ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಹೊಸ ಪಡಿತರ ಚೀಟಿ: 20,303 ಅರ್ಜಿ ಬಾಕಿ

ಗೃಹಲಕ್ಷ್ಮಿ ಯೋಜನೆಗಾಗಿ ಪಡಿತರ ಚೀಟಿಗೆ ಬೇಡಿಕೆ; ಹೊಸ ಪಡಿತರ ಚೀಟಿ ವಿತರಣೆ ಸ್ಥಗಿತ
Published 11 ಅಕ್ಟೋಬರ್ 2023, 5:23 IST
Last Updated 11 ಅಕ್ಟೋಬರ್ 2023, 5:23 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘‌ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹ 2 ಸಾವಿರ ನೀಡಲಾಗುತ್ತಿದೆ. ಇದರ ‍ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಹೊಸದಾಗಿ ಪಡಿತರ ಚೀಟಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಸರ್ಕಾರ ಹೊಸದಾಗಿ ಪಡಿತರ ಚೀಟಿ ನೀಡುವುದನ್ನು ಸ್ಥಗಿತಗೊಳಿಸಿದೆ. ಯೋಜನೆ ಜಾರಿಗೊಳ್ಳುವ ಪೂರ್ವದಲ್ಲೇ ಜಿಲ್ಲೆಯಲ್ಲಿ 20,303 ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, ಈ ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಅಲ್ಲದೇ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕೊಟ್ಟರೆ ಅರ್ಜಿಗಳ ಪ್ರಮಾಣ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಪ್ರಸ್ತುತ ರಾಜ್ಯ ಸರ್ಕಾರವು ಮನೆಯ ಯಜಮಾನಿಯ ಖಾತೆಗೆ ಮಾತ್ರ ಮಾಸಿಕ ₹ 2 ಸಾವಿರ ಹಣವನ್ನು ನೇರವಾಗಿ ಜಮಾ ಮಾಡುತ್ತಿದೆ. ಆ ಪಡಿತರ ಚೀಟಿಯಲ್ಲಿ ಹೆಸರಿರುವ ಸೊಸೆಯಂದಿರಿಗೆ ಹಣ ಬರುವುದಿಲ್ಲ. ಪ್ರತ್ಯೇಕ ಕಾರ್ಡ್ ಮಾಡಿಸಿಕೊಂಡರೆ ತಾವೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಬಹುದು ಎಂಬ ಉದ್ದೇಶದಿಂದ ಈಗಿರುವ ಕಾರ್ಡ್‌ನಿಂದ ಹೆಸರು ತೆಗೆಸಿ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಸರ್ಕಾರ ಪ್ರಸ್ತುತ ಇರುವ ಕಾರ್ಡ್‌ನ ಯಜಮಾನಿಯರಿಗೇ ಹಣ ಹೊಂದಿಸಲು ಪರದಾಡುತ್ತಿದೆ. ಹೀಗಾಗಿ, ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ವಿಲೇವಾರಿಗೆ ಬಾಕಿ ಇರುವ ಹೊಸ ಕಾರ್ಡ್‌ ಅರ್ಜಿಗಳಿಗೆ ಅನುಮೋದನೆ ನೀಡುವ ಪ್ರಸ್ತಾವ ಇಲಾಖೆಯ ಮುಂದೆ ಇದೆ. ಆದರೆ, ಕಳೆದ ಆರು ತಿಂಗಳಿಂದ ಯಾರು ಪಡಿತರ ಪಡೆದಿಲ್ಲವೋ ಅಂತಹ ಕಾರ್ಡ್‌ಗಳನ್ನು ರದ್ದು ಮಾಡಿ ಅದೇ ಕಾರ್ಡ್‌ಗಳಿಗೆ ಬದಲಾಗಿ ಹೊಸ ಕಾರ್ಡ್‌ಗಳನ್ನು ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತುರ್ತು ಸಂದರ್ಭದಲ್ಲಿ ಕಾರ್ಡ್ ವಿತರಣೆ: ವೈದ್ಯಕೀಯ ಅವಶ್ಯಕತೆಗಳಿಗಾಗಿ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ನೀಡಬೇಕಾದ ಸಂದರ್ಭದಲ್ಲಿ ವೈದ್ಯರ ಶಿಫಾರಸು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಶಿಫಾರಸಿನ ಮೇರೆಗೆ ಆಹಾರ ಇಲಾಖೆ ಆಯುಕ್ತರು ಹೊಸದಾಗಿ ಕಾರ್ಡ್‌ಗಳನ್ನು ವಿತರಿಸಲು ಅನುಮೋದನೆ ನೀಡುತ್ತಾರೆ. ತುರ್ತು ಸಂದರ್ಭಗಳಿಲ್ಲದೇ ಸಲ್ಲಿಕೆಯಾದ ಪಡಿತರ ಕಾರ್ಡ್‌ಗಳಿಗೆ ಅನುಮೋದನೆ ಸಿಕ್ಕಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಂಕಿ ಅಂಶಗಳು

5,91,678 ಜಿಲ್ಲೆಯಲ್ಲಿರುವ ಒಟ್ಟು ಪಡಿತರ ಚೀಟಿಗಳು 5,07,793 ಆದ್ಯತಾ ಚೀಟಿಗಳ ಸಂಖ್ಯೆ 62,829 ಅಂತ್ಯೋದಯ ಚೀಟಿಗಳು 21,056 ಆದ್ಯತೇತರ ಚೀಟಿಗಳು ಮಾಹಿತಿ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ನಿರ್ದಿಷ್ಟ ಅವಧಿಯವರೆಗೆ ಯಾರು ಪಡಿತರ ಪಡೆಯುತ್ತಿಲ್ಲವೋ ಅವರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು. ಅವುಗಳ ಬದಲಾಗಿ ಹೊಸ ಪಡಿತರ ಚೀಟಿಗಳಿಗೆ ಅನುಮೋದನೆ ನೀಡಲು ಇಲಾಖೆ ಉದ್ದೇಶಿಸಿದೆ

-ಶಾಂತಗೌಡ ಗುಣಕಿ ಉಪ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

₹ 67.21 ಕೋಟಿ ನೇರ ನಗದು ವರ್ಗಾವಣೆ

ಆಹಾರ ಇಲಾಖೆಯ ಮೂಲಕ ಅಂತ್ಯೋದಯ ಅನ್ನ ಹಾಗೂ ಆದ್ಯತಾ ಪಡಿತರ ಚೀಟಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡಬೇಕಿತ್ತು. ಆದರೆ ಅಷ್ಟೊಂದು ಪ್ರಮಾಣದ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮವು ನಿರಾಕರಿಸಿದ್ದರಿಂದ ತಲಾ ಐದು ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು ₹ 67.21 ಕೋಟಿ ಹಣವನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ 1479702 ಫಲಾನುಭವಿಗಳಿಗೆ ₹ 25.15 ಕೋಟಿ ಆಗಸ್ಟ್‌ ತಿಂಗಳಲ್ಲಿ 1642228 ಫಲಾನುಭವಿಗಳಿಗೆ ₹ 26.69 ಕೋಟಿ ಸೆಪ್ಟೆಂಬರ್ ತಿಂಗಳಲ್ಲಿ 1695109 ಫಲಾನುಭವಿಗಳಿಗೆ ₹ 15.36 ಕೋಟಿಯನ್ನು ಪಾವತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT