರೋಕ್, ಕಾರಣಗಳೇನು, ಪರಿಹಾರವೇನು? ಇಲ್ಲಿದೆ ಮಾಹಿತಿ

ಪಾರ್ಶ್ವವಾಯು ಬಗ್ಗೆ ಅರಿವು ಮೂಡಿಸೋಣ, ಆರೋಗ್ಯವಂತ ಸಮಾಜ ನಿರ್ಮಿಸೋಣ.
Last Updated 29 ಅಕ್ಟೋಬರ್ 2021, 10:37 IST
ಅಕ್ಷರ ಗಾತ್ರ

ಇಂದು ವಿಶ್ವ ಸ್ಟ್ರೋಕ್‌ (ಪಾರ್ಶ್ವವಾಯು) ದಿನಾಚರಣೆ. ಪ್ರತಿ ವರ್ಷ ಅಕ್ಟೋಬರ್ 29ರಂದು ಜಗತ್ತಿನಾದ್ಯಂತ ಪಾರ್ಶ್ವವಾಯುವಿನ ಬಗ್ಗೆ ಅರಿವು ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಿದ್ದರೆ ವಿಶ್ವ ಸ್ಟ್ರೋಕ್ ದಿನಾಚರಣೆಯ ಮಹತ್ವವೇನು? ತಿಳಿದುಕೊಳ್ಳೋಣ ಬನ್ನಿ.

ಪಾರ್ಶ್ವವಾಯು ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಾರಣಾಂತಿಕ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗವಾಗಿ ಮಾರಣಾಂತಿಕ ರೋಗಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸುಮಾರು 1.8 ಕೋಟಿ ಮಂದಿ ಪ್ರಪಂಚದಾದ್ಚಾಯಂತ ಈ ರೋಗಕ್ಕೆ ಪ್ರತಿವರ್ಷ ತುತ್ತಾಗುತ್ತಿದ್ದಾರೆ. 55 ಲಕ್ಷ ಜನರು ಈ ರೋಗದಿಂದ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿಯೂ ಪಾರ್ಶ್ವವಾಯುವಿನ ಹಾವಳಿ ಗಂಭೀರವಾಗಿಯೇ ಇದೆ. ಐಸಿಎಂಆರ್ ಅಧ್ಯಯನದ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಾರ್ಶ್ವವಾಯುವಿನಿಂದ ತುತ್ತಾಗುವವರ ಸಂಖ್ಯೆ ಪ್ರತಿವರ್ಷ ಒಂದು ಲಕ್ಷಕ್ಕೆ 450 ಜನರಷ್ಟು. ಈ ಸಂಖ್ಯೆ ದಾಖಲಾದ ಪ್ರಮಾಣ. ದಾಖಲಾಗದೇ ಉಳಿದ ಸ್ಟ್ರೋಕ್‌ನ ಪ್ರಮಾಣ ಬಹುಶಃ ಇನ್ನೂ ಹೆಚ್ಚಿರಬಹುದು.

ಪಾರ್ಶ್ವವಾಯು ಎಂದರೇನು ?
ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ಹೋಗಿ ಅದರಿಂದಾಗುವ ನರಮಂಡಲದ ಮೇಲಿನ ಪರಿಣಾಮಗಳಿಗೆ ಪಾರ್ಶ್ವವಾಯು ಎಂದು ಕರೆಯುತ್ತಾರೆ ಇದರಲ್ಲಿ ಎರಡು ಪ್ರಮುಖ ವಿಧಗಳಿವೆ ರಕ್ತನಾಳ ಹೆಪ್ಪುಗಟ್ಟಿ ಮೆದುಳಿನ ಅಂಗಾಂಶಗಳಿಗೆ ಘಾಸಿ ಆಗುವುದನ್ನು ischemic stroke (ಇಸ್ಚಿಮಿಕ್ ಸ್ಟ್ರೋಕ್) ಎಂದೂ, ರಕ್ತನಾಳ ಒಡೆದು ಹೋಗಿ ಮೆದುಳಿನ ಒಳಗೆ ಉಂಟಾಗುವ ರಕ್ತಸ್ರಾವವನ್ನು ಹೆಮರೇಜಿಕ್ ಸ್ಟ್ರೋಕ್ (hemorrhagic stroke) ಎಂದೂ ಕರೆಯುತ್ತಾರೆ. ಇದಲ್ಲದೆ ಸಬ್ ಅರಚ್ನಾಯ್ಡ್ ಹೆಮರೇಜ್ ಮತ್ತು ಸರೆಬ್ರಲ್ ವೇನಸ್ ತ್ರಾಂಬೋಸಿಸ್ ಎಂಬ ಇನ್ನೆರಡು ವಿಧಗಳಿವೆ. ಪಾರ್ಶ್ವವಾಯು ಸಂಭವಿಸಿ 24 ಗಂಟೆಗಳೊಳಗೆ ರೋಗಿ ಸಂಪೂರ್ಣವಾಗಿ ಗುಣಮುಖರಾಗಿ, ಎಮ್ಆರ್‌ಐ ಸ್ಕ್ಯಾನ್‌ನಲ್ಲಿ ಯಾವುದೇ ಲಕ್ಷಣ ಕಂಡು ಬರದೇ ಇದ್ದಲ್ಲಿ ಅದನ್ನು ಟ್ರನ್ಸಿಂಟ್ ಇಸ್ಕೀಮಿಕ್ ಅಟ್ಯಾಕ್ಎಂ ದು ಕರೆಯುತ್ತಾರೆ.

ಪಾರ್ಶ್ವವಾಯು ಸಂಭವಿಸಲು ಮುಖ್ಯ ಕಾರಣಗಳು
ಪಾರ್ಶ್ವವಾಯು ಉಂಟಾಗಲು ರೋಗಿಗೆ ಹಲವಾರು ವೈದ್ಯಕೀಯ ಕಾರಣಗಳು ಇರಬಹುದು ಅದರಲ್ಲಿ ಮುಖ್ಯವಾದದ್ದು ಅನಿಯಂತ್ರಿತ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ, ಹೃದಯದ ಕಾಯಿಲೆ (ಹೃದಯಾಘಾತ, ಅಟ್ರಿಯಲ್ ಫೈಬ್ರಿಲ್ಲೇಶನ್ ಎಂಬ ಹೃದಯದ ಬಡಿತದ ಏರುಪೇರಿನ ಸಮಸ್ಯೆ), ಅಧಿಕ ಕೊಲೆಸ್ಟ್ರಾಲ್ ಪ್ರಮಾಣ, ಧೂಮಪಾನ ಹಾಗೂ ಬೊಜ್ಜು. ಹತ್ತಿರದ ರಕ್ತಸಂಬಂಧಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಪಾರ್ಶ್ವವಾಯು ಸಂಭವಿಸಿದರೆ ನುರಿತ ತಜ್ಞರಿಂದ ತಪಾಸಣೆಗೆ ಒಳಗಾಗುವುದು ಸೂಕ್ತ. ಸ್ಟ್ರೋಕ್‌ ರಿಸ್ಕೊಮೀಟರ್ ಎಂಬ ಆಪ್‌ನಿಂದ ಯಾವುದೇ ವ್ಯಕ್ತಿಯು ತನಗಿರುವ ಪಾರ್ಶ್ವವಾಯುವಿನ ಸಂಭವನೀಯತೆಯ ಪ್ರಮಾಣವನ್ನು ಲೆಕ್ಕಹಾಕಬಹುದು.

ಪಾರ್ಶ್ವವಾಯುವಿನ ರೋಗಲಕ್ಷಣಗಳು
ಪಾರ್ಶ್ವವಾಯುವಿನ ರೋಗಲಕ್ಷಣಗಳನ್ನು ನೆನಪಿಡಲು ನಾವು ಬಿ ಫಾಸ್ಟ್ (BE FASR)ಎಂಬ ಸಂಕ್ಷಿಪ್ತ ರೂಪವನ್ನು ಬಳಸುತ್ತೇವೆ.
B- ಬ್ಯಾಲೆನ್ಸ್. ರೋಗಿಯ ದೇಹದ ಸಮತೋಲನ ತಪ್ಪುವುದು
E- eye ದೃಷ್ಟಿಯ ಸಮಸ್ಯೆಗಳು ಉಂಟಾಗುವುದು ಕೆಲವರಲ್ಲಿ ಇದು ಕುರುಡುತನವನ್ನು ಉಂಟುಮಾಡಬಲ್ಲದು
F- Face ಫೇಸಿಯಲ್ ಅಸಿಮ್ಮೆಟ್ರಿ. ಮುಖದ ಒಂದು ಭಾಗ ವಕ್ರ ವಾಗುವುದು.
A- Arms ಆರ್ಮ್ ವೀಕ್ನೆಸ್. ಕೈ ಅಥವಾ ಕಾಲು ಸ್ವಾಧೀನ ತಪ್ಪುವುದು.
S-Speech ಸ್ಪೀಚ್ ಡಿಸ್ಟರ್ಬೆನ್ಸ್. ಮಾತನಾಡಲು ತೊದಲುವುದು, ಮಾತು ನಿಂತುಹೋಗುವುದು, ಅಥವಾ ಬೇರೆಯವರು ಮಾತನಾಡಿದ್ದು ಅರ್ಥವಾಗದೆ ಇರುವುದು.
T-Time ರೋಗಿ ಸಂಪೂರ್ಣವಾಗಿ ನಾರ್ಮಲ್ ಆಗಿದ್ದ ಸಮಯ, ಅಥವಾ ಪಾರ್ಶ್ವವಾಯು ಸಂಭವಿಸಿದ ಮೊದಲ 4:30 ಗಂಟೆಗಳಲ್ಲಿ (ಗೋಲ್ಡನ್ ಅವರ್) ರೋಗಿಗೆ ವೈದ್ಯಕೀಯ ನೆರವು ನೀಡುವ ಸಮಯ.

ಅಮೇರಿಕನ್ ಸ್ಟ್ರೋಕ್‌ ಅಸೋಸಿಯೇಷನ್ 2006ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಪಾರ್ಶ್ವವಾಯು ಸಂಭವಿಸಿದ ನಂತರದ ಪ್ರತಿ ನಿಮಿಷದಲ್ಲಿ ಮೆದುಳಿನಲ್ಲಿ ಸರಾಸರಿ 1.9 ಮಿಲಿಯನ್ ನರಗಳು ಸಾಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಭವಿಸಿದ ತಕ್ಷಣ ತಡಮಾಡದೆ ಸಂಬಂಧಿಕರು/ನೆರೆಹೊರೆಯವರು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಬೇಕು.

ಒಂದು ಅಂದಾಜಿನ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ.

ಸ್ಟ್ರೋಕ್‌ ರೆಡಿ ಆಸ್ಪತ್ರೆ
ಪಾರ್ಶ್ವವಾಯು ಸಂಭವಿಸಿದ ಸುವರ್ಣ ಸಮಯದ ಒಳಗೆ ರೋಗಿಯನ್ನು ಹತ್ತಿರದ ಸ್ಟ್ರೋಕ್ ರೆಡಿ ಆಸ್ಪತ್ರೆಗೆ ದಾಖಲು ಮಾಡಬೇಕು ಎಲ್ಲ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯುಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ಲಭ್ಯವಿರದ ಕಾರಣ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಹತ್ತಿರ ಇರುವ ಸ್ಟ್ರೋಕ್ ರೆಡಿ ಆಸ್ಪತ್ರೆಯ ಬಗ್ಗೆ ಅರಿವು ಇರುವುದು ಅವಶ್ಯಕ. ಸ್ಟ್ರೋಕ್ ರೆಡಿ ಆಸ್ಪತ್ರೆ ಎಂಬ ವಿಶೇಷಣಕ್ಕೆ ಒಳಗಾಗಬೇಕಾದ ಆಸ್ಪತ್ರೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವ ತುರ್ತು ವಿಭಾಗ, ಐಸಿಯು, ಆಪರೇಷನ್ ಥಿಯೇಟರ್, ಸಿಟಿ ಸ್ಕ್ಯಾನ್‌, ಅರಿವಳಿಕೆ ತಜ್ಞರು ಹಾಗೂ ನರರೋಗ ತಜ್ಞರ ಅಥವಾ ನರರೋಗ ಶಸ್ತ್ರಚಿಕಿತ್ಸಾ ತಜ್ಞರು ಮಾರ್ಗದರ್ಶನ ಹೊಂದಿರುವುದು ಕಡ್ಡಾಯ. ಸರ್ಕಾರ ತನ್ನ ಸಂಸ್ಥೆಗಳಿಂದ ಪರಿಶೀಲನೆ ಮಾಡಿಸಿ ಬೆಂಗಳೂರು ಮಹಾನಗರದಲ್ಲಿರುವ ಸ್ಟ್ರೋಕ್ ರೆಡಿ ಆಸ್ಪತ್ರೆಗಳನ್ನು ಜಿಪಿಎಸ್ ತಂತ್ರಜ್ಞಾನದಿಂದ ಅಂಬುಲೆನ್ಸ್ ವ್ಯವಸ್ಥೆಗೆ ಮಾರ್ಗದರ್ಶನ ಮಾಡಿದರೆ ಪಾರ್ಶ್ವವಾಯು ಸಂಭವಿಸಿದ ರೋಗಿಗಳಿಗೆ ಬಹಳ ಉಪಕಾರ ಆಗಬಲ್ಲದು.

ಪಾರ್ಶ್ವವಾಯುವಿನ ತುರ್ತುಚಿಕಿತ್ಸೆ
ಪಾರ್ಶ್ವವಾಯುಗೆ ಒಳಗಾದರು ತುರ್ತು ಚಿಕಿತ್ಸೆ ವಿಭಾಗಕ್ಕೆ ದಾಖಲಾದಾಗ ಕೋಡ್ ಸ್ಟ್ರೋಕ್‌ ಚಾಲನೆ ಆಗುತ್ತದೆ. ಮೊದಲ ಹತ್ತು ನಿಮಿಷಗಳಲ್ಲಿ ತುರ್ತುಚಿಕಿತ್ಸೆಯ ವಿಭಾಗದ ವೈದ್ಯರು ರೋಗಿಯನ್ನು ತಪಾಸಣೆ ಮಾಡಿ, ಪಾರ್ಶ್ವವಾಯು ಇರುವ ಸಾಧ್ಯತೆ ಅದರ ತೀವ್ರತೆ ಹಾಗೂ ಉಂಟಾದ ಸಮಯದ ವ್ಯತ್ಯಾಸ ಇವೆಲ್ಲವನ್ನು ದಾಖಲು ಮಾಡಿ ನಂತರ 20 ನಿಮಿಷಗಳಲ್ಲಿ ಅವಶ್ಯಕವಾದ ರಕ್ತ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ಸ್ಕ್ಯಾನ್‌ ಮಾಡುತ್ತಾರೆ. ಸ್ಕ್ಯಾನ್‌ ಮುಗಿದ 15 ನಿಮಿಷಗಳ ಒಳಗೆ ನುರಿತ ತಜ್ಞರು ಅದನ್ನು ಪರಿಶೀಲಿಸಿ ರಕ್ತ ಹೆಪ್ಪುಗಟ್ಟಿದೆ ಅಥವಾ ರಕ್ತಸ್ರಾವವಾಗಿದೆ ಎಂಬುದನ್ನು ತೀರ್ಮಾನಿಸಿ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ.

ಸಿಟಿ ಸ್ಕ್ಯಾನ್‌/ ಎಂಆರ್‌ಐ ಸ್ಕ್ಯಾನ್‌ನಲ್ಲಿ ಮೆದುಳಿನ ರಕ್ತನಾಳ ಹೆಪ್ಪು ಗಟ್ಟಿ ರುವ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ರೋಗಿ ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳ ಒಳಗಾಗಿ ಆಸ್ಪತ್ರೆಯಲ್ಲಿ ಇದ್ದಲ್ಲಿ ರಕ್ತನಾಳದ ಹೆಪ್ಪುಗಟ್ಟುವಿಕೆಯನ್ನು ಭೇದಿಸಲು ಕ್ಲಾಟ್ ಬಸ್ಟರ್ ಔಷಧಿಯನ್ನು (ಟಿಪಿಎ/ಆಕ್ಟಿಲೈಸ್/ತೆನೆಟ್ಕಪ್ಲೇಸ್) ನೀಡಲಾಗುವುದು. ದೊಡ್ಡ ರಕ್ತನಾಳಗಳು ಹೆಪ್ಪುಗಟ್ಟಿದ್ದ ಲ್ಲಿ (ಲಾರ್ಜ್ ವೆಸೆಲ್ ಅಕ್ಲುಷನ್) ಈ ಔಷಧ ಕೆಲಸ ಮಾಡುವ ಸಾಧ್ಯತೆ ಕಡಿಮೆ.

ಮೆಕ್ಯಾನಿಕಲ್ ತ್ರಾಂಬೆಕ್ಟಮಿ ತಂತ್ರಜ್ಞಾನ
2013ರಿಂದೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಸ್ಟ್ರೋಕ್‌ನ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾಗಿದೆ. ಹೊಸ ಹೊಸ ಆವಿಷ್ಕಾರದಿಂದ ಹೆಚ್ಚು ಹೆಚ್ಚು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ದೊಡ್ಡ ರಕ್ತನಾಳಗಳು ಹೆಪ್ಪುಗಟ್ಟಿ ಕ್ಲಾಟ್ ಬಸ್ಟರ್ ಔಷಧ ಪರಿಣಾಮಕಾರಿಯಲ್ಲದ ಸಂದರ್ಭದಲ್ಲಿ, ಮೆದುಳಿನ ರಕ್ತನಾಳಗಳ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಪಾರ್ಶ್ವವಾಯು ಸಂಭವಿಸಿದ ಮೊದಲ 24 ಗಂಟೆಗಳವರೆಗೆ ಈ ಚಿಕಿತ್ಸೆಯನ್ನು ನೀಡಬಹುದು. ಹೃದಯದ ಆಂಜಿಯೋಪ್ಲಾಸ್ಟಿ ರೀತಿಯಲ್ಲಿ ತೊಡೆಯ ರಕ್ತನಾಳದ ಮೂಲಕ ಕ್ಯಾಥೀಟರ್‌ಅನ್ನು ತೂರಿಸಿ ರಕ್ತ ಹೆಪ್ಪುಗಟ್ಟಿರುವ ಜಾಗಕ್ಕೆ ತಲುಪಿ ಹಲವಾರು ವಿಶೇಷ ಉಪಕರಣಗಳ ಸಹಾಯದಿಂದ ಕ್ಲಾಟ್ ಅನ್ನು ಛಿದ್ರ ಗೊಳಿಸಿ ರಕ್ತಸಂಚಾರವನ್ನು ಸುಗಮ ಗೊಳಿಸಬಹುದು. ಇತ್ತೀಚಿನ ಅಂತರರಾಷ್ಟ್ರೀಯ ಅಧ್ಯಯನಗಳ ಪ್ರಕಾರ ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಹಾಗೂ ಹೆಚ್ಚು ಸುರಕ್ಷಿತ ಎಂದು ದೃಢಪಟ್ಟಿದೆ. ಈ ಚಿಕಿತ್ಸೆಯನ್ನು ನೀಡುವ ಕೇಂದ್ರಗಳ ಹಾಗೂ ನುರಿತ ತಜ್ಞರ ಸಂಖ್ಯೆ ಕಡಿಮೆ ಇದ್ದು, ಸರ್ಕಾರ ನೀತಿ ನಿರೂಪಕರು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ.

ಮೆದುಳಿನಲ್ಲಿ ರಕ್ತಸ್ರಾವ ಉಂಟಾದಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಔಷಧಿಗಳನ್ನು ಕೊಟ್ಟು ಐಸಿಯುಗೆ ದಾಖಲು ಮಾಡಬೇಕು. ಮಿದುಳಿನ ಉರಿಯೂತ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೆ ಡಿ ಕಂಪ್ರೆಷನ್ ಕ್ರಾನಿಯೋಟೋಮಿ ಎಂಬ ಜೀವರಕ್ಷಕ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು.

ರೋಗಿಗೆ ಇರುವ ಇನ್ನಿತರ ವೈದ್ಯಕೀಯ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಅದಕ್ಕೆ ಚಿಕಿತ್ಸೆ ನೀಡಬೇಕು. ಗುಣಮುಖರಾಗಿರುವ ಸೂಚನೆಗಳು ಕಂಡುಬಂದಲ್ಲಿ ಐಸಿಯುನಿಂದ ವಾರ್ಡಿಗೆ ಅಥವಾ ಪುನಶ್ಚೇತನ ಕೇಂದ್ರಕ್ಕೆ ಸ್ಥಳಾಂತರಿಸಬೇಕು.

ಪಾರ್ಶ್ವವಾಯುವಿನ ಪುನಶ್ಚೇತನ
ಪಾರ್ಶ್ವವಾಯುವಿನ ತುರ್ತುಚಿಕಿತ್ಸೆ ದೊರೆತ ನಂತರ ಪುನಶ್ಚೇತನ ಪ್ರಕ್ರಿಯೆ ಅಥವಾ ಫಿಸಿಯೊತೆರಪಿ ಅತ್ಯಗತ್ಯ. ಇದು ಚೇತರಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಒಳ್ಳೆಯ ತಂಡದ ಆರೈಕೆ ರೋಗಿಯ ಚೇತರಿಕೆಗೆ ಸಹಾಯಕ. ಸದ್ಯಕ್ಕೆ ಲಭ್ಯವಿರುವ ಪುನಶ್ಚೇತನ ಕೇಂದ್ರಗಳ ಸಂಖ್ಯೆ ಕಡಿಮೆ ಇದ್ದು ಸರ್ಕಾರ ಮತ್ತು ಆಸ್ಪತ್ರೆಗಳು ಇನ್ನೂ ಹೆಚ್ಚು ಹೆಚ್ಚು ಮೂಲಭೂತ ಸೌಲಭ್ಯ ಕಲ್ಪಿಸುವುದರ ಬಗ್ಗೆ ಚಿಂತನೆ ನಡೆಸಬೇಕಿದೆ.

ಪಾರ್ಶ್ವವಾಯುವಿನ ಚಿಕಿತ್ಸೆಯಲ್ಲಿ ಟೈಮ್ ಇಸ್ ಬ್ರೈನ್‌ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗಕ್ಕೆ ತುತ್ತಾದ ಸೂಚನೆಗಳು ಸಿಕ್ಕ ತಕ್ಷಣ, ಹತ್ತಿರದ ನರರೋಗ ತಜ್ಞರು ಲಭ್ಯವಿರುವ ಸ್ಟ್ರೋಕ್‌ ರೆಡಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದು ಗುಣಮುಖವಾಗುವುದು ಅತ್ಯಂತ ಅವಶ್ಯಕ.

ಕರ್ನಾಟಕ ರಾಜ್ಯದಲ್ಲಿ ಪಾರ್ಶ್ವವಾಯುವಿನ ಮರಣ /ಅಂಗವೈಕಲ್ಯದ ಪ್ರಮಾಣ ತಡೆಗಟ್ಟಲು ಹಲವು ಮಾರ್ಗದರ್ಶಿ ಸೂತ್ರಗಳು.

ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 25-30 ಜನ ಪ್ರತಿನಿತ್ಯ ಸ್ಟ್ರೋಕ್ ಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಕೇವಲ 10-15% ಕ್ಕಿಂತ ಕಡಿಮೆ ರೋಗಿಗಳು ಗೋಲ್ಡನ್ hour ಅಲ್ಲಿ ಆಸ್ಪತ್ರೆ ತಲುಪಿದ್ದಾರೆ. ಇದರ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶ ಇದೆ.

1. ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಸ್ಟ್ರೋಕ್ ಬಗ್ಗೆ ಅರಿವು ಮೂಡಿಸುವುದು ಸ್ಟ್ರೋಕ್ ಗುಣಪಡಿಸಬಹುದಾದ ಒಂದು ರೋಗ ಎಂದು ವೈಜ್ಞಾನಿಕವಾಗಿ ಉಪನ್ಯಾಸ ನೀಡುವ ಮೂಲಕ ಅರಿವು ಮೂಡಿಸುವುದು.

2. ಸ್ಟ್ರೋಕ್ ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳ ಕಾಲ ಗೋಲ್ಡನ್ ಅವರ ಎಂದು ಕರೆಯುತ್ತಾರೆ ಈ ಸಂದರ್ಭದಲ್ಲಿ ಸೂಕ್ತ ಆಸ್ಪತ್ರೆಗೆ ದಾಖಲಾದರೆ ಅತ್ಯಾಧುನಿಕ ಚಿಕಿತ್ಸೆ ಗಳು ಲಭ್ಯವಾಗುವ ಮೂಲಕ ಪಾರ್ಶ್ವವಾಯುವನ್ನು ತಡೆಗಟ್ಟಬಹುದು.

3. ಬೆಂಗಳೂರಿನಾದ್ಯಂತ ಇರುವ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಹಾಗೂ ಮಧ್ಯಮ ಆಸ್ಪತ್ರೆಗಳನ್ನು ಸ್ಟ್ರೋಕ್ ರೆಡಿ ಹಾಸ್ಪಿಟಲ್ ಎಂದು ವರ್ಗೀಕರಿಸಿ, ಆಸ್ಪತ್ರೆಗಳಲ್ಲಿ ಇರುವ ವ್ಯವಸ್ಥೆಗಳನ್ನು ಅವಲೋಕಿಸಿ ಅವರಿಗೆ ಮಾರ್ಗದರ್ಶನ ಮಾಡುವುದು. ನಂತರ ಅಂಬುಲೆನ್ಸ್ ಚಾಲಕರಿಗೆ ಸೂಕ್ತ ತರಬೇತಿ ನೀಡುವುದು

4. ಜಿಪಿಎಸ್ ತಂತ್ರಜ್ಞಾನದ ಮೂಲಕ ಸ್ಟ್ರೋಕ್ ಸಂಭವಿಸಿದ ರೋಗಿಯನ್ನು ಹತ್ತಿರದ ರೆಡಿ ಆಸ್ಪತ್ರೆಗೆ ತುರ್ತಾಗಿ ಶಿಫ್ಟ್ ಮಾಡುವ ರೀತಿ ಯೋಜನೆ ರೂಪಿಸುವುದು.

5. ಸ್ಟ್ರೋಕ್‌ಗೆ ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳ ಒಳಗೆ ಕೊಡಲಾಗುವ ಕ್ಲಾಟ್ ಬ್ಲಸ್ಟರ್ ಔಷಧಿ (ಟಿಪಿಎ ಅಥವಾ ತೇನೆಕ್ಟಪ್ಲೇಸ್) ಇದು ದುಬಾರಿಯಾಗಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು.

6. ಹಲವಾರು ರಾಜ್ಯಗಳಲ್ಲಿ ಉದಾಹರಣೆಗೆ, ತಮಿಳುನಾಡು, ಮೆಕ್ಯಾನಿಕಲ್ ತ್ರಾಂಬೆಕ್ಟಮಿ ಚಿಕಿತ್ಸೆ ಸರ್ಕಾರಿ ಮಟ್ಟದಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಇಲ್ಲೂ ಅದೇ ಮಾದರಿಯನ್ನು ಅನುಸರಿಸಬಹುದು.

7. ನರ್ಸ್‌ಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಎಮರ್ಜೆನ್ಸಿ ವಿಭಾಗದಲ್ಲಿ ಚಿಕಿತ್ಸೆ ನೀಡುವ ಜೂನಿಯರ್ ವೈದ್ಯರಿಗೆ ಸ್ಟ್ರೋಕ್ ಬಗ್ಗೆ ಹೆಚ್ಚಿನ ಸರ್ಟಿಫಿಕೇಶನ್ ಮಾಡುವುದು.. ಇದಕ್ಕಾಗಿ ಹಲವಾರು ಸಹಾಯ ತೆಗೆದುಕೊಂಡು ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಗಳಿಂದ ಸರ್ಟಿಫಿಕೇಶನ್ ಮಾಡುವುದು. ಇದು ಅವರ ಭವಿಷ್ಯಕ್ಕೂ ಸಹಕಾರಿಯಾಗುತ್ತದೆ.

8. ಟೆಲಿ ಸ್ಟ್ರೋಕ್ ರಾಜ್ಯಮಟ್ಟದಲ್ಲಿ ಒಂದು ಹೆಲ್ಪ್ ಲೈನ್ ಅನ್ನು ಸ್ಥಾಪಿಸುವುದು ಅದರ ಮೂಲಕ ಸ್ಟ್ರೋಕ್ ಸಂಭವಿಸಿದ ತಕ್ಷಣ ತರಬೇತಿಪಡೆದ ಪ್ಯಾರಮೆಡಿಕಲ್ ಸಿಬ್ಬಂದಿಯಿಂದ ತಕ್ಷಣದ ವಿಡಿಯೋ ಅಸೆಸ್ಮೆಂಟ್ ಮಾಡಿಸಿ ಸೂಕ್ತ ವೈದ್ಯರಿಗೆ ಶಿಫಾರಸು ಮಾಡುವುದು

9. ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಟ್ರೋಕ್ ಪ್ರಿವೆನ್ಶನ್ ಕ್ಲಿನಿಕ್ ಗಳನ್ನು ಸ್ಥಾಪಿಸುವುದು ತಿಂಗಳಿಗೆ ಒಂದು ಬಾರಿ ಹಿರಿಯ ತಜ್ಞರಿಂದ ರೋಗಿಗಳ ತಪಾಸಣೆ ಮಾಡಿ ಸೂಕ್ತ ಸಲಹೆಯನ್ನು ಕೊಡಿಸುವುದು.

10. ರಾಜ್ಯಮಟ್ಟದಲ್ಲಿ ಸ್ಟ್ರೋಕ್ ಟಾಸ್ಕ್ ಫೋರ್ಸ್ ಅನ್ನು ರೂಪಿಸಿ ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರನ್ನು ಅಧಿಕಾರಿಗಳನ್ನು ಸಮಾಜ ಸೇವಕರನ್ನು ಹಾಗೂ ಸ್ಟ್ರೋಕ್‌ (survivors) ಅದರಲ್ಲಿ ಒಳಗೊಂಡು ಕಾಲಕಾಲಕ್ಕೆ ವೈಜ್ಞಾನಿಕ ಅಭಿಪ್ರಾಯ ನೀಡುವುದು. ಕೇಂದ್ರ ಮಟ್ಟದ ಸಂಸ್ಥೆಗಳ ಜೊತೆಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಜೊತೆಗೆ ಸಂವಹನ ಮಾಡುವಂತೆ ನೋಡಿಕೊಳ್ಳುವುದು.

ಲೇಖಕರು: ಹಿರಿಯ ನರರೋಗ ತಜ್ಞರು ಹಾಗೂ ಪಾರ್ಶ್ವವಾಯು ತಜ್ಞರು, ಅಪೋಲೋ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು.
ಕಾರ್ಯದರ್ಶಿಗಳು, ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಬೆಂಗಳೂರು (ರಿ.)

ನೆನಪಿನಲ್ಲಿಡಿ:

- ಪಾರ್ಶ್ವವಾಯು ರೋಗಕ್ಕೆ ಇರುವ ರಿಸ್ಕ್ ಫ್ಯಾಕ್ಟರ್ಸ್ ನಿಯಂತ್ರಿಸಿದರೆ ಶೇಕಡ 90ರಷ್ಟು ಪ್ರಕರಣಗಳನ್ನು ನಿಯಂತ್ರಿಸಬಹುದು.

- ರಕ್ತದೊತ್ತಡವನ್ನು ಮಾತ್ರೆಗಳು ಆಹಾರ ಆಹಾರದಲ್ಲಿನ ಪಥ್ಯ ಹಾಗೂ ದೈಹಿಕ ವ್ಯಾಯಾಮಗಳ ಮೂಲಕ ನಿಯಂತ್ರಣದಲ್ಲಿಡಬಹುದು.

- ಮಧುಮೇಹ ಹಾಗೂ ಅತಿಯಾದ ಕೊಬ್ಬನ್ನು ಔಷಧಿಗಳ ಮೂಲಕ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬಹುದು.

- ಆಹಾರದಲ್ಲಿ ಸಕ್ಕರೆಯಂಶವನ್ನು ಹಾಗೂ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಹೆಚ್ಚು ಪ್ರೋಟೀನ್ ಯುಕ್ತ/ ನಾರು ಭರಿತ ಸಸ್ಯಾಹಾರವನ್ನ ಹೆಚ್ಚು ಹೆಚ್ಚು ಉಪಯೋಗಿಸಬಹುದು.

- ಧೂಮಪಾನಿಗಳು ತಕ್ಷಣದಿಂದಲೇ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು..

- ದೈಹಿಕ ವ್ಯಾಯಾಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಪ್ರತಿನಿತ್ಯ ಅಥವಾ ವಾರದಲ್ಲಿ ಕನಿಷ್ಠ ಐದು ದಿನ 30 ರಿಂದ 45 ನಿಮಿಷಗಳ ಕಾಲ ನಡಿಗೆ ಓಟ ಯೋಗಾಸನ ಅಥವಾ ಇನ್ಯಾವುದಾದರೂ ದೈಹಿಕ ಕ್ಷಮತೆಯನ್ನು ವೃದ್ಧಿಸುವ ಆಸನಗಳಿಗೆ ಒತ್ತು ನೀಡಬೇಕು.

- ಹತ್ತಿರದ ಸಂಬಂಧಿಗಳಲ್ಲಿ ಚಿಕ್ಕವಯಸ್ಸಿನಲ್ಲಿ ಪಾರ್ಶ್ವವಾಯು ಸಂಭವಿಸಿದರೆ ಯಾವುದಾದರೂ ಅನುವಂಶೀಯ ಕಾರಣ ಗಳಿರುವ ಸಾಧ್ಯತೆ ಇರುತ್ತದೆ ಹಾಗಾಗಿ ತಕ್ಷಣ ನರರೋಗ ತಜ್ಞರು ಭೇಟಿ ಮಾಡಬೇಕು

- ಹೃದ್ರೋಗಿಗಳು ತಮ್ಮ ಹೃದಯದ ಬಡಿತ ಹೃದಯದ ರಕ್ತ ಹೊರಹಾಕುವ ಪ್ರಮಾಣ ಮತ್ತಿತರ ಅಂಶಗಳನ್ನು ತಮ್ಮ ಹೃದ್ರೋಗ ತಜ್ಞರ ಬಳಿ ಕೂಲಂಕುಶವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು..

- ಬೊಜ್ಜಿನ ಸಮಸ್ಯೆ ಇರುವವರು ನಿಯಮದ ನಿಯಮಿತವಾದ ಪದ್ಯ ವ್ಯಾಯಾಮ ಹಾಗೂ ಆಹಾರ ತಜ್ಞರು ಸಲಹೆ ಪಡೆದು ತೂಕವನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT