ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಎಂಪಿ ಮಾಡಲು ಇಲ್ಲಸಲ್ಲದ ಆರೋಪ: ಸಿದ್ದರಾಮಯ್ಯ ವಿರುದ್ಧ ಪ್ರತಾಪ ವಾಗ್ದಾಳಿ

ಅವರು ಬ್ರಿಲಿಯಂಟ್‌ ಫಾದರ್, ಪೊಲಿಟೀಷಿಯನ್ –ಸಿದ್ದರಾಮಯ್ಯ ವಿರುದ್ಧ ಪ್ರತಾಪ ವಾಗ್ದಾಳಿ
Published 1 ಜನವರಿ 2024, 0:37 IST
Last Updated 1 ಜನವರಿ 2024, 0:37 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಸರ್ ನೀವು ಬ್ರಿಲಿಯಂಟ್ ಫಾದರ್; ಬ್ರಿಲಿಯಂಟ್ ಪೊಲಿಟೀಷಿಯನ್. ಮಗನನ್ನು (ಡಾ.ಯತೀಂದ್ರ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸಿ ಸಂಸದನನ್ನಾಗಿಸುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ’ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವ ತೆಗೆಯಬಹುದಷ್ಟೆ’ ಎಂದು ಹೇಳಿದರು.

‘ಮರ ಕಡಿದ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್‌ ಮಾಡಿಸಿದ್ದೀರಿ. ಮನೆಯಲ್ಲಿ ವೃದ್ಧ ತಾಯಿ ಇದ್ದಾರೆ. ತಂಗಿ ಇದ್ದಾಳೆ‌. ಅವರನ್ನೂ ಅರೆಸ್ಟ್ ಮಾಡಿಸಿ. ಇದ್ಯಾವುದಕ್ಕೂ ಜಗ್ಗುವ ಮಗ ನಾನಲ್ಲ’ ಎಂದು ಗುಡುಗಿದರು.

‘ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತಾರೆ. ಇಂತಹ ತಂದೆ ಎಲ್ಲರಿಗೂ ಸಿಗುವುದಿಲ್ಲ. ನಿಮ್ಮನ್ನು ಮೆಚ್ಚಿದ್ದೇನೆ. ಅಡ್ಡಿ‌ಯಾಗಿದ್ದೇನೆಂದು ನನ್ನನ್ನು ಮುಗಿಸಲು ಮುಂದಾಗಿದ್ದೀರಿ. ನಿಮ್ಮ‌ ಕುಟುಂಬದ ರಾಜಕಾರಣವೇ ಮುಂದುವರಿಯಲಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ, ಶ್ಲಾಘಿಸುತ್ತೇನೆ’ ಎಂದು ಚುಚ್ಚಿದರು.

‘ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿದ್ದಾರೆ. ಅದರ ಬಗ್ಗೆ ನೀವು ಮಾತನಾಡುವುದಿಲ್ಲ. ಲೋಕಸಭೆ ಪ್ರವೇಶಕ್ಕೆ ಪಾಸ್‌ಗೆ ಶಿಫಾರಸು ಮಾಡಿದ್ದನ್ನೇ ಆಧರಿಸಿ ಇಟ್ಟುಕೊಂಡು ನೀವು, ನಿಮ್ಮ ಸಚಿವರು, ಮಾತನಾಡುತ್ತೀರಿ’ ಎಂದು ಟೀಕಿಸಿದರು.

‘ಸಚಿವ ಮಧು ಬಂಗಾರಪ್ಪ ಚೆಕ್‌ ಬೌನ್ಸ್ ಪ್ರಕರಣದಲ್ಲಿ ತಪ್ಪಿತಸ್ಥ. ಆದರೆ, ಬಂಧಿಸಿರುವುದು ನನ್ನ ತಮ್ಮನನ್ನು. ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ. ಪ್ರಕರಣದಲ್ಲಿ‌ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈವರೆಗೆ ಅವರನ್ನು ಬಂಧಿಸಿಲ್ಲ’ ಎಂದರು.

‘ಹುಣಸೂರಿನಲ್ಲಿ ಹನುಮ ಜಯಂತಿ‌ ವೇಳೆ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ನನ್ನ ತಮ್ಮ ಮರಗಳ್ಳ ಎಂದು ಕಾಂಗ್ರೆಸ್‌ನವರು ಪೋಸ್ಟ್ ಹಾಕಿದ್ದರು. ಆತನ ವಿರುದ್ಧ ಎಫ್‌ಐಆರ್ ಆಗಿಲ್ಲ. ತಲೆಮರೆಸಿಕೊಂಡಿರಲಿಲ್ಲ. ಏಕೆ ದಾರಿ ತಪ್ಪಿಸುತ್ತಿದ್ದೀರಿ?’ ಎಂದರು. 

‘ಸಿದ್ದರಾಮಯ್ಯನವರೇ ನಿಮಗೆ ಬಹಳಷ್ಟು‌ ದಾರಿಗಳಿಲ್ಲ. ನನ್ನನ್ನು ಸೋಲಿಸಲು ತಾಯಿ ಚಾಮುಂಡಿ, ಕಾವೇರಿ ತಾಯಿ ಹಾಗೂ ಮೈಸೂರು–ಕೊಡಗು ಕ್ಷೇತ್ರದ ಜನರು ಬಿಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT