ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: 10 ದಿನಗಳಲ್ಲಿ 12 ರಾಜ್ಯಗಳಿಗೆ ಮೋದಿ ಭೇಟಿ, 29 ಕಾರ್ಯಕ್ರಮಗಳಲ್ಲಿ ಭಾಗಿ

Published 3 ಮಾರ್ಚ್ 2024, 12:15 IST
Last Updated 3 ಮಾರ್ಚ್ 2024, 12:15 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 10 ದಿನಗಳಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 29 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಹಾಗೂ ದೆಹಲಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ (ಸೋಮವಾರ) ಪ್ರಧಾನಿ ಮೋದಿ ತೆಲಂಗಾಣದ ಆದಿಲಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ನಂತರ ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ನಿಭಿಕಿಯಾ ವಿದ್ಯುತ್‌ ನಿಗಮ ಲಿಮಿಟೆಡ್‌ಗೆ ಭೇಟಿ ನೀಡಲಿದ್ದಾರೆ. ಜತೆಗೆ ಆದಿಲಾಬಾದ್‌ ಮತ್ತು ಚೆನ್ನೈನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್‌ 5ರಂದು ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಒಡಿಶಾಗೆ ತೆರಳಲಿದ್ದಾರೆ.

ಒಡಿಶಾದಿಂದ ಪಶ್ಚಿಮ ಬಂಗಾಳಕ್ಕೆ ತೆರಳುವ ಮುನ್ನ ಚಂಡಿಖೋಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಮಾರ್ಚ್‌ 6ರಂದು ಕೋಲ್ಕತ್ತದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದು, ಬರಾಸತ್‌ನಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಬಿಹಾರಕ್ಕೆ ತೆರಳಲಿರುವ ಪ್ರಧಾನಿ ಮೋದಿ ಬೆಟ್ಟಿಯಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮಾರ್ಚ್‌ 7ರಂದು ಪ್ರಧಾನಿ ಭೇಟಿ ನೀಡಲಿದ್ದಾರೆ ಮತ್ತು ಆ ದಿನ ಸಂಜೆ ದೆಹಲಿಯಲ್ಲಿ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್‌ 8ರಂದು ದೆಹಲಿಯಲ್ಲಿ ನಡೆಯಲಿರುವ ನ್ಯಾಷನಲ್‌ ಕ್ರಿಯೇಟರ್ಸ್‌ ಅವಾರ್ಡ್‌ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂಜೆ ವೇಳೆಗೆ ಅಸ್ಸಾಂ ತಲುಪಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶ ಕಮೆಂಗ್‌ನಲ್ಲಿ ಸೆಲಾ ಸುರಂಗವನ್ನು ಮೋದಿ ಉದ್ಘಾಟಿಸಲಿದ್ದು, ಇಟಾನಗರದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಅಸ್ಸಾಂನ ಜೋರ್ಹತ್‌ನಲ್ಲಿ ಅಹೋಮ್‌ ಆರ್ಮಿ ಕಮಾಂಡರ್‌ ಲಚಿತ್‌ ಬೊರ್ಫುಕನ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್‌ 10ರಂದು ಉತ್ತರ ಪ್ರದೇಶ ತಲುಪಲಿರುವ ಪ್ರಧಾನಿ ಮೋದಿ ಅಜಂಗಢದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮರುದಿನ ದೆಹಲಿಯಲ್ಲಿ ನಡೆಯುವ ‘ನಮೋ ಡ್ರೋನ್‌ ದೀದಿ’ ಮತ್ತು ‘ಲಖ್‌ಪತಿ ದೀದಿ’ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಹರಿಯಾಣ ವಿಭಾಗದ ದ್ವಾರಕ ಎಕ್ಸ್‌ಪ್ರೆಸ್‌ ವೇ ಅನ್ನು ಉದ್ಘಾಟಿಸಲಿದ್ದಾರೆ. ಸಂಜೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್‌ 12ರಂದು ಗುಜರಾತ್‌ನ ಸಬರಮತಿ ಹಾಗೂ ರಾಜಸ್ಥಾನದ ಪೋಖ್ರಾನ್‌ಗೆ ಭೇಟಿ ನೀಡಲಿದ್ದಾರೆ. ಮರುದಿನ (ಮಾರ್ಚ್‌ 13ರಂದು) ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಗುಜರಾತ್‌ ಮತ್ತು ಅಸ್ಸಾಂನಲ್ಲಿ ಮೂರು ಪ್ರಮುಖ ಸೆಮಿಕಂಡಕ್ಟರ್‌ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌–ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ತಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಸೂಚಿಯ ಮೇಲೆ ಗಮನ ಹರಿಸುತ್ತಿರುವ ಪ್ರಧಾನಿ ಮೋದಿ ವಿವಿಧ ಸ್ಥಳಗಳಲ್ಲಿ ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT