ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಟೈಮರ್ ಐಇಡಿ: 10 ಜನರಿಗೆ ಗಾಯ

Published 2 ಮಾರ್ಚ್ 2024, 0:28 IST
Last Updated 2 ಮಾರ್ಚ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ‘ದಿ ರಾಮೇಶ್ವರಂ ಕೆಫೆ’ ಹೋಟೆಲ್‌ನಲ್ಲಿ ಟೈಮರ್ ಚಾಲಿತ ಕಚ್ಚಾ ಬಾಂಬ್ (ಐಇಡಿ) ಸ್ಫೋಟಿಸಲಾಗಿದ್ದು, ಗ್ರಾಹಕರು ಸೇರಿ 10 ಮಂದಿ ಗಾಯಗೊಂಡಿದ್ದಾರೆ.

ದುಷ್ಕರ್ಮಿಗಳ ಕೃತ್ಯದ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿದ್ದು, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ.

ಗ್ರಾಹಕನ ಸೋಗಿನಲ್ಲಿ ಶುಕ್ರವಾರ ಹೋಟೆಲ್‌ಗೆ ಬಂದಿದ್ದ 30–35 ವರ್ಷದೊಳಗಿನ ವ್ಯಕ್ತಿ, ತಟ್ಟೆ ತೊಳೆಯುವ ಜಾಗದ ಪಕ್ಕದಲ್ಲಿ ಬ್ಯಾಗ್ ಇರಿಸಿ ಹೋಗಿದ್ದಾನೆ. ಅದರಲ್ಲಿದ್ದ ಟೈಮರ್ ಬಾಂಬ್, ಶುಕ್ರವಾರ ಮಧ್ಯಾಹ್ನ 12.55 ಗಂಟೆ ಸುಮಾರಿಗೆ ಸ್ಫೋಟಗೊಂಡಿದ್ದರಿಂದ ಗ್ರಾಹಕರು ಹಾಗೂ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದರು. ಗಾಯಗೊಂಡಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ನರಳಾಡುತ್ತಾ ಬಿದ್ದಿದ್ದರು.

‘ಎರಡು ಬಾರಿ ಸ್ಫೋಟ ಸಂಭವಿಸಿ ದೊಡ್ಡ ಶಬ್ದ ಬಂದಿತ್ತು. ಹೊಗೆ ದಟ್ಟವಾಗಿತ್ತು. ಮಹಿಳೆ ಸ್ವರ್ಣಾಂಭ ಸೇರಿ ಏಳು ಗ್ರಾಹಕರು ಹಾಗೂ ಮೂವರು ಸಿಬ್ಬಂದಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೋಟೆಲ್ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಬ್ಯಾಗ್ ತಂದಿಟ್ಟಿದ್ದ ಶಂಕಿತನ ಬಗ್ಗೆ ಸುಳಿವು ಸಿಕ್ಕಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ. ರಾಮೇಶ್ವರಂ ಕೆಫೆ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು. ವೃತ್ತಿ ವೈಷಮ್ಯ ಅಥವಾ ಬೇರೆ ಕಾರಣಕ್ಕೆ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿರುವ ಅನುಮಾನವಿದೆ’ ಎಂದರು.

ರಾಜ್ಯದಲ್ಲಿ ಇಂತಹದ್ದು ನಡೆಯಬಾರದಿತ್ತು. ಮಂಗಳೂರಿನಲ್ಲಿ ಆದ ಬಳಿಕ ಪುನಃ ಇಂಥ ಘಟನೆ ಸಂಭವಿಸಿದೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲಾಗುವುದು
ಸಿದ್ದರಾಮಯ್ಯ ಮುಖ್ಯಮಂತ್ರಿ
ಬ್ರ್ಯಾಂಡ್ ಬೆಂಗಳೂರು ರೂಪಿಸದೇ ಇದ್ದರೂ ಪರವಾಗಿಲ್ಲ ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಬಾಂಬ್ ಸ್ಫೋಟ ನಡೆದಿದೆ
- Quote -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT