ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸ್ಪಂದನ ಅಂಕಣ: ಗರ್ಭಿಣಿಯರ ರಕ್ತಹೀನತೆ: ನಿರ್ಲಕ್ಷ್ಯ ಸಲ್ಲದು

Published : 30 ಮಾರ್ಚ್ 2024, 0:16 IST
Last Updated : 30 ಮಾರ್ಚ್ 2024, 0:16 IST
ಫಾಲೋ ಮಾಡಿ
Comments
ಪ್ರ

ಮದುವೆಯಾಗಿ ಮೂರು ವರ್ಷಗಳಾಗಿವೆ. ಮೊದಲನೇ ಬಾರಿ ಗರ್ಭ ಧರಿಸಿದ್ದೇನೆ. ಈಗ ನಾಲ್ಕನೇ ತಿಂಗಳು. ವೈದ್ಯರು ರಕ್ತಹೀನತೆ ಇದೆ ಎಂದಿದ್ದಾರೆ. ಹಿಮೋಗ್ಲೋಬಿನ್‌ ಪ್ರಮಾಣ 8.9 ಇದೆ ಎಂದು ವೈದ್ಯರು ಮಾತ್ರೆ ಬರೆದುಕೊಟ್ಟಿದ್ದಾರೆ. ಸರಿಯಾಗದಿದ್ದರೆ ಇಂಜೆಕ್ಷನ್‌ ಅಥವಾ ರಕ್ತ ನೀಡಬೇಕು ಎಂದು ತಿಳಿಸಿದ್ದಾರೆ. ಏನು ಮಾಡಬೇಕು ತಿಳಿಸಿ.

ADVERTISEMENT

ನಿಮಗಿರುವುದು ರಕ್ತಹೀನತೆಯ ಸಮಸ್ಯೆ. ಇದು

ಶೇ 60ರಿಂದ 70 ಗರ್ಭಿಣಿಯರನ್ನು ಕಾಡುವ ಸಮಸ್ಯೆ. ನಿರ್ಲಕ್ಷ್ಯಿಸಿದರೆ ತಾಯಿ ಮತ್ತು ಮಗುವಿಗೆ ತೊಂದರೆಯಾಗಬಹುದು. ಇದು ಮಧ್ಯಮತರದ ರಕ್ತಹೀನತೆ. ಗರ್ಭಧಾರಣೆಯಲ್ಲಿ ಕೆಂಪುರಕ್ತಕಣಗಳು ಹೆಚ್ಚಾಗುವುದಿಲ್ಲ. ಸಹಜವಾಗಿಯೇ ರಕ್ತಹೀನತೆ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳಿ. ರಕ್ತಹೀನತೆಗೆ ಆನುವಂಶೀಯ ಕಾಯಿಲೆಗಳಾದ ಥಲೆಸೇಮಿಯಾ ಹಾಗೂ ಸಿಕ್ಕಲ್‌ಸೆಲ್‌ ಕಾಯಿಲೆಗಳು ಅಪರೂಪಕ್ಕೆ ಕಾರಣವಾಗಬಹುದಾದರೂ ಕಬ್ಬಿಣಾಂಶದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಶರೀರದ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದಲ್ಲಿ ರಕ್ತಹೀನತೆ ಉಂಟಾಗಬಹುದು. ಮೂಲವ್ಯಾಧಿ ಸಮಸ್ಯೆ, ಮಲೇರಿಯಾ, ಡೆಂಗಿಯಿಯಂದ ಬಳಲುವುದು, ಕರುಳಿನಲ್ಲಿ ಜಂತುಹುಳುಗಳ ಬಾಧೆ, ಕರುಳಿನಲ್ಲಿ ಪೌಷ್ಠಿಕಾಂಶಗಳ ಹೀರುವಿಕೆಯಾಗದೇ ಇರುವುದರಿಂದಲೂ ಈ ಸಮಸ್ಯೆ ಉಂಟಾಗಬಹುದು.

ರಕ್ತಹೀನತೆ ಇದ್ದವರಿಗೆ ಪದೇ ಪದೇ ಸುಸ್ತಿನ ಅನುಭವ, ತಲೆ ತಿರುಗುವುದು, ಸ್ವಲ್ಪ ಕೆಲಸ ಮಾಡಿದರೂ ಏದುಸಿರು ಬರುವುದು, ಎದೆ ಬಡಿದುಕೊಂಡ ಹಾಗೆ ಆಗುವ ಅನುಭವ ಆಗಬಹುದು. ಹಿಮೊಗ್ಲೋಬಿನ್‌ 7 ಗ್ರಾಂಕ್ಕಿಂತ ಕಡಿಮೆ ಇದ್ದರೆ ತೀವ್ರತರದಹ ರಕ್ತಹೀನತೆ ಎಂದೆನಿಸಿಕೊಳ್ಳುತ್ತದೆ. ಆಗ ಕಬ್ಬಿಣಾಂಶದ ಇಂಜೆಕ್ಷನ್‌ ಹಾಕುವುದು ಅಗತ್ಯವಾಗುತ್ತದೆ. ನಿಮಗೆ 9 ಗ್ರಾಂ ಇರುವುದರಿಂದ ಸೂಕ್ತ ಆಹಾರ ಕ್ರಮ ಅನುಸರಿಸಿದರೆ ಸಮಸ್ಯೆ ಸರಿಪಡಿಸಬಹುದು. ಹೆಚ್ಚು ಹಸಿರು ಸೊಪ್ಪು, ತರಕಾರಿಗಳು, ದ್ರಾಕ್ಷಿ, ಅಂಜೂರ, ಖರ್ಜೂರ ಸೇವಿಸಿ. ವೈದ್ಯರು ಕೊಡುವ ಕಬ್ಬಿಣಾಂಶದ ಮಾತ್ರೆ, ಫೋಲಿಕ್‌ ಆ್ಯಸಿಡ್‌ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಿದರೆ ರಕ್ತಹೀನತೆ ಸರಿ ಹೋಗುತ್ತದೆ.

ವಿಟಮಿನ್ ‘ಸಿ’ ಯುಕ್ತ (ನೆಲ್ಲಿಕಾಯಿ, ನಿಂಬೆ, ಕಿತ್ತಳೆ ಇತ್ಯಾದಿ) ಆಹಾರ ಜೊತೆಗೆ ಸೇವಿಸುವುದರಿಂದ ಕಬ್ಬಿಣಾಂಶ ಹೀರುವಿಕೆ ಚೆನ್ನಾಗಿ ಆಗುತ್ತದೆ. ಕಬ್ಬಿಣಾಂಶದ ಮಾತ್ರೆಗಳನ್ನ ಹಾಲು, ಕಾಫಿ, ಟೀ ಮತ್ತು ಕ್ಯಾಲ್ಸಿಯಂ ಮಾತ್ರೆಗಳ ಜೊತೆಗೆ ಸೇವಿಸಲೇಬೇಡಿ. ಇದರಿಂದ ಕಬ್ಬಿಣಾಂಶ ಹೀರುವಿಕೆ ಚೆನ್ನಾಗಿ ಆಗುವುದಿಲ್ಲ. ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತಚಿಕಿತ್ಸೆ ತೆಗೆದುಕೊಂಡು ರಕ್ತಹೀನತೆ ಸರಿಪಡಿಸಿಕೊಂಡು ಧೈರ್ಯದಿಂದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT