ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

ಇತಿಹಾಸಕಾರ್ತಿ ಮೀನಾಕ್ಷಿ, ಹಲ್ಲೆಯಲ್ಲಿ ಕಾಲು ಕಳೆದುಕೊಂಡಿರುವ ಸದಾನಂದನ್‌ ಕೂಡ ಮೇಲ್ಮನೆಗೆ
Published : 13 ಜುಲೈ 2025, 14:05 IST
Last Updated : 13 ಜುಲೈ 2025, 14:05 IST
ಫಾಲೋ ಮಾಡಿ
Comments
ವಿದೇಶಾಂಗ ಪರಿಣಿತಗೆ ಮಣೆ
ಹರ್ಷವರ್ಧನ ಶೃಂಗ್ಲಾ ಅವರು ವಿದೇಶಾಂಗ ವ್ಯವಹಾರಗಳ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿ ಅಗಾಧ. ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಳ್ಳುವುದಕ್ಕೂ ಮುನ್ನ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. 2023ರಲ್ಲಿ ಭಾರತ ಜಿ–20 ಅಧ್ಯಕ್ಷ ಸ್ಥಾನದಲ್ಲಿದ್ದ ವೇಳೆ ಶೃಂಗ್ಲಾ ಅವರು ಮುಖ್ಯ ಸಮನ್ವಯಕಾರರಾಗಿದ್ದರು. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ನಡೆಸಿದ ಕಾರ್ಯಾಚರಣೆ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಭಾರತದ ನಿಲುವು ಮನವರಿಕೆ ಮಾಡಿಕೊಡಲು ತೆರಳಿದ್ದ ನಿಯೋಗವೊಂದರ ಸದಸ್ಯರಾಗಿಯೂ ಶೃಂಗ್ಲಾ ಕಾರ್ಯನಿರ್ವಹಿಸಿದ್ದಾರೆ. ತಮ್ಮ ನೇತೃತ್ವದ ‘ಡಾರ್ಜಿಲಿಂಗ್ ವೆಲ್‌ಫೇರ್‌ ಸೊಸೈಟಿ’ಯಡಿ 2023 ಹಾಗೂ 2024ರಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು. ಇದು ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸೂಚನೆ ಎಂದೇ ಹೇಳಲಾಗುತ್ತಿತ್ತು.
ಕಾನೂನು ತಜ್ಞ ನಿಕಮ್
ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕಮ್‌ ಹಲವಾರು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಸಿನಿಮಾ ನಿರ್ಮಾಪಕ ಗುಲ್ಷನ್‌ ಕುಮಾರ್‌ ಬಿಜೆಪಿ ನಾಯಕ ಪ್ರಮೋದ್‌ ಮಹಾಜನ್ ಕೊಲೆ ಪ್ರಕರಣದಲ್ಲಿಯೂ ಅವರು ವಕಾಲತ್ತು ವಹಿಸಿದ್ದರು. 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣ 2003ರಲ್ಲಿ ಗೇಟ್‌ವೇ ಆಫ್‌ ಇಂಡಿಯಾ ಬಳಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿಯೂ ವಾದ ಮಂಡಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಕಮ್‌ ಕಾಂಗ್ರೆಸ್‌ ಅಭ್ಯರ್ಥಿ ವರ್ಷಾ ಗಾಯಕ್ವಾಡ್‌ ವಿರುದ್ಧ ಪರಾಭವಗೊಂಡರು. ಅವರು 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಜ್ವಲ್‌ ನಿಕಮ್
ಉಜ್ವಲ್‌ ನಿಕಮ್
ಶಿಕ್ಷಣ ತಜ್ಞೆಗೆ ಅವಕಾಶ
ಡಾ.ಮೀನಾಕ್ಷಿ ಜೈನ್‌ ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅವರನ್ನು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿಗೆ (ಐಸಿಎಚ್‌ಆರ್‌) ನಾಮನಿರ್ದೇಶನ ಮಾಡಿತ್ತು. ಟೈಮ್ಸ್‌ ಆಫ್‌ ಇಂಡಿಯಾ ದೈನಿಕದ ಮಾಜಿ ಸಂಪಾದಕ ಗಿರಿಲಾಲ್‌ ಜೈನ್‌ ಅವರ ಪುತ್ರಿಯಾದ ಮೀನಾಕ್ಷಿ ರಾಜಕೀಯ ವಿಜ್ಞಾನಿ ಆಗಿಯೂ ಖ್ಯಾತರು. ಅವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಡಾ.ಮೀನಾಕ್ಷಿ ಜೈನ್
ಡಾ.ಮೀನಾಕ್ಷಿ ಜೈನ್
ಶಿಕ್ಷಕ ವೃತ್ತಿಯಿಂದ ರಾಜ್ಯಸಭೆಗೆ
ಶಿಕ್ಷಕರಾಗಿ ವೃತ್ತಿ ಆರಂಭಿಸಿ ನಂತರ ರಾಜಕೀಯ ಪ್ರವೇಶಿಸಿರುವ ಸಿ.ಸದಾನಂದನ್‌ ಕೇರಳ ಬಿಜೆಪಿಯ ಪ್ರಮುಖ ನಾಯಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು ಸ್ಥಾಪಿಸಿರುವ ‘ಭಾರತೀಯ ವಿಚಾರ ಕೇಂದ್ರಂ’ ನಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. 1994ರಲ್ಲಿ ಸಿಪಿಎಂ ಕಾರ್ಯಕರ್ತರು ನಡೆಸಿದ ಹಲ್ಲೆಯಲ್ಲಿ ಸದಾನಂದನ್‌ ಅವರು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಸಿ.ಸದಾನಂದನ್‌ ಮಾಸ್ಟರ್
ಸಿ.ಸದಾನಂದನ್‌ ಮಾಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT