ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ

ರಾಜ್ಯ ಸರ್ಕಾರದಿಂದ ₹1 ಲಕ್ಷ: ಮಂಜುನಾಥ
Last Updated 19 ಡಿಸೆಂಬರ್ 2021, 3:53 IST
ಅಕ್ಷರ ಗಾತ್ರ

ಸಿಂಧನೂರು: ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಶನಿವಾರ ಸಂಜೆ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ತಹಶೀಲ್ದಾರ್ ಮಂಜುನಾಥ ಭೋಗಾವತಿ ಪರಿಹಾರದ ಚೆಕ್ ವಿತರಿಸಿದರು.

ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ,‘ಬಡತನ ರೇಖೆಗಿಂತ ಕೆಳಗಿನ ಕುಟುಂಬದ ವ್ಯಕ್ತಿಗಳು ಮೃತಪಟ್ಟಿದ್ದರೆ ಅಂಥವರ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ₹1 ಲಕ್ಷ ಪರಿಹಾರದ ಚೆಕ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ₹50 ಸಾವಿರ ಅವರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ಒಟ್ಟು 110 ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಅದರಲ್ಲಿ 37 ಪ್ರಕರಣಗಳಲ್ಲಿ ಮಾತ್ರ ಸಮರ್ಪಕ ದಾಖಲಾತಿ ನೀಡಲಾಗಿದೆ. ಅದರಲ್ಲಿ 26 ಪ್ರಕರಣಗಳಿಗೆ ತಲಾ ₹1 ಲಕ್ಷ ಪರಿಹಾರದ ಚೆಕ್ ನೀಡಲಾಗುತ್ತಿದೆ’ ಎಂದು ತಿಳಿಸಿದರು.

7 ಜನರು ಎಪಿಎಲ್ ಕಾರ್ಡ್‍ದಾರರಾಗಿದ್ದು, ಅವರ ಬ್ಯಾಂಕ್ ಖಾತೆಗೆ ₹50 ಸಾವಿರ ಕೇಂದ್ರ ಸರ್ಕಾರದ ಪರಿಹಾರ ಜಮಾ ಆಗುತ್ತದೆ. ಅಗ್ನಿಶಾಮಕ ದಳದ ನಾಗರಾಜ ಎನ್ನುವವರು ಸಹ ಕೋವಿಡ್‍ನಿಂದ ಮೃತಪಟ್ಟಿದ್ದು, ಅವರಿಗೆ ₹30 ಲಕ್ಷ ಪರಿಹಾರದ ಅವಕಾಶ ಇರುವುದರಿಂದ ಪ್ರಸ್ತುತ ₹1 ಲಕ್ಷದ ಪರಿಹಾರವನ್ನು ನಿರಾಕರಿಸಿದ್ದಾರೆ ಎಂದು ಅವರು
ಹೇಳಿದರು.

ಚೆಕ್ ವಿತರಿಸಿದ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ,‘ಕೋವಿಡ್‍ನಿಂದ ಮೃತಪಟ್ಟ 110 ಜನರಲ್ಲಿ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ, ಇನ್ನು ಕೆಲವರು ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗಿ ಮೃತಪಟ್ಟಿರುವ ಘಟನೆಗಳಿವೆ. ಕೋವಿಡ್ ದೃಢೀಕರಣ ದಾಖಲಾತಿಗಳು ಇದ್ದರೆ ಮಾತ್ರ ಆನ್‍ಲೈನ್‍ನಲ್ಲಿ ಅರ್ಜಿಗಳು ಸ್ವೀಕಾರವಾಗುತ್ತವೆ. ಆದ ಕಾರಣ ಈಗಾಗಲೇ ತಹಶೀಲ್ದಾರರಿಗೆ ಆಪ್‍ಲೈನ್ ಅರ್ಜಿಗಳನ್ನು ಸ್ವೀಕರಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗದ ಅರ್ಜಿಗಳು ಬಂದಿವೆ. ಜಿಲ್ಲಾಧಿಕಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಸರ್ಕಾರಿ ಆಸ್ಪತ್ರೆಯ ದೃಢೀಕರಣ ಇಲ್ಲದೆ ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೂ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ’ ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಕೊಡುತ್ತಿರುವುದು ಸಿಂಧನೂರು ತಾಲ್ಲೂಕು ಪ್ರಥಮವಾಗಿರುವುದಕ್ಕೆ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿರಸ್ತೇದಾರ್ ಮರಿಸ್ವಾಮಿ, ಅಂಬಾದಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT