ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election: ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದರೆ ಸಿಎಂ ಆಯ್ಕೆ ಸವಾಲು

Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಹೈದರಾಬಾದ್‌: ಮತಗಟ್ಟೆ ಸಮೀಕ್ಷೆಗಳ ‘ಭವಿಷ್ಯ’ ನಿಜವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಹುಮತ ಲಭಿಸಿದರೆ, ಮುಖ್ಯಮಂತ್ರಿ  ಹುದ್ದೆಗೆ ಸಮರ್ಥರನ್ನು ಆಯ್ಕೆ ಮಾಡುವ ಸವಾಲು ಪಕ್ಷದ ಹೈಕಮಾಂಡ್‌ ಮುಂದಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ತನ್ನ ಹೆಜ್ಜೆ ಇಡಬೇಕಿದೆ. ತೆಲಂಗಾಣದಲ್ಲಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 119 ಸ್ಥಾನಗಳಲ್ಲಿ 60 ರಿಂದ 70 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

‘ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ಆಯ್ಕೆ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಸಮತೋಲನದ ನಡೆ ಇಡಬೇಕಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಲ್ಪ ಎಡವಟ್ಟಾದರೂ, ಅದು ಮುಂಬರುವ ಲೋಕಸಭೆ ಚುನಾವಣೆ ವೇಳೆ ಪರಿಣಾಮ ಬೀರುವ ಸಾಧ್ಯತೆಯಿದೆ.  ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಕಾಂಗ್ರೆಸ್‌ ಕನಸಿಗೆ ಹಿನ್ನಡೆ ಉಂಟಾಗುವ ಸಂಭವ ಇದೆ’ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎ.ರೇವಂತ ರೆಡ್ಡಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಬಟ್ಟಿ ವಿಕ್ರಮಾರ್ಕ ಅವರ ಹೆಸರು ಮುಂಚೂಣಿಯಲ್ಲಿದೆ. ಇತರ ನಾಯಕರಾದ ಎನ್‌.ಉತ್ತಮ್‌ ಕುಮಾರ್‌ ರೆಡ್ಡಿ, ಕೋಮಟಿ ರೆಡ್ಡಿ ವೆಂಕಟ ರೆಡ್ಡಿ ಮತ್ತು ದಾಮೋದರ್‌ ರಾಜನರಸಿಂಹ ಅವರೂ ಆಕಾಂಕ್ಷಿಗಳಾಗಿದ್ದಾರೆ.

ಸಭೆ ನಡೆಸಿದ ರಾಹುಲ್‌: ತೆಲಂಗಾಣದಲ್ಲಿ ಭಾನುವಾರ ಮತಎಣಿಕೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲು ದಿನವಿಡೀ ಮತಎಣಿಕೆ ಕೇಂದ್ರಗಳಲ್ಲಿ ಇರುವಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟರಿಗೆ ಕಾಂಗ್ರೆಸ್‌ ಸೂಚಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರ ಜತೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ವರ್ಚುವಲ್‌ ಸಭೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಐಸಿಸಿ ಪ್ರತಿನಿಧಿಗಳು ಹೈದರಾಬಾದ್‌ಗೆ: ಪಕ್ಷದ ಶಾಸಕರನ್ನು ಒಗ್ಗಟ್ಟಾಗಿಡುವ ಕರ್ತವ್ಯಕ್ಕೆ ಎಐಸಿಸಿ ತನ್ನ ಕೆಲವು ಮುಖಂಡರು ಮತ್ತು ಪ್ರತಿನಿಧಿಗಳನ್ನು ಹೈದರಾಬಾದ್‌ಗೆ ಕಳುಹಿಸಿದೆ. ಗೆಲುವು ಪಡೆಯುವ ಅಭ್ಯರ್ಥಿಗಳು ಅಧಿಕೃತ ಫಲಿತಾಂಶ ಹೊರಬಿದ್ದ ಕೂಡಲೇ ನಗರದ ಪಂಚತಾರಾ ಹೋಟೆಲ್‌ವೊಂದರಲ್ಲಿ ತಂಗಿರುವ ಪಕ್ಷದ ಮುಖಂಡರ ಬಳಿ ತೆರಳಬೇಕು ಎಂಬ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT